ದಾಖಲೆ ಬರೆದ ಮಹಿಳೆಯರು

7

ದಾಖಲೆ ಬರೆದ ಮಹಿಳೆಯರು

Published:
Updated:
ದಾಖಲೆ ಬರೆದ ಮಹಿಳೆಯರು

ಬೆಳಗಾವಿ: ಜಿಲ್ಲೆಯಲ್ಲಿ ಸ್ಪರ್ಧೆಯಲ್ಲಿದ್ದ ಮೂವರೂ ಮಹಿಳೆಯರು ಗೆಲುವು ಸಾಧಿಸಿರುವುದು ವಿಶೇಷವಾಗಿದೆ. ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿಯ ಶಶಿ

ಕಲಾ ಜೊಲ್ಲೆ ಸತತ 2ನೇ ಬಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳಕರ, ಖಾನಾಪುರ ಕ್ಷೇತ್ರದ ಡಾ. ಅಂಜಲಿ ನಿಂಬಾಳ್ಕರ ಇದೇ ಮೊದಲ ಸಲ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿಯ ಸಂಜಯ ಪಾಟೀಲ ಅವರ ವಿರುದ್ಧ ಸೋತಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲೂ ಸೋತಿದ್ದರು.

2013ರ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಲಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅರವಿಂದ ಪಾಟೀಲ ಅವರ ವಿರುದ್ಧ ಸೋತಿದ್ದರು. ವೈದ್ಯೆಯಾದ ಅಂಜಲಿ ಅವರು ಐಪಿಎಸ್‌ ಅಧಿಕಾರಿ ಹೇಮಂತ್ ನಿಂಬಾಳ್ಕರ ಅವರ ಪತ್ನಿ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಇದೇ ಮೊದಲ ಸಲ ಖಾತೆ ತೆರೆದಿದೆ. ಇದರೊಂದಿಗೆ, ಎಂಇಎಸ್‌ ಆಧಿಪತ್ಯಕ್ಕೆ ಅಂತ್ಯ ಹಾಡಿದೆ.

ಈವರೆಗೆ ಗೆದ್ದವರು: 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಐವರು ಮಹಿಳೆಯರು 8 ಸಲ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಚಂಪಾಬಾಯಿ ಬೋಗಲೆ ಮೂರು ಬಾರಿ, ಲೀಲಾದೇವಿ ಆರ್. ಪ್ರಸಾದ್‌ ಎರಡು ಬಾರಿ, ಕಾಂಗ್ರೆಸ್‌ನಿಂದ ಶಾರದಮ್ಮ ಪಟ್ಟಣ, ಜನತಾ ಪಕ್ಷದಿಂದ ಶಕುಂತಲಾ ತುಕಾರಾಂ ಚೌಗಲೆ, ಬಿಜೆಪಿಯಿಂದ ಶಶಿಕಲಾ ಜೊಲ್ಲೆ ತಲಾ ಒಂದೊಂದು ಬಾರಿ ಆಯ್ಕೆಯಾಗಿದ್ದರು. ಒಮ್ಮೆಗೇ ಮೂವರು ಮಹಿಳೆಯರು ಗೆಲುವು ಸಾಧಿಸಿರುವುದು ಇದೇ ಮೊದಲಾಗಿದೆ.

ಕೋಟೆನಾಡಿನ ಮೊದಲ ಶಾಸಕಿ

ಚಿತ್ರದುರ್ಗ: ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ, ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವ ಮೂಲಕ ಕೋಟೆನಾಡಿನ ಮೊದಲ ಶಾಸಕಿ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ಜೆಡಿಎಸ್ ಮುಖಂಡ ದಿವಂಗತ ಕೆ. ಕೃಷ್ಣಪ್ಪ ಅವರ ಪುತ್ರಿ ಕೆ. ಪೂರ್ಣಿಮಾ, ಮೂಲತಃ ಬೆಂಗಳೂರಿನವರು. ಬಿಬಿಎಂಪಿಯಲ್ಲಿ ಎರಡು ಬಾರಿ ಕಾರ್ಪೊರೇಟರ್ ಆಗಿದ್ದರು. ಯಾದವ ಸಮುದಾಯದ ಮುಖಂಡರಾಗಿರುವ ಕೆ. ಕೃಷ್ಣಪ್ಪ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಸೋತ ನಂತರವೂ ಕ್ಷೇತ್ರದಲ್ಲಿ ಪಕ್ಷದ ಕಚೇರಿ ತೆರೆದು, ಜನರ ಸೇವೆಗೆ ಮುಂದಾಗಿದ್ದರು. ಆದರೆ, ಕೆಲವು ತಿಂಗಳುಗಳಲ್ಲಿ ಅನಾರೋಗ್ಯದ ಕಾರಣದಿಂದ ಅವರು ನಿಧನರಾದರು.

ತಂದೆಯ ನಿಧನದ ನಂತರ ಕ್ಷೇತ್ರದ ಜತೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದ ಪೂರ್ಣಿಮಾ, ಪತಿ ಡಿ.ಟಿ.ಶ್ರೀನಿವಾಸ್‌ ಅವರ ಜತೆ ನಾಲ್ಕು ವರ್ಷಗಳಿಂದ ಕ್ಷೇತ್ರ ಪ್ರವಾಸ ಮಾಡಿದ್ದರು. ಅಧಿಕಾರದಲ್ಲಿ ಇಲ್ಲದಿದ್ದರೂ ಜನರೊಟ್ಟಿಗೆ ಬೆರೆತಿದ್ದ ಅವರು, ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು.

ಸ್ವಜಾತಿಯವರೇ ಹೆಚ್ಚಿರುವ ಕ್ಷೇತ್ರ, ಒಂದು ಕಡೆ ತಂದೆಯ ಹೆಸರು, ಮಹಿಳೆ ಎಂಬ ಅಂಶದ ಜತೆಗೆ ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ ಅವರ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry