ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳನ್ನು ದಡ ಮುಟ್ಟಿಸಿದ ಪ್ರಧಾನಿ ಮೋದಿ

ಬಂಡಾಯದ ಮಧ್ಯೆಯೂ ಪ್ರಾಬಲ್ಯ ಮೆರೆದ ಕಮಲ ಪಡೆ
Last Updated 16 ಮೇ 2018, 7:49 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಪಕ್ಷ ಭಾರಿ ಹಿನ್ನಡೆ ಅನುಭವಿಸುವಂತಾಗಿದ್ದು, ಈ ಬಾರಿ ಮತದಾರರು ಜಿಲ್ಲೆಯಲ್ಲಿ ಕಮಲ ಅರಳಿಸಿದ್ದಾರೆ. ಎಂಟು ಸ್ಥಾನಗಳ ಪೈಕಿ ಏಳರಲ್ಲಿ ಬಿಜೆಪಿ ಜಯಗಳಿಸಿದ್ದು, ಕಾಂಗ್ರೆಸ್‌ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಡಿ. ವೇದವ್ಯಾಸ್‌ ಕಾಮತ್‌, ಡಾ. ವೈ. ಭರತ್‌ ಶೆಟ್ಟಿ, ಹರೀಶ್‌ ಪೂಂಜಾ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದರೆ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು, ಸಂಜೀವ್‌ ಮಠಂದೂರು ಎರಡನೇ ಪ್ರಯತ್ನದಲ್ಲಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಎಸ್‌. ಅಂಗಾರ ಅವರ ಗೆಲುವಿನ ನಾಗಾಲೋಟ ಮುಂದುವರಿದಿದ್ದು, ಕ್ಷೇತ್ರದಲ್ಲಿ ಬಿಜೆಪಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಂತಾಗಿದೆ.

ಹಳಿಗೆ ತಂದ ಮೋದಿ: ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಬಂಡಾಯದ ಬೇಗುದಿಯಲ್ಲಿ ಬೆಂದಿದ್ದ ಬಿಜೆಪಿ ಜಿಲ್ಲಾ ಘಟಕವನ್ನು ಹಳಿಗೆ ತರುವಲ್ಲಿ ಪ್ರಧಾನಿ ಮೋದಿ ಭೇಟಿ ಮಹತ್ತರ ಪಾತ್ರ ವಹಿಸಿತು. ಇದರಿಂದಾಗಿ ಬಂಡಾಯದ ಮಧ್ಯೆಯೂ ಏಳು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಅಖಾಡಾಕ್ಕೆ ಇಳಿಯುವ ಮುನ್ನ, ಬಹುತೇಕ ಬಿಜೆಪಿ ಅಭ್ಯರ್ಥಿಗಳಿಗೇ ಗೆಲುವಿನ ವಿಶ್ವಾಸ ಇರಲಿಲ್ಲ. ಅದರಲ್ಲೂ ಹೊಸಬರಂತೂ ಗೆಲುವನ್ನು ಸಾಧಿಸಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಮಂಗಳೂರು ಉತ್ತರದಲ್ಲಿ ಕೃಷ್ಣ ಪಾಲೇಮಾರ್‌, ಸತ್ಯಜಿತ್‌ ಸುರತ್ಕಲ್‌, ಪುತ್ತೂರು ಕ್ಷೇತ್ರದಲ್ಲಿ ಅರುಣ್‌ಕುಮಾರ್‌ ಪುತ್ತಿಲ, ಮೂಡುಬಿದಿರೆಯಲ್ಲಿ ಜಗದೀಶ್‌ ಅಧಿಕಾರಿ ಅಸಮಾಧಾನವನ್ನು ಹೊರ ಹಾಕಿದ್ದರು. ಇದಾದ ನಂತರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ನಾಯಕರು ಕಸರತ್ತು ನಡೆಸಿದರೂ, ತಕ್ಕಮಟ್ಟಿಗೆ ಫಲ ನೀಡಿರಲಿಲ್ಲ.

ಮೇ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಆರಂಭಿಸುತ್ತಿದ್ದಂತೆಯೇ ಕರಾವಳಿಯ ಚಿತ್ರಣ ನಿಧಾನವಾಗಿ ಬದಲಾವಣೆ ಆಯಿತು. ಮೊದಲಿಗೆ ಮೋದಿ ಪ್ರಚಾರ ನಡೆಸಿದ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಎಲ್ಲ ಐದೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.

ಮೇ 5ರಂದು ಪ್ರಧಾನಿ ಮೋದಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಹೊಸ ಹುರುಪು ಆರಂಭವಾಗಿತ್ತು. ರಾತ್ರಿಯಾದರೂ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರಧಾನಿ ಭಾಷಣವನ್ನು ಕೇಳಿದ್ದರು. ಹಿಂದೂಗಳ ಹತ್ಯೆ ಮಾಡಿದವರು ಎಲ್ಲಿಯೇ ಇದ್ದರೂ 15 ರ ನಂತರ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಮಾತನ್ನು ಪ್ರಧಾನಿ ಹೇಳಿದ್ದರು.

ಇದಾದ ನಂತರ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಲೇ ಬಂತು. ಅದರ ಪರಿಣಾಮವಾಗಿಯೇ 12 ರಂದು ನಡೆದ ಮತದಾನದಲ್ಲಿ ಗರಿಷ್ಠ ಪ್ರಮಾಣದ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಮತದಾನದ ಅಂಕಿ–ಅಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿಯ ಗೆಲುವು ನಿಶ್ಚಿತ ಎಂಬ ಲೆಕ್ಕಾಚಾರಗಳು ಶುರುವಾಗಿದ್ದವು. 2013 ರ ಚುನಾವಣೆಗಿಂತ ಈ ಬಾರಿ ಶೇ 4 ರಷ್ಟು ಹೆಚ್ಚಿನ ಮತದಾನ ಆಗಿರುವುದು ಬಿಜೆಪಿಗೆ ವರವಾಗಿ ಪರಿಣಮಿಸಿದೆ.

ಯಾರ ಪರ ಬಿಲ್ಲವರು

ಜಿಲ್ಲೆಯಾದ್ಯಂತ ನಿರ್ಣಾಯಕ ಸಂಖ್ಯೆ ಹೊಂದಿರುವ ಬಿಲ್ಲವ ಮತದಾರರು ಈ ಬಾರಿ ಯಾರನ್ನು ಬೆಂಬಲಿಸಲಿದ್ದಾರೆ ಎನ್ನುವ ಪ್ರಶ್ನೆ ಜಿಲ್ಲೆಯ ರಾಜಕೀಯದಲ್ಲಿ ಮಹತ್ವ ಪಡೆದಿತ್ತು.

ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿ ಅವರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡುತ್ತಲೇ ಬಂದಿತ್ತು. ಆದರೆ, ರಾಹುಲ್‌ ಗಾಂಧಿ ಅವರ ಪ್ರವೇಶದ ನಂತರ ಪೂಜಾರಿ ಅವರ ಮುನಿಸು ಕಡಿಮೆಯಾಗಿದ್ದು ನಿಜ. ನಂತರ ಕಾಂಗ್ರೆಸ್‌ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೊದಲು ಪೂಜಾರಿ ಅವರ ಆಶೀರ್ವಾದ ಪಡೆದಿದ್ದೂ ಆಯಿತು. ಅದಾಗ್ಯೂ ಬಿಲ್ಲವ ಸಮುದಾಯದ ಮತಗಳನ್ನು ಸೆಳೆಯುವುದು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.

ಮೂಡುಬಿದಿರೆಯಲ್ಲಿ ಬಿಲ್ಲವ ಸಮುದಾಯದ ಉಮಾನಾಥ ಕೋಟ್ಯಾನ್‌ಗೆ ಬಿಜೆಪಿ ಟಿಕೆಟ್‌ ನೀಡಿದ್ದು ಫಲ ನೀಡಿದೆ. ಆದರೆ, ಉಳಿದೆಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಹೊಸಬರಿಗೆ ಅವಕಾಶ ನೀಡಿದರೂ, ಮತದಾರರು ಮಾತ್ರ ಬಿಜೆಪಿಗೆ ಆಶೀರ್ವಾದ ನೀಡಿದ್ದಾರೆ. ಹೀಗಾಗಿ ಈ ಬಾರಿ ಬಿಲ್ಲವ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿದಿರುವುದು ಸ್ಪಷ್ಟವಾದಂತೆ ಗೋಚರಿಸುತ್ತಿದೆ.

**
ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಕೊಲೆಗಳ ವಿರುದ್ಧ ಜನರು ಮತ ನೀಡಿದ್ದಾರೆ. ನರೇಂದ್ರ ಮೋದಿ ವರ್ಚಸ್ಸು, ಹಿಂದುತ್ವದಿಂದ ಬಿಜೆಪಿ ಗೆಲುವು ಸಾಧಿಸಿದೆ
– ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ನೂತನ ಶಾಸಕ 

**
ನಾನು ತುಷ್ಟೀಕರಣ ರಾಜಕಾರಣ ಮಾಡಿದ್ದೇನೆ ಎಂಬುದು ಸುಳ್ಳು. ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜಾತಿ, ಧರ್ಮ ನೋಡಿಲ್ಲ
– ಬಿ.ರಮಾನಾಥ ರೈ, ಬಂಟ್ವಾಳ ಕ್ಷೇತ್ರದ ಪರಾಜಿತ ಅಭ್ಯರ್ಥಿ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT