ಶನಿವಾರ, ಮಾರ್ಚ್ 6, 2021
30 °C

ಕರ್ನಾಟಕ: ಸರ್ಕಾರ ರಚನೆಯ ವಿವಿಧ ಸಾಧ್ಯತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ: ಸರ್ಕಾರ ರಚನೆಯ ವಿವಿಧ ಸಾಧ್ಯತೆಗಳು

ಬೆಂಗಳೂರು: ಬಿಜೆಪಿ 104 ಸ್ಥಾನಗಳನ್ನು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಬೇಕಿರುವ ಮಾಂತ್ರಿಕ ಸಂಖ್ಯೆಯಿಂದ 9 ಸ್ಥಾನಗಳಷ್ಟು ದೂರವಿದೆ. ಈ ಅವಕಾಶವನ್ನು ಬಳಸಿಕೊಂಡು 78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ದಾಳ ಉರುಳಿಸಿ 38 ಸ್ಥಾನ ಗಳಿಸಿರುವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ನಾನು ಯಾವುದೇ ಷರತ್ತುಗಳಿಲ್ಲದ ಬೆಂಬಲ ನೀಡುವುದಾಗಿ ಘೋಷಿಸಿದೆ. ಇದು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು.

ರಾಜ್ಯಪಾಲರ ನಿರ್ಧಾರ ಏನು?

ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಪಕ್ಷವನ್ನು ಸರ್ಕಾರ ರಚಿಸುವುದಕ್ಕೆ ಆಹ್ವಾನಿಸಬೇಬೇಕು. ಈ ಅತಿ ಹೆಚ್ಚು ಸ್ಥಾನ ಎಂಬುದನ್ನು ರಾಜ್ಯಪಾಲರು ಹೇಗೆ ಅರ್ಥೈಸುತ್ತಾರೆ ಎಂಬುದರ ಮೇಲೆ ಅವರ ನಿರ್ಧಾರ ನಿಂತಿದೆ.ಗೋವಾದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡದ್ದು ಕಾಂಗ್ರೆಸ್ ಆಗಿತ್ತು. 40 ಸದಸ್ಯರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದುಕೊಂಡು ಅತಿದೊಡ್ಡ ಪಕ್ಷವಾಗಿತ್ತು. ಬಿಜೆಪಿ 13 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಸರ್ಕಾರ ರಚನೆಗೆ ಅವಕಾಶ ದೊರೆತದ್ದು ಬಿಜೆಪಿಗೆ.

ಬಿಜೆಪಿಯ ನಾಯಕರು ಬಹುಬೇಗ ಮೈತ್ರಿಕೂಟವೊಂದನ್ನು ರಚಿಸಿದರು. ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ ಮತ್ತು ಇಬ್ಬರೂ ಪಕ್ಷೇತರರ ಜೊತೆಗಿದ್ದ ಈ ಮೈತ್ರಿಕೂಟ ಒಟ್ಟು 23 ಸದಸ್ಯರನ್ನು ಹೊಂದಿತ್ತು. ಅತಿದೊಡ್ಡ ಪಕ್ಷವಾದ ಕಾಂಗ್ರೆಸ್‌ಗಿಂತ ಆರು ಹೆಚ್ಚು ಸ್ಥಾನಗಳು ಈ ಮೈತ್ರಿಕೂಟದ ಬಳಿ ಇತ್ತು. ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟರು. ಮಣಿಪುರ ವಿಧಾನಸಭೆಯನ್ನೂ ಇದೇ ಬಗೆಯಲ್ಲಿ ಬಿಜೆಪಿ ವಶಪಡಿಸಿಕೊಂಡಿತು.

ಕರ್ನಾಟಕದಲ್ಲಿ ಏನಾಗಬಹುದು?

ಗೋವಾದ ಉದಾಹರಣೆಯನ್ನು ಪರಿಗಣಿಸುವುದಾದರೆ ಕರ್ನಾಟಕದಲ್ಲಿಯೂ ಅದೇ ಸಂಭವಿಸಬೇಕು. ಆದರೆ ರಾಜ್ಯಪಾಲರ ನಿರ್ಧಾರಗಳ ಮೇಲೆ ಇರುವ ಕೇಂದ್ರ ಸರ್ಕಾರದ ಹಿಡಿತವನ್ನು ಪರಿಗಣಿಸುವುದಾದರೆ ಕರ್ನಾಟಕದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸುವ ಸಾಧ್ಯತೆ ಹೆಚ್ಚು.

ಸರ್ಕಾರ ರಚಿಸುವ ಸಾಧ್ಯತೆಯನ್ನು ಬಿಜೆಪಿ ಈ ತನಕವೂ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಇದು ಗೋವಾ, ಮಣಿಪುರದ ಉದಾಹರಣೆಗಳಲ್ಲಿ ಸಾಬೀತಾಗಿದೆ.

ಗೆಲುವಿನ ಅಂಚಿಗೆ ಬಂದು ತನಗೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಅಥವಾ ಸರ್ಕಾರ ಉಳಿಸಿಕೊಳ್ಳಲು ಬೇಕಾದಷ್ಟು ಸ್ಥಾನಗಳಿರಲಿಲ್ಲ ಎಂಬುದನ್ನು ರಾಜ್ಯಕ್ಕೆ ಸಾರಿ ಹೇಳುವುದಕ್ಕೆ ವಿಧಾನಸಭೆಯನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ವಾಜಪೇಯಿಯವರು ಇದನ್ನು ಒಮ್ಮೆ ಮಾಡಿದ್ದರು.

ಮತ್ತೊಮ್ಮೆ ಆಪರೇಷನ್ ಕಮಲ

‘ಆಪರೇಷನ್ ಕಮಲ’ ತಂತ್ರವನ್ನು ಬಿಜೆಪಿ ಹಿಂದೆ ಕರ್ನಾಟಕದಲ್ಲಿಯೇ ಪ್ರಯೋಗಿಸಿತ್ತು. ಈಗ ಆಯ್ಕೆಯಾಗಿರುವ ಶಾಸಕರ ಪೈಕಿ 16 ಮಂದಿಯ ರಾಜೀನಾಮೆ ಕೊಡಿಸಿದರೆ ಬಿಜೆಪಿ ಸುಲಭವಾಗಿ ಸರ್ಕಾರ ರಚಿಸಬಹುದು. ಲಭ್ಯವಿರುವ ಸಂಖ್ಯೆಯಲ್ಲಿ ತನ್ನ ಬಹುಮತವನ್ನೂ ಸಾಬೀತು ಮಾಡಬಹುದು. ಉಪ ಚುನಾವಣೆಗಳಲ್ಲಿ ಈ ಸ್ಥಾನಗಳನ್ನು ಗೆದ್ದುಕೊಳ್ಳಬಹುದು.

ಜೆಡಿಎಸ್ ಅಥವಾ ಕಾಂಗ್ರೆಸ್ ಒಡೆಯುವುದು

ಮೂರನೇ ಒಂದರಷ್ಟು ಸದಸ್ಯರನ್ನು ಜೆಡಿಎಸ್ ಅಥವಾ ಕಾಂಗ್ರೆಸ್‌ನಿಂದ ಹೊರಬರುವಂತೆ ಮಾಡಿದರೂ ಬಿಜೆಪಿಗೆ ಅಗತ್ಯವಿರುವ ಸ್ಥಾನಗಳು ದೊರೆಯುತ್ತವೆ. 38 ಸ್ಥಾನಗಳನ್ನು ಹೊಂದಿರುವ ಜೆಡಿಎಸ್‌ನಿಂದ 13ರ ಜನರ ಗುಂಪೊಂದು ಹೊರಗೆ ಬರಬೇಕಾಗುತ್ತದೆ. ಕಾಂಗ್ರೆಸ್ ಒಡೆಯಬೇಕೆಂದರೆ ಕನಿಷ್ಠ 26 ಮಂದಿಯ ಗುಂಪು ಪಕ್ಷದಿಂದ ಹೊರ ನಡೆಯಬೇಕಾಗುತ್ತದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.