ಜೈಕಾರ ಹಾಕಿ ದಣಿದ ಕೇಸರಿ ಪಡೆ

7
ಮತಗಟ್ಟೆಯ ಸುತ್ತ ಸೋಲುಗೆಲುವಿನ ನೋಟ

ಜೈಕಾರ ಹಾಕಿ ದಣಿದ ಕೇಸರಿ ಪಡೆ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ ಗೆಲುವಿನಿಂದ ಕಾರ್ಯಕರ್ತರ ಹುಮ್ಮಸ್ಸು ನೂರ್ಮಡಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಕಟ್‌ಔಟ್‌ನೊಂದಿಗೆ ಬಂದಿದ್ದ ಕಾರ್ಯಕರ್ತರು ಬೋಂದೆಲ್‌ನ ಮತ ಎಣಿಕೆ ಕೇಂದ್ರದ ಮುಂದೆ ಜಾಗಟೆ ಬಾರಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು.

ಗೆದ್ದ ಅಭ್ಯರ್ಥಿಗಳು ಕೇಂದ್ರದಿಂದ ಹೊರಬರುತ್ತಿದ್ದಂತೆಯೇ ಘೋಷಣೆ ಹಾಕುತ್ತಾ ಅವರನ್ನು ಸ್ವಾಗತಿಸಿದರು. ಸುಮಾರು 11 ಗಂಟೆಗೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ವೈ. ಭರತ್‌ ಶೆಟ್ಟಿ ಮುನ್ನಡೆಯ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಮೊಹಿಯುದ್ದೀನ್‌ ಬಾವಾ ಅವರು ಮತ ಎಣಿಕೆ ಕೇಂದ್ರದಿಂದ ಹೊರನಡೆದರು. ಆ ವೇಳೆಗೆ ತಮ್ಮ ಮತ ಎಣಿಕೆ ಕೇಂದ್ರದಿಂದ ತುಸು ದೂರದಲ್ಲಿರುವ ತಮ್ಮ ಮನೆಯಲ್ಲಿಯೇ ಟಿವಿಯಲ್ಲಿ ಫಲಿತಾಂಶ ಗಮನಿಸುತ್ತಿದ್ದ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್‌ ಮತ ಎಣಿಕೆ ಕೇಂದ್ರದತ್ತ ನಡೆದು ಬಂದರು.

ರಾಜ್ಯದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸುತ್ತಿದೆ ಎಂಬ ಸುದ್ದಿ ಬೆಳಿಗ್ಗೆ ಟಿವಿಯಲ್ಲಿ ಕಂಡ ಕಾರ್ಯಕರ್ತರ ಉತ್ಸಾಹ ಮಧ್ಯಾಹ್ನದ ವೇಳೆಗೆ ತುಸು ತಗ್ಗಿತ್ತು. ತಮ್ಮ ನಾಯಕರು ವಿಜಯದ ನಗೆ ಬೀರುತ್ತಿರುವಾಗ ಅವರೊಡನೆ ಸೆಲ್ಫಿ ತೆಗೆದು ಸಂಭ್ರಮಿಸುತ್ತ ಕೇಂದ್ರದಿಂದ ತೆರಳಿದರು. ’ಆಯಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತಮ್ಮ ನೆಚ್ಚಿನ ವಿಜಯಿ ಅಭ್ಯರ್ಥಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲು ಓಪನ್‌ ಜೀಪ್ ಸಿದ್ಧಪಡಿಸಿ ತಂದಿದ್ದರು. ಬಹುತೇಕ ಎಲ್ಲ ಅಭ್ಯರ್ಥಿಗಳಿಗೆ ಒಂದರಂತೆ ವಾಹನ ಸಿದ್ಧಗೊಂಡಿತ್ತು. ಅಭ್ಯರ್ಥಿಗಳು ಹೊರ ಬರುತ್ತಲೇ ಅವರನ್ನು ಎತ್ತಿ ಕುಣಿದಾಡಿದ ಕಾರ್ಯಕರ್ತರು ಬಳಿಕ ಜೀಪ್‍ನಲ್ಲಿ ಜಯಘೋಷ ಹಾಕಿ ಕರೆದೊಯ್ದರು.

ಮತಎಣಿಕೆ ಪೂರ್ತಿ ಮುಗಿಯುವ ಮುನ್ನವೇ ನಗರದ ಎಲ್ಲೆಡೆ ಉತ್ತರ ಕ್ಷೇತ್ರದ  ಡಾ. ಭರತ್‌ ಶೆಟ್ಟಿ ಮತ್ತು ದ‌ಕ್ಷಿಣ ಕ್ಷೇತ್ರದ ವೇದವ್ಯಾಸ ಕಾಮತ್‌ ಅವರ ಭಾರಿ ಗಾತ್ರದ ಫ್ಲೆಕ್ಸ್‌ಗಳು ಕಾಣಿಸಿಕೊಂಡವು. 

ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್‌ ಕುಮಾರ್ ರೈ ಬೋಳಿಯಾರ್‌ ಅವರು ಸೋಲು ಕಂಡರೂ ವಿಜಯದ ಹುಮ್ಮಸ್ಸಿನಲ್ಲಿಯೇ ಎಣಿಕೆ ಕೇಂದ್ರದಿಂದ ಹೊರಬಂದರು. ಸೋತ ಅಭ್ಯರ್ಥಿಯಾದರೂ ಅವರ ಸುತ್ತ ಕಾರ್ಯಕರ್ತರ ದಂಡೇ ಸೇರಿತ್ತು. ಆದರೆ ಕಾಂಗ್ರೆಸ್‌ನ ಯು.ಟಿ. ಖಾದರ್‌ ಅವರು ಗೆಲುವು ಸಾಧಿಸಿದರೂ ಹೆಚ್ಚಿನ ಸಂಭ್ರಮವಿಲ್ಲದೇ ಮಾಧ್ಯಮದವರೊಡನೆ ತೆರಳಿದರು.

ದಕ್ಷಿಣದಲ್ಲಿ ಸ್ಪರ್ಧಿಸಿದ್ದ ಶ್ರೀಕರ ಪ್ರಭು, ಧರ್ಮೇಂದ್ರ ಅವರು ಏಕಾಂಗಿಯಾಗಿ ಮತಗಟ್ಟೆಯಿಂದ ತೆರಳಿದರು. ಬೆಳಿಗ್ಗೆ ಎಣಿಕೆ ಕೇಂದ್ರದ ಬಳಿ ಇದ್ದ ಕಾಂಗ್ರೆಸ್‌ ಕಾರ್ಯಕರ್ತರು ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆಯೇ ಒಬ್ಬೊಬ್ಬರಾಗಿ ತೆರಳಿದರು. ಕಾಂಗ್ರೆಸ್‌ನ ಬಾವುಟಗಳು ರಸ್ತೆ ಬದಿಯಲ್ಲಿ ಬಿದ್ದಿದ್ದವು. ಹಲವರು ಕಾಂಗ್ರೆಸ್‌ ನಾಯಕರನ್ನು ಶಪಿಸುತ್ತ ತೆರಳಿದರು.

ಇವಿಎಂ ದೂರು, ರೈ ಕಾರಿಗೆ ಗುದ್ದು: ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಬೋಂದೆಲ್ ಮತ ಎಣಿಕೆ ಕೇಂದ್ರಕ್ಕೆ ಸುಮಾರು 12 ಗಂಟೆಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿ ಕಾರನ್ನು ಮುಂದೆ ಚಲಿಸಲು ಅಡ್ಡಿಪಡಿಸಿದರು. ಕೆಲವು ಕಾರ್ಯಕರ್ತರು ಕಾರಿಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಹಿಂದೂ ವಿರೋಧಿ ಎನ್ನುವ ಧಿಕ್ಕಾರ ಕೂಗುತ್ತಲೇ ಇದ್ದರು. ಬಿಸಿಲಿನ ಝಳವನ್ನು ಲೆಕ್ಕಿಸದೇ ಕಾರ್ಯಕರ್ತರು ಕಾಯುತ್ತ, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಪೊಲೀಸರು ತಮ್ಮ ವಾಹನದೊಳಗೆ ತೆರಳಿ ದಣಿವಾರಿಸಿಕೊಂಡರು.

ಆದರೆ ಸೋಲು ಸ್ಪಷ್ಟವಾಗುತ್ತಲೇ ಮತಎಣಿಕೆ ಕೇಂದ್ರದ ಬಳಿಗೆ ಬಂದ ಸಚಿವ ರಮಾನಾಥ ರೈ, ಶಾಸಕ ಜೆ.ಆರ್‌. ಲೋಬೊ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಇವಿಎಂ ಬಗ್ಗೆ ತಮಗೆ ಸಂಶಯ ಮೂಡಿದೆ. ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಎಂದರು. ತುಸುವೇ ಹೊತ್ತಿನಲ್ಲಿ ವಾಪಸ್‌ ಬಂದ ಮೊಹಿಯುದ್ದೀನ್‌ ಬಾವಾ ಕೂಡ ಇವಿಎಂ ಬಗ್ಗೆ ಅಸಮಾಧಾನವಿದೆ ಎಂದರು.

ಭಿಕ್ಷಾಟನೆ:  ಎರಡೂ ಕಾಲಿನ ಬಲ ಕಳೆದುಕೊಂಡಿದ್ದ ಉತ್ತರ ಭಾರತದ ವಿಕಲಚೇತನ ವೃದ್ಧರೊಬ್ಬರು ಜನಸ್ತೋಮದ ನಡುವೆ ಭಿಕ್ಷೆ ಬೇಡುತ್ತಿದ್ದರು. ಬಿಸಿಲಿನ ತಾಪದ ನಡುವೆಯೂ ಅವರು ಕಾರ್ಯಕರ್ತರ ನಡುವೆ ತೆರಳಿ ಮನವಿ ಮಾಡುತ್ತಿದ್ದರು.

ದಾದ ಮಾಟ ಮಲ್ತರ್‌ ಮಾರ್ರೆ

ಮತ ಎಣಿಕೆ ಕೇಂದ್ರದಿಂದ ಹೊರಬಂದ ಶಕುಂತಳಾ ಶೆಟ್ಟಿ ಅವರು ಸೋಲಿನ ಕಾರಣಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡು ಬಳಿಕ ಅಲ್ಲೇ ನಿಂತಿದ್ದ ತಮ್ಮೂರಿನ ಬಿಜೆಪಿ ಕಾರ್ಯಕರ್ತರೊಡನೆ ಮಾತನಾಡಿದರು. ‘ದಾದ ಮಾಟ ಮಾಲ್ತರ್‌ ಮಾರ್ರೆ ನಿಕುಲ’ ಎಂದು ಚಟಾಕಿ ಹಾರಿಸಿ, ಅವರೊಡನೆ ಕುಶಲ ಮಾತನಾಡಿ ಹೊರಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry