ಮುಖದಲ್ಲಿ ಆತಂಕ, ಬಲವಂತದ ನಗು

7
ಮತಎಣಿಕೆ ಕೇಂದ್ರದ ಬಳಿ ಅಭ್ಯರ್ಥಿಗಳ ತಳಮಳ

ಮುಖದಲ್ಲಿ ಆತಂಕ, ಬಲವಂತದ ನಗು

Published:
Updated:
ಮುಖದಲ್ಲಿ ಆತಂಕ, ಬಲವಂತದ ನಗು

ಬೆಂಗಳೂರು: ಅಭ್ಯರ್ಥಿಗಳ ಮುಖದಲ್ಲಿ ಆತಂಕದ ಗೆರೆಗಳು ಕಾಣುತ್ತಿದ್ದವು. ಮತಎಣಿಕೆ ಕೇಂದ್ರದೆದರು ಅತ್ತಿಂದಿತ್ತ ಓಡಾಡುತ್ತಿದ್ದ ಅವರು, ಬಲವಂತದ ನಗು ಬೀರುತ್ತಲೇ ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಪ್ರತಿ ಸುತ್ತಿನ ಮತಎಣಿಕೆ ಮುಕ್ತಾಯವಾದಾಗಲೂ, ಆಪ್ತರಿಗೆ ಕರೆ ಮಾಡಿ ಸೋಲು–ಗೆಲುವಿನ ಲೆಕ್ಕಚಾರ ಹಾಕುತ್ತಿದ್ದರು.

ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ಮಂಗಳವಾರ ಮತಎಣಿಕೆ ನಡೆಯುವಾಗ ಕಂಡು ಬಂದ ದೃಶ್ಯಗಳಿವು. ಚಾಮರಾಜಪೇಟೆ, ಚಿಕ್ಕಪೇಟೆ, ಶಾಂತಿನಗರ, ಶಿವಾಜಿನಗರ, ರಾಜಾಜಿನಗರ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಈ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಯಕರ್ತರು ಕಾಲೇಜಿನತ್ತ ಬರುತ್ತಿದ್ದರು. ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಪೊಲೀಸರು ಅವರೆಲ್ಲರನ್ನೂ ವಾಪಸ್ ಕಳುಹಿಸಿದರು. ನಂತರ ರಸ್ತೆ ಬದಿಯ ಅಂಗಡಿ–ಹೋಟೆಲ್‌ಗಳ ಬಳಿಯೇ ಕುಳಿತು, ಪ್ರತಿ ಸುತ್ತಿನ ಮತ ಎಣಿಕೆಯ ಫಲಿತಾಂಶ ತಿಳಿಯುತ್ತಿದ್ದರು.

ಸಂತಸ, ಸಾಂತ್ವನ: ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ, ಬೆಳಿಗ್ಗೆಯೇ ಕೇಂದ್ರದ ಬಳಿ ಬಂದಿದ್ದರು. ಮೊದಲ ಸುತ್ತಿನಲ್ಲಿ ಬಿಜೆಪಿಯ ಎಸ್‌.ಸುರೇಶ್ ಕುಮಾರ್‌ಗಿಂತ 642 ಮತಗಳ ಮುನ್ನಡೆ ಸಾಧಿಸಿದ ಅವರು, ಕಾರ್ಯಕರ್ತರ ಜತೆ ಸಂತಸ ಹಂಚಿಕೊಂಡರು.

ಆದರೆ, ಅವರ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. 2ನೇ ಸುತ್ತಿಗಾಗಲೇ 238 ಮತಗಳ ಹಿನ್ನಡೆ ಅನುಭವಿಸಿದ್ದರು. ಆ ನಂತರದ ಎಲ್ಲ ಸುತ್ತುಗಳಲ್ಲೂ ಸುರೇಶ್‌ಕುಮಾರ್ ಮುನ್ನಡೆ ಪಡೆಯುತ್ತಲೇ ಹೋದರು. ಎಂಟು ಸುತ್ತುಗಳು ಮುಗಿಯುತ್ತಿದ್ದಂತೆಯೇ, ಪದ್ಮಾವತಿ ಬೇಸರದಿಂದ ಹೊರಟರು. ‘ಏನೂ ಆಗಲ್ಲ. ಇನ್ನೂ ಐದು ಸುತ್ತುಗಳಿವೆ’ ಎಂದು ಜತೆಗಿದ್ದವರು ಸಮಾಧಾನದ ಮಾತುಗಳನ್ನು ಹೇಳಿದರೂ ಅವರು ನಿಲ್ಲಲಿಲ್ಲ.

ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್ ಸಹ ಮೈದಾನದಲ್ಲೇ ಇದ್ದರು. ತಮ್ಮ ಎದುರಾಳಿ ಅಭ್ಯರ್ಥಿ ಬಿಜೆಪಿಯ ವಾಸುದೇವಮೂರ್ತಿ ಎರಡು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದರಿಂದ, ಅವರೂ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಮೈದಾನದಿಂದ ಹೊರಗೆ ಹೋಗಿ, ಸ್ವಲ್ಪ ಸಮಯದ ನಂತರ ವಾಪಸ್ ಬಂದರು. ಅಷ್ಟರೊಳಗೆ ಐದು ಸುತ್ತುಗಳ ಎಣಿಕೆ ಪೂರ್ಣಗೊಂಡು, ತಾವೇ 2,100 ಮತಗಳ ಮುನ್ನಡೆ ಸಾಧಿಸಿದ್ದರು.

ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್‌ಗೆ, ಎದುರಾಳಿಗಳು ಯಾವ ಸುತ್ತಿನಲ್ಲೂ ಸಾಟಿಯಾಗಲಿಲ್ಲ. ಅಂತಿಮ ಫಲಿತಾಂಶ ಹೊರಬಿದ್ದ ಬಳಿಕ ಮತಕೇಂದ್ರದ ಬಳಿ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಬುದ್ಧಿ ಹೇಳಿದ ಜಮೀರ್, ನಂತರ ಹೊರಗೆ ಕರೆದುಕೊಂಡು ಹೋಗಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮಗಳಿಗೆ ಮುತ್ತಿಕ್ಕಿ ಫೋಟೊ ತೆಗೆಸಿಕೊಂಡರು.

*

‘ಏನು ಹೇಳುತ್ತಾರೆ ನೋಡೋಣ’

‘ಚಾಮರಾಜಪೇಟೆ ನನ್ನ ಮನೆ ಇದ್ದ ಹಾಗೆ. ಅಲ್ಲಿ ಯಾವತ್ತಿಗೂ ಗೆಲುವು ನನ್ನದೇ. ಎಚ್‌.ಡಿ.ದೇವೇಗೌಡ ಅವರು ನನ್ನನ್ನು ಹಿಂದೂ ವಿರೋಧಿ ಎಂದು ಕರೆದಿದ್ದರು. ಈಗ ಅದೇ ಹಿಂದೂಗಳೇ 35 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. ದೇವೇಗೌಡರು ಈಗ ಏನು ಹೇಳುತ್ತಾರೆ ನೋಡೋಣ’ ಎಂದು ಜಮೀರ್ ಅಹಮದ್ ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry