ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ, ಹರಿಹರದಲ್ಲಿ ‘ಕೈ’; ಉಳಿದೆಡೆ ಕಮಲ

Last Updated 16 ಮೇ 2018, 6:22 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮೊದಲ ಮೂರು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುಂದಿತ್ತು. ನಂತರದ 12 ಸುತ್ತುಗಳೂ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷ.

ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್‌ ಮೊದಲ ಸುತ್ತಿನಲ್ಲೇ 4,949 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರಿಗಿಂತ 684 ಮತಗಳಿಂದ ಮುಂದಿದ್ದರು. 2ನೇ ಸುತ್ತಿನಲ್ಲಿ ಅಂತರವನ್ನು 9,658ಕ್ಕೆ ಹೆಚ್ಚಿಸಿಕೊಂಡರು. 3ರಲ್ಲಿ 3,330 ಮತಗಳ ಮುನ್ನಡೆ ಕಾಯ್ದುಕೊಂಡು ಶಾಮನೂರುಗೆ ಕೆಲಕಾಲ ದಿಗಿಲು ಹುಟ್ಟಿಸಿದರು ಜಾಧವ್‌.

ಬಳಿಕ ಶಾಮನೂರು ಶಿವಶಂಕರಪ್ಪ ಅವರ ಆಟ ಶುರುವಾಯಿತು. ನಾಲ್ಕನೇ ಸುತ್ತಿನಲ್ಲಿ ಬರೋಬ್ಬರಿ 9,224 ಮತಗಳನ್ನು ಪಡೆದು 3,042 ಲೀಡ್‌ ಪಡೆದರು. ಈ ಸುತ್ತಿನಲ್ಲಿ ಜಾಧವ್‌ಗೆ ಸಿಕ್ಕಿದ್ದು ಕೇವಲ 718 ಮತ.

ನಂತರದ ಯಾವ ಸುತ್ತಗಳಲ್ಲೂ ಶಾಮನೂರು ಹಿನ್ನಡೆ ಅನುಭವಿಸಲಿಲ್ಲ. 10ರಲ್ಲಿ 50 ಸಾವಿರದ ಗಡಿ ದಾಟಿದರು. ನಂತರದ 6 ಸುತ್ತುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮವಾಗಿ 71,319 ಮತಗಳನ್ನು ಪಡೆದು ಜಯಶಾಲಿಯಾದರು.

ಮಾಯಕೊಂಡದಲ್ಲಿ ಕಮಲ ಕಿಲಕಿಲ: ಮಾಯಕೊಂಡ ಕ್ಷೇತ್ರದ ಫಲಿತಾಂಶ ಆರಂಭದಲ್ಲಿ ರೋಚಕತೆ ಸೃಷ್ಟಿಸಿತ್ತು. ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್‌ ಮುನ್ನಡೆ ಪಡೆದು ಕಾರ್ಯಕರ್ತರ ಎದೆಬಡಿತವನ್ನು ಹೆಚ್ಚಿಸಿತ್ತು.

ಬಿಜೆಪಿ ಅಭ್ಯರ್ಥಿ ಲಿಂಗಣ್ಣ ಮೊದಲ ಸುತ್ತಿನಲ್ಲಿ 63 ಮತಗಳ ಅಲ್ಪ ಮುನ್ನಡೆ ಪಡೆದರೆ, 2ನೇ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವಂತಪ್ಪ 156 ಮತಗಳ ಮುನ್ನಡೆ ಪಡೆದರು.

ಮೂರನೇ ಸುತ್ತಿನ ಬಳಿಕ ಲಿಂಗಣ್ಣ ಪ್ರತಿ ಹಂತದಲ್ಲೂ ಮತಗಳ ಅಂತರವನ್ನು ಹಿಗ್ಗಿಸುತ್ತಲೇ ಹೋದರು. 10ನೇ ಸುತ್ತಿನಲ್ಲಿ 6,002 ಲೀಡ್‌ ಪಡೆದು ಗೆಲುವಿನ ಮುನ್ಸೂಚನೆ ನೀಡಿದರು. ಬಳಿಕ ಅಂತಿಮ ಸುತ್ತಿನವರೆಗೂ ಹಿಂದೆ ಬೀಳಲಿಲ್ಲ. ಕೊನೆಯಲ್ಲಿ 6,458 ಮತಗಳಿಂದ ಕಾಂಗ್ರೆಸ್‌ನ ಬಸವಂತಪ್ಪ ಅವರನ್ನು ಪರಾಭವಗೊಳಿಸಿದರು.

ಪಕ್ಷೇತ್ತರ ಅಭ್ಯರ್ಥಿ ಎಚ್‌.ಆನಂದಪ್ಪ ಮೂರನೇ ಸ್ಥಾನ ಪಡೆದರೆ, ಜೆಡಿಯು ಅಭ್ಯರ್ಥಿ ಬಸವರಾಜ ನಾಯ್ಕ 15,540 ಮತ ಪಡೆದರು.

ಹೊನ್ನಾಳಿ ಹೊಡೆತ ಕೊಟ್ಟ ಎಂಪಿಆರ್‌: ಹೊನ್ನಾಳಿ ಕ್ಷೇತ್ರದ ಮತ ಎಣಿಕೆ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತ ಕೊನೆಯ ಸುತ್ತಿನವರೆಗೂ ರೋಚಕತೆ ಉಳಿಸಿಕೊಂಡಿತ್ತು. ಅಂತಿಮವಾಗಿ ಬಿಜೆಪಿ ಕೊರಳಿಗೆ ವಿಜಯಮಾಲೆ ಬಿತ್ತು.

ಮೊದಲ ಸುತ್ತಿನಲ್ಲಿ 88 ಹಾಗೂ 2ನೇ ಸುತ್ತಿನಲ್ಲಿ 89 ಮತಗಳ ಮನ್ನಡೆ ಕಾಯ್ದುಕೊಂಡ ರೇಣುಕಾಚಾರ್ಯಗೆ 3ನೇ ಸುತ್ತಿನಲ್ಲಿ ಶಾಂತನಗೌಡ ಶಾಕ್‌ ನೀಡಿದರು. 321 ಮತಗಳ ಲೀಡ್‌ ಪಡೆದು, ನಾಲ್ಕನೇ ಸುತ್ತಿನಲ್ಲೂ ಅಂತರವನ್ನು 1,349ಕ್ಕೆ ಹೆಚ್ಚಿಸಿಕೊಂಡರು.

ನಂತರ ರೇಣುಕಾಚಾರ್ಯ 199 ಮತಗಳ ಮುನ್ನಡೆ ಪಡೆದರೆ, 6 ಹಾಗೂ 7ನೇ ಸುತ್ತಿನಲ್ಲಿ ಕ್ರಮವಾಗಿ 170, 707 ಮತಗಳ ಲೀಡ್‌ ಪಡೆದ ಶಾಂತನಗೌಡ ಜಿದ್ದಾಜಿದ್ದಿನ ಹೋರಾಟದ ಮುನ್ಸೂಚನೆ ನೀಡಿದರು. 18ನೇ ಸುತ್ತಿನವರೆಗೂ ಏಕಸ್ವಾಮ್ಯ ಸಾಧಿಸಿದ ರೇಣುಕಾಚಾರ್ಯ 4,233 ಮತಗಳ ಅಂತದಿಂದ ಶಾಂತನಗೌಡ ಅವರನ್ನು ಮಣಿಸಿದರು.

ಚನ್ನಗಿರಿಯಲ್ಲಿ ಮರುಕಳಿಸಿದ ಇತಿಹಾಸ: ಇಲ್ಲಿ ಬಿಜೆಪಿ ಆರಂಭದಿಂದಲೂ ಸ್ಪಷ್ಟ ಮೇಲುಗೈ ಸಾಧಿಸಿತು. ಕೊನೆಯ ಸುತ್ತಿನವರೆಗೂ ಮಾಡಾಳು ವಿರೂಪಾಕ್ಷಪ್ಪ ಮುನ್ನಡೆ ಕಾಯ್ದುಕೊಂಡು ಭರ್ಜರಿ ಜಯ ಸಾಧಿಸಿದರು.

ಮೊದಲ ಸುತ್ತಿನಲ್ಲೇ ಮಾಡಾಳು 2,177 ಲೀಡ್‌ ಪಡೆದುಕೊಂಡರು. ಎರಡನೇ ಸುತ್ತಿನಲ್ಲಿ ಅಂತರ ದ್ವಿಗುಣವಾಯಿತು. ಬಳಿಕ ಪ್ರತಿಯೊಂದು ಸುತ್ತಿನಲ್ಲೂ ಬಿಜೆಪಿ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು.

7ನೇ ಸುತ್ತಿನ ಅಂತ್ಯಕ್ಕೆ 9,025 ಮುನ್ನಡೆ ಕಾಯ್ದುಕೊಂಡ ಮಾಡಾಳು, ಗೆಲುವಿನತ್ತ ದಾಪುಗಾಲು ಹಾಕಿದರು. 8ನೇ ಸುತ್ತಿನಲ್ಲೇ 10 ಸಾವಿರ ಗಡಿ ದಾಟಿದ ಅವರು, 15ನೇ ಸುತ್ತಿಗೆ 20,168 ಮತಗಳ ಮುನ್ನಡೆ ಪಡೆದರು. ಕೊನೆಗೆ 25,780 ಅಂತರದಿಂದ ಭರ್ಜರಿ ಜಯಸಾಧಿಸಿದರು. ಜಿಲ್ಲೆಯಲ್ಲೇ ಎರಡನೇ ದೊಡ್ಡ ಅಂತರದ ಗೆಲುವು ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT