ಕಾಂಗ್ರೆಸ್‌ ಧೂಳೀಪಟ; ಚಾಮುಂಡಿ ಏರಿದ ಜೆಡಿಎಸ್

7
ಜಿಲ್ಲೆಯಲ್ಲಿ ಜೆಡಿಎಸ್‌ಗೆ 5, ಕಾಂಗ್ರೆಸ್, ಬಿಜೆಪಿಗೆ ತಲಾ 3 ಸ್ಥಾನ

ಕಾಂಗ್ರೆಸ್‌ ಧೂಳೀಪಟ; ಚಾಮುಂಡಿ ಏರಿದ ಜೆಡಿಎಸ್

Published:
Updated:
ಕಾಂಗ್ರೆಸ್‌ ಧೂಳೀಪಟ; ಚಾಮುಂಡಿ ಏರಿದ ಜೆಡಿಎಸ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಜೆಡಿಎಸ್ ಚೇತರಿಸಿಕೊಂಡಿದ್ದು, ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ಬಿಜೆಪಿ ಶೂನ್ಯದಿಂದ ಮೇಲೆ ಬಂದಿದೆ.

ಕಾಂಗ್ರೆಸ್ 8 ಸ್ಥಾನದಿಂದ 3ಕ್ಕೆ ಕುಸಿದಿದೆ. ಜೆಡಿಎಸ್ 3ರಿಂದ 5ಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಯಾವೊಬ್ಬ ಶಾಸಕರೂ ಇರಲಿಲ್ಲ. ಒಮ್ಮೆಲೇ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಮೈಸೂರು ಭಾಗದಲ್ಲಿ ತನ್ನ ಶಕ್ತಿ ಕುಂದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಕಡುವೈರಿ ಎಂದೇ ಬಿಂಬಿತವಾಗಿರುವ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮಣಿಸಲು ವಿರೋಧಿಗಳು ಒಂದಾಗಿರುವುದು ಫಲಿತಾಂಶದಲ್ಲಿ ಪ್ರತಿಬಿಂಬಿತವಾಗುತ್ತದೆ.

2006ರ ಉಪಚುನಾವಣೆ ಹಾಗೂ ನಂತರದ ಎಲ್ಲಾ ಬೆಳವಣಿಗೆಗೆ ಚಾಮುಂಡೇಶ್ವರಿಯಲ್ಲೇ ಉತ್ತರ ನೀಡಲಾಗಿದೆ ಎಂದು ಜೆಡಿಎಸ್ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ದೇವೇಗೌಡ, ಕುಮಾರಸ್ವಾಮಿ ಪದೇ–ಪದೇ ಮೈಸೂರಿಗೆ ಬಂದು ಮಾಡಿದ ಪ್ರಯತ್ನ, ತಂತ್ರಗಾರಿಕೆ ಫಲನೀಡಿದೆ.

ಕುಸಿದ ಕಾಂಗ್ರೆಸ್‌: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 8ರಲ್ಲಿ ಜಯ ದಾಖಲಿಸುವ ಮೂಲಕ ಪ್ರಾಬಲ್ಯ ಮರೆದಿತ್ತು. ಅಧಿಕ ಸ್ಥಾನಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತಿರ ಮಾಡಿತ್ತು. ಆದರೆ, ಈ ಸಲ ತೀವ್ರ ಹಿನ್ನಡೆಯಾಗಿದ್ದು, 8ರಿಂದ 3 ಕ್ಷೇತ್ರಕ್ಕೆ ಸೀಮಿತಗೊಂಡಿದೆ.

ಚಾಮುಂಡೇಶ್ವರಿ, ಕೆ.ಆರ್.ನಗರ, ಎಚ್.ಡಿ.ಕೋಟೆಯನ್ನು ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್ ಶಾಸಕರು ಇದ್ದರು. ಈ ಸಲ ವರುಣಾ, ನರಸಿಂಹರಾಜ ಕ್ಷೇತ್ರ ಉಳಿಸಿಕೊಂಡಿದ್ದು, ಎಚ್.ಡಿ.ಕೋಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತಿ.ನರಸೀಪುರ, ಚಾಮರಾಜ, ಕೃಷ್ಣರಾಜ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಕ್ಷೇತ್ರಗಳು ಕೈತಪ್ಪಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರೈಸಿದ್ದರು. ಕಾಂಗ್ರೆಸ್ ಶಕ್ತಿ ದೊಡ್ಡ ಪ್ರಮಾಣದಲ್ಲಿ ಗೋಚರಿಸಿತ್ತು. ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಹೇಳಿಕೊಂಡಿದ್ದರು. ಆದರೆ, ಅವರ ಹೇಳಿಕೆ ನಿಜವಾಗಿಲ್ಲ. ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗಿದೆ. ತಿ.ನರಸೀಪುರ, ಕೃಷ್ಣರಾಜ, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ಅದು ಸ್ಪಷ್ಟವಾಗಿ ಗೋಚರಿಸಿದೆ.

ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಾದ ಹೊಣೆಯನ್ನು ಸಿದ್ದರಾಮಯ್ಯ ಹೊತ್ತಿದ್ದರು. ಸರ್ಕಾರದ ಸಾಧನೆ, ನೀಡಿದ ‘ಭಾಗ್ಯ’ಗಳು ಹೆಚ್ಚು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಸೋಲಿಗೆ ಎಲ್ಲರೂ ಬೊಟ್ಟು ಮಾಡುತ್ತಿರುವುದು ಸಿದ್ದರಾಮಯ್ಯ ಕಡೆಗೆ. ಈ ಹೊಣೆಯನ್ನು ಅವರೇ ಹೊರಬೇಕಾಗಿದೆ. ಸಚಿವ ಸಂಪುಟ ಪುನರ್ ರಚನೆ ನಂತರ ಜಿಲ್ಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಸಹ ಸೋಲಿಗೆ ಸಾಕಷ್ಟು ಕೊಡುಗೆ ನೀಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿದರೆ ಪ್ರಮುಖ ನಾಯಕರು ಪ್ರಚಾರಕ್ಕೆ ಬರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಒಮ್ಮೆ ನೆಪಮಾತ್ರಕ್ಕೆ ಬಂದು ಹೋದರು. ಅದು ಬಿಟ್ಟರೆ ಮತಗಳನ್ನು ಸೆಳೆಯುವ ಶಕ್ತಿ ಇರುವ ನಾಯಕರು ಪ್ರಚಾರಕ್ಕೆ ಬರಲಿಲ್ಲ. ಎಲ್ಲಾ ಹೊಣೆಯನ್ನೂ ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದರು. ಇತರ ನಾಯಕರು ಬಂದಿದ್ದರೆ ಕಡಿಮೆ ಅಂತರದಿಂದ ಸೋತಿರುವ ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.

ಹೆಚ್ಚಿದ ಜೆಡಿಎಸ್‌ ಬಲ: ಜಿಲ್ಲೆಯಲ್ಲಿ ಜೆಡಿಎಸ್ ಸ್ಥಿತಿ ಕುಸಿಯುತ್ತಲೇ ಸಾಗಿತ್ತು. ಇನ್ನು ಮೇಲೇಳುವುದು ಕಷ್ಟಕರ ಎಂಬ ವಾತಾವರಣ ರಾಜಕೀಯ ವಲಯದಲ್ಲಿ ಮೂಡಿತ್ತು. ಈಗ ಒಮ್ಮೆಲೇ ತರುಣನಂತೆ ಎದ್ದುನಿಂತಿದೆ. ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತೀವ್ರ ಹಿನ್ನಡೆ ಅನುಭವಿಸಿದ್ದು, ಜಿ.ಟಿ.ದೇವೇಗೌಡ ಭಾರಿ ಅಂತರದ ಗೆಲುವು ದಾಖಲಿಸುವ ಮೂಲಕ ಕ್ಷೇತ್ರ ಉಳಿಸಿಕೊಂಡಿದ್ದಾರೆ. ಕೆ.ಆರ್.ನಗರ ಕ್ಷೇತ್ರ ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ಬಂದಿದೆ.

ಎಚ್.ಡಿ.ಕೋಟೆ ಕ್ಷೇತ್ರವನ್ನು ಕಳೆದುಕೊಂಡಿದೆ. ಚಿಕ್ಕಮಾದು ನಿಧನದ ನಂತರ, ಅವರ ಪುತ್ರ ಅನಿಲ್ ಕುಮಾರ್ ಕಾಂಗ್ರೆಸ್ ಸೇರಿದರು. ಮಾಜಿ ಶಾಸಕ ಚಿಕ್ಕಣ್ಣ ಅವರಿಗೆ ಟಿಕೆಟ್ ನೀಡಿದರೂ ಗೆಲ್ಲಿಸಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಇಲ್ಲಿ ಸಂಸದ ಆರ್‌.ಧ್ರುವನಾರಾಯಣ ಪ್ರಯತ್ನ ಗೆಲುವು ತಂದುಕೊಟ್ಟಿದೆ. ಆದರೆ, ನಂಜನಗೂಡಿನಲ್ಲಿ ಸಂಸದರ ಪ್ರಯತ್ನ ಪಲಿಸಿಲ್ಲ.

ತಿ.ನರಸೀಪುರದಲ್ಲೂ ಜೆಡಿಎಸ್‌ನ ಅಶ್ವಿನ್ ಕುಮಾರ್ ಭಾರಿ ಗೆಲುವು ದಾಖಲಿಸಿದ್ದಾರೆ. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೀನಾಯ ಸೋಲು ಕಂಡಿದ್ದಾರೆ. ಆರಂಭದಲ್ಲಿ ಮಹದೇವಪ್ಪ ಜತೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈ ಎಲ್ಲಾ ಅಪವಾದಗಳನ್ನೂ ಮೀರಿ ಅಶ್ವಿನ್ ಕುಮಾರ್ ಜಯಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದ ಎಚ್.ವಿಶ್ವನಾಥ್, ಹುಣಸೂರು ಕ್ಷೇತ್ರದಲ್ಲಿ ಜಯದ ನಗೆ ಬೀರಿದ್ದಾರೆ.

ಪಿರಿಯಾಪಟ್ಟಣ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಮ್ಮೆ ಗೆದ್ದವರೇ ಮತ್ತೆ ಗೆಲ್ಲುತ್ತಾರೆ. ಒಂದು ಸಲ ಸೋತವರು ಮತ್ತೆ ಗೆಲ್ಲುವುದಿಲ್ಲ. ಹೊಸಬರಷ್ಟೇ ಆಯ್ಕೆ ಆಗಬೇಕು ಎಂಬ ಮನಸ್ಥಿಯನ್ನು ಕೆ.ಮಹದೇವ ಬಲಿಸಿದ್ದಾರೆ.

ಬಿಜೆಪಿ ಸಾಧನೆ:  ಕಳೆದ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಬಿಜೆಪಿ, ಈಗ ಒಮ್ಮೆಲೆ ಮೂರು ಕ್ಷೇತ್ರಗಳಲ್ಲಿ ಕಮಲ ಅರಳಿಸಿದೆ. ಕೃಷ್ಣರಾಜ ಕ್ಷೇತ್ರವನ್ನು ಹಿಂದೆ ಎಸ್.ಎ.ರಾಮದಾಸ್ ಪ್ರತಿನಿಧಿಸುತ್ತಿದ್ದರು. ಈಗ ಮತ್ತೊಮ್ಮೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚಾಮರಾಜ ಕ್ಷೇತ್ರದಲ್ಲೂ ಬಿಜೆಪಿ ಶಾಸಕರೇ ಆಯ್ಕೆಯಾಗುತ್ತಾ ಬಂದಿದ್ದರು. ಕಳೆದ ಸಲ ಕಾಂಗ್ರೆಸ್‌ನ ವಾಸು ಜಯ ಸಾಧಿಸಿದ್ದರು. ಈಗ ಮತ್ತೊಮ್ಮೆ ಬಿಜೆಪಿ ಹಿಡಿತ ಸಾಧಿಸಿದೆ.

ನಂಜನಗೂಡಿನಲ್ಲಿ ಉಪಚುನಾವಣೆ ಸೇಡನ್ನು ಬಿಜೆಪಿ ತೀರಿಸಿಕೊಂಡಿದೆ. ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದರು. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಪ್ರಸಾದ್ ಅವರನ್ನು ಸೋಲಿಸುವ ಮೂಲಕ ಪಕ್ಷ ಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಸೇಡು ತೀರಿಸಿಕೊಂಡಿದ್ದರು. ಈಗ ಕಳಲೆ ಕೇಶವಮೂರ್ತಿ ಅವರನ್ನು ಪ್ರಸಾದ್ ಅಳಿಯ ಬಿ.ಹರ್ಷವರ್ಧನ್ ಸೋಲಿಸಿದ್ದಾರೆ. ಅಳಿಯನ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry