ಪ್ರತಿಭಟನೆಯ ಅಸ್ತ್ರ

7

ಪ್ರತಿಭಟನೆಯ ಅಸ್ತ್ರ

Published:
Updated:

‘ನೋಟಾ’ದ ಬಗ್ಗೆ ಕಳೆದ ಕೆಲವು ದಿನಗಳಿಂದ ‘ಪ್ರಜಾವಾಣಿ’ಯಲ್ಲಿ ಪರ– ವಿರೋಧದ ಚರ್ಚೆ ನಡೆಯುತ್ತಿದೆ. ಅವೆಲ್ಲವನ್ನೂ ಗಮನಿಸಿದ ಬಳಿಕ, ಆ ಬಗ್ಗೆ ನನ್ನ ಅಭಿಪ್ರಾಯವನ್ನೂ ದಾಖಲಿಸಬೇಕು ಎಂದೆನಿಸಿತು.

ನೋಟಾ ಸಿನಿಕತನ ಹೇಗಾಗುತ್ತದೆ? ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿದ್ದ ಕೆಲವು ನಾಯಕರ ನಡೆ–ನುಡಿಗಳನ್ನು ನೋಡಿದ ಬಳಿಕ ಕಾಂಗ್ರೆಸ್‍ನಲ್ಲಿ ಇನ್ನು ಯಾರನ್ನೂ ನೋಡಬೇಕು ಎಂದೆನಿಸುವುದಿಲ್ಲ. ಬಿಜೆಪಿಯ ‘ಧರ್ಮ ರಾಜಕಾರಣ’ಕ್ಕೆ ನನ್ನ ಸಹಮತವಿಲ್ಲ. ಜೆಡಿಎಸ್‌ನಲ್ಲಿ ಅಪ್ಪ– ಮಕ್ಕಳ ನಾಟಕಕ್ಕೆ ಯಾವ ಸಿದ್ಧಾಂತವಿದೆ? ಕನಿಷ್ಠ ನಾಚಿಕೆಯೂ ಇಲ್ಲ. ಇವರಲ್ಲಿ ಯಾರನ್ನಾದರೂ ಆಯ್ಕೆ ಮಾಡುವುದು ಆತ್ಮವಂಚನೆ ಅನಿಸುತ್ತದೆ.

ಇವರಲ್ಲಿ ಯಾರಿಗೆ ವೋಟು ಹಾಕಿದರೂ ‘ಅವರ ಭ್ರಷ್ಟಾಚಾರಕ್ಕೆ ನಾನೂ ಸಹಮತ ಒತ್ತಿದಂತಾಗುತ್ತದೆ’ ಎಂಬ ಪಾಪಪ್ರಜ್ಞೆ ಕಾಡುತ್ತದೆ. ಚುನಾವಣೆಗೂ ಮುನ್ನ ಹಣ, ಕುಕ್ಕರ್, ಮಿಕ್ಸಿ ಹಂಚಿಕೆಗಳೇನೂ ತೆರೆಮರೆಯಲ್ಲಿ ನಡೆದಿರಲಿಲ್ಲ. ಹೈಕಮಾಂಡ್‌ಗೆ ದುಡ್ಡು ಕೊಟ್ಟು ಟಿಕೆಟ್ ಪಡೆಯುವುದು, ಹಣ ನೀಡಿ ಎದುರು ಪಕ್ಷದ ಅಭ್ಯರ್ಥಿಯನ್ನು ಖರೀದಿಸುವುದು, ಚುನಾವಣೆಗೆ ಮೊದಲೇ ಫಿಕ್ಸಿಂಗ್, ಜಾತಿ- ಉಪಜಾತಿ- ಒಳಜಾತಿ ಲೆಕ್ಕಾಚಾರ... ಹೀಗೆ ನೈತಿಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುವುದನ್ನು ನೋಡಿದಾಗ ಬೇಸರವೆನಿಸುತ್ತದೆ.

ಜನಸಾಮಾನ್ಯಳಾಗಿ ಇವೆಲ್ಲವುಗಳ ಬಗ್ಗೆ ನನ್ನ ವಿರೋಧ ವ್ಯಕ್ತಪಡಿಸುವುದಕ್ಕೆ ನನಗೆಲ್ಲಿ ಸಾಧ್ಯವಿದೆ? ನನ್ನ ಆಕ್ರೋಶ ವ್ಯಕ್ತಪಡಿಸಲು ನನಗೆ ನೀಡಿರುವ ಅಸ್ತ್ರವೇ ನೋಟಾ. ಭ್ರಷ್ಟರಿಗೆ ಮತ ನೀಡಿ, ಆ ವ್ಯವಸ್ಥೆಯ ಭಾಗವಾಗಲು ನನಗೆ ಇಷ್ಟವಿಲ್ಲ. ನೋಟಾ ವೋಟುಗಳು ಪ್ರತಿರೋಧದ ಪ್ರತೀಕ. ಭ್ರಷ್ಟತನದ ಲಾಭವನ್ನು ಒಂದು ವರ್ಗದವರು ಪಡೆದುಕೊಳ್ಳುತ್ತಿದ್ದಾರಷ್ಟೇ ಹೊರತು ಎಲ್ಲರೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೇ ಪ್ರಾತಿನಿಧ್ಯ ಹೌದು. ಆದರೆ ವ್ಯವಸ್ಥೆಯ ಸುಧಾರಣೆಗೆ ಹಂಬಲಿಸುವ ಚಿಕ್ಕ ಚಿಕ್ಕ ಸ್ವರಗಳು ದುರಭಿಮಾನದ ಸ್ವರಗಳು ಹೇಗಾಗುತ್ತವೆ? ಅದು ಪರ್ಯಾಯ ರಾಜಕಾರಣಕ್ಕೆ, ಸುಧಾರಣೆ ಕಡೆಗಿನ ನಮ್ಮ ಹಂಬಲ.

ಶ್ರೀನಿಧಿ ಅಡಿಗ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry