ಅನುಭವಿ ವಿರುದ್ಧ ಗೆದ್ದ ಹೊಸಮುಖ

7
ಬೆಳ್ತಂಗಡಿ: ವಸಂತ ಬಂಗೇರ ಸೋಲು; ಹರೀಶ್ ಪೂಂಜಾ ಗೆಲುವು

ಅನುಭವಿ ವಿರುದ್ಧ ಗೆದ್ದ ಹೊಸಮುಖ

Published:
Updated:

ಬೆಳ್ತಂಗಡಿ : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಕಳೆದ 5 ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ರಾಜಕಾರಣಿ ಕೆ ವಸಂತ ಬಂಗೇರರನ್ನು ಸೋಲಿಸಿ ಬಿಜೆಪಿ ಯುವ ನಾಯಕ ಹರೀಶ್ ಪೂಂಜ ವಿಧಾನ ಸಭೆ ಪ್ರವೇಶಿಸಿದ್ದಾರೆ.

ಒಟ್ಟು 22,974 ಮತಗಳ ಅಂತರದಿಂದ ಹರೀಶ್  ಜಯ ಗಳಿಸಿದ್ದಾರೆ. ಆದರೆ ಈ ಬಾರಿ ತನ್ನದೇ ಆದ ಅಭಿಮಾನಿ ಬಳಗದ ಜೊತೆಗೆ ಕಾಂಗ್ರೆಸ್ ನಾಯಕರ ಒಗ್ಗಟ್ಟು, ಮಾಜಿ ಸಚಿವ ಗಂಗಾಧರ ಗೌಡ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದು, ಸೌಜನ್ಯಾ ಹತ್ಯೆಯ ವಿರುದ್ಧ ಹೋರಾಟ ಸಂಘಟಿಸಿದ್ದ ಕಟ್ಟಾ ಹಿಂದುತ್ವವಾದಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಿಪಿಎಂನ ಬೆಂಬಲ ಎಲ್ಲವೂ ಇದ್ದು ವಸಂತ ಬಂಗೇರ ಸೋಲನುಭವಿಸಿದ್ದಾರೆ.

ಆದರೆ ಯುವ ಪಡೆಯನ್ನೇ ಶಕ್ತಿ ಯಾಗಿ ಇಟ್ಟುಕೊಂಡು ತಂತ್ರಗಾರಿಕೆ ಯನ್ನು ಹೆಣೆದು ಹರೀಶ್ ಪೂಂಜಾ ಜಯಗಳಿಸುವಲ್ಲಿ ಶಕ್ತರಾಗಿದ್ದಾರೆ.

ಶಾಸಕ ಅಂಗಾರಗೆ ಸ್ವಾಗತ

ಸುಳ್ಯ: ಶಾಸಕ ಅಂಗಾರ ಅವರು ವಿಜಯಿಯಾಗಿ ಸುಳ್ಯಕ್ಕೆ ಬರುತ್ತಿದ್ದಂತೆ ಅವರಿಗೆ ಸುಳ್ಯದ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ಕೋರಿದರು.

ಅಂಗಾರ ಜಾಲ್ಸೂರಿಗೆ ಬಂದಾಗ ಅವರನ್ನು ತೆರೆದ ಜೀಪ್‌ನಲ್ಲಿ ಕಾರ್ಯ ಕರ್ತರು ವಾಹನ ಜಾಥಾದಲ್ಲಿ ಕರೆ ತಂದರು. ಸುಳ್ಯದಲ್ಲಿ ಪಕ್ಷದ ಕಚೇರಿ ಬಳಿ ನಾಯಕರು ಹಾರ ಹಾಕಿ ಸ್ವಾಗತಿಸಿದರು. ಸಾವಿರಾರು ಮಂದಿ ಕಾರ್ಯಕರ್ತರು ಬಿಜೆಪಿ ಮತ್ತು ಪ್ರಧಾನಿ ಮೋದಿ ಪರ ಘೋಷಣೆ ಕೂಗಿದರು. ನಾಸಿಕ್ ಬ್ಯಾಂಡ್ ಸದ್ದು ಜೋರಾಗಿತ್ತು.

ಕಚೇರಿ ಬಳಿ ಸಾಂಕೇತಿಕ ಸಭೆಯಲ್ಲಿ ಬಿಜೆಪಿ ಮುಖಂಡರಾದ ವೆಂಕಟ್ ವಳಲಂಬೆ, ಎ.ವಿ.ತೀರ್ಥರಾಮ, ಶಾಸಕ ಅಂಗಾರ ಮಾತನಾಡಿದರು. ಸಿಹಿ ಹಂಚಲಾಯಿತು. ನಂತರ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.‌

ಮಾತಿನ ಚಕಮಕಿ:  ಸುಳ್ಯದ ಬಿಜೆಪಿ ಕಚೇರಿಯಲ್ಲಿ ಶಾಸಕ ಅಂಗಾರ ಅವರು ವಿಜಯಿ ಆಗುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಿ ದ್ದರು. ಆಗ ಅಲ್ಲಿಗೆ ಬಂದ ಸುಳ್ಯ ಎಸ್‌ಐ ಮಂಜುನಾಥ ಅವರು ಘೋಷಣೆ ಕೂಗದಂತೆ ತಾಕೀತು ಮಾಡಿದರು. ಕಾರ್ಯಕರ್ತರ ರಾಜ್‌ಮುಖೇಶ್ ಎಂಬ ವರು ‘ಇಡೀ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಲಾಗುತ್ತದೆ. ನಮ್ಮಲ್ಲಿ ಅವಕಾಶ ಯಾಕೆ ಇಲ್ಲ’ ಎಂದಾಗ ಎಸ್‌ಐ  ಗದರಿಸಿದರು.  ಮಾತಿನ ಚಕಮಕಿ ನಡೆಯಿತು.

ಅಶೋಕ್ ರೈ ಮನೆ ಎದುರು ಪಟಾಕಿ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರು ವಿಜಯಿಯಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರ ಪ್ರತ್ಯೇಕ ಎರಡು ತಂಡಗಳು ಮಾಜಿ ಶಾಸಕ ಕೆ.ರಾಮಭಟ್ ಹಾಗೂ ಆಕಾಂಕ್ಷಿ ಅಶೋಕ್‌ ಕುಮಾರ್ ರೈ ಕೋಡಿಂಬಾಡಿ ಅವರ  ಮನೆಯ ಎದುರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುವ ಜೊತೆಗೆ ತಮ್ಮಲ್ಲಿ ಅವರ ಬಗ್ಗೆ ಹುದುಗಿದ್ದ ಅಸಮಾಧಾನವನ್ನು  ಹೊರಹಾಕಿದರು.

ಮಾಜಿ ಶಾಸಕ ಕೆ.ರಾಮ ಭಟ್ ಅವರು ಪುತ್ತೂರು ಕ್ಷೇತ್ರದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಬೆಂಬಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಕ್ಷೇತ್ರದ ಜನತೆ ಶಕುಂತಳಾ ಶೆಟ್ಟಿ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಶಕುಂತಳಾ ಶೆಟ್ಟಿಗೆ ಬೆಂಬಲ ಘೋಷಿಸಿದ್ದು ಬಿಜೆಪಿ ಕಾರ್ಯಕರ್ತರ  ಅಸಮಾಧಾನಕ್ಕೆ ಕಾರಣವಾಗಿತ್ತು.

ಬಿಜೆಪಿ ಟಿಕೆಟ್ ವಂಚಿತ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್‌ಕುಮಾರ್ ರೈ ಕೋಡಿಂಬಾಡಿ  ಭಿನ್ನಮತ ನಡೆಸಿದ್ದರೆಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ತಂಡ ರೈ ಎಸ್ಟೇಟ್ ಮನೆಯ ಎದುರು ಭಾಗದ ರಸ್ತೆಯಲ್ಲಿ ಪಟಾಕಿ ರಾಶಿ ಹಾಕಿ ಸಿಡಿಸಿ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.

ವಿಜಯೋತ್ಸವ

ಬೆಳ್ತಂಗಡಿ: ಹರೀಶ್ ಪೂಂಜ ಗೆಲುವು ನಿಶ್ಚಿತ ಎಂದು ತಿಳಿದ ಕೂಡಲೇ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದ ಕಾರ್ಯಕರ್ತರು ಬೆಳ್ತಂಗಡಿ ಚುನಾವಣಾ ಕಚೇರಿಯ ಮುಂದೆ ಸಂಭ್ರಮಾಚರಣೆ ಮಾಡಿದರು. ಕೇಸರಿ ಶಾಲು ಮತ್ತು ಬಿಜೆಪಿಯ ಬಾವುಟ ಹಿಡಿದುಕೊಂಡು ಯುವ ಕಾರ್ಯಕರ್ತರು ಬೆಳ್ತಂಗಡಿ ಪೇಟೆಯುದ್ದಕ್ಕೂ ಬೈಕ್ ಮತ್ತು ಇತರ ವಾಹನಗಳಲ್ಲಿ ಸಂಚರಿಸಿ ಸಂಭ್ರಮಿಸುತ್ತಿದ್ದುದು ಕಂಡು ಬಂತು.

ಸುಬ್ರಹ್ಮಣ್ಯದಲ್ಲಿ ಸಂಭ್ರಮಾಚರಣೆ

ಸುಬ್ರಹ್ಮಣ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸತತ 6ನೇ ಬಾರಿಗೆ ಶಾಸಕ ಎಸ್. ಅಂಗಾರ ಅವರು ಮಂಗಳವಾರ ವಿಜಯಶಾಲಿ ಆಗುತ್ತಿದ್ದಂತೆ ಸುಬ್ರಹ್ಮಣ್ಯ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಶಾಸಕ ಅಂಗಾರ ಹಾಗೂ ರಾಜ್ಯದ ವಿವಿಧೆಡೆ ಬಿಜೆಪಿ ಜಯಭೇರಿ ಬಾರಿಸಿದ್ದಕ್ಕೆ ಹರ್ಷಾಚರಣೆ ನಡೆಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕಲ್ಮಕಾರು ಕೊಲ್ಲಮೊಗ್ರು, ಹರಿಹರ ಬಾಳುಗೋಡು, ಗುತ್ತಿಗಾರು, ಪಂಜ, ಯೇನೆಕಲ್ಲು ಮುಂತಾದೆಡೆ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ವಾಹನ ರ‍್ಯಾಲಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry