ಮೊಬೈಲ್‌ ಸೇವಾ ಸಂಸ್ಥೆಗಳ ಅಗ್ಗದ ದರ ಸಮರ

7

ಮೊಬೈಲ್‌ ಸೇವಾ ಸಂಸ್ಥೆಗಳ ಅಗ್ಗದ ದರ ಸಮರ

Published:
Updated:
ಮೊಬೈಲ್‌ ಸೇವಾ ಸಂಸ್ಥೆಗಳ ಅಗ್ಗದ ದರ ಸಮರ

ಜಿಯೊ ಅಗ್ಗದ ಬೆಲೆಗೆ ಕರೆ ಸೌಲಭ್ಯಗಳ ಕೊಡುಗೆಯನ್ನು ಘೋಷಿಸುವುದಕ್ಕೂ ಮುನ್ನ ಎಲ್ಲ ದೂರಸಂಪರ್ಕ ಸಂಸ್ಥೆಗಳು, ಕಡಿಮೆ ದರಕ್ಕೆ ಕರೆ ಸೌಲಭ್ಯ ಒದಗಿಸುವುದು ಅಸಾಧ್ಯ ಎಂಬಂತೆ ವರ್ತಿಸುತ್ತಿದ್ದವು. ಆದರೆ ಜಿಯೊ ಕೊಡುಗೆ ದೂರ ಸಂಪರ್ಕ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿ ಮಾಡಿತು. ಇದರಿಂದ ಇತರೆ ಸಂಸ್ಥೆಗಳೂ ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೊ ಹಾದಿಯನ್ನೇ ತುಳಿದವು. ಈಗ ಅದೇ ದರ ಸಮರ ಮರುಕಳಿಸಲಿದೆ.

ಪ್ರಿಪೇಯ್ಡ್‌ ವಿಭಾಗದಲ್ಲಿ ಪ್ರಯೋಗ ಮಾಡಿ ಗೆದ್ದಿರುವ, ಜಿಯೊ ದೃಷ್ಟಿ ಈಗ ಪೋಸ್ಟ್‌ಪೇಯ್ಡ್‌ ವಿಭಾಗದ ಮೇಲೆ ಬಿದ್ದಿದೆ. ₹ 199ಕ್ಕೆ ಅನಿಯಮಿತ ಕರೆಗಳು, ಎಸ್‌ಎಂಎಸ್‌ ಸೌಲಭ್ಯ ಒದಗಿಸುವುದಾಗಿ ಘೋಷಿಸಿದೆ. ಜತೆಗೆ 4ಜಿ ವೇಗದ 25ಜಿಬಿ ಡೇಟಾ ಸೌಲಭ್ಯವೂ ದೊರೆಯಲಿದೆ. ಹೆಚ್ಚುವರಿ ಡೇಟಾ ಬೇಕೆಂದರೆ 1 ಜಿಬಿಗೆ ₹20 ಪಾವತಿಸಬೇಕು. ಇನ್ನು ಅಮೆರಿಕ, ಕೆನಡಾದಂತಹ ದೇಶಗಳಿಗೆ ಮಾಡುವ ಕರೆಗಳ ದರ ಕೇವಲ 50 ಪೈಸೆಯಿಂದ ಆರಂಭವಾಗುವುದು ಈ ಕೊಡುಗೆಯ ಮತ್ತೊಂದು ಆಕರ್ಷಣೆ. ಅಂತರರಾಷ್ಟ್ರೀಯ ರೋಮಿಂಗ್ ದರ ನಿಮಿಷಕ್ಕೆ ₹ 2 ನಿಗದಿಪಡಿಸಲಾಗಿದೆ.

ದೂರಸಂಪರ್ಕ ಕ್ಷೇತ್ರದ ದಿಗ್ಗಜ ಸಂಸ್ಥೆ ಏರ್‌ಟೆಲ್‌, ಮಾಸಿಕ ₹399ಕ್ಕೆ ಅನಿಯಮಿತ ಕಾಲ್ಸ್‌, ಮತ್ತು ಬಿಲ್ಲಿಂಗ್ ಅವಧಿಯಲ್ಲಿ ಒಟ್ಟು 20 ಜಿಬಿ ಡೇಟಾ ಸೌಲಭ್ಯ ಒದಗಿಸುತ್ತಿದೆ. ಬಳಸದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ.

ಐಡಿಯಾ ಸೆಲ್ಯುಲರ್ ಸಂಸ್ಥೆ, ಮಾಸಿಕ ₹389ಕ್ಕೆ ಅನಿಯಮಿತ ಕರೆ, ತಿಂಗಳಿಗೆ 3,000 ಎಸ್‌ಎಂಎಸ್ ಮತ್ತು 20 ಜಿಬಿ ಡೇಟಾ ಸೌಲಭ್ಯ ಒದಗಿಸುತ್ತಿದೆ. ಈ ಸಂಸ್ಥೆ ಕೂಡ ಬಳಸದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

ಇನ್ನು ವೊಡಾಫೋನ್‌ ಕೂಡ ಮಾಸಿಕ ₹399ಕ್ಕೆ ಅನಿಯಮಿತ ಕರೆ, ಮತ್ತು ಬಿಲ್ಲಿಂಗ್ ಅವಧಿಯಲ್ಲಿ ಒಟ್ಟು 20 ಜಿಬಿ ಡೇಟಾ ಸೌಲಭ್ಯ ಒದಗಿಸುತ್ತಿದೆ. ಇಲ್ಲೂ ಸಹ ಬಳಸದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸಿಕೊಳ್ಳುವ ಅವಕಾಶವಿದೆ.

ಯಾವ ರೀತಿಯಲ್ಲೂ ನೋಡಿದರೂ ಹೆಚ್ಚು–ಕಡಿಮೆ ಎಲ್ಲ ಸಂಸ್ಥೆಗಳ ದರ ಒಂದೇ ರೀತಿಯಲ್ಲಿ ಇದೆ. ಆದರೆ ಜಿಯೊ ದರಕ್ಕಿಂತ ಇತರೆ ಸಂಸ್ಥೆಗಳ ದರ ದುಪ್ಪಟ್ಟು ಇದೆ. ಹೀಗಾಗಿಯೇ ಜಿಯೊ ಹೊಸ ಪೋಸ್ಡ್‌ಪೇಯ್ಡ್‌ ದರ ಘೋಷಿಸುತ್ತಿದ್ದಂತೇ, ಇತರೆ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿದವು.

ಅಂತರರಾಷ್ಟ್ರೀಯ ಕರೆಗಳ ಪಾಲು

ಪೋಸ್ಟ್‌ಪೇಯ್ಡ್‌ ಬಳಕೆದಾರರಲ್ಲಿ ಹಲವರು, ಉದ್ಯೋಗಿಗಳು ಮತ್ತು ವ್ಯಾಪಾರಿಗಳೇ ಇದ್ದಾರೆ. ಮುಖ್ಯವಾಗಿ ಕಾರ್ಪೊರೇಟ್ ಕಚೇರಿಗಳು ತಮ್ಮ ಉದ್ಯೋಗಿಗಳೊಡನೆ ನಿರಂತರ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ಕಾಮನ್‌ ಯೂಸರ್ ಗ್ರೂಪ್‌ (ಸಿಯುಜಿ) ಹೆಸರಿನಲ್ಲಿ ಸಂಪರ್ಕ ಪಡೆದುಕೊಂಡಿರುತ್ತವೆ. ದೂರ ಸಂಪರ್ಕ ಸಂಸ್ಥೆಗಳ ಜತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಉದ್ಯೋಗಿಗಳೊಡನೆ ಅನಿಯಮಿತವಾಗಿ ಮಾತನಾಡಬಹುದು.

ಬೇರೆಯವರಿಗೆ ಮಾಡುವ ಕರೆಗಳ ದರವೂ ಕಡಿಮೆ ಇರಲಿದೆ. ಇದರಿಂದ ಸಂಸ್ಥೆಗಳಿಗೆ ಅನುಕೂಲವಾಗುತಿತ್ತು. ಆದರೆ ದರ ಕಡಿಮೆ ಮಾಡಿದರೆ ಅಂತರರಾಷ್ಟ್ರೀಯ ಕರೆಗಳ ವರಮಾನದ ಪಾಲು ಶೇ 10–15ರಷ್ಟು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಇರುವ ದರಗಳಿಗೆ ಹೋಲಿಸಿದರೆ, ಜಿಯೊ ತನ್ನ ಕೊಡುಗೆಗೆ ತಕ್ಕಂತೆ ಈ ದರವನ್ನು ಶೇ 50ರಷ್ಟು ಕಡಿಮೆ ಮಾಡಿದರೆ, ಇತರೆ ಸಂಸ್ಥೆಗಳ ವಿದೇಶಿ ಕರೆಗಳ ವರಮಾನವೂ ಕಡಿಮೆ ಆಗಲಿದೆ. ಆದರೆ, ಈ ಪ್ರಭಾವ ಶೇ 2ರಷ್ಟು ಮಾತ್ರ ಇರಲಿದೆ. ಒಟ್ಟಿನಲ್ಲಿ ಜಿಯೊ ಕೊಡುಗೆ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

ಪ್ರೇಪೇಯ್ಡ್‌ ಸಂಪರ್ಕಗಳೇ ಶೇ 95

ದೇಶದಲ್ಲಿ ಸದ್ಯಕ್ಕೆ ಪ್ರಿಪೇಯ್ಡ್‌ ಸಂಪರ್ಕ (ಮೊದಲೇ ಹಣ ಪಾವತಿ ಮಾಡಿ ಪಡೆದುಕೊಳ್ಳುವ ಸೌಲಭ್ಯ) ಶೇ 95ರಷ್ಟು ಇದೆ. ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್‌ ಮಾಡಿಸಿಕೊಂಡು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ರಿಲಯನ್ಸ್ ಜಿಯೊ ಫೋನ್‌ ಮೂಲಕ ₹49ಕ್ಕೆ 28 ದಿನಗಳಿಗೆ ಅನಿಯಮಿತ ಕರೆಗಳ ಸೌಲಭ್ಯ ದೊರೆಯುತ್ತಿದೆ. ಇತರೆ ಸಂಸ್ಥೆಗಳ ಮೊಬೈಲ್‌ಗಳಲ್ಲಾದರೆ, ₹149ಕ್ಕೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 1ಜಿಬಿ ಡೇಟಾ ಸೌಲಭ್ಯ ದೊರೆಯುತ್ತಿದೆ. ಹೀಗಾಗಿ ಪೋಸ್ಟ್‌ಪೇಯ್ಡ್‌ ಕೊಡುಗೆಗಳಿಂದ ಹೊಸ ಸೌಲಭ್ಯ ಸಿಗುವ ಸಾಧ್ಯತೆಗಳು ಹೆಚ್ಚಾಗಿಲ್ಲ.

ದೂರ ಸಂಪರ್ಕ ಸಂಸ್ಥೆಗಳ ಅಂಕಿ ಅಂಶಗಳ ಪ್ರಕಾರವೂ, ಪೋಸ್ಟ್‌ಪೇಯ್ಡ್‌ ಬಳಕೆದಾರರ ಪಾಲು ಶೇ 4ರಿಂದ 5ರಷ್ಟು ಇದೆ. ಆದರೆ ಇದರ ಮೂಲಕ ಬರುವ ಆದಾಯ ಶೇ 20ರಷ್ಟು ಇದೆ. ಕರೆಗಳ ಜತೆಗೆ ಡೇಡಾ ಬಳಕೆಯೂ ಈ ವಿಭಾಗದಲ್ಲಿ ಹೆಚ್ಚಾಗಿರುತ್ತದೆ.

ಈಗ ಹೆಚ್ಚುವರಿ ಡೇಟಾ ನೀಡಬೇಕಾಗಿರುವುದರಿಂದ, ಸಂಸ್ಥೆಯ ವರಮಾನಕ್ಕೆ ಕತ್ತರಿ ಬೀಳಲಿದೆ. ಏರ್‌ಟೆಲ್‌ ಕೂಡ ಜಿಯೊ ಟ್ಯಾರಿಫ್‌ಗಳಿಗೆ ತಕ್ಕಂತೆ ಸೌಲಭ್ಯ ಒದಗಿಸಲು ಮುಂದಾದರೆ, ಸಂಸ್ಥೆಯ ವರಮಾನದ ಮೇಲೆ ಶೇ 1ರಷ್ಟು ಪ್ರಭಾವ ಬೀರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry