ಷೇರು ವ್ಯವಹಾರಕ್ಕೂ ಬಯೊಮೆಟ್ರಿಕ್‌!

7

ಷೇರು ವ್ಯವಹಾರಕ್ಕೂ ಬಯೊಮೆಟ್ರಿಕ್‌!

Published:
Updated:

ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಷೇರು ವ್ಯವಹಾರ ನಡೆಸುವ ಗ್ರಾಹಕರು ಮತ್ತು ಮಧ್ಯವರ್ತಿಗಳು ಇನ್ನು ಮುಂದೆ ಬಯೊಮೆಟ್ರಿಕ್‌ ಮತ್ತು  ಐ ಸ್ಕ್ಯಾನ್‌ಗಳನ್ನು (ಕಣ್ಣಿನ ಪಾಪೆ) ದೃಡೀಕರಿಸುವುದು ಅವಶ್ಯಕ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತಿಳಿಸಿದೆ.

ಸೈಬರ್ ದಾಳಿ ಮತ್ತು ಆನ್‌ಲೈನ್ ಮೂಲಕ ಎಸಗುವ ಅವ್ಯವಹಾರ ತಪ್ಪಿಸುವ ಸಲುವಾಗಿ ಬಯೊಮೆಟ್ರಿಕ್‌ ಮತ್ತು ಐ ಸ್ಕ್ಯಾನ್‌ ಕಡ್ಡಾಯ ಮಾಡಲು ‘ಸೆಬಿ’ ಮುಂದಾಗಿದೆ. ಇನ್ನು ಮುಂದೆ ಮೊಬೈಲ್‌ ಮತ್ತು ಟ್ಯಾಬ್‌ಗಳಲ್ಲಿ  ಖಾತೆ ತೆರೆದು ಷೇರು ವ್ಯವಹಾರ ನಡೆಸುವವರು ಮತ್ತು ಮಧ್ಯವರ್ತಿಗಳು ಬಯೊಮೆಟ್ರಿಕ್‌ ಮತ್ತು ಐ ಸ್ಕ್ಯಾನ್‌ ಮಾಡಿಸುವುದು ಕಡ್ಡಾಯವಾಗಲಿದೆ. ಬಯೊಮೆಟ್ರಿಕ್ ವಿಧಾನ ಬಳಸಿದರೆ ಆನ್‌ಲೈನ್ ಮೂಲಕ ಷೇರುಗಳನ್ನು ಕೊಳ್ಳುವವರು ಮತ್ತು ಮಾರುವವರಿಗೆ ಯಾವುದೇ ರೀತಿಯಲ್ಲಿ ಮೋಸ ಆಗಲಾರದು ಎಂದು ‘ಸೆಬಿ’ ಹೇಳಿದೆ.

ಇನ್ನು ಮುಂದೆ ಬಯೊಮೆಟ್ರಿಕ್ ಮತ್ತು ಐ ಸ್ಕ್ಯಾನ್‌ ಇಲ್ಲದ ಅಕೌಂಟ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆಯೂ ‘ಸೆಬಿ’ ಚಿಂತನೆ ನಡೆಸಿದೆ. ಮೊಬೈಲ್‌ ಅಪ್ಲಿಕೇಷನ್‌ ಮೂಲಕ ವ್ಯವಹಾರ ನಡೆಸುವವರಿಗೆ ಇದು ಕಡ್ಡಾಯವಾಗಲಿದೆ. ಜಾಗತಿಕವಾಗಿ ಸೈಬರ್ ದಾಳಿ ಮತ್ತು ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

’ಟ್ರಾಯ್‌’ನಲ್ಲಿ ಬೆಲೆ ಪಟ್ಟಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಿವಿಧ ಕಂಪನಿಗಳ ಟೆಲಿಕಾಂ ದರ ಪಟ್ಟಿಯನ್ನು ಬೇಟಾ (beta version) ಮಾದರಿಯಲ್ಲಿ ಪ್ರಕಟಿಸಿದೆ.

ಮೊಬೈಲ್ ಕರೆ ಮತ್ತು ಇಂಟರ್‌ನೆಟ್‌ ಬಳಕೆ ಮಾಡುವವರು ವಿವಿಧ ಟೆಲಿಕಾಂ ಕಂಪನಿಗಳ ದರ ಪಟ್ಟಿಯನ್ನು (ಟ್ಯಾರಿಫ್)  ಇನ್ನು ಮುಂದೆ ‘ಟ್ರಾಯ್‌’ನ ಅಂತರ್ಜಾಲ ತಾಣದಲ್ಲಿ ನೋಡಬಹುದು. ಇದರಲ್ಲಿ ಇಂಟರ್‌ನೆಟ್ ಮತ್ತು ಸ್ಥಿರ ದೂರವಾಣಿ ಹಾಗೂ ಮೊಬೈಲ್‌ ಕರೆಗಳ ದರ ಪಟ್ಟಿ ಇರಲಿದೆ. ಬಳಕೆದಾರರು ವಿವಿಧ ಕಂಪನಿಗಳ ದರ ಪಟ್ಟಿಯನ್ನು ಹೋಲಿಕೆ ಮಾಡಿಕೊಳ್ಳುವ ಸೌಲಭ್ಯವು ಇರಲಿದೆ.

ಇದರ ಜತೆಗೆ ಟವರ್‌ಗಳು, ಟವರ್ ದೊರಕುವ ಸ್ಥಳ, ಪರವಾನಿಗೆ ಮಾಹಿತಿ ಇರಲಿದೆ. ಬಳಕೆದಾರರಿಗೆ ಬೆಲೆ ಪಟ್ಟಿಯನ್ನು ತುಲನೆ ಮಾಡಿಕೊಳ್ಳಲು ಇದು ಅನುಕೂಲವಾಗಲಿದೆ.  ಪಾರದರ್ಶಕತೆ ಕಾಯ್ದುಕೊಳ್ಳಲೂ ಸಹಕಾರಿಯಾಗಲಿದೆ ಎಂದು ‘ಟ್ರಾಯ್’ ತಿಳಿಸಿದೆ. ಈ ಹಿಂದೆ ವಿವಿಧ ಕಂಪನಿಗಳು ತಮ್ಮ ಅಂತರ್ಜಾಲ ತಾಣದ ಮೂಲಕ ಟ್ಯಾರಿಫ್ ವಿವರ ನೀಡುತ್ತಿದ್ದವು. ‘ಟ್ರಾಯ್‌’ನ ಈ ನಡೆ, ಮೊಬೈಲ್ ಕರೆ ಹಾಗೂ ಇಂಟರ್‌ನೆಟ್ ದರಗಳ ಮೇಲೂ ಕಣ್ಣಿಡಲು ನೆರವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ವೆಬ್‌ವಿಳಾಸ: www.tariff.trai.gov.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry