ಕಾರ್ಯಕರ್ತರ ಸಂಭ್ರಮ; ವಿಜಯೋತ್ಸವ

5
ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಗೆಲುವು ಕಂಡ ಪಕ್ಷಗಳ ಸಂಭ್ರಮ; ನೂತನ ಶಾಸಕರಿಗೆ ಅದ್ಧೂರಿ ಸ್ವಾಗತ

ಕಾರ್ಯಕರ್ತರ ಸಂಭ್ರಮ; ವಿಜಯೋತ್ಸವ

Published:
Updated:
ಕಾರ್ಯಕರ್ತರ ಸಂಭ್ರಮ; ವಿಜಯೋತ್ಸವ

ತುಮಕೂರು: ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಆಯಾ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರರು ತಬ್ಬಿ ಕುಣಿದು ಖುಷಿಪಟ್ಟರು. ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಮತ್ತು ಗೆಲ್ಲುವ ಮುಸ್ಸೂಚನೆ ದೊರೆತ ತಕ್ಷಣವೇ ಪಟಾಕಿ ಹಚ್ಚಿದರು.

ಇನ್ನೇನು ಗೆಲುವು ಸಾಧಿಸಲಿದ್ದಾರೆ ಎನ್ನುವಾಗ ಕೆಲವು ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಬಳಿಗೆ ಬಂದರು. ಆಗ ಅಲ್ಲಿದ್ದ ಅವರ ಪಕ್ಷದ ಕಾರ್ಯಕರ್ತರು ನಾಯಕನ್ನು ಮೇಲೆತ್ತಿ ಜಯಕಾರ ಕೂಗಿದರು. ವಿಜೇತ ಅಭ್ಯರ್ಥಿಗಳನ್ನು ಕ್ಷೇತ್ರದಲ್ಲಿ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.

ಮಧುಗಿರಿ: ಜೆಡಿಎಸ್ ಸಂಭ್ರಮ

ಮಧುಗಿರಿ: ಜೆಡಿಎಸ್‌ನ ಎಂ.ವಿ.ವೀರಭದ್ರಯ್ಯ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೋಲು ಹಾಗೂ ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಫಲಿತಾಂಶ ಬರುವ ಮುಂಚೆಯಿಂದಲೇ ಗ್ರಾಮಗಳಿಂದ ಬೈಕ್‌ಗಳಲ್ಲಿ ಜನರು ಪಟ್ಟಣಕ್ಕೆ ಬಂದಿದ್ದರು.

ವೀರಭದ್ರಯ್ಯ ಅವರ ಬರುವಿಕೆಗಾಗಿ ತಾಲ್ಲೂಕಿನ ಜನ ದಂಡಿನ ಮಾರಮ್ಮ ದೇವಾಲಯದ ಸಮೀಪ ಜಮಾಯಿಸಿ, ದೇವಿಗೆ ಪೂಜೆ ಸಲ್ಲಿಸಿದರು. ವೀರಭದ್ರಯ್ಯ ಕುಟುಂಬ ಸಮೇತರಾಗಿ ಬಂದು ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ಬೆಂಗಳೂರಿಗೆ ತೆರಳಿದರು.

ಪಕ್ಷದ ತಾಲ್ಲೂಕು ಕಾರ್ಯಾಧ್ಯಕ್ಷ ತಿಮ್ಮರಾಯಪ್ಪ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್‌ ಬಾಬು, ಲಾಲಾ ಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್, ಮುಖಂಡರಾದ ಎಂ.ವಿ.ಕಾರ್ತಿಕ್, ಟಿ.ರಾಮಣ್ಣ, ವಿಶ್ವರಾಧ್ಯ, ಸಿದ್ದಾಪುರ ವೀರಣ್ಣ, ಎಂ.ಆರ್.ಜಗನ್ನಾಥ್, ಕೇಬಲ್‌ಸುಬ್ಬು, ಚೌಡಪ್ಪ, ಟಿ.ಗೋವಿಂದರಾಜು, ಬಿ.ಎಸ್.ಶ್ರೀನಿವಾಸ್ , ಮಿಡಿಗೇಶಿ ಸುರೇಶ್ ಇದ್ದರು.

ತುರುವೇಕೆರೆ; ವಿಜಯೋತ್ಸವ

ತುರುವೇಕೆರೆ: ತಾಲ್ಲೂಕಿನ ಬಿಜೆಪಿ ಅಭ್ಯರ್ಥಿ ಮಸಾಲ ಜಯರಾಮ್ ವಿಜೇತರಾದ ಕಾರಣ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಜಯರಾಮ್ ಅವರ ಗೆಲುವು ಪ್ರಕಟವಾಗುತ್ತಿದ್ದಂತೆ ಪಕ್ಷದ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂದೆ ಜಮಾಯಿಸಿ, ಪಠಾಕಿ ಸಿಡಿಸಿ ಸಂಭ್ರಮಿಸಿದರು.

ಕಾರ್ಯಕರ್ತರು ಪಟ್ಟಣದ ಬಾಣಸಂದ್ರ, ಮಾಯಸಂದ್ರ, ದಬ್ಬೇಘಟ್ಟ ಮತ್ತು ವೈಟಿ ರಸ್ತೆಗಳಲ್ಲಿ ಬಿಜೆಪಿ ಬಾವುಟ ಮತ್ತು ಜಯರಾಮ್‌ ಅವರ ಭಾವಚಿತ್ರ ಹಿಡಿದು ಇಲ್ಲಿನ ಪ್ರಮುಖ ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ಶಿರಾ: ಜೆಡಿಎಸ್‌ನ ಬಿ.ಸತ್ಯನಾರಾಯಣ ಗೆಲುವು ಕಂಡ ವಿಷಯ ತಿಳಿದು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.

ಸತ್ಯನಾರಾಯಣ ಮತ ಎಣಿಕೆಯಲ್ಲಿ ಮುಂದೆ ಇದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಅಭಿಮಾನಿಗಳು ನಗರಕ್ಕೆ ಬಂದರು. ಬೈಕ್ ರ‍್ಯಾಲಿ ಮೂಲಕ ಜೆಡಿಎಸ್ ಪರವಾಗಿ ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿದರು. ಪಕ್ಷದ ಕಚೇರಿ ಬಳಿ ಹಬ್ಬದ ವಾತಾವರಣ ಇತ್ತು.

 ಸತ್ಯನಾರಾಯಣ ಮತ ಎಣಿಕೆಯನ್ನು ಮುಗಿಸಿಕೊಂಡು ಶಿರಾಕ್ಕೆ ಬಂದಾಗ ಅದ್ಧೂರಿ ಸ್ವಾಗತ ನೀಡಲಾಯಿತು. ಬೈಪಾಸ್ ನಿಂದ ಮೆರವಣಿಗೆಯಲ್ಲಿ  ಕರೆತರಲಾಯಿತು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಗುಬ್ಬಿ: ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್.ಆರ್.ಶ್ರೀನಿವಾಸ್ ಮಂಗಳವಾರ ಮನೆದೇವತೆ ಮಣ್ಣಮ್ಮದೇವಿ ಹಾಗೂ ಕ್ಷೇತ್ರ ದೇವರಾದ ಶ್ರೀಚನ್ನಬಸವೇಶ್ವರ ಸ್ವಾಮೀಜಿಗೆ ಪೂಜೆ ಸಲ್ಲಿಸಿದರು.

ಸಾವಿರಾರು ಅಭಿಮಾನಿಗಳು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಶಾಸಕ ಶ್ರೀನಿವಾಸ್ ಹಾಗೂ ಪತ್ನಿ ಕೆ.ಆರ್.ಭಾರತಿದೇವಿ ಪೂಜೆ ಸಲ್ಲಿಸಿ ಹಾರ ಬದಲಾಯಿಸಿಕೊಂಡರು. ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಕುಣಿಸಿ ‘ಭಾವಿ ಸಚಿವರಿಗೆ ಜಯವಾಗಲಿ’ ಎಂದು ಶುಭ ಹಾರೈಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ‘ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಜೆಡಿಎಸ್ ಪಕ್ಷದ ನೇತಾರರ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕ್ಷೇತ್ರದ ಜನತೆಯ ಹಿತಕಾಯಲು ಕಾಂಗ್ರೆಸ್ ಪಕ್ಷದೊಟ್ಟಿಗೆ ಸರ್ಕಾರ ಮಾಡಿದರೆ ಒಳಿತಾಗಲಿದೆ. ಗುಬ್ಬಿ ಕ್ಷೇತ್ರದ ಪೂರ್ಣ ಸಮಸ್ಯೆಗಳನ್ನು ಪ್ರಚಾರದ ಸಮಯದಲ್ಲಿ ಪಟ್ಟಿ ಮಾಡಲಾಗಿದೆ. ಗುಬ್ಬಿ ಕೆರೆ, ಕಡಬ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಲು ಶಕ್ತಿ ಮೀರಿ ಕೆಲಸ ಮಾಡುವೆ. ಮಹಿಳೆಯರಿಗೆ ಕೈಗಾರಿಕೆಗಳನ್ನು ತೆರೆದು ನಿರುದ್ಯೋಗ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಅರ್ಚಕ ಪಾಪಣ್ಣ, ಕಳ್ಳಿಪಾಳ್ಯ ಲೋಕೇಶ್, ಕೆ.ಸಿ.ಕೃಷ್ಣಮೂರ್ತಿ, ಸು.ಮುನಿಯಪ್ಪ, ಟಿ.ವೈ.ಯೋಗಾನಂದ್, ಪ್ರೇಮಾ ಶಿವಕುಮಾರ್, ಜಿ.ಡಿ.ಸುರೇಶ್ ಗೌಡ, ಎಚ್.ಸಿ.ಪ್ರಭಾಕರ್, ಲಕ್ಷ್ಮಿರಂಗಯ್ಯ, ನರಸಿಂಹಯ್ಯ, ಲೋಕೇಶ್ವರ್, ಸಣ್ಣರಂಗಯ್ಯ, ಡಾ.ನವಿಖಾನ್, ಗುರುರೇಣುಕರಾದ್ಯ, ಎಚ್.ಡಿ.ರಂಗಸ್ವಾಮಿ, ಸಿ.ಎಚ್.ಭಾಗ್ಯಲಕ್ಷ್ಮಿ, ಮಂಜೇಶ್, ಮಂಜುಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry