ಸಂಭ್ರಮಕ್ಕೆ ಸರ್ಕಾರ ರಚನೆಯ ಸರ್ಕಸ್‌ ಅಡ್ಡಿ

7
ಸಚಿವ ಸ್ಥಾನದ ಚರ್ಚೆ: ಗೆದ್ದರೂ ರವೀಂದ್ರನಾಥ್‌, ಕರುಣಾಕರ ರೆಡ್ಡಿ ಸ್ವಪ್ನ ಭಗ್ನ?

ಸಂಭ್ರಮಕ್ಕೆ ಸರ್ಕಾರ ರಚನೆಯ ಸರ್ಕಸ್‌ ಅಡ್ಡಿ

Published:
Updated:

ದಾವಣಗೆರೆ: ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಮಲ ಅರಳಿದ್ದರೂ ಗೆಲುವಿನ ಸಂಭ್ರಮವನ್ನು ಸಂಪೂರ್ಣವಾಗಿ ಅನುಭವಿಸುವ ಸ್ಥಿತಿ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಇಲ್ಲದಾಗಿದೆ.

ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಬಿಜೆಪಿಗೆ ಲಭಿಸಿಲ್ಲ. ಹೀಗಾಗಿ, ಮಧ್ಯ ಕರ್ನಾಟಕದ ಕೇಂದ್ರವಾದ ದಾವಣಗೆರೆಯಲ್ಲಿ ಮೂರನೇ ಬಾರಿ ಜಿಲ್ಲೆಯ ಉಸ್ತುವಾರಿಯನ್ನು ಬಿಜೆಪಿ ಹೊತ್ತುಕೊಳ್ಳಲು ಸಾಧ್ಯವಾಗುವುದೇ? ಎಂಬ ಆತಂಕ ನಾಯಕರಲ್ಲಿ ಮನೆ ಮಾಡಿದೆ.

ಎಸ್‌.ಎ. ರವೀಂದ್ರನಾಥ್‌ ಜಿಲ್ಲಾ ಬಿಜೆಪಿಯ ಹಿರಿಯರು. ಏಳು ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಅವರು. ಹೀಗಾಗಿ, ಸಚಿವ ಸ್ಥಾನದ ರೇಸ್‌ನಲ್ಲಿ ರವೀಂದ್ರನಾಥ್‌ ಮುಂದಿದ್ದಾರೆ. ಇತ್ತ ಕರುಣಾಕರ ರೆಡ್ಡಿ ಸಹ ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿ. ಹಿಂದೆ ಕಂದಾಯ ಸಚಿವರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಅವರ ಕಣ್ಣೂ ನೆಟ್ಟಿದೆ.

ಹೊನ್ನಾಳಿಯ ರೇಣುಕಾಚಾರ್ಯ ಅವರಿಗೂ ಅಬಕಾರಿ ಸಚಿವ ಸ್ಥಾನ ನಿಭಾಯಿಸಿದ ಅನುಭವವುಂಟು. ಯಡಿಯೂರಪ್ಪ ಅವರ ಆಪ್ತರು ಇವರು. ಎರಡನೇ ಬಾರಿ ಆಯ್ಕೆಯಾಗಿರುವ ಚನ್ನಗಿರಿಯ ಮಾಡಾಳ್‌ ವಿರೂಪಾಕ್ಷಪ್ಪ, ಜಗಳೂರಿನ ಎಸ್‌.ವಿ. ರಾಮಚಂದ್ರ ಅವರೂ ಮಂತ್ರಿ ಹುದ್ದೆಯ ಆಕಾಂಕ್ಷಿಗಳು. ‘ಹೈ ಕಮಾಂಡ್‌ ಹ್ಞೂಂ ಎಂದರೆ ನಾವು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ’ ಎಂದು ಅವರಿಬ್ಬರೂ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳ ಮುಂದೆ ಹೇಳಿಕೊಂಡರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಪಡೆಯುವ ವಿಷಯದಲ್ಲಿ ನಾಯಕರ ನಡುವೆ ಮುನಿಸು ಉಂಟಾಗಿತ್ತು. ಕೆಜೆಪಿ–ಬಿಜೆಪಿ ಭಿನ್ನಾಭಿಪ್ರಾಯಗಳ ನಡುವೆ ಹುಟ್ಟಿಕೊಂಡ ರಾಯಣ್ಣ ಬ್ರಿಗೇಡ್‌, ಮುಖಂಡರ ವೈಮನಸ್ಸಿಗೆ ತುಪ್ಪ ಸುರಿದಿತ್ತು. ರವೀಂದ್ರನಾಥ್‌ ಬೆಂಬಲಿಗರು ಈಶ್ವರಪ್ಪ ನೇತೃತ್ವದ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿದ್ದರು. ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ ಇಬ್ಬರೂ ಯಡಿಯೂರಪ್ಪ ಅವರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದರು. ಚುನಾವಣೆಗೂ ಮುನ್ನ ಈ ವೈಮನಸ್ಸಿಗೆ ಮುಲಾಮು ಹಚ್ಚಿದರೂ ಗಾಯ ಒಳಗೆ ಹಸಿಯಾಗೇ ಇದೆ. ಈ ಸಮಸ್ಯೆಗಳ ನಡುವೆಯೇ ಅಂಕಿ ಸಂಖ್ಯೆಗಳ ಬಿಜೆಪಿಯ ಲೆಕ್ಕಾಚಾರ ಮಕಾಡೆ ಮಲಗಿದೆ.

ಮತ ಎಣಿಕೆ ವೇಳೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಅಧಿಕಾರದ ಕನಸು ಚಿಗುರೊಡೆದಿತ್ತು. ಸಂಜೆಯವರೆಗೂ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಮಂತ್ರಿಗಿರಿಯ ಚರ್ಚೆ ಮುನ್ನೆಲೆಗೆ ಬಂದಿತ್ತು. ಆದರೆ, ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದ ಸುದ್ದಿ ಬಿಜೆಪಿ ನಾಯಕರ ಕನಸಿಗೆ ತಣ್ಣೀರೆರಚಿದೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಯಡಿಯೂರಪ್ಪ ಜಿಲ್ಲೆಯ ಉಸ್ತುವಾರಿಯನ್ನು ನಮಗೇ ವಹಿಸುವರು’ ಎಂದು ಊಹಿಸಿದ್ದ ನಾಯಕರ ಸಂಭ್ರಮಕ್ಕೆ ತಣ್ಣೀರೆರಚಿದಂತಾಗಿದೆ.

ಜೆಡಿಎಸ್‌ ಸರ್ಕಾರ ರಚಿಸಿದರೆ?

ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಇದ್ದ ಒಂದು ಕ್ಷೇತ್ರ ಹರಿಹರವನ್ನೂ ಜೆಡಿಎಸ್‌ ಈ ಬಾರಿ ಕಳೆದುಕೊಂಡಿದೆ. ಒಂದು ವೇಳೆ ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ರಚನೆಯಾದರೆ ಹೊರಗಿನವರು ಸಚಿವ ಸ್ಥಾನ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry