ಕಾಂಗ್ರೆಸ್‌ ಕನಸು ಭಗ್ನಗೊಳಿಸಿದ ‘ಹಿಂದುತ್ವ’

7
‘ಕಮಲ’ ಪಡೆಯ ತಂತ್ರಗಾರಿಕೆ ಎದುರು ವಿಫಲವಾದ ‘ಕೈ’ ಕಸರತ್ತು

ಕಾಂಗ್ರೆಸ್‌ ಕನಸು ಭಗ್ನಗೊಳಿಸಿದ ‘ಹಿಂದುತ್ವ’

Published:
Updated:

ಮಂಗಳೂರು: ‘ಹಿಂದುತ್ವ ರಾಜಕಾರಣದ ಪ್ರಯೋಗ ಶಾಲೆ’ ಎಂದೇ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ‘ಹಿಂದುತ್ವ’ದ ಕಾರ್ಯಸೂಚಿ ಸಂಪೂರ್ಣವಾಗಿ ಕೈಹಿಡಿದಿದೆ. ಜನಪ್ರಿಯ ಯೋಜನೆಗಳು ಮತ್ತು ಹಳೆಯ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಚುನಾವಣೆ ಗೆಲ್ಲುವ ಕಾಂಗ್ರೆಸ್‌ ಯೋಜನೆಗಳು ಸಂಪೂರ್ಣ ಬುಡಮೇಲಾಗಿ ಬಿಜೆಪಿಯನ್ನು ದಡ ಮುಟ್ಟಿಸಿರುವುದು ಕೆಲವೇ ತಿಂಗಳುಗಳಿಂದ ಹೆಣೆದ ಹಿಂದುತ್ವ ಪರ ರಾಜಕೀಯ ತಂತ್ರಗಾರಿಕೆ ಎಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಸುಳ್ಯ ಮೀಸಲು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಐದು ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಶಾಸಕರಿರುವ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ಹರಿದುಬಂದಿತ್ತು. ಆಗಿರುವ ಕೆಲಸಗಳನ್ನೇ ನೆಚ್ಚಿಕೊಂಡಿದ್ದ ಕಾಂಗ್ರೆಸ್‌, ಅನ್ನಭಾಗ್ಯ, ಸಾಲ ಮನ್ನಾದಂತಹ ಯೋಜನೆಗಳು ಚುನಾವಣೆಯಲ್ಲಿ ಕೈ ಹಿಡಿಯಬಹುದು ಎಂದು ನಿರೀಕ್ಷಿಸಿತ್ತು. ಆದರೆ, ಏಳು ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಮೂಲಕ ಜಿಲ್ಲೆಯ ಜನರು ಪಕ್ಷದ ಘಟಾನುಘಟಿ ನಾಯಕರನ್ನು ಸೋಲಿನ ಕೂಪಕ್ಕೆ ತಳ್ಳಿದ್ದಾರೆ.

ಈ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್‌ ಯಾವುದೇ ಬಿಕ್ಕಟ್ಟುಗಳಿಲ್ಲದೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು. ಮೂಡುಬಿದಿರೆಯಲ್ಲಿ ಟಿಕೆಟ್‌ಗೆ ಪೈಪೋಟಿ ಇದ್ದಾಗಲೂ, ಪಕ್ಷದ ಹಿರಿಯ ನಾಯಕರು ಒತ್ತಡ ಹೇರಿ ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್‌ ಅವರನ್ನು ಕಣಕ್ಕಿಳಿಸಿದ್ದರು. ಒಲ್ಲದ ಮನಸ್ಸಿನಿಂದ ಅವರು ಅಖಾಡಕ್ಕೆ ಇಳಿದಿದ್ದರು. ಉಳಿದಂತೆ ಏಳು ಕ್ಷೇತ್ರಗಳಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ.

ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಕಷ್ಟು ತಿಣುಕಾಡಬೇಕಾಯಿತು. ಮಂಗಳೂರು ನಗರದ ಮೂರು ಕ್ಷೇತ್ರಗಳಿಗೆ ಅಂತಿಮ ಕ್ಷಣಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಮಂಗಳೂರು ಉತ್ತರ, ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳಲ್ಲಿ ಪ್ರಬಲ ಬಂಡಾಯವೂ ಇತ್ತು. ಆದರೆ, ಎಲ್ಲವನ್ನೂ ಮೀರಿ ಭಾರಿ ಬಹುತಮದೊಂದಿಗೆ ಮುನ್ನಡೆ ಸಾಧಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹಿಂದುತ್ವದ ಅಲೆಯ ಫಲ: 2017ರ ಜೂನ್‌ನಿಂದಲೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಲ್ಲಡ್ಕ ಮತ್ತು ಸುತ್ತಲಿನ ಪ್ರದೇಶ ಮತೀಯ ಹಿಂಸೆಯ ಕೇಂದ್ರವಾಗಿತ್ತು. ಅದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಮುಸ್ಲಿಂ ಮತೀಯವಾದಿಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಲೇ ಇತ್ತು. 2017ರಲ್ಲಿ ಬಿ.ಸಿ.ರೋಡ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಕೊಲೆ ಮತ್ತು 2018ರ ಜನವರಿ ಮೊದಲ ವಾರ ಸುರತ್ಕಲ್‌ನ ಕಾಟಿಪಳ್ಳದಲ್ಲಿ ನಡೆದ ದೀಪಕ್‌ ರಾವ್‌ ಕೊಲೆ ಪ್ರಕರಣಗಳು ಕಾಂಗ್ರೆಸ್‌ ವಿರುದ್ಧ ಹಿಂದುತ್ವದ ಪರ ಮತಗಳನ್ನು ಧ್ರುವೀಕರಿಸುವಲ್ಲಿ ಸಾಕಷ್ಟು ಕೆಲಸ ಮಾಡಿರುವುದು ಈ ಚುನಾವಣಾ ಫಲಿತಾಂಶದಿಂದ ವೇದ್ಯವಾಗುತ್ತದೆ.

ಸುಳ್ಯದಲ್ಲಿ ಹಾಲಿ ಶಾಸಕ ಅಂಗಾರ ಅವರೇ ಅಭ್ಯರ್ಥಿ. ಮೂಡುಬಿದಿರೆ, ಬಂಟ್ವಾಳ ಮತ್ತು ಪುತ್ತೂರಿನಲ್ಲಿ 2013ರ ಅಭ್ಯರ್ಥಿಗಳೇ ಈ ಬಾರಿ ಕಣದಲ್ಲಿದ್ದರು. ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಬೆಳ್ತಂಗಡಿ ಮತ್ತು ಮಂಗಳೂರು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆರಂಭದಲ್ಲಿ ಇವರ ಗೆಲುವಿನ ಬಗ್ಗೆ ಪಕ್ಷದ ನಾಯಕರೇ ಅನುಮಾನ ವ್ಯಕ್ತಪಡಿಸುತ್ತಿದ್ದರು. ಆದರೆ, ನಿರಂತರವಾಗಿ ಹಿಂದುತ್ವದ ಮತಗಳನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ಜಿಲ್ಲೆಯ ರಾಜಕೀಯದಲ್ಲಿ ಮೂಲೆಗುಂಪು ಮಾಡಿದ್ದಾರೆ.

ಲೆಕ್ಕಾಚಾರ ತಲೆಕೆಳಗು: ಎಂಟರಲ್ಲಿ ಆರು ಕ್ಷೇತ್ರಗಳಲ್ಲಿ ಮೇಲು ಜಾತಿಯ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಇದು ತನಗೆ ವರವಾಗಬಹುದು ಎಂಬ ಕಾಂಗ್ರೆಸ್‌ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಎಸ್‌ಡಿಪಿಐ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಸಿದ್ದು ಲಾಭ ತರಬಹುದು ಎಂಬ ಲೆಕ್ಕಾಚಾರವೂ ತಲೆಕೆಳಗಾಗಿದೆ. ಮುಸ್ಲಿಮರ ಪ್ರಾಬಲ್ಯವಿರುವ ಬಂಟ್ವಾಳ, ಮಂಗಳೂರು ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರಿ ಮುನ್ನಡೆ ದೊರೆತಿದೆ. ಕೊನೆಯ ಕ್ಷಣದಲ್ಲಿ ಜನಾರ್ದನ ಪೂಜಾರಿ ಅವರನ್ನು ಒಲಿಸಿಕೊಳ್ಳುವ ಪ್ರಯತ್ನವೂ ಕಾಂಗ್ರೆಸ್‌ಗೆ ಫಲ ನೀಡಿಲ್ಲ.

ಈ ಬಾರಿ ಕಾಂಗ್ರೆಸ್‌ನ ಪ್ರಬಲ ನೆಲೆಗಳಿಗೂ ರಹಸ್ಯವಾಗಿ ನುಸುಳಿರುವ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಪಡೆ ಗುಟ್ಟಾಗಿಯೇ ಮತ ಬುಟ್ಟಿಗೆ ತೂತು ಕೊರೆದಿತ್ತು ಎಂಬುದು ಖಚಿತವಾಗಿದೆ. ಮತಗಟ್ಟೆವಾರು ಮತಗಳ ಹಂಚಿಕೆಯನ್ನು ಕಂಡು ಕಾಂಗ್ರೆಸ್ಸಿಗರು ಕಂಗಾಲಾಗಿ ಹೋಗಿರುವುದು ಇದಕ್ಕೆ ಸಾಕ್ಷಿ. ಒಂದಷ್ಟು ಪ್ರಮಾಣದಲ್ಲಿ ಬಿಜೆಪಿಯೊಳಗೆ ಸಮಸ್ಯೆ ಇದೆ ಎಂಬಂತೆ ಹರಿದಾಡಿದ ಸುದ್ದಿಗಳನ್ನು ನಂಬಿ ಗೆಲುವು ಆರಾಮವೆಂದು ಕಾಂಗ್ರೆಸ್‌ ಹುರಿಯಾಳುಗಳು ಭಾವಿಸಿದ್ದು ಕೂಡ ಸೋಲಿಗೆ ಕೊಡುಗೆ ನೀಡಿದಂತಿದೆ.

ಮೋದಿ ಭೇಟಿಯ ಬಲ

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಚ್ಚಿಕೊಂಡು ಚುನಾವಣೆ ಎದುರಿಸಿತ್ತು. ಮೋದಿಯವರೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡುವಂತೆ ಮತದಾರರ ಮನವೊಲಿಕೆಗೆ ಇಳಿದಿತ್ತು. ಮೋದಿಯವರು ಮಂಗಳೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದ ಬಳಿಕ ಚುನಾವಣೆಯ ಚಿತ್ರಣ ಬದಲಾಬಹುದು ಎಂಬ ಬಿಜೆಪಿ ನಾಯಕರ ನಿರೀಕ್ಷೆ ನಿಜವಾಗಿದೆ. ಯುವಕರ ಮತಗಳನ್ನು ಸೆಳೆಯುವಲ್ಲಿ ಈ ಕಾರ್ಯತಂತ್ರ ಫಲ ನೀಡಿದೆ.

ಉಮಾನಾಥ ಕೋಟ್ಯಾನ್‌ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು: 58, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪತ್ನಿ: ಮಮತಾ, ಮಕ್ಕಳು: ಪ್ರಜ್ಞಾ, ಪ್ರಜ್ವಲ್‌

ಮೂಡುಬಿದಿರೆಯ ಪುತ್ತಿಗೆ ಪದವು ನಿವಾಸಿಯಾಗಿರುವ ಉಮಾನಾಥ ಕೋಟ್ಯಾನ್‌ ಎರಡನೇ ಪ್ರಯತ್ನದಲ್ಲಿ ವಿಧಾನಸಭೆ ಪ್ರವೇಶಿಸಿದ್ದಾರೆ. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ರಾಜಕೀಯಕ್ಕೆ ಪ್ರವೇಶಿಸಿದ ಅವರು, ವೃತ್ತಿಯಲ್ಲಿ ಕೃಷಿಕ ಹಾಗೂ ಸಿವಿಲ್‌ ಗುತ್ತಿಗೆದಾರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಅವರು, ಸದ್ಯಕ್ಕೆ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

2013ರಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಉಮಾನಾಥ ಕೋಟ್ಯಾನ್‌, ಈ ಬಾರಿ ಅಭಯಚಂದ್ರ ಜೈನ್‌ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

***

ಡಾ. ವೈ. ಭರತ್‌ ಶೆಟ್ಟಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು: 47, ವಿದ್ಯಾರ್ಹತೆ: ಎಂ.ಡಿ, ಪತ್ನಿ: ಅಸಾವರಿ, ಮಕ್ಕಳು: ಕನಿಷ್ಕಾ

ಮಂಗಳೂರು ನಗರದ ಯೆಯ್ಯಾಡಿಯ ನಿವಾಸಿಯಾಗಿರುವ ಡಾ.ವೈ. ಭರತ್ ಶೆಟ್ಟಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದವರು. ಭರತ್ ಶೆಟ್ಟಿ ಸರ್ದಾರ್ ವಲ್ಲಭಬಾಯಿ ಪಟೇಲ್ ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಚಾಲಕನಾಗಿದ್ದರು.

ಕಳೆದ ಎರಡು ವರ್ಷಗಳಿಂದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಐಟಿಸಿ ಮತ್ತು ಒಟಿಸಿ ತರಬೇತಿಯನ್ನು ಪಡೆದಿದ್ದಾರೆ. 2014ರಲ್ಲಿ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ಮಂಗಳೂರು ಸಮಾವೇಶದ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ.ವೈ. ಭರತ್ ಶೆಟ್ಟಿ ಮಂಗಳೂರಿನ ಎ.ಜೆ. ದಂತ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದು, ದಂತ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರೂ ಹೌದು. ಡಾ. ಭರತ್ ಶೆಟ್ಟಿ ಮೊದಲ ಬಾರಿಗೆ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ.

**

ಹರೀಶ್ ಪೂಂಜ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು:  36, ವಿದ್ಯಾರ್ಹತೆ:  ಬಿಎ, ಎಲ್‌ಎಲ್‌ಬಿ, ಪತ್ನಿ:  ಸ್ವೀಕೃತ, ಮಕ್ಕಳು:  ಗಹನ್‌

ಬೆಳ್ತಂಗಡಿ: ತಾಲ್ಲೂಕಿನ ಗರ್ಡಾಡಿ ಗ್ರಾಮದ ಮುತ್ತಣ್ಣ ಪೂಂಜ ಮತ್ತು ನಳಿನಿ ಪೂಂಜ ದಂಪತಿ ಪುತ್ರರಾದ ಹರೀಶ್ ಪೂಂಜ ಈಗ ಜಿಲ್ಲೆಯಲ್ಲೇ ಪರಿಚಿತರು  ಆರ್‍ಎಸ್‍ಎಸ್ ಹಾಗೂ ಸಂಘ ಪರಿವಾರದ ಎಲ್ಲಾ ರಂಗಗಳಲ್ಲೂ ಗುರುತಿಸಿಕೊಂಡಿರುವ ಅವರು ಧಾರ್ಮಿಕ ಅಖಾಡಕ್ಕೂ ಇಳಿದು ಯಶಸ್ಸಿನ ಹೆಜ್ಜೆ ಇಟ್ಟು, ಈಗ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದಾರೆ.

ಎಬಿವಿಪಿ ತಾಲ್ಲೂಕು ಪ್ರಮುಖ್ ಆಗಿ , ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮಂಗಳೂರು ವಿವಿಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕರಾಗಿ, ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿಯಾಗಿ, ಲಿವ್ಡೋ ಆಯೋಗದ ಮುಂದೆ ಶಾಲಾ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಮಹತ್ವದ ಕುರಿತು ವಾದ ಮಂಡಿಸಿ ವಿಜಯಿಯಾಗಿದ್ದರು. ಉತ್ತಮ ವಾಗ್ಮಿಯೂ ಆಗಿದ್ದಾರೆ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿದ್ದರು.

ಸಂಘ ಪರಿವಾರದ ಮೂಲಕ ಸ್ವಂತ ಪರಿಶ್ರಮದಿಂದ ಬೆಳೆದು ಬಂದಿದ್ದಾರೆ. ಇದೀಗ ವಿಧಾನ ಸಭೆಗೆ ಬೆಳ್ತಂಗಡಿ ಕ್ಷೇತ್ರದಿಂದ ಹೊಸ ಮುಖವಾಗಿ ಪ್ರವೇಶಿಸಲಿದ್ದಾರೆ.

**

ಎಸ್‌.ಅಂಗಾರ, ಸುಳ್ಯ (ಎಸ್‌ಸಿ) ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು– 54 ವರ್ಷ, ವಿದ್ಯಾರ್ಹತೆ– 9ನೇ ತರಗತಿ, ಪತ್ನಿ: ವೇದಾವತಿ, ಮಕ್ಕಳು: ಗೌತಮ, ಪೂಜಾಶ್ರೀ

ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸುಳ್ಳಿ ಅಂಗಾರ ಅವರು ಸತತ ಏಳನೇ ಬಾರಿಗೆ ಸ್ಪರ್ಧಿಸಿದ್ದು, 6 ಬಾರಿ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಗಾರ ಅವರು ಸಂಘ ಪರಿವಾರದ ಕಟ್ಟಾ ಕಾರ್ಯಕರ್ತರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ನೆರೆಯ ಚೊಕ್ಕಾಡಿ ಹೈಸ್ಕೂಲ್‌ನಲ್ಲಿ ಮಾಡಿ, ನಂತರ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿದವರು. ಅವರು 1989ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆಗಲೇ ಒಂದು ಅವಧಿಗೆ ಶಾಸಕರಾಗಿದ್ದ ಕಾಂಗ್ರೆಸ್ಸಿನ ಕೆ.ಕುಶಲ ಅವರ ವಿರುದ್ಧ ಅಂಗಾರ ಸೋಲುಂಡರು. ನಂತರ 1994ರಲ್ಲಿ ಚುನಾವಣೆ ನಡೆದಾಗ ಬಿಜೆಪಿಯ ಎಸ್. ಅಂಗಾರ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ 6 ಬಾರಿಯಲ್ಲಿ 5 ಬಾರಿ ಗೆದ್ದು ಶಾಸಕರಾಗಿದ್ದರು.

***

ಡಿ.ವೇದವ್ಯಾಸ್ ಕಾಮತ್‌, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು: 40, ವಿದ್ಯಾರ್ಹತೆ: ಬಿ.ಕಾಂ., ಪತ್ನಿ: ವೃಂದಾ, ಮಕ್ಕಳು: ವರುಣ, ವೇದಾಂತ

ಗೌಡಸಾರಸ್ವತ ಬ್ರಾಹ್ಮಣ ಸಮುದಾಯದವರಾದ ವೇದವ್ಯಾಸ ಕಾಮತ್‌, ತಾವು ಆರಂಭಿಸಿದ ಸೇವಾಂಜಲಿ ಚಾರಿಟಬಲ್‌ ಟ್ರಸ್ಟ್‌ ಮೂಲಕ ಜಾತಿಯನ್ನು ಮೀರಿ ಸಮಾಜಮುಖಿಯಾಗಿ ಬೆಳೆಯಲು ಪ್ರಯತ್ನಿಸಿದವರು.

ಭುವನೇಂದ್ರ ಸಹಕಾರಿ ಸಂಘ ಆರಂಭಿಸಿ ಆರ್ಥಿಕವಾಗಿ ಸಂಘಟನಾತ್ಮಕ ಚಾತುರ್ಯದಿಂದ ಗುರುತಿಸಿಕೊಂಡಿದ್ದಾರೆ. ಮಂಗಳಾ ಕ್ಯಾಶ್ಯೂ ಇಂಡಸ್ಟ್ರೀಸ್‌ ಪಾಲುದಾರರಾದ ಅವರು, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿಯೂ ತೊಡಗಿಸಿಕೊಂಡವರು. ಪತ್ನಿ ವೃಂದಾ ಕಾಮತ್ ಮತ್ತು 6ನೇ ತರಗತಿಯಲ್ಲಿ ಓದುವ ವರುಣ್‌, 2ನೇ ತರಗತಿಯಲ್ಲಿ ಓದುವ ವೇದಾಂತ್‌  ಅವರ ಸ್ಫೂರ್ತಿ. ತಂದೆ ವಾಮನ್‌ ಕಾಮತ್‌, ತಾಯಿ ತಾರಾ ಕಾಮತ್‌ ಮತ್ತು  ಅಣ್ಣ ವಾಸು ಕಾಮತ್‌ ಕುಟುಂಬದ ಜೊತೆಗೆ ಅವಿಭಕ್ತ ಕುಟುಂಬದಲ್ಲಿ ವಾಸಿಸುವ ವೇದವ್ಯಾಸ್‌, ಬಿ.ಕಾಂ ಓದಿದ್ದಾರೆ. ಧಾರ್ಮಿಕ ವಿಧಿಗಳಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ.

ಚಿಕ್ಕಂದಿನಲ್ಲಿಯೇ ಆರೆಸ್ಸೆಸ್‌ ಸಂಪರ್ಕ ಹೊಂದಿದ್ದು, ಸೇವಾ ಕಾರ್ಯಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಅಶಕ್ತರಿಗೆ ಪ್ರತಿತಿಂಗಳು ಪಿಂಚಣಿ ನೀಡುವ, ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸವನ್ನು ಸೇವಾಂಜಲಿ ಟ್ರಸ್ಟ್‌ ಮೂಲಕ ಅವರು ಮಾಡುತ್ತಿದ್ದಾರೆ. ಬಿಜಪಿಯಲ್ಲಿ ವಿವಿಧ ಹುದ್ದೆ ನಿಭಾಯಿಸಿ, ಜಿಲ್ಲಾಧ್ಯಕ್ಷರಾಗಿ ಹಿರಿಯ ನಾಯಕರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಮುಂಬೈನಲ್ಲಿ ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗುವ ಸ್ಟೆಮ್‌ಸೆಲ್‌ ಹುಡುಕಾಟದ ಕೆಲಸ ಸಂದರ್ಭದಲ್ಲಿ ಹೆಚ್ಚು ಗಮನಸೆಳೆದಿದ್ದರು. ಇನ್ನೂ 40ರ ಹರೆಯದಲ್ಲಿರುವ ಅವರ ಹಿಂದೆ ಉತ್ಸಾಹಿ ಕಾರ್ಯಪಡೆ ಇದೆ.

**

ಯು.ರಾಜೇಶ್ ನಾಯ್ಕ್, ಬಂಟ್ವಾಳ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು– 59 ವರ್ಷ, ವಿದ್ಯಾರ್ಹತೆ– ಪದವಿ, ಪತ್ನಿ: ಉಷಾ, ಮಕ್ಕಳು: ರಿಷಬ್‌, ಉನ್ನತ

ಮಂಗಳೂರು ತಾಲ್ಲೂಕಿನ ಗಂಜಿಮಠದ ತೆಂಕ ಎಡಪದವು ಗ್ರಾಮದ ಉಳಿಪ್ಪಾಡಿಗುತ್ತು ಒಡ್ಡೂರು ಫಾರ್ಮ್‍ನಲ್ಲಿ ಬರಡು ಭೂಮಿಯನ್ನು ಹಸಿರಾಗಿಸಿದ ಸಾಹಸಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್‌ ಇಂದು ಬಂಟ್ವಾಳ ಕ್ಷೇತ್ರದ ವಿಧಾನಸಭಾ ಸದಸ್ಯ.

ಸುಮಾರು ನೂರು ಎಕರೆ ಒಣ ಜಮೀನು ಇದೀಗ ದಿನದ 24 ಗಂಟೆ ವಿದ್ಯುತ್ ಮತ್ತು ನೀರು ಸರಬರಾಜು ಮೂಲಕ ಹಚ್ಚ ಹಸಿರಿನ ನಂದ ನವನವಾಗಿ ಪರಿವರ್ತಿಸಿದ ರಾಜೇಶ್‌ ನಾಯ್ಕ್‌ ಬಿಎಸ್ಸಿ ಪದವೀಧರ. ಎರಡನೇ ಬಾರಿಯ ಸ್ಪರ್ಧೆಯಲ್ಲಿ ಆರು ಬಾರಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರನ್ನು ಪರಾಭವಗೊಳಿಸಿದ್ದಾರೆ.

ಹೈನುಗಾರಿಕೆ, ಕೃಷಿ, ತೋಟಗಾರಿಕೆ ಮಾತ್ರವಲ್ಲದೆ ನಿರಂತರ ವಿದ್ಯುತ್ ನೀರು ಪೂರೈಕೆಯಲ್ಲಿ ಸ್ವಾವಲಂಬನೆ ಮೂಡಿಸುವ ಮೂಲಕ ಗಮನ ಸೆಳೆದಿದ್ದರು. 27 ವರ್ಷಗಳಿಂದ ಸಾವಯವ ಕೃಷಿಯಲ್ಲಿ ವೈಜ್ಞಾನಿಕ ದೃಷ್ಟಿಕೋನದಿಂದ ಬೆಳೆಸಿಕೊಂಡು ಸ್ವಾವಲಂಬಿ ಸಾವಯವ ಕೃಷಿ ಮಾಡು ತ್ತಿದ್ದಾರೆ. ಬರಡು ಭೂಮಿಯಾದ ಒಡ್ಡೂರಿನಲ್ಲಿ ಒಡ್ಡೂರುಫಾರಂ ನಿರ್ಮಿಸಿ, ಮಾದರಿ ಕೃಷಿ ಮೂಲಕ ಇತರ ರೈತರಿಗೆ ಪ್ರೇರೇಪಣೆಯಾಗಿದ್ದಾರೆ. ಸ್ವತಃ ಕ್ರೀಡಾಪಟುವಾದ ಇವರು ಮನೆ ಯಂಗಳದಲ್ಲಿಯೇ ಕ್ರೀಡಾಂಗಣ ನಿರ್ಮಿಸಿ, ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.

**

ಯು.ಟಿ. ಅಹ್ಮದ್‌ ಖಾದರ್‌, ಮಂಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ವಯಸ್ಸು: 49, ವಿದ್ಯಾರ್ಹತೆ: ಎಲ್‌ಎಲ್‌ಬಿ, ಪತ್ನಿ: ಲಮೀಸ್‌ ಖಾದರ್‌, ಮಕ್ಕಳು: ಹವ್ವಾ

ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್‌ ಕುಟುಂಬ ಗೆಲುವಿನ ನಾಗಾಲೋಟ ಮುಂದುವರಿದಿದ್ದು, ಮತ್ತೊಮ್ಮೆ ಕ್ಷೇತ್ರದಲ್ಲಿ ಯು.ಟಿ. ಖಾದರ್‌ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಪಾಲಿನ ಭದ್ರಕೋಟೆ ಉಳ್ಳಾಲ ಕ್ಷೇತ್ರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಾಸಕ ಯು.ಟಿ. ಖಾದರ್ ಕುಟುಂಬ ಸಾಕಷ್ಟು ಒಡನಾಟ ಇಟ್ಟುಕೊಂಡಿದೆ. ಇಲ್ಲಿ ಖಾದರ್ ತಂದೆ ಯು.ಟಿ ಫರೀದ್ 1972, 1978, 1999ಮತ್ತು 2004ರಲ್ಲಿ ಗೆಲುವು ಸಾಧಿಸಿದ್ದರು. ಮಧ್ಯೆ ಗೆದ್ದಿದ್ದು ಕಾಂಗ್ರೆಸ್ಸೇ ಆದರೂ ಫರೀದ್‌ ಅವರಿಗೆ ಟಿಕೆಟ್ ನೀಡಿರಲಿಲ್ಲ.

2004ರಲ್ಲಿ ಗೆದ್ದ ನಂತರ ಫರೀದ್ 2007ರಲ್ಲಿ ನಿಧನರಾದರು. ಆಗ ಅವರ ಜಾಗದಲ್ಲಿ ಮಗ ಯು.ಟಿ. ಖಾದರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು.

2007ರಲ್ಲಿ ಇಲ್ಲಿ ಗೆದ್ದ ಖಾದರ್, 2008 ಮತ್ತು 2013ರಲ್ಲೂ ಗೆಲುವು ಸಾಧಿಸಿದರು. ಈ ಮೂಲಕ ಕಳೆದ 6 ಚುನಾವಣೆಗಳಲ್ಲಿ ಆರನ್ನೂ ಖಾದರ್ ಕುಟುಂಬ ಗೆದ್ದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಖಾದರ್, 2007ರಲ್ಲಿ ಗೆದ್ದಾಗ ಇದ್ದ 6 ಸಾವಿರ ಮತಗಳ ಅಂತರವನ್ನು 2013ರ ಹೊತ್ತಿಗೆ ಬರೋಬ್ಬರಿ 30 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದರು. 2013ರಲ್ಲಿ ಅವರು 69,450 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಚಂದ್ರಹಾಸ್ ಉಳ್ಳಾಲ್ 40,339 ಮತಗಳನ್ನು ಪಡೆದಿದ್ದರು.

**

ಸಂಜೀವ್ ಮಠಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ, ವಯಸ್ಸು: 57, ವಿದ್ಯಾರ್ಹತೆ: ಬಿಕಾಂ, ಪತ್ನಿ: ಹೇಮಲತಾ, ಮಕ್ಕಳು: ಶ್ರೇಯಾ, ಶಶಾಂಕ

ಪುತ್ತೂರು ತಾಲ್ಲೂಕಿನ ಹಿರೇಬಂಡಾಡಿ ಗ್ರಾಮ ಮಠಂದೂರಿನವರಾದ ಸಂಜೀವ ಮಠಂದೂರು ಎರಡನೇ ಪ್ರಯತ್ನದಲ್ಲಿ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.ವೃತ್ತಿಯಲ್ಲಿ ಕೃಷಿಕರಾಗಿದ್ದರೂ, ಸಂಘಟನೆಗಳ ಜತೆಗೆ ಬೆಳೆದುಬಂದ ಸಂಜೀವ್‌ ಮಠಂದೂರು, ಸದ್ಯಕ್ಕೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಕಳೆದ ಬಾರಿ ಶಕುಂತಳಾ ಶೆಟ್ಟಿ ವಿರುದ್ಧ ಪರಾಭವಗೊಂಡಿದ್ದ ಅವರು, ಈ ಬಾರಿ ಪೈಪೋಟಿಯ ಮಧ್ಯೆಯೂ ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry