ಸೋಮವಾರ, ಮಾರ್ಚ್ 1, 2021
29 °C

ಅಂಚಿಗೆ ಸರಿದವರು, ಮುಂಚೂಣಿಗೆ ಬರದವರು

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಅಂಚಿಗೆ ಸರಿದವರು, ಮುಂಚೂಣಿಗೆ ಬರದವರು

ಮತ ಎಣಿಕೆ ಪ್ರಕ್ರಿಯೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಗಳು ಪಡೆದುಕೊಂಡ ತಿರುವುಗಳು ಅನಿರೀಕ್ಷಿತ. 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಸರ್ಕಾರ ರಚನೆಯ ಸನಿಹಕ್ಕೆ ಬಂದಿದ್ದ ಬಿಜೆಪಿ, ಪೂರ್ಣ ಫಲಿತಾಂಶಗಳು ಪ್ರಕಟವಾಗುತ್ತಾ ಹೋಗುತ್ತಿದ್ದಂತೆ ಸರಳ ಬಹುಮತ ಇಲ್ಲದ ಸ್ಥಿತಿ ತಲುಪಿ ಈ ಹಕ್ಕು ಕಳೆದುಕೊಂಡಿದ್ದು ಚುನಾವಣಾ ರಾಜಕೀಯದ ತೀವ್ರ ಸ್ಪರ್ಧಾತ್ಮಕತೆಗೆ ದ್ಯೋತಕ. ಜನರ ಮನದಾಳವನ್ನು ತನ್ನದೇ ರೀತಿಯಲ್ಲಿ ಪ್ರದರ್ಶಿಸುವ ಪ್ರಜಾಪ್ರಭುತ್ವದ ಮಾಂತ್ರಿಕತೆ ಇದು. ಆದರೆ, ಈ ಸ್ಪರ್ಧಾತ್ಮಕತೆಯ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆ ಪಾಲ್ಗೊಳ್ಳಲು ಅವಕಾಶಗಳೇ ಇಲ್ಲ ಎನ್ನುವಷ್ಟು ಮಟ್ಟಿಗೆ ಈ ಕ್ಷೇತ್ರ ಪುರುಷಮಯವಾಗಿರುವುದು ಪ್ರಜಾಪ್ರಭುತ್ವದ ಅಣಕ.

ಈ ಬಾರಿ, 222 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಟ್ಟು 2626 ಅಭ್ಯರ್ಥಿಗಳ ಪೈಕಿ ಮಹಿಳೆಯರ ಪ್ರಮಾಣ ಕೇವಲ 209. ಎಂದರೆ ಕೇವಲ ಶೇ 8ಕ್ಕಿಂತ ಕಡಿಮೆ. ಈಗ ಸ್ಪರ್ಧಿಸಿದ್ದ ಈ ಕೆಲವೇ ಮಹಿಳೆಯರಲ್ಲಿ ಆರಿಸಿ ಬಂದ ಮಹಿಳೆಯರ ಸಂಖ್ಯೆಯೂ ಬೆರಳೆಣಿಕೆಯದು. ಒಟ್ಟು ಏಳು ಮಂದಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಎಂದರೆ ಕೇವಲ ಶೇ 3.

14ನೇ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ 34 ಸಚಿವರನ್ನೊಳಗೊಂಡಿದ್ದ ಸಂಪುಟದಲ್ಲಿ ಕೇವಲ ಇಬ್ಬರು ಸಚಿವೆಯರಿದ್ದರು. ಈ ಇಬ್ಬರು ಸಚಿವೆಯರೂ (ಉಮಾಶ್ರೀ ಹಾಗೂ ಎಂ.ಸಿ. ಮೋಹನಕುಮಾರಿ) ಈ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಸಚಿವೆಯರಷ್ಟೇ ಸೋಲಪ್ಪಿಲ್ಲ. ಸಿದ್ದರಾಮಯ್ಯ ಸಂಪುಟದ ಘಟಾನುಘಟಿ ಸಚಿವರೂ ಸೋಲಪ್ಪಿದ್ದಾರೆ. ಹೀಗಾಗಿ, ಸೋಲು – ಗೆಲುವು ಎಂಬುದಕ್ಕೆ ಮಹಿಳೆ, ಪುರುಷ ಎಂಬುದು ಕಾರಣವಲ್ಲ. ಆದರೆ, ಚುನಾವಣೆಯಲ್ಲಿ ಹೆಚ್ಚಿನ ಮಹಿಳೆಯರಿಗೆ ಟಿಕೆಟ್ ನೀಡದಿರುವುದಕ್ಕೆ ‘ಚುನಾವಣೆ ಗೆಲ್ಲುವ ಸಾಮರ್ಥ್ಯವಿಲ್ಲ’ ಎಂಬ ನೆಪವನ್ನೇ ನಮ್ಮ ರಾಜಕೀಯ ಪಕ್ಷಗಳು ಮುಂದಿಡುತ್ತಾ ಬಂದಿವೆ. ಅವಕಾಶಗಳು ಸಿಕ್ಕರೆ ತಾನೇ ರಾಜಕೀಯವಾಗಿ ಬೆಳೆಯುವ ಸಾಮರ್ಥ್ಯ ದಕ್ಕುವುದು? ಆದರೆ ರಾಜಕೀಯ ವಲಯಕ್ಕೆ ಮಹಿಳೆಗೆ ಪ್ರವೇಶ ನಿಷಿದ್ಧ ಎನ್ನುವಷ್ಟು ಮಟ್ಟಿಗೆ ಅಧಿಕಾರ ರಾಜಕಾರಣದಿಂದ ಮಹಿಳೆಯನ್ನು ನಮ್ಮ ರಾಜಕೀಯ ಪಕ್ಷಗಳು  ದೂರ ಇಡುತ್ತಲೇ ಬಂದಿವೆ.

‘ಸಮಾನತೆಯತ್ತ’ (ಟುವರ್ಡ್ಸ್ ಈಕ್ವಾಲಿಟಿ: ದಿ ರಿಪೋರ್ಟ್ ಆಫ್ ದಿ ಕಮಿಟಿ ಆನ್ ದಿ ಸ್ಟೇಟಸ್ ಆಫ್ ವಿಮೆನ್ ಇನ್ ಇಂಡಿಯಾ) ಎಂಬಂಥ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ 1974ರಲ್ಲಿ ಸಲ್ಲಿಸಲಾಗಿತ್ತು. ಲಿಂಗತ್ವ, ಕುಟುಂಬ ­ಕಲ್ಯಾಣ, ಆರೋಗ್ಯ, ರಾಜಕೀಯ ಪಾಲ್ಗೊಳ್ಳು­ವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಹೊಸ ಪರಿಕಲ್ಪನೆಗಳ ಸೃಷ್ಟಿಗೆ ಈ ವರದಿ ಪ್ರೇರಕವಾಯಿತು. ‘ಸೂಕ್ತ ರಾಜಕೀಯ ಪ್ರಾತಿನಿಧ್ಯ ಗಳಿಸಿಕೊಳ್ಳಲು ಮಹಿಳೆಯರಿಗೆ ಇರುವ ಕಷ್ಟ’ಗಳನ್ನು ಈ ವರದಿ ಪ್ರಸ್ತಾಪಿಸಿತ್ತು. ನಾಲ್ಕು ದಶಕಗಳ ನಂತರ 2018ರಲ್ಲೂ ಈ ಸ್ಥಿತಿ ಬದಲಾಗಿಲ್ಲ.

1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಪಂಚಾಯಿತಿ ವ್ಯವಸ್ಥೆಯ ಆಡಳಿತದಲ್ಲಿ ಮಹಿಳೆಯರಿಗೆ ಶೇ 25ರಷ್ಟು ಸ್ಥಾನಗಳನ್ನು ಮೀಸಲಿಟ್ಟ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕಿದೆ. ತಾನಾಗೇ ತೀರ್ಮಾನ ಕೈಗೊಂಡು ಈ ನೀತಿಯನ್ನು ಆಗಿನ ರಾಜ್ಯ ಸರ್ಕಾರ ರೂಪಿಸಿತ್ತು. ಈ ಒಂದು ಕ್ರಮಕ್ಕಾಗಿ ಒತ್ತಾಯಿಸಿ ಯಾವ ಮಹಿಳಾ ಸಂಘಟನೆಯೂ ಆಗೇನೂ ಒತ್ತಡ ಹೇರಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. ಆ ನಂತರ ಸಂಸತ್ ಹಾಗೂ ಶಾಸನಸಭೆಗಳಲ್ಲೂ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ನೀಡಬೇಕೆಂಬ ಬಗ್ಗೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಯುತ್ತಿದೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆ ಇದಕ್ಕೆ ಕಿವಿಗೊಡುತ್ತಿಲ್ಲ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಮಹಿಳೆ ಮತ್ತೆ ಅಂಚಿಗೆ ಸರಿದಿದ್ದಾಳೆ.

ಜಾತಿ ಹಾಗೂ ಧಾರ್ಮಿಕ ಸಮುದಾಯಗಳ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂಬುದು ರಾಜಕೀಯ ಲೆಕ್ಕಾಚಾರಗಳಲ್ಲಿ ಬಹುಮುಖ್ಯ ಅಂಶವಾಗಿ ಪರಿಗಣನೆಗೆ ಒಳಪಡುತ್ತದೆ. ಈ ಲೆಕ್ಕಾಚಾರ ಆಧರಿಸಿಯೂ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷಗಳು ಆಯ್ಕೆ ಮಾಡುತ್ತವೆ. ಆದರೆ ಶೇ 49ಕ್ಕೂ ಹೆಚ್ಚಿರುವ ಮಹಿಳೆಯರನ್ನು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ಚುನಾವಣಾ ಫಲಿತಾಂಶಗಳನ್ನು ನಿರ್ಣಯಿಸುವಷ್ಟು ಶಕ್ತಿ ಮಹಿಳಾ ಮತದಾರರಿಗೆ ಇಲ್ಲ ಎಂಬುದು ಇದಕ್ಕೆ ಕಾರಣವೇ? ಆದರೆ, ಬಿಹಾರದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರ ಭಾರಿ ವಿಜಯಕ್ಕೆ ಮಹಿಳಾ ಮತದಾರರ ಕೊಡುಗೆಯೂ ಸೇರಿತ್ತು ಎಂಬುದನ್ನು ಮರೆಯಲಾಗದು. ಬಿಹಾರದ ಜನಸಂಖ್ಯೆಯಲ್ಲಿ ಕೇವಲ ಶೇ 3.8ರಷ್ಟು ಇರುವ ಕುರ್ಮಿ ಸಮುದಾಯಕ್ಕೆ ಸೇರಿದವರು ನಿತೀಶ್ ಕುಮಾರ್. ಹೀಗಾಗಿ ಬಲಾಢ್ಯ ಜಾತಿಗಳ ಮತಬ್ಯಾಂಕ್ ಅನ್ನು ಎದುರಿಸಲು ಮದ್ಯ ನಿಷೇಧ ಆಶ್ವಾಸನೆಯೊಂದಿಗೆ ಮಹಿಳಾ ಮತದಾರರ ಮೌನ ಬೆಂಬಲವನ್ನು ಗಳಿಸಿಕೊಂಡಿದ್ದೂ ನಿತೀಶ್ ಅವರಿಗೆ ಅನುಕೂಲಕರವಾಗಿ ಪರಿಣಮಿಸಿತ್ತು. ಹಾಗೆಯೇ ಈ ಬಾರಿ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಆ ಧರ್ಮದ ಮಹಿಳೆಯರ ಬೆಂಬಲ ಇರಲಿಲ್ಲ ಎಂಬ ವ್ಯಾಖ್ಯಾನಗಳೂ ಇವೆ. ಇದು ನಿಜವೇ ಆಗಿದ್ದಲ್ಲಿ ಇದನ್ನು ಮಹಿಳಾ ಮತ ಶಕ್ತಿ ಎಂದೇ ಗ್ರಹಿಸಬೇಕಾಗುತ್ತದೆ.

ರಾಜಕೀಯ ಲೆಕ್ಕಾಚಾರಗಳಲ್ಲಿ ಮಹಿಳೆಯ ಪಾತ್ರವೂ ಮುಖ್ಯ ಎಂಬಂತೆ ಎಲ್ಲಾ ರಾಜಕೀಯ ಪಕ್ಷಗಳೂ ಇತ್ತೀಚೆಗೆ  ಬಿಂಬಿಸುತ್ತವೆ. ಏಕೆಂದರೆ ಮಹಿಳಾ ಮತದಾರರ ಪ್ರಮಾಣವೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಹಿಳಾ ಮತದಾರರ ಅನುಪಾತ ಶೇ 16ರಷ್ಟು ಏರಿಕೆಯಾಗಿದೆ ಎಂಬುದನ್ನು ಚುನಾವಣಾ ಆಯೋಗದ ಅಂಕಿಅಂಶಗಳು ಹೇಳುತ್ತವೆ. ಮತದಾನದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಉತ್ತೇಜನ ನೀಡುವುದಕ್ಕಾಗಿ 450 ಸಖಿ ಬೂತ್‌ಗಳನ್ನೂ ಈ ಬಾರಿ ರಾಜ್ಯದಾದ್ಯಂತ ಚುನಾವಣಾ ಆಯೋಗ ಸ್ಥಾಪಿಸಿತ್ತು. ಪ್ರಚಾರ ಸಭೆಗಳಲ್ಲಿ, ಜಾಹೀರಾತುಗಳಲ್ಲಿ ಮಹಿಳಾ ಮತದಾರರ ಓಲೈಕೆಯನ್ನು ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲೇ ಮಾಡಿದವು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣಗಳಲ್ಲಿ ‘ಬೇಟಾ ಬೇಟಿ ಏಕ್ ಸಮಾನ್’ (‘ಮಗ, ಮಗಳು ಒಂದೇ’) ಎಂಬ ಘೋಷಣೆಯೂ ಇತ್ತು. ಆದರೆ ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 6. ಬಿಜೆಪಿ ನಿಲ್ಲಿಸಿದ್ದ ಒಟ್ಟು ಅಭ್ಯರ್ಥಿಗಳಲ್ಲಿ ಇದು 3% ಕೂಡ ಆಗುವುದಿಲ್ಲ. ಈ ಪೈಕಿ ಮೂವರು ಮಹಿಳೆಯರು ಬಿಜೆಪಿಯಿಂದ ಈಗ ಗೆಲುವು ಸಾಧಿಸಿದ್ದಾರೆ.

‘ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ವಿರೋಧಿಸುವ ಕಾಂಗ್ರೆಸ್ ಉಪಕ್ರಮ ಮಹಿಳಾ ವಿರೋಧಿ ಮನಸ್ಥಿತಿ ಬಿಂಬಿಸುತ್ತದೆ’ ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಜರೆದಿದ್ದ ಮೋದಿಯವರು ಮಹಿಳೆಯರ ಮನ ಗೆಲ್ಲಲು ಯತ್ನಿಸಿದ್ದರು. ‘ಮುಸ್ಲಿಂ ಮಹಿಳೆಯರು ಇನ್ನೂ ಎಷ್ಟು ನರಳಬೇಕು? ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರ ಮೇಲೆ ಅನ್ಯಾಯ ಆಗುತ್ತಿರುವುದು ವಾಸ್ತವವಲ್ಲವೇ?’ ಎಂದಿದ್ದರು. ‘ಮುಸ್ಲಿಂ ಮಹಿಳೆಯರ ಬದುಕು ಸುಧಾರಿಸಲು ಸಿಕ್ಕಿದ್ದ ಅವಕಾಶವನ್ನು ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಮತಬ್ಯಾಂಕ್ ಒತ್ತಡಗಳಿಂದಾಗಿ ಕೈಬಿಟ್ಟಿದ್ದರು’ ಎಂದು ಶಾ ಬಾನೊ ಪ್ರಕರಣವನ್ನು ಪರೋಕ್ಷವಾಗಿ ಪ್ರಧಾನಿಯವರು ಪ್ರಸ್ತಾಪಿಸಿದ್ದರು. ‘ಈ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಸಂಸತ್‌ನಲ್ಲಿ ಪೂರ್ಣ ಬಹುಮತವಿದ್ದ ಕಾಂಗ್ರೆಸ್ ಬುಡಮೇಲು ಮಾಡಿಬಿಟ್ಟಿತು. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಈ ದಾರಿ ಹುಡುಕಿಕೊಂಡ ಕಾಂಗ್ರೆಸ್ ಮಹಿಳೆಯರ ಹಿತ ನಿರ್ಲಕ್ಷಿಸಿತು’ ಎಂದೂ ಮೋದಿ ಆರೋಪಿಸಿದ್ದರು. ‘ಈಗ ಈ ಅನ್ಯಾಯ ಸರಿಪಡಿಸಲು ಬಿಜೆಪಿ ಮುಂದೆ ಬಂದಿರುವಾಗ ಮಸೂದೆಗೆ ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ. ಮಹಿಳೆಯರನ್ನು ಅವಮಾನಿಸುತ್ತಲೇ ಬಂದಿರುವ ಪಕ್ಷ ಅಧಿಕಾರಕ್ಕೆ ಬರಲು ಬಿಡಬೇಕೇ?’ ಎಂದು ಮೋದಿ ಮಹಿಳೆಯರಿಗೆ ಪ್ರಶ್ನಿಸಿದ್ದರು.

ಈ ರೀತಿ ಮಹಿಳಾ ಮತದಾರರನ್ನು ಓಲೈಸುವಲ್ಲಿ ಕಾಂಗ್ರೆಸ್ ಪಕ್ಷವೂ ಹಿಂದೆ ಏನೂ ಬಿದ್ದಿಲ್ಲ. ಮುಂದಿನ 10 ವರ್ಷಗಳಲ್ಲಿ ರಾಷ್ಟ್ರದಲ್ಲಿ ಕನಿಷ್ಠ 10 ಮಹಿಳಾ ಮುಖ್ಯಮಂತ್ರಿಗಳನ್ನು ನೋಡಲು ತಮಗೆ ಆಸೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಹೇಳಿದ್ದರು. ‘ಈ ಹೇಳಿಕೆ ಇಲ್ಲಿರುವ ಅನೇಕ ಹಿರಿಯ ನಾಯಕರಿಗೆ ಕಿರಿಕಿರಿ ಉಂಟುಮಾಡಬಹುದು ಎಂಬುದು ನನಗೆ ಗೊತ್ತು. ಆದರೆ ಆ ಕಾರ್ಯಸೂಚಿಯನ್ನು ನಾನು ಮುಂದಿಡಲಿದ್ದೇನೆ’ ಎಂದಿದ್ದರು ರಾಹುಲ್. ಕಡಿಮೆ ಮಹಿಳೆಯರಿಗೆ ಟಿಕೆಟ್ ನೀಡಿದ ಪಕ್ಷದ ಕರ್ನಾಟಕ ಘಟಕದ ಬಗ್ಗೆಯೂ ತಮಗೆ ಸಮಾಧಾನ ಇಲ್ಲವೆಂದು ಹೇಳುತ್ತಲೇ ರಾಹುಲ್ ಗಾಂಧಿ ಅವರು ಮಹಿಳಾ ಪರ ಕಾಳಜಿಗಳನ್ನು ಪ್ರದರ್ಶಿಸಿದ್ದರು.

ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1996ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿತವಾದ ಮಹಿಳಾ ಮೀಸಲು ಮಸೂದೆಗೆ ತನ್ನ ಬೆಂಬಲವಿದೆ ಎಂಬುದನ್ನು ಜೆಡಿಎಸ್ ಹೇಳುತ್ತಲೇ ಬಂದಿದೆ. ತೆನೆ ಹೊತ್ತ ರೈತ ಮಹಿಳೆಯನ್ನು ಪಕ್ಷದ ಚಿಹ್ನೆಯಾಗಿಯೂ ಹೊಂದಿರುವ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಕೇವಲ 4 ಮಹಿಳೆಯರು. ಆದರೆ ಇವರಲ್ಲಿ ಯಾರೊಬ್ಬರೂ ಗೆಲುವು ಸಾಧಿಸಿಲ್ಲ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಮಹಿಳೆಯರು ಗೆಲುವು ಸಾಧಿಸಬಲ್ಲಂತಹ ಸುರಕ್ಷಿತ ಕ್ಷೇತ್ರ ಎಂದು ಪರಿಗಣಿಸಲಾಗುತ್ತಿತ್ತು. 1986ರ ಉಪಚುನಾವಣೆಯ ನಂತರ 27 ವರ್ಷಗಳವರೆಗೆ ಶಾಸಕಿಯರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚಿದ್ದಾರೆ. ಹೀಗಿದ್ದೂ ಈ ಬಾರಿ ಇಲ್ಲಿ ಮಹಿಳಾ ಅಭ್ಯರ್ಥಿ ಇರಲಿಲ್ಲ.

ಮಾಹಿತಿ ತಂತ್ರಜ್ಞಾನ ರಾಜಧಾನಿಯಾದ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯೇ ಇದೆ. 2008ರಲ್ಲಿ ಶೋಭಾ ಕರಂದ್ಲಾಜೆ ಅವರು ಯಶವಂತಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆನಂತರ ಈ ಹತ್ತು ವರ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲ. ಆದರೆ ಆರು ದಶಕಗಳ ಹಿಂದೆ 1957ರಲ್ಲಿ ಬೆಂಗಳೂರಿನಿಂದ ಮೂವರು ಅಭ್ಯರ್ಥಿಗಳು ಗೆದ್ದಿದ್ದರು. ಗ್ರೇಸ್ ಟಕ್ಕರ್, ನಾಗರತ್ನಮ್ಮ ಹಾಗೂ ಲಕ್ಷ್ಮಿ ರಾಮಣ್ಣ ಅವರು ಕ್ರಮವಾಗಿ ಹಲಸೂರು, ಗಾಂಧಿನಗರ ಹಾಗೂ ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.

ಪ್ರಗತಿಪರ ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯ ಎಂಬೆಲ್ಲಾ ಹಣೆಪಟ್ಟಿಗಳಿರುವ ಕರ್ನಾಟಕಕ್ಕೆ ಈವರೆಗೆ ಮಹಿಳಾ ಮುಖ್ಯಮಂತ್ರಿ ಅಥವಾ ಮಹಿಳಾ ಉಪಮುಖ್ಯಮಂತ್ರಿಯನ್ನು ಹೊಂದುವುದು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಬೇಕಾಗಿರುವುದುಸಾಂವಿಧಾನಿಕ ಬಾಧ್ಯತೆ ಆಗಿದೆ. ಆರ್ಥಿಕ ಮತ್ತಿತರ ಕಾರಣಗಳಿಗಾಗಿ ನ್ಯಾಯವನ್ನು ಪಡೆದುಕೊಳ್ಳಲು ವಂಚಿತರಾದವರಿಗೆ ನ್ಯಾಯ ಪಡೆದುಕೊಳ್ಳುವ ಅವಕಾಶಗಳನ್ನು ಪ್ರಭುತ್ವ ಸೃಷ್ಟಿಸಬೇಕು ಎಂದು ಸಂವಿಧಾನದ 39 ಎ ವಿಧಿಯಲ್ಲಿ ಹೇಳಲಾಗಿದೆ. ಜೊತೆಗೆ ಮಹಿಳೆ ಮೇಲಿನ ಎಲ್ಲಾ ಬಗೆಯ ತಾರತಮ್ಯ ನಿವಾರಿಸುವ ಅಂತರರಾಷ್ಟ್ರೀಯ ನಿರ್ಣಯಕ್ಕೂ (ಸಿಡಾ) ಭಾರತ ಸಹಿ ಹಾಕಿದೆ. ಈ ನಿರ್ಣಯದ 7ನೇ ವಿಧಿ ಪ್ರಕಾರ, ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಮಹಿಳೆ ಮೇಲಿನ ತಾರತಮ್ಯ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಚುನಾವಣೆಗಳಲ್ಲಿ ಪಾಲ್ಗೊಳ್ಳಲು ಪುರುಷರಷ್ಟೇ ಮಹಿಳೆಯರೂ ಅರ್ಹತೆ ಗಳಿಸಿಕೊಳ್ಳಬೇಕಾದುದು ಅಗತ್ಯ ಎಂದೂ ಈ ವಿಧಿಯಲ್ಲಿ ಹೇಳಲಾಗಿದೆ. ಸರ್ಕಾರದ ನೀತಿಗಳು ಹಾಗೂ ಅವುಗಳ ಅನುಷ್ಠಾನದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೂ ಹಕ್ಕಿದೆ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

ಇತ್ತೀಚೆಗೆ ಬರುತ್ತಿರುವ ವರದಿಗಳ ಪ್ರಕಾರ ಉದ್ಯೋಗ ರಂಗದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯ ಪ್ರಮಾಣ ಭಾರತದಲ್ಲಿ ಕುಸಿತ ಕಾಣುತ್ತಿದೆ. ಇದಕ್ಕೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳಿವೆ. ರಾಜಕೀಯ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಕೊರತೆಗೂ ಈ ಕಾರಣಗಳು ಮುಖ್ಯವಾಗುತ್ತವೆ. ಜೊತೆಗೆ, ಹಣ ಬಲ, ತೋಳ್ಬಲ ಪ್ರಾಧಾನ್ಯ ಪಡೆಯುತ್ತಿರುವ ರಾಜಕಾರಣದಲ್ಲಿ ಮಹಿಳೆಯನ್ನು ಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಆದರೆ, ಸಾರ್ವಜನಿಕ ಬದುಕಲ್ಲಿ ಮಹಿಳೆ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ ಸಮಾನತೆಯನ್ನು ಬೋಧಿಸುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕಾದುದು ಈಗ ಮುಖ್ಯವಲ್ಲವೇ? ಇದಕ್ಕಾಗಿ ಕೈಗೊಳ್ಳಬೇಕಾದ ಸಾರ್ವಜನಿಕ ನೀತಿಗಳು, ಕಾನೂನುಗಳೇನು ಎಂಬ ಚರ್ಚೆಗಳಲ್ಲಿ ಮಹಿಳೆಯ ದೃಷ್ಟಿಕೋನ ಇರಬೇಡವೇ? ಹಾಗೆಯೇ ನೀತಿಗಳನ್ನು ರೂಪಿಸಬೇಕಾದ ಅಧಿಕಾರ ಸ್ಥಾನಗಳಲ್ಲಿ ಮಹಿಳೆಯರ ಉಪಸ್ಥಿತಿಯೂ ಅಗತ್ಯವಲ್ಲವೇ? ಈ ಬಗ್ಗೆ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.