‘ಗೌಡ್ರ ಮನೆ ಬಾಗಿಲಿಗೆ ಬಂದ ಅಧಿಕಾರ’

4
ರಾಜಕೀಯ ಚಟುವಟಿಕೆಗಳ ಕೇಂದ್ರವಾದ ‘ಪದ್ಮನಾಭ ನಗರ’

‘ಗೌಡ್ರ ಮನೆ ಬಾಗಿಲಿಗೆ ಬಂದ ಅಧಿಕಾರ’

Published:
Updated:
‘ಗೌಡ್ರ ಮನೆ ಬಾಗಿಲಿಗೆ ಬಂದ ಅಧಿಕಾರ’

ಬೆಂಗಳೂರು: ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಮನೆಯು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿತು.

ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಜೆಡಿಎಸ್‌ನ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಗೆ ಮಧ್ಯಾಹ್ನ ಬಂದು ಚರ್ಚೆ ನಡೆಸಲಾರಂಭಿಸಿದರು. ಅದೇ ವೇಳೆ ಮನೆಯ ಹತ್ತಿರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ‘ಬಂತಪ್ಪ ಬಂತು, ಅಧಿಕಾರ ಬಂತು. ಎಲ್ಲಿಗೆ ಬಂತು. ಗೌಡ್ರ ಮನೆ ಬಾಗಿಲಿಗೆ ಬಂತು’ ಎಂದು ಜೈಕಾರ ಹಾಕಿದರು. ಬಣ್ಣ ಹಾಗೂ ಹೂವುಗಳನ್ನು ಎರಚಿ ಸಂಭ್ರಮಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಮಧ್ಯಾಹ್ನ 2 ಗಂಟೆಗೆ ದೇವೇಗೌಡರ ಮನೆಗೆ ಬಂದರು. ಆಗ, ಕಾರ್ಯಕರ್ತರ ಸಂಭ್ರಮ ಹೆಚ್ಚಾಯಿತು. ಕಾರ್ಯಕರ್ತರ ನೂಕುನುಗ್ಗಲಿನ ನಡುವೆಯೇ ಪೊಲೀಸರ ಭದ್ರತೆಯಲ್ಲಿ ಕುಮಾರಸ್ವಾಮಿ ಮನೆಯೊಳಗೆ ಹೋದರು. ಸಂಜೆ 5 ಗಂಟೆಯವರೆಗೂ ಚರ್ಚೆ ನಡೆಸಿದರು.

4.55 ಗಂಟೆ ಸುಮಾರಿಗೆ ಮನೆಗೆ ಬಂದ ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌, 15 ನಿಮಿಷಗಳವರೆಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆಯಲ್ಲಿ ಮಾತುಕತೆ ನಡೆಸಿದರು. ಸರ್ಕಾರ ರಚನೆ ಸಂಬಂಧ ಸಿದ್ದರಾಮಯ್ಯ ಅವರು ನೀಡಿದ್ದ ಒಂದು ಪುಟದ ಪತ್ರವನ್ನು ದೇವೇಗೌಡರಿಗೆ ಒಪ್ಪಿಸಿದರು. ಅದು ಕೈ ಸೇರುತ್ತಿದ್ದಂತೆ ಕುಮಾರಸ್ವಾಮಿ ಅವರನ್ನು ರಾಜಭವನಕ್ಕೆ ಹೋಗುವಂತೆ ಸೂಚಿಸಿದರು.

ಮನೆಯಿಂದ ಹೊರಬರುತ್ತಿದ್ದಂತೆ, ‘ಕುಮಾರಣ್ಣ ಮಾತನಾಡಬೇಕು’ ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಮಹಡಿ ಏರಿದ ಕುಮಾರಸ್ವಾಮಿ, ಜನರಿಗೆ ಕೈ ಮುಗಿದು ನಮಸ್ಕರಿಸಿದರು. ನಂತರ, ಮಹಡಿಯಿಂದ ಇಳಿದು ಕಾರು ಹತ್ತಿದರು. ಆಗಲೂ ಕಾರ್ಯಕರ್ತರ ಘೋಷಣೆಗಳು ಜೋರಾಗಿದ್ದವು. ಕಾರನ್ನು ಸುತ್ತುವರಿದಿದ್ದ ಕಾರ್ಯಕರ್ತರು, ಮುಂದೆ ಹೋಗಲು ಸಹ ಬಿಡಲಿಲ್ಲ. ಕೈ ಮುಗಿಯುತ್ತಲೇ ಅವರೆಲ್ಲರನ್ನೂ ದೂರ ಸರಿಸಿ, ಕುಮಾರಸ್ವಾಮಿ ರಾಜಭವನದತ್ತ ಹೊರಟರು.

ನಂತರ, ದೇವೇಗೌಡರ ಪತ್ನಿ ಚನ್ನಮ್ಮ ಕುಟುಂಬ ಸಮೇತರಾಗಿ ಮಹಡಿಗೆ ಬಂದು ಕಾರ್ಯಕರ್ತರಿಗೆ ಕೈ ಮುಗಿದರು. ಈ ವೇಳೆಯೂ ಕಾರ್ಯಕರ್ತರ ಕೂಗಾಟ ಜೋರಾಗಿತ್ತು.

ಸೋನಿಯಾ ಅವರಿಂದ ಕರೆ: ಕುಮಾರಸ್ವಾಮಿ ಬರುವುದಕ್ಕೂ ಮುನ್ನವೇ ಕಾಂಗ್ರೆಸ್‌ನ ಹಿರಿಯ ನಾಯಕ ಜಾಫರ್ ಷರೀಫ್‌, ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ರಿಂದ ಕರೆ ಮಾಡಿಸಿ ದೇವೇಗೌಡರ ಜತೆ ಮಾತನಾಡಿಸಿದರು.

‘15 ನಿಮಿಷಗಳವರೆಗೆ ಸೋನಿಯಾ ಅವರ ಜತೆ ದೇವೇಗೌಡರು ಮಾತನಾಡಿದರು. ನಂತರ, 10 ನಿಮಿಷ ಅಹ್ಮದ್ ಪಟೇಲ್‌ ಅವರ ಜತೆ ಚರ್ಚಿಸಿದರು. ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗುವುದಾಗಿ ಅವರಿಬ್ಬರೂ ಹೇಳಿದರು’ ಎಂದು ಮನೆಯಲ್ಲಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಗೆ ಭೇಟಿ ನೀಡಿದ್ದ ದಿನೇಶ್ ಗುಂಡೂರಾವ್, ‘ಜೆಡಿಎಸ್ ನೇತೃತ್ವದ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ್ದೇವೆ. ಮುಖಂಡರ ಸೂಚನೆಯಂತೆ ಗೌಡರ ಮನೆಗೆ ಬಂದು ಮಾತುಕತೆ ನಡೆಸಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರ ಯಾವಾಗ ರಚನೆಯಾಗುತ್ತದೆ ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ. ಮೈತ್ರಿ ಸರ್ಕಾರ ರಚನೆಯಲ್ಲಿ ಸಚಿವ ಸ್ಥಾನಗಳ ಹಂಚಿಕೆ ಸಂಬಂಧ ಏನೂ ಮಾತನಾಡಿಲ್ಲ’ ಎಂದು ಹೇಳಿದರು.

*

ಕಿಕ್ಕಿರಿದು ತುಂಬಿದ್ದ ಮನೆ; ಬಿಗಿ ಭದ್ರತೆ

ದೇವೇಗೌಡರ ಬಹು ಅಂತಸ್ತಿನ ಮನೆಯು ಮಧ್ಯಾಹ್ನದಿಂದಲೇ ಮುಖಂಡರು, ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಮನೆ ಒಳಗೆ ಹಾಗೂ ಹೊರಗೆ 50ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕೆಲ ರಸ್ತೆಗಳಲ್ಲಿ ವಾಹನ ಸಂಚಾರವನ್ನೇ ನಿರ್ಬಂಧಿಸಲಾಯಿತು.

ಚುನಾಯಿತ ಪ್ರತಿನಿಧಿಗಳು ಒಬ್ಬೊಬ್ಬರಾಗಿ ಕಾರ್ಯಕರ್ತರೊಂದಿಗೆ ಬಂದು ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಎಲ್ಲರೂ ಮನೆಯೊಳಗೆ ನಿಂತುಕೊಂಡರು. ಯಾರೊಬ್ಬರೂ ಹೊರಗೆ ಹೋಗಲಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಕುಳಿತುಕೊಂಡೇ ದೇವೇಗೌಡರು, ಬಂದವರ ಜತೆ ಮಾತುಕತೆ ನಡೆಸುತ್ತಿದ್ದರು. ಆ ಕೊಠಡಿ ಹೊರತುಪಡಿಸಿ ಉಳಿದೆಲ್ಲ ಕಡೆ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಮುಖಂಡರೇ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಹೊರಗೆ ಬಂದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಮಹಾಲಕ್ಷ್ಮಿ ಲೇಔಟ್‌ನ ಚುನಾಯಿತ ಪ್ರತಿನಿಧಿ ಗೋಪಾಲಯ್ಯ, ‘ಸರ್ಕಾರ ರಚನೆ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾವಲ್ಲ. ಅಪ್ಪಾಜಿಯೇ (ದೇವೇಗೌಡ) ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry