ಬುಧವಾರ, ಮಾರ್ಚ್ 3, 2021
19 °C

ಕೋಟೆ ಭೇದಿಸದ ದೊರೆ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ಕೋಟೆ ಭೇದಿಸದ ದೊರೆ

ಮೈಸೂರು: ಚಾಮುಂಡೇಶ್ವರಿ ಕೋಟೆ ಭೇದಿಸಿ ಹೊರ ಬರಲು ಸಿದ್ದರಾಮಯ್ಯ ಅವರಿಗೆ ಕೊನೆಗೂ ಸಾಧ್ಯವಾಗಲಿಲ್ಲ. ತಮ್ಮ ಸುತ್ತ ಕಟ್ಟಿಕೊಂಡಿದ್ದ ಕೋಟೆಯೇ ಗೆಲುವಿಗೆ ಮುಳುವಾಯಿತು.

ಸೋಲಿನ ಭಯದಿಂದಲೇ ಬಾದಾಮಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು. ಈಗ ಅದು ನಿಜವಾಗಿದೆ. ಗೆಲುವು ಕಷ್ಟಕರ ಎಂಬ ವಿಚಾರ ಗೊತ್ತಿದ್ದೂ, ಚಾಮುಂಡೇಶ್ವರಿಯಲ್ಲಿ ಸ್ಪರ್ಧೆಗೆ ಧೈರ್ಯ ಮಾಡಿದ್ದರು. ಕ್ಷೇತ್ರದ ಜನರು ಕೈಬಿಡುವುದಿಲ್ಲ ಎಂಬ ನಂಬಿಕೆಗೆ ಫಲ ಸಿಕ್ಕಿಲ್ಲ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಸಮಯದಲ್ಲಿ 2006ರಲ್ಲಿ ನಡೆದ ಉಪಚುನಾವಣೆಯಲ್ಲಿ ಕೇವಲ 257 ಮತಗಳ ಅಂತರದಿಂದ ಗೆಲುವಿನ ದಡ ಸೇರಿದ್ದರು. ನಂತರ ಈ ಕ್ಷೇತ್ರದ ಸಹವಾಸವೇ ಬೇಡವೆಂದು ವರುಣಾದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಈ ಸಲ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಸಲುವಾಗಿ ಕ್ಷೇತ್ರ ಬದಲಿಸಿದರು. ಹತ್ತು ವರ್ಷಗಳ ನಂತರ ಮತ್ತೊಮ್ಮೆ ಸ್ಪರ್ಧಿಸಿದರೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ.

ಭೇದಿಸಲಾಗದ ಕೋಟೆ: ಚಾಮುಂಡೇಶ್ವರಿ, ವರುಣಾ ಹೆಸರಿಗಷ್ಟೇ ಪ್ರತ್ಯೇಕ ಕ್ಷೇತ್ರಗಳಾದರೂ ಎರಡೂ ಒಂದಕ್ಕೊಂದು ಬೆಸೆದುಕೊಂಡಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ತಮ್ಮ ಸುತ್ತ ಭದ್ರವಾದ ಕೋಟೆ ಕಟ್ಟಿಕೊಂಡರು. ಈ ಕೋಟೆಯನ್ನು ಭೇದಿಸಲು ಎರಡೂ ಕ್ಷೇತ್ರದ ಜನರಿಗೆ ಸಾಧ್ಯವಾಗಲಿಲ್ಲ. ತಮ್ಮ ಕಷ್ಟ ಸುಖ, ಸಮಸ್ಯೆ ಹೇಳಿಕೊಳ್ಳುವ ಅವಕಾಶ ಸಿಗಲಿಲ್ಲ. ಜನರನ್ನು ಹತ್ತಿರ ಸುಳಿಯಲು ಬಿಟ್ಟುಕೊಳ್ಳಲಿಲ್ಲ. ದಿನಗಳು ಕಳೆದಂತೆ ಕ್ಷೇತ್ರದ ಜನರಿಂದ ದೂರವಾಗುತ್ತಲೇ ಸಾಗಿದ್ದು, ಸೋಲಿಗೆ ಹತ್ತಿರವಾಗಿದ್ದರು.

ಇದು ಪ್ರಚಾರದ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು. ರಾಜ್ಯದ ದೊರೆ ಬಂದರೂ ಹಳ್ಳಿಯ ಜನರು ಹತ್ತಿರ ಬರಲಿಲ್ಲ. ಮೈಸೂರು ಮನೆಯಿಂದ ಪ್ರಚಾರಕ್ಕೆ ಹೊರಟಾಗ ಹಿಂಬಾಲಿಸುತ್ತಿದ್ದವರನ್ನು ಬಿಟ್ಟರೆ, ಹತ್ತಿರ ಬರಬೇಕಾದವರು ದೂರವೇ ಉಳಿದರು. ನಾವು ಬಂದಾಗ ನಮ್ಮನ್ನು ದೂರ ತಳ್ಳಿದ್ದೀರಿ, ಈಗ ನಾವೇಕೆ ನಿಮ್ಮ ಬಳಿ ಬರಬೇಕು ಎಂದು ತಿರಸ್ಕರಿಸಿದರು.

ಲಿಂಗಾಯತ ಧರ್ಮ: ಚಾಮುಂಡೇಶ್ವರಿ ಸೇರಿದಂತೆ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಲಿಂಗಾಯತ– ವೀರಶೈವ ಧರ್ಮದ ಪರಿಣಾಮ ಬೀರಿದೆ. ಸಮುದಾಯವನ್ನು ಒಡೆದರು ಎಂಬ ಭಾವನೆ ದಟ್ಟವಾಗಿತ್ತು. ಚಾಮುಂಡೇಶ್ವರಿಯಲ್ಲಿ ಬಹುಸಂಖ್ಯಾತ ಒಕ್ಕಲಿಗ ಮತದಾರರ ಜತೆಗೆ ಲಿಂಗಾಯತ– ವೀರಶೈವರು ಕೈಜೋಡಿಸಿದರು. ಇದು ಸೋಲಿಗೆ ದೊಡ್ಡ ಕೊಡುಗೆ ನೀಡಿದೆ.

ಮತ್ತೊಮ್ಮೆ ‘ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳಿಕೊಂಡು ಪ್ರಚಾರ ನಡೆಸಿದರು. 2013ರಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು. ಈಗ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವ ವಿಚಾರ ಮುನ್ನೆಲೆಗೆ ಬಂದಿದ್ದು, ಈ ಅವಕಾಶವನ್ನೂ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಭಾವನೆ ದಲಿತರಲ್ಲಿ ಮೂಡಿತ್ತು. ಹಾಗಾಗಿ ದಲಿತರ ಮತಗಳು ಚದುರುವಂತೆ ಮಾಡಿದ್ದು, ಸೋಲಿಗೆ ಮತ್ತೊಂದು ಕಾರಣ.

ಪಲಾಯನ: ಪ್ರಮುಖವಾಗಿ ಫಲಾಯನವಾದ ಮಾಡಿದ್ದು, ಪರಿಣಾಮ ಬೀರಿದೆ. ‘ಸೋಲು–ಗೆಲುವು ಏನೇ ಇದ್ದರೂ ನಿಮ್ಮನ್ನೇ ನಂಬಿದ್ದೇನೆ. ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ಮುಖ್ಯಮಂತ್ರಿಯಾಗಿ ನಿಮ್ಮ ಸೇವೆ ಮಾಡಿದ್ದೇನೆ. ನನ್ನನ್ನು ಮತ್ತೊಮ್ಮೆ ಗೆಲ್ಲಿಸಿಕೊಡಿ’ ಎಂದು ಮತದಾರರ ಮನದ ಬಾಗಿಲು ತಟ್ಟಿದ್ದರೆ ಮುಖ್ಯಮಂತ್ರಿ ಆಗಿದ್ದವರೊಬ್ಬರನ್ನು ಸೋಲಿಸುವಂತಹ ಕಲ್ಲು ಹೃದಯಿಗಳಾಗಿರಲಿಲ್ಲ. ಜನರಿಗೆ ಹತ್ತಿರವಾಗಿದ್ದರೆ ಎಂತಹ ಗಟ್ಟಿ ಮನಸ್ಸೂ ಕರಗುತಿತ್ತು. ಅಂತಹ ಪ್ರಯತ್ನವನ್ನೇ ಮಾಡದೆ, ತಿರಸ್ಕರಿಸಿ ಬಾದಾಮಿಯತ್ತ ಹೋದರು. ಈ ವಿಚಾರ ಬಹುತೇಕರ ಬಾಯಲ್ಲಿ ಹರಿದಾಡಿತ್ತು.

‘ನಾವೂ ಅವರಿಗೆ ಬೇಡವಾದೆವು, ನಮಗೂ ಅವರು ಬೇಡವಾದರು’ ಎಂಬ ಭಾವನೆ ಗಟ್ಟಿಗೊಂಡಿತು. ಈ ವಾತಾವರಣವನ್ನು ತಿಳಿಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ಅಥವಾ ಅವರ ಬೆಂಬಲಿಗರು ಮಾಡಲಿಲ್ಲ. ಕೊನೆಗೂ ಮತದಾರರ ಮನ ಮುಟ್ಟಲಿಲ್ಲ. ಅದರ ಪರಿಣಾಮವೇ ಸೋಲು.

ಇಂದಿನ ಚುನಾವಣೆ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 8 ಬಾರಿ ಸ್ಪರ್ಧಿಸಿ 5 ಸಲ ಗೆದ್ದಿದ್ದಾರೆ. 3 ಬಾರಿ ಸೋತಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಗೆಲುವಿನ ನಗೆ ಬೀರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.