ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ಡಿ.ಕೆ.ಶಿವಕುಮಾರ್‌

7

ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ಡಿ.ಕೆ.ಶಿವಕುಮಾರ್‌

Published:
Updated:
ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ಡಿ.ಕೆ.ಶಿವಕುಮಾರ್‌

ಕೋಲಾರ: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಂಗಳವಾರ ದಿಢೀರ್‌ ಆಗಿ ನಗರಕ್ಕೆ ಆಗಮಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದರು.

ಯಾವುದೇ ಸುಳಿವು ನೀಡದೆ ಮಧ್ಯಾಹ್ನ ಮತ ಎಣಿಕೆ ಕೇಂದ್ರದ ಬಳಿಯೇ ಬಂದ ಶಿವಕುಮಾರ್‌, ಮುಳಬಾಗಿಲು ಶಾಸಕ ಕೊತ್ತೂರು ಜಿ.ಮಂಜುನಾಥ್‌ ಮೂಲಕ ನಾಗೇಶ್‌ ಅವರನ್ನು ಕೇಂದ್ರದ ಹೊರಗೆ ಕರೆಸಿಕೊಂಡು ತಮ್ಮ ಜತೆ ಕಾರಿನಲ್ಲಿ ಕರೆದೊಯ್ದುರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ‘ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಪಕ್ಷದ ಹೈಕಮಾಂಡ್‌ ಸಿದ್ಧತೆ ನಡೆಸಿದೆ. ಪಕ್ಷದ ಶಾಸಕರೆಲ್ಲಾ ಒಟ್ಟಾಗಿದ್ದು, ವರಿಷ್ಠರ ಸೂಚನೆಯಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಕೋಮುವಾದಿ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶವಿಲ್ಲ. ಜಾತ್ಯಾತೀತ ತತ್ವದ ಸರ್ಕಾರ ರಚನೆಯಾಗಲಿದೆ’ ಎಂದು ತಿಳಿಸಿದರು.

‘ಜೆಡಿಎಸ್‌ ಹಾಗೂ ಕಾಂಗ್ರೆಸ್ ಶಾಸಕರು ಒಟ್ಟಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅನುಮತಿ ಕೋರುತ್ತೇವೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನದ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

‘ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಮಂಜುನಾಥ್‌ರ ನಾಮಪತ್ರ ತಿರಸ್ಕೃತವಾದ ಕಾರಣ ವರಿಷ್ಠರು ನಾಗೇಶ್‌ರನ್ನು ಬೆಂಬಲಿಸುವ ನಿರ್ಣಯ ಕೈಗೊಂಡರು. ಪಕ್ಷದ ಕಾರ್ಯಕರ್ತರು ನಾಗೇಶ್‌ರ ಗೆಲುವಿಗೆ ಶ್ರಮಿಸಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿರುವ ನಾಗೇಶ್‌ ಪಕ್ಷದ ಸಕ್ರಿಯ ಕಾರ್ಯಕರ್ತರು. ಅವರು ಮುಂದೆಯೂ ಪಕ್ಷದ ಸಹ ಸದಸ್ಯರಾಗಿ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಪಕ್ಷೇತರ ಶಾಸಕ ನಾಗೇಶ್‌ ಅವರಿಗೆ ಗಾಳ ಹಾಕಬಹುದೆಂಬ ಭೀತಿಯಲ್ಲಿ ಕಾಂಗ್ರೆಸ್‌ ವರಿಷ್ಠರು ಸಚಿವ ಶಿವಕುಮಾರ್‌ ಮೂಲಕ ನಾಗೇಶ್‌ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry