ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ರಾಹುಲ್‌, ಯೋಗಿ ಹೋದೆಡೆ ಸೋಲೇ ಜಾಸ್ತಿ!

ಅಮಿತ್ ಶಾ, ಸ್ಮೃತಿ ಪ್ರಚಾರ ನಡೆಸಿದ ಕಡೆ ಹೆಚ್ಚು ಗೆಲುವು, ಸೋನಿಯಾಗೂ ಮರುಳಾಗದ ಮತದಾರರು
Last Updated 16 ಮೇ 2018, 6:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚುನಾವಣಾ ಅಖಾಡದಲ್ಲಿ ಎಲ್ಲರ ಆಕರ್ಷಣೆಯ ನಾಯಕರಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಮಾತಿಗೆ ಉತ್ತರ ಕರ್ನಾಟಕದ ಮತದಾರರು ಮರುಳಾಗಿಲ್ಲ ಎಂಬುದು ಅವರು ಪ್ರಚಾರ ನಡೆಸಿದ ಕಡೆಗಳಲ್ಲಿನ ಫಲಿತಾಂಶ ಹೇಳುತ್ತಿದೆ.

ಈ ನಾಯಕರು ತಮ್ಮ ಪಕ್ಷದ ಪರ ನಡೆಸಿದ ಬೃಹತ್‌ ರ‍್ಯಾಲಿ, ರೋಡ್‌ ಷೋ ಮತ್ತು ಸಮಾವೇಶಗಳಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಮತಗಳಾಗಿ ಪರಿವರ್ತನೆಯಾಗಿಲ್ಲ. ಇವರು ಪ್ರಚಾರ ನಡೆಸಿರುವ ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಕ್ಕಿಂತ ಸೋತಿರುವ ಸಂಖ್ಯೆಯೇ ಹೆಚ್ಚಾಗಿದೆ.ರಾಷ್ಟ್ರೀಯ ನಾಯಕರಿಗಿಂತ ಸ್ಥಳೀಯ ಅಭ್ಯರ್ಥಿಗಳನ್ನು ನೋಡಿ ಮತ ಚಲಾಯಿಸಿರುವುದು ಖಚಿತವಾಗುತ್ತದೆ.

ಇವರಿಗೆ ಹೋಲಿಸಿಕೊಂಡರೆ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರಚಾರ ನಡೆಸಿದ ಕಡೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲುವು ದಾಖಲಿಸಿ ಬೀಗಿದ್ದಾರೆ.

7 ಕಡೆ ಮೋದಿ ರ‍್ಯಾಲಿ: ಮಾತಿನ ಮೋಡಿಗಾರ ನರೇಂದ್ರ ಮೋದಿ ಅವರು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌, ಬಳ್ಳಾರಿ, ಗದಗ, ಬೆಳಗಾವಿ, ಚಿಕ್ಕೋಡಿ, ಬಬಲೇಶ್ವರ, ಜಮಖಂಡಿ ಕ್ಷೇತ್ರಗಳಲ್ಲಿ ಒಟ್ಟು 7 ರ‍್ಯಾಲಿ ನಡೆಸಿದ್ದರು. ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು. ಇವುಗಳಲ್ಲಿ ಮೂರು ಕಡೆ ಮಾತ್ರ ಅವರ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಮೋದಿ ಮೋಡಿ ನಡೆದಿಲ್ಲ.

ರಾಹುಲ್‌ 17 ರ‍್ಯಾಲಿ: ರಾಹುಲ್‌ ಗಾಂಧಿ ಅವರು ಬಾಗಲಕೋಟೆ, ಬೀಳಗಿ, ಮುಧೋಳ, ಬಬಲೇಶ್ವರ, ಬಸವನ ಬಾಗೇವಾಡಿ, ವಿಜಯಪುರ, ಅಥಣಿ, ರಾಮದುರ್ಗ, ಸವದತ್ತಿ, ರೋಣ, ಶಿಗ್ಗಾವಿ, ಕಾರವಾರ, ಕುಮಟಾ, ಭಟ್ಕಳ, ಹೊಸಪೇಟೆ, ಧಾರವಾಡ, ಹುಬ್ಬಳ್ಳಿ ಪೂರ್ವ ಸೇರಿ 17 ಕಡೆ ರ‍್ಯಾಲಿ, ಸಮಾವೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯ ಸರ್ಕಾರದ ಆಡಳಿತವನ್ನು ಹೊಗಳಿದ್ದರು. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೈ ಹಿಡಿಯುವಂತೆ ಮನವಿ ಮಾಡಿದ್ದರು. ಉತ್ತರ ಕರ್ನಾಟಕದ ಮತದಾರರ ಮೇಲೆ ರಾಹುಲ್‌ ಮಾತುಗಳು ಪ್ರಭಾವ ಬೀರಿವೆ ಎಂದೇ ಆ ಪಕ್ಷ ಭಾವಿಸಿತ್ತು. ಹೆಚ್ಚು ಸ್ಥಾನಗಳ ಗೆಲುವಿನ ಲೆಕ್ಕಾಚಾರ ಹಾಕಿತ್ತು. ಆದರೆ, ರಾಹುಲ್‌ ಬಂದು ಹೋಗಿರುವ ಕಡೆಗಳಲ್ಲಿ ಐದು ಕ್ಷೇತ್ರಗಳಲ್ಲಿ ಮಾತ್ರ ಆ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಪಕ್ಷದ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಕೈಕೊಟ್ಟ ಏಕೈಕ ಸಮಾವೇಶ: ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ತಮ್ಮ ಅನಾರೋಗ್ಯದ ನಡುವೆಯೂ ನಾಗಠಾಣ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ರಾಜ್ಯದಲ್ಲಿ ಅವರು ಪ್ರಚಾರ ನಡೆಸಿದ ಏಕೈಕ ಕ್ಷೇತ್ರ ಇದಾಗಿತ್ತು. ಇಲ್ಲಿಯೂ ಆ ಪಕ್ಷದ ಅಭ್ಯರ್ಥಿ ಪರಾಭವಗೊಂಡಿದ್ದಾರೆ.

ಅಮಿತ್ ಶಾ ಮೋಡಿ:

ಅಚ್ಚರಿಯ ವಿಷಯವೆಂದರೆ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅವರು ಧಾರವಾಡ, ಹುಬ್ಬಳ್ಳಿ, ಹೊನ್ನಾವರ, ಬ್ಯಾಡಗಿ ಕ್ಷೇತ್ರ, ರೋಣ, ಬಬಲೇಶ್ವರ, ವಿಜಯಪುರ, ಗೋಕಾಕ, ಬೆಳಗಾವಿ, ರಾಮದುರ್ಗ, ಸವದತ್ತಿ, ಬಾದಾಮಿ, ಬಾಗಲಕೋಟೆ, ಮುಧೋಳದಲ್ಲಿ  ಪ್ರಚಾರ ನಡೆಸಿದ್ದರು. ಇವುಗಳಲ್ಲಿ 10 ಕಡೆ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇನ್ನುಳಿದ 5 ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಯೋಗಿ ತಂದು ಕೊಡದ ಗೆಲುವು

ಈ ಭಾಗದಲ್ಲಿ ತುಂಬಾ ಆಕರ್ಷಣೆಗೆ ಒಳಗಾಗಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಇಲ್ಲಿನ ಮತದಾರರು ಮನ ಸೋತಿಲ್ಲ.

ಹುಬ್ಬಳ್ಳಿ ಪೂರ್ವ, ಶಿರಸಿ, ಭಟ್ಕಳ, ಹಳಿಯಾಳ, ಹಿರೇಕೆರೂರು, ರಾಣಿಬೆನ್ನೂರು, ಗೋಕಾಕ, ಖಾನಾಪುರ, ಯಮಕನಮರಡಿ, ಬೆಳಗಾವಿ ಗ್ರಾಮೀಣ, ಮುಧೋಳ, ತೇರದಾಳ, ಹೊಸಪೇಟೆ, ಮುದ್ದೇಬಿಹಾಳ, ನಾಗಠಾಣಾ ಸೇರಿ ಒಟ್ಟು 15 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಇವುಗಳಲ್ಲಿ ಐದು ಕಡೆಗಳಲ್ಲಿ ಮಾತ್ರ ಆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗಿದೆ. ಆದಿತ್ಯನಾಥ ಅವರಿಗಿಂತಲೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸೆ ಈ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನರಗುಂದ, ನವಲಗುಂದ, ಹುಬ್ಬಳ್ಳಿ, ಬೆಳಗಾವಿ ಉತ್ತರ, ಬೈಲಹೊಂಗಲ, ಬಾದಾಮಿ, ತೇರದಾಳ, ಸಂಡೂರು, ಸಿರುಗುಪ್ಪ ಸೇರಿ 9 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಇವುಗಳಲ್ಲಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 4 ಕಡೆ ಆ ಪಕ್ಷದ ಅಭ್ಯರ್ಥಿಗಳು ಸೋಲುಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT