ಭಾನುವಾರ, ಫೆಬ್ರವರಿ 28, 2021
29 °C
ರಾಜ್ಯಪಾಲರ ಅಂಗಳ ತಲುಪಿದ ‘ಹಕ್ಕು’ ಮಂಡನೆ ಬೇಡಿಕೆ

ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದೆ.

222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕಾರ ರಚನೆಯ ಹಕ್ಕು ಮಂಡಿಸಿದೆ. ಮೈತ್ರಿಗೆ ಮುಂದಾಗಿರುವ ಜೆಡಿಎಸ್–ಕಾಂಗ್ರೆಸ್ ನಾಯಕರ ನಿಯೋಗ, ರಾಜಭವನಕ್ಕೆ ತೆರಳಿ ತಮ್ಮ ಹಕ್ಕನ್ನು ಪ್ರತಿಪಾದಿಸಿದೆ. ಇದೀಗ ಚೆಂಡು ರಾಜಭವನದ ಅಂಗಳದಲ್ಲಿದೆ.

ಸರ್ಕಾರ ರಚನೆಗೆ 112 ಸದಸ್ಯ ಬಲ ಬೇಕಾಗಿದೆ. ಸಂಜೆಯವರೆಗೂ ಮುನ್ನಡೆ–ಹಿನ್ನಡೆಯ ತೂಗುಯ್ಯಾಲೆ ನಡೆಯಿತಾದರೂ ಅಗತ್ಯ ಸಂಖ್ಯಾಬಲ ತಲುಪಲು ಬಿಜೆಪಿಗೆ ಸಾಧ್ಯವಾಗಲಿಲ್ಲ. 2013ರ ಚುನಾವಣೆಯಲ್ಲಿ 122 ಸ್ಥಾನ ಪಡೆದು ಐದು ವರ್ಷ ಆಳಿದ ಕಾಂಗ್ರೆಸ್‌ 78 ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೂ ಅಧಿಕಾರ ಹಿಡಿಯಲೇಬೇಕು ಎಂಬ ಹಟದಲ್ಲಿರುವ ಆ ಪಕ್ಷ , ಕೇವಲ 38 ಸ್ಥಾನ ಗಳಿಸಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ಮೈತ್ರಿಗೆ ಮುಂದಾಗಿದೆ.

ದಿನವಿಡೀ ಬೆಳವಣಿಗೆ: ಫಲಿತಾಂಶ ಅತಂತ್ರ ಎಂದು ಗೊತ್ತಾಗುತ್ತಿದ್ದಂತೆ ದೇವೇಗೌಡರಿಗೆ ಕರೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಸಮ್ಮಿಶ್ರ ಸರ್ಕಾರ ರಚಿಸುವ ಪ್ರಸ್ತಾಪವನ್ನು ಮೊದಲು ಮುಂದಿಟ್ಟರು. ಇದೇ ಹೊತ್ತಿಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಭೇಟಿ ಕೊಟ್ಟರು. ಕಾಂಗ್ರೆಸ್ ಪ್ರಸ್ತಾಪಕ್ಕೆ ಉಭಯ ನಾಯಕರು ಸಮ್ಮತಿ ಸೂಚಿಸಿದರು.

ಇದರ ಬೆನ್ನಲ್ಲೇ, ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಸಮ್ಮಿಶ್ರ ಸರ್ಕಾರ ರಚನೆ  ಸಂಬಂಧ ಮಾತುಕತೆ ನಡೆಸಿದರು. ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರಿಂದಲೇ ಮಾಧ್ಯಮಗಳ ಮೂಲಕ ಹೇಳಿಸಿದರು. ಹೀಗೆ ಮಾಡುವ ಮೂಲಕ ಜೆಡಿಎಸ್–ಬಿಜೆಪಿಯ ಮೈತ್ರಿಗೆ ಅಡ್ಡಗೋಡೆಯನ್ನೂ ನಿರ್ಮಿಸಿಬಿಟ್ಟರು.

ಮಧ್ಯಾಹ್ನದ ಒಂದು ಗಂಟೆಯವರೆಗೆ ಸ್ಪಷ್ಟ ಬಹುಮತದ ಕಡೆಗೆ ಪಕ್ಷ ಮುನ್ನುಗ್ಗುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ನಾಯಕರ ಭೇಟಿಗಾಗಿ ನವದೆಹಲಿಗೆ ತೆರಳಲು ಮುಂದಾಗಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸುವುದಾಗಿಯೂ ಹೇಳಿದ್ದರು.

ಇದ್ದಕ್ಕಿದ್ದಂತೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಮುನ್ನಡೆ ಇಳಿಮುಖವಾಗತೊಡಗಿತು. ಆಗ ನವದೆಹಲಿ ಭೇಟಿ ಮೊಟಕುಗೊಳಿಸಿದ ಯಡಿಯೂರಪ್ಪ, ಪಕ್ಷದ ಕಚೇರಿಗೆ ದೌಡಾಯಿಸಿದರು. ಅಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದಗೌಡ ಸೇರಿದಂತೆ ಹಿರಿಯ ನಾಯಕರ ಜತೆ ಸಮಾಲೋಚಿಸಿದರು.

ರಾಜ್ಯಪಾಲರ ಭೇಟಿ: ಯಡಿಯೂರಪ್ಪ, ಸಚಿವರಾದ ಅನಂತಕುಮಾರ್‌ ಅವರು ರಾಜ್ಯಪಾಲರನ್ನು ಭೇಟಿಯಾದರು.

ಪರಮೇಶ್ವರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ಎಚ್.ಡಿ. ಕುಮಾರಸ್ವಾಮಿ ಮತ್ತಿತರ ನಾಯಕರ ಜತೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಪತ್ರವನ್ನು ಸಲ್ಲಿಸಿದರು.

ಮೈತ್ರಿಯ ಸೂತ್ರವೇನು?

ವಿರುದ್ಧ ಧ್ರುವಗಳಂತೆ ಇದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹನ್ನೆರಡು ವರ್ಷಗಳ ಬಳಿಕ ಮೈತ್ರಿ ಸರ್ಕಾರದ ಸಹಭಾಗಿ ಪಕ್ಷಗಳಾಗಲು ಅಣಿಯಾಗಿವೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಪರಮೇಶ್ವರ ಉಪಮುಖ್ಯಮಂತ್ರಿಯಾಗಿರುವ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಅದಾದ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮಾತುಕತೆ ನಡೆಸಿ ಸರ್ಕಾರದ ಸ್ವರೂಪದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಎರಡೂ ಪಕ್ಷಗಳ ನಾಯಕರ ಮಧ್ಯೆ ಮೌಖಿಕ ಒಪ್ಪಂದ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಸೂತ್ರ ಹೆಣೆದಿದ್ದು ಕಾಂಗ್ರೆಸ್ ವರಿಷ್ಠರು ಹಾಗೂ ತೃತೀಯ ರಂಗ ರಚನೆಯಲ್ಲಿ ಮುಂಚೂಣಿಯಲ್ಲಿರುವ ಬಿಎಸ್‌ಪಿ ನೇತಾರೆ ಮಾಯಾವತಿ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್.

ಬಿಜೆಪಿ ಏನು ಮಾಡಬಹುದು?

ಸರ್ಕಾರ ರಚನೆಗೆ 10 ದಿನ ಸಮಯ ಕೇಳಿರುವ ಬಿಜೆಪಿ, ಅಗತ್ಯ ಸಂಖ್ಯಾ ಬಲ ಹೊಂದಿಸಲು ಪ್ರಯತ್ನಿಸಬಹುದು.

103 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಸರಳ ಬಹುಮತ ಪಡೆಯಲು ಇನ್ನೂ 9 ಸದಸ್ಯ ಬಲದ ಅಗತ್ಯವಿದೆ. ಕಾಂಗ್ರೆಸ್ ಅಥವಾ ಜೆಡಿಎಸ್‌ನ ಲಿಂಗಾಯತ ಶಾಸಕರ ಸೆಳೆಯಲು ಯತ್ನ ಮಾಡಬಹುದು.

ರಾಜ್ಯಪಾಲರ ಪ್ರಭಾವ ಬಳಸಿ ಸರ್ಕಾರ ರಚಿಸಿದ ಬಳಿಕ ಬಹುಮತ ಸಾಬೀತುಪಡಿಸಲು ಸಮಯ ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ಕಾಂಗ್ರೆಸ್, ಜೆಡಿಎಸ್‌ನ 15ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಹೆಣೆಯಬಹುದು.

* ಜೆಡಿಎಸ್‌ನಲ್ಲಿ ತಮ್ಮ ಆಪ್ತರಾದ ನಾಲ್ಕು ಶಾಸಕರು ಇದ್ದಾರೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ. ಅಂತಹ ‘ಆಪ್ತ’ರು, ಪಕ್ಷೇತರರಾಗಿ ಗೆದ್ದಿರುವ ಇಬ್ಬರನ್ನು ಸೆಳೆಯಲು ಮುಂದಾಗಬಹುದು.

* 15ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಕೊಡಿಸಿ, 222 ಸದಸ್ಯ ಬಲದ ವಿಧಾನಸಭೆಯ ಸಂಖ್ಯೆಯನ್ನೇ ಕಡಿಮೆ ಮಾಡಿ ಬಹುಮತ ಇದೆ ಎಂದು ಪ್ರತಿಪಾದಿಸಲೂಬಹುದು.

ಕಾಂಗ್ರೆಸ್–ಜೆಡಿಎಸ್ ತಂತ್ರ?

* ಈಗಾಗಲೇ ಕೈಜೋಡಿಸಿರುವ ಎರಡೂ ಪಕ್ಷಗಳು ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಬಹುದು.

* ಬಹುಮತ ಸಾಬೀತುಪಡಿಸುವವರೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ಶಾಸಕರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಲು ತಂತ್ರಗಾರಿಕೆ ಹೆಣೆಯಬಹುದು.

* ಬಿಜೆಪಿ ಕಡೆಗೆ ಒಲವಿರುವ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಪಕ್ಷದಲ್ಲೇ ಉಳಿಸಿಕೊಳ್ಳಬಹುದು.

* ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡದೇ ಇದ್ದರೆ ರಾಜಭವನಕ್ಕೆ ಶಾಸಕರ ಪರೇಡ್ ನಡೆಸಬಹುದು.

* ಅಲ್ಲಿಯೂ ತಮ್ಮ ಅಪೇಕ್ಷೆ ಈಡೇರದಿದ್ದರೆ ನವದೆಹಲಿಗೆ ತೆರಳಿ ರಾಷ್ಟ್ರಪತಿ ಭವನದ ಎದುರು ಅನಿರ್ದಿಷ್ಟ ಧರಣಿಗೆ ಮುಂದಾಗಬಹುದು.

***

ರಾಜ್ಯಪಾಲರ ನಡೆ ಏನು?

* ಜೆಡಿಎಸ್‌–ಕಾಂಗ್ರೆಸ್‌ ನೇತಾರರು ಜತೆಯಾಗಿ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರು ವುದರಿಂದ ರಾಜ್ಯಪಾಲರು ಕಾದು ನೋಡುವ ತಂತ್ರಕ್ಕೆ ಮುಂದಾಗಬಹುದು.

* ಸರ್ಕಾರ ರಚನೆಗೆ ಬೇಕಾದ 112 (222 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ) ಮ್ಯಾಜಿಕ್ ಸಂಖ್ಯೆ ಯಾರಿಗೂ ಇಲ್ಲ, ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ಕಾಲ ತಳ್ಳಬಹುದು.

* ಅತಿ ಹೆಚ್ಚು ಸ್ಥಾನ ಪಡೆದಿರುವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂಬ ನಿಯಮದ ಅನ್ವಯ ಬಿಜೆಪಿಗೆ ಆಹ್ವಾನ ನೀಡಲೂ ಬಹುದು.

* ಬಹುಮತ ಸಾಬೀತುಪಡಿಸಲು ಸಮಯ ಕೊಡಿ ಎಂಬ ಬಿಜೆಪಿ ನಾಯಕರ ಕೋರಿಕೆ ಮನ್ನಿಸಬಹುದು.

* ಗೋವಾದಲ್ಲಿ ಕಾಂಗ್ರೆಸ್ ಹೆಚ್ಚಿನ ಶಾಸಕರ ಬಲ ಹೊಂದಿತ್ತು. ಆದರೆ, ಬಿಜೆಪಿ ನಾಯಕರು ಸಣ್ಣ ಪಕ್ಷಗಳು, ಪಕ್ಷೇತರರ ಜತೆಗೂಡಿ ಸಂಖ್ಯಾಬಲ ಹೆಚ್ಚಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸಿದವು. ಇದನ್ನೇ ಕಾಂಗ್ರೆಸ್–ಜೆಡಿಎಸ್ ಈಗ ಮಾಡಿವೆ. ಈ ಹಕ್ಕೊತ್ತಾಯವನ್ನು ಎರಡೂ ಪಕ್ಷಗಳು ಮಂಡಿಸಿದರೆ ಸರ್ಕಾರ ರಚಿಸುವಂತೆ ಕುಮಾರಸ್ವಾಮಿಗೆ ಆಹ್ವಾನ ನೀಡಬಹುದು.

ಸಿದ್ದರಾಮಯ್ಯಗೆ ಮುಖಭಂಗ

ನಾಲ್ಕು ದಶಕಗಳ ಬಳಿಕ ಐದು ವರ್ಷ ಅಧಿಕಾರ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ ಸಿದ್ದರಾಮಯ್ಯ, ತಮ್ಮ ‘ಸ್ವಕ್ಷೇತ್ರ’ ಚಾಮುಂಡೇಶ್ವರಿಯಲ್ಲಿ 36,042 ಮತಗಳ ಅಂತರದ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಬಾದಾಮಿಯಲ್ಲಿ ಹರಸಾಹಸ ಪಟ್ಟು 1,696 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್–ಕಾಂಗ್ರೆಸ್ ಸರ್ಕಾರ ಬಂದರೆ ಶಾಸಕರಾಗಿ ಮುಂದುವರಿಯಲು ಅವರು ನಿರ್ಧರಿಸಿದ್ದಾರೆ. ಪರಮೇಶ್ವರಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಚುಕ್ಕಾಣಿಯನ್ನು ಸಿದ್ದರಾಮಯ್ಯ ಹಿಡಿಯುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.