ಮಂಗಳವಾರ, ಮಾರ್ಚ್ 2, 2021
31 °C
* ಮತ ಎಣಿಕೆ ಕೇಂದ್ರಗಳ ಬಳಿ ಜಮಾಯಿಸಿದ್ದ ಕಾರ್ಯಕರ್ತರು * ನೆಚ್ಚಿನ ನಾಯಕರ ಪರ ಘೋಷಣೆ

ಜೆಡಿಎಸ್‌, ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್‌, ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಮೈಸೂರು: ಜಿಲ್ಲೆಯ 11 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು. ನಗರದ ಕೆಲವೆಡೆ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲೆಯ ಏಳು ಕ್ಷೇತ್ರಗಳ ಮತ ಎಣಿಕೆಯು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಿತು. ಕೇಂದ್ರದ ಸುತ್ತಲೂ ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲೆಲ್ಲೂ ಜೆಡಿಎಸ್‌ ಹಾಗೂ ಬಿಜೆಪಿ ಬಾವುಟಗಳೇ ರಾರಾಜಿಸುತ್ತಿದ್ದವು. ಕಾಂಗ್ರೆಸ್‌ನ ತನ್ವೀರ್‌ ಸೇಠ್‌, ಸಿ.ಅನಿಲ್‌ ಕುಮಾರ್‌ ಮಾತ್ರ ಗೆಲುವು ಸಾಧಿಸಿದ್ದರು. ಅವರ ಬೆಂಬಲಿಗರು ಮಾತ್ರ ಸ್ಥಳದಲ್ಲಿದ್ದು, ಸಂಭ್ರಮಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರವು ಎಲ್ಲರ ಕುತೂಹಲದ ಕಣವಾಗಿತ್ತು. ಆದರೆ, ಮೊದಲ ಸುತ್ತಿನಿಂದಲೂ ಜೆಡಿಎಸ್‌ನ ಜಿ.ಟಿ.ದೇವೇಗೌಡ ಮುನ್ನಡೆ ಸಾಧಿಸಿದ್ದರು. ಹೀಗಾಗಿ, ಕಾಂಗ್ರೆಸ್‌ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಸುತ್ತ ಸುಳಿಯಲಿಲ್ಲ. ದೇವೇಗೌಡರ ಗೆಲುವು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಕುಟುಂಬದ ಸದಸ್ಯರು, ಬೆಂಬಲಿಗರು, ಕಾರ್ಯಕರ್ತರೊಂದಿಗೆ ದೇವೇಗೌಡರು ಸಂಭ್ರಮಾಚರಣೆ ಮಾಡಿದರು. ಪತ್ನಿ ಲಲಿತಾ ದೇವೇಗೌಡ, ಪುತ್ರ ಹರೀಶ್ ಗೌಡ ಅವರು ದೇವೇಗೌಡರಿಗೆ ಸಿಹಿ ತಿನ್ನಿಸಿ ಖುಷಿಪಟ್ಟರು.

ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ನ ಎಚ್‌.ವಿಶ್ವನಾಥ್‌ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಕೆ.ಆರ್‌.ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಎಸ್‌.ಎ.ರಾಮದಾಸ್‌ ಗೆಲುವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರ ಹರ್ಷೋದ್ಗಾರ ಜೋರಾಗಿತ್ತು. ಕಾರ್ಯಕರ್ತರು ರಾಮದಾಸ್‌ ಅವರನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು.

ಪ್ರತಾಪ್‌– ತನ್ವೀರ್‌ ಆಲಿಂಗನ: ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ತನ್ವೀರ್‌ ಸೇಠ್‌ ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದತ್ತ ಬಂದರು. ಅವರನ್ನು ಸುತ್ತುವರಿದ ಬೆಂಬಲಿಗರು ಶುಭ ಕೋರಿದರು.

ಇದೇ ವೇಳೆ ಎದುರಾದ ಪ್ರತಾಪ್‌ ಸಿಂಹ ಅವರು ತನ್ವೀರ್‌ ಅವರನ್ನು ಆಲಿಂಗನ ಮಾಡಿದರು. ಅಲ್ಲದೆ, ತನ್ವೀರ್‌ ಅವರ ಕೆನ್ನೆ ಹಿಡಿದು ಅಭಿನಂದನೆ ಸಲ್ಲಿಸಿದ್ದು ಗಮನ ಸೆಳೆಯಿತು.

ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿಯ ಬಿ.ಹರ್ಷವರ್ಧನ್‌, ಎಚ್‌.ಡಿ.ಕೋಟೆಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸಿ.ಅನಿಲ್‌ ಕುಮಾರ್‌, ತಿ.ನರಸೀಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಂ.ಅಶ್ವಿನ್‌ ಕುಮಾರ್‌ ಅವರು ಬೆಂಬಲಿಗರೊಂದಿಗೆ ಸಂಭ್ರಮಿಸಿದರು.

ಅಪಾರ ಬೆಂಬಲಿಗರೊಂದಿಗೆ ವಿಜಯೋತ್ಸವ: ವರುಣಾ, ಚಾಮರಾಜ, ಕೆ.ಆರ್‌.ನಗರ, ಪಿರಿಯಾಪಟ್ಟಣ ಕ್ಷೇತ್ರದ ಮತ ಎಣಿಕೆಯು ಕೂರ್ಗಳ್ಳಿಯ ಎನ್‌ಐಇ–ಐಟಿ ಕಾಲೇಜಿನಲ್ಲಿ ನಡೆಯಿತು.

ಕೆ.ಆರ್‌.ನಗರ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು. ಜೆಡಿಎಸ್‌ನ ಸಾ.ರಾ.ಮಹೇಶ್‌ ಹಾಗೂ ಕಾಂಗ್ರೆಸ್‌ನ ರವಿಶಂಕರ್‌ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹೀಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿತ್ತು. ಕೊನೆಗೆ ಸಾ.ರಾ.ಮಹೇಶ್‌ ಗೆಲುವಿನ ನಗೆ ಬೀರಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅವರ ಬೆಂಬಲಿಗರು ಮಹೇಶ್‌ ಅವರನ್ನು ಎತ್ತಿ ಸಂಭ್ರಮಿಸಿದರು. ಪಿರಿಯಾಪಟ್ಟಣದಿಂದ ಕಣಕ್ಕಿಳಿದಿದ್ದ ಜೆಡಿಎಸ್‌ನ ಕೆ.ಮಹದೇವ ಸಹ ವಿಜಯೋತ್ಸವ ಮಾಡಿದರು.

ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಡಾ.ಯತೀಂದ್ರ ಅವರು ಫಲಿತಾಂಶ ಪ್ರಕಟವಾದ ಬಳಿಕ ಪ್ರಮಾಣಪತ್ರ ಪಡೆಯಲು ‌ಮತ ಎಣಿಕೆ ಕೇಂದ್ರಕ್ಕೆ ಬಂದರು. ಈ ವೇಳೆ ಬೆಂಬಲಿಗರು ಯತೀಂದ್ರ ಪರ ಘೋಷಣೆ ಕೂಗಿದರು. ಯತೀಂದ್ರ ಅವರು ವಿಜಯದ ಸಂಕೇತ ತೋರಿಸಿದರು.

ಚಾಮರಾಜ ಕ್ಷೇತ್ರದ ಬಿಜೆಪಿಯ ಎಲ್‌.ನಾಗೇಂದ್ರ ಅವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡಿದರು.

ವಿಶ್ವನಾಥ್‌ ಕಾಲಿಗೆರಗಿದ ಪ್ರತಾಪ್‌ ಸಿಂಹ

ಮೈಸೂರು: ಹುಣಸೂರು ಕ್ಷೇತ್ರದ ಶಾಸಕ ಜೆಡಿಎಸ್‌ನ ಅಡಗೂರು ಎಚ್.ವಿಶ್ವನಾಥ್ ಅವರ ಕಾಲಿಗೆರಗಿ ಸಂಸದ ಪ್ರತಾಪ್‌ ಸಿಂಹ ನಮಸ್ಕರಿಸಿದರು.

ನಗರದ ಮಹಾರಾಣಿ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆ ವೇಳೆ ಎಚ್‌.ವಿಶ್ವನಾಥ್‌ ಗೆಲುವು ಬಹುತೇಕ ಖಚಿತವಾಗಿತ್ತು. ಈ ವೇಳೆ, ಅವರು ಬೆಂಬಲಿಗರ ಜತೆಗೂಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಸಿಂಹ, ಕಾಲಿಗೆರಗಿ ಆಶೀರ್ವಾದ ಪಡೆದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ವಿಶ್ವನಾಥ್‌ ಅವರು ಪ್ರತಾಪ್‌ ಸಿಂಹ ವಿರುದ್ಧ ಸೋತಿದ್ದರು.

‘ಮೈಸೂರಿನ ಹುಲಿ ಜಿ.ಟಿ.ದೇವೇಗೌಡ’

‘ಮೈಸೂರಿನ ಹುಲಿ ಸಿದ್ದರಾಮಯ್ಯ ಅಲ್ಲ. ಅವರನ್ನು ಮಣಿಸಿದ ಜಿ.ಟಿ.ದೇವೇಗೌಡ ನಿಜವಾದ ಮೈಸೂರು ಹುಲಿ’ ಎಂದು ಪ್ರತಾಪ್‌ ಸಿಂಹ ಬಣ್ಣಿಸಿದರು. ದೇವೇಗೌಡ ಅವರ ಗೆಲುವು ಸಾಧಿಸಿದ್ದರಿಂದ ಕುಟುಂಬದವರು, ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಪ್ರತಾಪ್ ಸಿಂಹ ಮುಖಾಮುಖಿಯಾದರು. ದೇವೇಗೌಡರನ್ನು ತಬ್ಬಿಕೊಂಡ ಪ್ರತಾಪ್‌ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.