7
ಪಾಕಿಸ್ತಾನದ ವಿಧಾನಸಭೆಗಳಲ್ಲಿ ನಿರ್ಣಯ ಅಂಗೀಕಾರ

ಷರೀಫ್‌ ವಿರುದ್ಧ ದೇಶದ್ರೋಹ ಮೊಕದ್ದಮೆ

Published:
Updated:
ಷರೀಫ್‌ ವಿರುದ್ಧ ದೇಶದ್ರೋಹ ಮೊಕದ್ದಮೆ

ಲಾಹೋರ್‌ : ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಪಾಕಿಸ್ತಾನದ ಮೂರು ವಿಧಾನಸಭೆಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

2008ರ ನವೆಂಬರ್‌ 26ರಂದು ಭಾರತದ ಮುಂಬೈ ಮೇಲೆ ಪಾಕಿಸ್ತಾನಿ ಭಯೋತ್ಪಾದಕರೇ ದಾಳಿ ನಡೆಸಿದ್ದರು ಎಂದು ಷರೀಫ್‌ ನೀಡಿದ್ದ ಹೇಳಿಕೆ ಖಂಡಿಸಿ, ಈ ನಿರ್ಣಯ ಅಂಗೀಕರಿಸಲಾಗಿದೆ.

‘ದೇಶದ್ರೋಹಿ ನವಾಜ್‌ ಷರೀಫ್‌ ಅವರನ್ನ ಗಲ್ಲಿಗೇರಿಸಿ’ ಎಂದು ವಿರೋಧಪಕ್ಷದ ನಾಯಕ ಪಾಕಿಸ್ತಾನ ತೆಹ್ರಿಕ್‌–ಏ–ಇನ್ಸಾಫ್‌ ಮುಖ್ಯಸ್ಥ ಇಮ್ರಾನ್‌ ಖಾನ್‌ ಒತ್ತಾಯಿಸಿದ್ದಾರೆ.

ದೇಶದ್ರೋಹದ ಆಪಾದನೆ ಮೇರೆಗೆ ನವಾಜ್‌ ಷರೀಫ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಲಾಹೋರ್‌ ಹೈಕೋರ್ಟ್‌ನಲ್ಲಿ ಎರಡು ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ, ಲಾಹೋರ್‌ ಠಾಣೆಯಲ್ಲಿಯೂ ಷರೀಫ್‌ ವಿರುದ್ಧ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ.

‍ಪಾಕಿಸ್ತಾನ ಸೇನೆಯ ಉನ್ನತ ಸಂಸ್ಥೆ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಕೂಡ, ಷರೀಫ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಅತ್ಯಂತ ಅತಾರ್ಕಿಕ, ಅಸಂಗತ ಹಾಗೂ ಜನರನ್ನು ದಾರಿ ತಪ್ಪಿಸುವಂತಹದ್ದು ಎಂದಿದೆ.

ಸಿಂಧ್ ವಿಧಾನಸಭೆಯಲ್ಲಿಯೂ ಷರೀಫ್‌ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಷರೀಫ್ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದ್ದು,  ದೇಶದ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

‘ಪಾಕಿಸ್ತಾನದ ಸಾರ್ವಭೌಮತ್ವ, ಏಕತೆಗೆ ಷರೀಫ್‌ ಹೇಳಿಕೆ ಧಕ್ಕೆ ತಂದಿದೆ’ ಎಂದೂ ಅದು ಅಭಿಪ್ರಾಯಪಟ್ಟಿದೆ.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಪನಾಮಾ ದಾಖಲೆ ಹಗರಣದಲ್ಲಿ ಸಿಲುಕಿದ್ದರಿಂದ ಸುಪ್ರೀಂಕೋರ್ಟ್‌ ಕಳೆದ ಜುಲೈನಲ್ಲಿ ಅವರನ್ನು ಪದಚ್ಯುತಗೊಳಿಸಿದೆ.

*

ಎನ್‌ಎಸ್‌ಸಿಗೆ ಷರೀಫ್‌ ತಿರುಗೇಟು

ತಾವು ನೀಡಿದ್ದ ಹೇಳಿಕೆಯನ್ನು ‘ಅತಾರ್ಕಿಕ ಮತ್ತು ಅಸಂಗತ ಹಾಗೂ ಜನರನ್ನು ದಾರಿತಪ್ಪಿಸುವ ಹೇಳಿಕೆ’ ಎಂದು ಕರೆದಿದ್ದ ಎನ್‌ಎಸ್‌ಸಿಗೆ ತಿರುಗೇಟು ನೀಡಿರುವ ಷರೀಫ್‌, ಯಾರು ದೇಶದ್ರೋಹದ ಕೆಲಸ ಮಾಡಿದ್ದರು ಎಂಬ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಆಯೋಗ ರಚಿಸಿ ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಆಯೋಗ ರಚಿಸಿದರೆ ಸತ್ಯ ಹೊರ ಬರಲಿದೆ. ಅಲ್ಲದೆ, ಯಾರು ದೇಶಭಕ್ತ–ಯಾರು ದೇಶದ್ರೋಹಿ ಎಂಬುದೂ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry