ಶನಿವಾರ, ಫೆಬ್ರವರಿ 27, 2021
31 °C

ಸಿ.ಎಂಗೆ ಗೆಲುವು ತಂದುಕೊಟ್ಟ ಜೆಡಿಎಸ್‌!

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಸಿ.ಎಂಗೆ ಗೆಲುವು ತಂದುಕೊಟ್ಟ ಜೆಡಿಎಸ್‌!

ಬಾದಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1757 ಮತಗಳ ಅಂತರದಿಂದ ಬಾದಾಮಿ ಕ್ಷೇತ್ರ ಪ್ರಯಾಸದ ಗೆಲುವು ಸಾಧಿಸಿದರು.

ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವ ಮುನ್ನವೇ ಅಳೆದು– ತೂಗಿ ಕಾಲಿಸಿರಿಸಿದ ಮುಖ್ಯಮಂತ್ರಿಗೆ, ಬಿಜೆಪಿಯ ಕಾರ್ಯತಂತ್ರದಲ್ಲಿನ ಸೋಲು, ಜೆಡಿಎಸ್‌ನ ಅಭ್ಯರ್ಥಿ ಪಡೆದ ಮತಗಳು ಜಯಗಳಿಸಲು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಿಂಗಾಯತ ಮತ್ತು ವಾಲ್ಮೀಕಿ ಮತಗಳನ್ನು ಕೋಡೀಕರಿಸಿದರೆ ಬಿಜೆಪಿ ಅಭ್ಯರ್ಥಿ ಶ್ರೀರಾಮಲು ಸುಲಭವಾಗಿ ಗೆಲುವು ಸಾಧಿಸಬೇಕಾಗಿತ್ತು. ಆದರೆ ಜೆಡಿಎಸ್‌ ಅಭ್ಯರ್ಥಿ, ಪಂಚಮಸಾಲಿ ಲಿಂಗಾಯತರಾದ ಹನುಮಂತ ಮಾವಿನಮರದ ಸ್ಪರ್ಧೆ ಬಿಜೆಪಿ ಪಾಲಿಗೆ ಕಂಟಕವಾಗಿದೆ. ಸ್ಥಳೀಯರಾದ ಅವರು, ಇದನ್ನೇ ಚುನಾವಣಾ ವಿಷಯವಾಗಿಸಿದ್ದರು. ಇಲ್ಲಿ ಲಿಂಗಾಯತರನ್ನು ಬಿಜೆಪಿ ಪರವಾಗಿ ಒಂದುಗೂಡಿಸುವ ಪ್ರಯತ್ನವನ್ನು ಆ ಪಕ್ಷ ಕೊನೆವರೆಗೂ ಮಾಡಲೇ ಇಲ್ಲ. ಇದು ಮಾವಿನಮರದ 20 ಸಾವಿರಕ್ಕೂ ಹೆಚ್ಚು ಮತ ಪಡೆಯಲು ದಾರಿ  ಮಾಡಿಕೊಟ್ಟಿತು.

ಕುರುಬರು, ಮುಸ್ಲಿಮರು ಹಾಗೂ ಇನ್ನಿತರ ಸಣ್ಣಪುಟ್ಟ ಜಾತಿಗಳ ಮತದಾರರನ್ನು ಸಂಘಟಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಯಿತು. ಮುಖ್ಯಮಂತ್ರಿ ಪರವಾಗಿ ಸಿ.ಎಂ.ಇಬ್ರಾಹಿಂ, ಜಮೀರ್‌ ಅಹಮದ್‌ ಮುಸ್ಲಿಮ್‌ ಮತಗಳನ್ನು ಒಂದುಗೂಡಿಸಿದರು.

ಬಾದಾಮಿ ನಗರದಲ್ಲಿ ಬಿಜೆಪಿ ಹೆಚ್ಚು ಪ್ರಚಾರ ಮಾಡುವ ಗೋಜಿಗೆ ಹೋಗಲೇ ಇಲ್ಲ. ಕೇವಲ ಗ್ರಾಮೀಣ ಪ್ರದೇಶದತ್ತಲೇ ಇಡೀ ಪ್ರಚಾರವನ್ನು ಕೇಂದ್ರೀಕರಿಸಿತ್ತು. ಇದನ್ನರಿತ ಕಾಂಗ್ರೆಸ್‌ ನಗರ ಪ್ರದೇಶದಲ್ಲಿ ಕಾರ್ಯತಂತ್ರ ಎಣೆದು ನಗರ ಮತದಾರರನ್ನು ಸೆಳೆಯಲು ಯಶಸ್ವಿಯಾಗಿತ್ತು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್‌ ಷೋ ಬಿಟ್ಟರೆ ನಗರದಲ್ಲಿ ಬಿಜೆಪಿಯಿಂದ ಯಾವುದೇ ಬಹಿರಂಗ ಸಭೆಯೂ ನಡೆಯಲಿಲ್ಲ. ಯಾವುದೇ ಪ್ರಮುಖ ನಾಯಕರು ಕಾಣಿಸಿಕೊಳ್ಳಲಿಲ್ಲ. ಪ್ರಚಾರಕ್ಕೆ ಬಂದಿದ್ದ ಬಿ.ಎಸ್‌.ಯಡಿಯೂರಪ್ಪ ಸಹ, ಜೆಡಿಎಸ್‌ಗೆ ಲಿಂಗಾಯತರು  ಮತ ಹಾಕಬಾರದು, ಒಟ್ಟಾಗಿ ಬಿಜೆಪಿ ಬೆಂಬಲಿಸಬೇಕೆಂದು ಕೋರಲಿಲ್ಲ. ಇದು ಪಂಚಮಸಾಲಿ ಲಿಂಗಾಯತರು ಬಿಜೆಪಿಯ ಕಡೆ ಹೆಚ್ಚು ವಾಲದಿರಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಎಣಿಕೆಯ ಮೊದಲ ನಾಲ್ಕು ಸುತ್ತಿನಲ್ಲಿ ಶ್ರೀರಾಮಲು– ಸಿದ್ದರಾಮಯ್ಯ ನಡುವೆ ಪ್ರಬಲ ಪೈಪೋಟಿ ಇತ್ತು. ಆರನೇ ಸುತ್ತಿನ ಬಳಿಕ ಸಿದ್ದರಾಮಯ್ಯ ಅಲ್ಪ ಮತಗಳ ಮುನ್ನಡೆ ಕಾದುಕೊಂಡು ಕೊನೆಗೂ ಗೆಲುವಿನ ದಡ ಮುಟ್ಟಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.