ಭಾನುವಾರ, ಮಾರ್ಚ್ 7, 2021
31 °C

ವಿಜಯಲಕ್ಷ್ಮಿ ಒಲಿದಾಗ ಕುಣಿದು ಕುಪ್ಪಳಿಸಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಲಕ್ಷ್ಮಿ ಒಲಿದಾಗ ಕುಣಿದು ಕುಪ್ಪಳಿಸಿದರು

ಬೆಂಗಳೂರು: ನೆತ್ತಿ ಸುಡುವ ಬಿಸಿಲು ಲೆಕ್ಕಿಸದೆ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು. ಸೋಲು–ಗೆಲುವು, ಸರ್ಕಾರ ರಚನೆ ಬಗ್ಗೆ ಲೋಕಾಭಿರಾಮ ಚರ್ಚೆ, ಖಾಕಿ ಸರ್ಪಗಾವಲು, ತಂಪು ಪಾನೀಯಗಳ ಭರ್ಜರಿ ಮಾರಾಟ.

–ಇವು ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ನಡೆದ ವಿದ್ಯಮಾನಗಳು.

ಬ್ಯಾಟರಾಯನಪುರ, ಆನೇಕಲ್‌, ದಾಸರಹಳ್ಳಿ, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ಮಹದೇವಪುರ ಕ್ಷೇತ್ರಗಳ ಎಣಿಕೆ ಕಾರ್ಯ ಇಲ್ಲಿ ನಡೆಯಿತು. ವಾಹನ ಸಂಚಾರಕ್ಕೆ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಮತ ಎಣಿಕೆ ಕೇಂದ್ರದ ಎದುರಿಗಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಗಾತ್ರದ ಎಲ್‌ಇಡಿ ಟಿ.ವಿಯನ್ನು ಅಳವಡಿಸಲಾಗಿತ್ತು.

ಬೆಳಿಗ್ಗೆ 8 ಗಂಟೆಯಿಂದ ಮೂರೂ ಪಕ್ಷಗಳ ಕಾರ್ಯಕರ್ತರು ಉದ್ಯಾನಕ್ಕೆ ಬರಲು ಆರಂಭಿಸಿದರು. ಟಿ.ವಿ ಅಳವಡಿಸಿದ್ದರಿಂದ ಮತ ಎಣಿಕೆ ಕೇಂದ್ರದಿಂದ ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ಘೋಷಣೆ ಮಾಡುತ್ತಿದ್ದ ಫಲಿತಾಂಶಕ್ಕೆ ಯಾರೂ ಗಮನ ಕೊಡಲಿಲ್ಲ. ಟಿ.ವಿ ನೋಡುವುದರಲ್ಲೇ ಎಲ್ಲರೂ ಮಗ್ನರಾಗಿದ್ದರು.

ಚುನಾವಣಾ ಫಲಿತಾಂಶವು ಎಲ್ಲಾ ಪಕ್ಷಗಳ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿತು. ಬಿಸಿಲಿನ ತಾಪದೊಂದಿಗೆ ಅಭ್ಯರ್ಥಿಗಳ ಜಯದ ಬಗೆಗಿನ ಕುತೂಹಲವೂ ಅವರಲ್ಲಿ ಹೆಚ್ಚುತ್ತಿತ್ತು. ಬೆಳಿಗ್ಗೆ 9.30ರ ಸುಮಾರಿಗೆ ರಾಜ್ಯದಾದ್ಯಂತ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೇ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಮೋದಿ... ಮೋದಿ...’ ‘ಭಾರತ್‌ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ಪಕ್ಷದ ಧಜ್ವ ಹಾರಾಡಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಕಾರ್ಯಕರ್ತರು ಉದ್ಯಾನದಲ್ಲಿ ಸಂಭ್ರಮಿಸಿದರು.

ಮಹದೇವಪುರ, ಯಲಹಂಕದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡು ಗೆಲುವಿನ ಸನಿಹಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ  ಕೇಸರಿ ಪಡೆಯ ಕಾರ್ಯಕರ್ತರು ಕಾರು, ಆಟೋಗಳಲ್ಲಿ ತಂಡೋಪತಂಡವಾಗಿ ಉದ್ಯಾನಕ್ಕೆ ಬಂದು ಜಮಾಯಿಸಿದರು.

ಬಿಜೆಪಿಯವರು ಸಂಭ್ರಮದಲ್ಲಿ ತಲ್ಲೀನರಾಗಿದ್ದರೆ, ಕಾಂಗ್ರೆಸ್‌ ಕಾರ್ಯಕರ್ತರು ಪೆಚ್ಚು ಮೊರೆ ಹಾಕಿಕೊಂಡು ಅಲ್ಲಿಂದ ಚದುರಿದರು. ಆರಂಭದಲ್ಲಿ ಖುಷಿಯಲ್ಲೇ ಬಂದಿದ್ದ ಕಾರ್ಯಕರ್ತರಿಗೆ ಪಕ್ಷದ ಅಭ್ಯರ್ಥಿಗಳು ಹಿನ್ನಡೆ ಕಾಯ್ದುಕೊಂಡಿರುವುದ ಶಾಕ್‌ ನೀಡಿತು.

ಯಶವಂತಪುರ ಕ್ಷೇತ್ರದ ಮತ ಎಣಿಕೆ ನಡೆದು, ಕಾಂಗ್ರೆಸ್‌ ಶಾಸಕ ಎಸ್‌.ಟಿ. ಸೋಮಶೇಖರ್‌ ಗೆಲುವು ಸಾಧಿಸಿದ ವಿಷಯ ಘೋಷಣೆಯಾಗುತ್ತಿದ್ದಂತೇ ಕಾರ್ಯಕರ್ತರು ಫಿನಿಕ್ಸ್‌ನಂತೆ ಎದ್ದು ಬಂದರು. ಅಲ್ಲಲ್ಲಿ ಚದುರಿ ಹೋಗಿದ್ದ ಕಾರ್ಯಕರ್ತರು ಒಂದೆಡೆ ಸೇರಿದರು. ಪಕ್ಷದ ಧಜ್ವ ಹಾರಿಸಿ, ಜಯಘೋಷ ಮೊಳಗಿಸಿದರು.

ಬ್ಯಾಟರಾಯನಪುರ ಕ್ಷೇತ್ರದ ಫಲಿತಾಂಶ ಎರಡೂ ಪಕ್ಷಗಳ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿತು. ಶಾಸಕ ಕೃಷ್ಣಬೈರೇಗೌಡ ಮತ್ತು ಬಿಜೆಪಿ ಆರ್‌.ರವಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಮತ ಕೇಂದ್ರದೊಳಗಿದ್ದ ಎರಡೂ ಪಕ್ಷದ ಏಜೆಂಟರು ಹೊರಗೆ ಬಂದು ಮುನ್ನಡೆಯ ಬಗ್ಗೆ ಮಾಹಿತಿ ನೀಡಿದಾಗ ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಡುತ್ತಿದ್ದರು. ಕೊನೆವರೆಗೂ ಕುತೂಹಲ ಮೂಡಿಸಿದ ಜಯದ ಹಾವು–ಏಣಿಯಾಟದಲ್ಲಿ ವಿಜಯಲಕ್ಷ್ಮಿ ಕೃಷ್ಣ ಬೈರೇಗೌಡರಿಗೆ ಒಲಿದಾಗ ಪಕ್ಷದ ಕಾರ್ಯಕರ್ತರಲ್ಲಿ ಮತ್ತೆ ಹರ್ಷದ ಹೊನಲು ಹರಿಯಿತು.

ಉದ್ಯಾನದಲ್ಲಿ ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದರು ಎನ್ನುವುದು ಗೊತ್ತಿರಲಿಲ್ಲ. ಆದರೆ, ದಾಸರಹಳ್ಳಿ ಕ್ಷೇತ್ರದ ಮತ ಎಣಿಕೆ ಮುಗಿದು ಆರ್‌. ಮಂಜುನಾಥ್‌ ಗೆಲುವು ಸಾಧಿಸಿದ್ದಾರೆ ಎಂಬ ಘೋಷಣೆ ಹೊರಬಿದ್ದಾಗ ಕಾರ್ಯಕರ್ತರು ಜೈಕಾರ ಹಾಕುತ್ತ ಉದ್ಯಾನಕ್ಕೆ ಬಂದರು.

‘ನಮ್ಮದೇ ಸರ್ಕಾರ’, ‘ಕುಮಾರಣ್ಣನೇ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿ, ಕುಣಿದು ಕುಪ್ಪಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.