ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಲಿಷ್ಠ ಸಂಘಟನೆ: ಮಕಾಡೆ ಮಲಗಿದ ‘ಕೈ’ ಪಕ್ಷ

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಪ್ರಚಾರ; ಕಮಲ ಕಲಿಗಳಿಗೆ ವರ, ಫಲ ನೀಡದ ರಾಹುಲ್‌ ಭೇಟಿ
Last Updated 16 ಮೇ 2018, 9:07 IST
ಅಕ್ಷರ ಗಾತ್ರ

ಉಡುಪಿ: ‌ಜಿಲ್ಲೆಯ ಐದೂ ಸ್ಥಾನವನ್ನೂ ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಶಾಕ್ ನೀಡಿದೆ. ಬಿಜೆಪಿಯ ಸಂಘಟನಾ ಚತುರತೆ, ಕಟುಬದ್ಧತೆ ಹೊಂದಿದ್ದ ಕಾರ್ಯಕರ್ತರ ಒಗ್ಗಟ್ಟು ಹಾಗೂ ಹಿಂದುತ್ವದ ಮಂತ್ರದ ಎದುರು ‘ಕೈ’ ಪಕ್ಷ ಅಡ್ಡಡ್ಡ ಮಲಗಿದೆ. ಕಮಲ ಕಲಿಗಳು ನೀಡಿರುವ ಹೊಡೆತದಿಂದ ಕುಸಿದು ಹೋಗಿರುವ ಕಾಂಗ್ರೆಸ್ ಚೇತರಿಕೆಯ ಹಾದಿ ಬಹುದೂರ ಎಂಬಂತೆ ಭಾಸವಾಗುತ್ತಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ ಗೆಲ್ಲುವ ಮೂಲಕ ಬೀಗಿತ್ತು. ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕುಂದಾಪುರದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವು ಸಾಧಿಸಿದ್ದರು. ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಈ ಬಾರಿ ಕಾಂಗ್ರೆಸ್ ತನ್ನ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಇತ್ತು. ಆದರೆ, ಜಿಲ್ಲೆಯ ಮತದಾರರು ಆ ಎಲ್ಲ ನಿರೀಕ್ಷೆಯನ್ನು ಹುಸಿಯಾಗಿಸಿ ಬಿಜೆಪಿಗೆ ಭರ್ಜರಿ ಬೆಂಬಲ ನೀಡಿದ್ದಾರೆ.

ಜಾಣ ನಡೆ ಅನುಸರಿಸಿದ್ದ ಬಿಜೆಪಿ ಅನುಭವಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಬೈಂದೂರು ಕ್ಷೇತ್ರದ ಸುಕುಮಾರ ಶೆಟ್ಟಿ ಅವರನ್ನು ಹೊರತುಪಡಿಸಿ ಉಳಿದ ನಾಲ್ಕೂ ಅಭ್ಯರ್ಥಿಗಳು ಮಾಜಿ ಶಾಸಕರು ಎಂಬುದು ಪ್ರಮುಖ ಅಂಶ. ಒಂದೊಂದು ಕ್ಷೇತ್ರಕ್ಕೆ ಹಲವು ಮಂದಿ ಆಕಾಂಕ್ಷಿಗಳು ಇದ್ದರೂ ಟಿಕೆಟ್ ಘೋಷಣೆಯ ನಂತರ ವಂಚಿತರು ಬಂಡಾಯ ಏಳದಂತೆ ನೋಡಿಕೊಳ್ಳಲಾಯಿತು. ಅಲ್ಲದೆ ಆ ಎಲ್ಲರೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಕೆಲವೇ ಮಂದಿಯನ್ನು ಹೊರತುಪಡಿಸಿ ಮಿಕ್ಕವರೆಲ್ಲ ಪಕ್ಷದ ಪರ ಕೆಲಸ ಮಾಡಿದ್ದು ವರವಾಗಿ ಪರಿಣಮಿಸಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಖುದ್ದು ಬಂದು ಪ್ರಚಾರ ಮಾಡಿದ್ದರಿಂದ ಪಕ್ಷ ಮತ್ತೊಮ್ಮೆ ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು.

ಬಿಜೆಪಿ ಬಾಗಿಲು, ಪ್ರಮೋದ್‌ಗೆ ಸೋಲು!
ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದಾರೆ. ಸಹಪಾಠಿ ಬಿಜೆಪಿಯ ಕೆ. ರಘುಪತಿ ಭಟ್ ಅವರ ಸವಾಲ್ ಎದುರಿಸಲಾಗದೆ ಸೋಲೊಪ್ಪಿಕೊಂಡಿದ್ದಾರೆ. ‘ಸುಮಾರು ₹2000 ಸಾವಿರ ಕೋಟಿ ಅಭಿವೃದ್ಧಿ ಕೆಲಸ ಮಾಡಿದೆ’ ಎಂದು ಹೇಳುತ್ತಿದ್ದ ಅವರು ಕೆಲವು ಸ್ವಯಂಕೃತ ಅಪರಾಧಕ್ಕೆ ಬೆಲೆ ತೆತ್ತಿರುವಂತಿದೆ.

ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪ್ರಮೋದ್ ಅವರನ್ನು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಮಾಡಲಾಗಿತ್ತು. ಆ ನಂತರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆ ಮೂಲಕ ನಾಯಕರಾಗಿ ಅವರು ಬೆಳೆಯಲು ಎಲ್ಲ ರೀತಿಯ ಅವಕಾಶವನ್ನು ಪಕ್ಷ ಕಲ್ಪಿಸಿಕೊಟ್ಟಿತ್ತು. ಪ್ರಮೋದ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಗುಲ್ಲು ಏಳೆಂಟು ತಿಂಗಳ ಹಿಂದೆ ಎದ್ದಿತ್ತು. ಈ ವಿಷಯವನ್ನು ನಿರ್ವಹಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾದರು. ಆ ಬಗ್ಗೆ ಖಂಡತುಂಡ ಹೇಳಿಕೆ ನೀಡಿ ವಂದತಿಯನ್ನು ನಿರಾಕರಿಸಿದ್ದರೆ ಬಹುಶಃ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?

ಆದರೆ, ಆ ವಿಷಯವನ್ನು ಲಘುವಾಗಿ ಸ್ವೀಕರಿಸಿದ ಅವರು ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಗೊಂದಲ ಮೂಡಿಸಿದರು. ಚುನಾವಣೆ ಘೋಷಣೆಗೆ ನಾಲ್ಕೈದು ದಿನ ಇರುವಾಗ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಅವರು ‘ಬಿಜೆಪಿ ಗೇಟ್ ಬಂದ್ ಆಗಿರುವುದರಿಂದ ಅಲ್ಲಿಗೆ ಹೋಗುವ ಪ್ರಶ್ನೆ ಉದ್ಭವಿಸದು. ನಾನು ಒಳಗೆ ಹೋಗದಂತೆ ಕೆಲವರು ತಡೆ ಹಾಕಿದ್ದಾರೆ’ ಎಂಬ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಮೂಡಿಸಿದ್ದರು. ಅವರ ಈ ಹೇಳಿಕೆ ಸ್ವಪಕ್ಷೀಯ ಕಾರ್ಯಕರ್ತರು ಹಾಗೂ ಮುಖಂಡರು ಅನುಮಾನದಿಂದ ನೋಡುವಂತೆ ಮಾಡಿತು.

ಇದರ ಹೊರತಾಗಿಯೂ ಅವರು ಮಾಡಿದ ಕೆಲವು ಅಭಿವೃದ್ಧಿ ಪರ ಕೆಲಸಗಳು ಸಹ ಅವರಿಗೆ ಎರವಾಗಿರುವ ಸಾಧ್ಯತೆ ಇದೆ. ಖಾಸಗಿ ಬಸ್ ಲಾಬಿ ಪ್ರಬಲವಾಗಿರುವ ಜಿಲ್ಲೆಯಲ್ಲಿ ಜೆ– ನರ್ಮ್ ಬಸ್‌ಗಳನ್ನು ತಂದರು. ಇದು ಒಂದು ವರ್ಗದವರ ಕೋಪಕ್ಕೆ ಕಾರಣವಾಯಿತು. ಸರ್ಕಾರಿ ಬಸ್ ಜನಪ್ರಿಯವಾದ ಕಾರಣ ಖಾಸಗಿ ಅವರ ಲಾಭಕ್ಕೆ ಕೊಕ್ಕೆ ಬಿತ್ತು. ಪರಿಣಾಮ ಆ ವರ್ಗ ಸಚಿವರ ವಿರುದ್ಧ ಒಂದುಗೂಡಿತ್ತು. ಪರ್ಸಿನ್, ನಾಡದೋಣಿ ಮೀನುಗಾರರು ಹಾಗೂ ಆಳಸಮುದ್ರ ಮೀನುಗಾರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ ಮೀನುಗಾರಿಕಾ ಸಚಿವನಾಗಿ ಅದನ್ನು ಬಗೆಹರಿಸಲು ಅಷ್ಟೊಂದು ಆಸಕ್ತಿ ತೋರಲಿಲ್ಲ. ಇದು ಮೀನುಗಾರರು ಅವರ ವಿರುದ್ಧ ನಿಲ್ಲುವಂತೆ ಮಾಡಿತು.

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ತಡೆ ಹಾಕುವ ಭರದಲ್ಲಿ ಅವರು ಕೈಗೊಂಡ ಕೆಲವು ನಿರ್ಧಾರಗಳು ಮರಳಿನ ಕೊರತೆಗೆ ಕಾರಣವಾಯಿತು. ಆರ್ಥಿಕವಾಗಿಯೂ ಪ್ರಬಲರಾಗಿರುವ ಮರಳು ಮಾರಾಟಗಾರರು ಇದರಿಂದ ಆಕ್ರೋಶಗೊಳ್ಳುವಂತಾಯಿತು.

ತಾವೊಬ್ಬರೇ ಬೆಳೆಯಲು ಪ್ರಯತ್ನಿಸಿದ್ದು ಹಾಗೂ ಪಕ್ಷವನ್ನು ನಿರ್ಲಕ್ಷ್ಯಿಸಿದ್ದು ಸಹ ಇನ್ನೊಂದು ಕಾರಣ ಇರುವಂತೆ ಕಾಣುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಪರ ಮನಸ್ಸಿಟ್ಟು ಕೆಲಸ ಮಾಡಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತನು, ಮನ ಹಾಗೂ ಧನವನ್ನು ಸಂಪೂರ್ಣವಾಗಿ ವಿನಿಯೋಗಿಸಲಿಲ್ಲ. ಪರಿಣಾಮ ಎಲ್ಲ ಚುನಾವಣೆಗಳಲ್ಲಿ ಪಕ್ಷ ಹಿನ್ನಡೆ ಅನುಭವಿಸಿತು.

ಇವಿಷ್ಟು ಸ್ವಯಂಕೃತ ಅಪರಾಧಗಳಾದರೆ, ಉಡುಪಿ ಅಭಿವೃದ್ಧಿಯ ಹರಿಕಾರ ಎಂದೇ ಕಾರ್ಯಕರ್ತರಿಂದ ಕರೆಯಿಸಿಕೊಳ್ಳುವ ಕೆ. ರಘುಪತಿ ಭಟ್ ಅವರ ಸಂಘಟನಾ ಕೌಶಲಕ್ಕೆ ಪ್ರಮೋದ್ ಸಮರ್ಥವಾಗಿ ಉತ್ತರ ನೀಡಲು ಆಗಲಿಲ್ಲ. ಸುಮಾರು ಒಂದು ವರ್ಷದಿಂದಲೇ ಸಕ್ರಿಯರಾದ ಭಟ್ ಅವರು ವಾರ್ಡ್‌, ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರು ಹಾಗೂ ಸ್ಥಳೀಯರ ಸಭೆ ನಡೆಸಿ ಅವರ ವಿಶ್ವಾಸ ಗಳಿಸಲು ಪ್ರಯತ್ನಿಸಿದರು. ‘ನನಗೆ ಟಿಕೆಟ್ ಸಿಗದಿದ್ದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ’ ಎಂಬ ಅವರ ಹೇಳಿಕೆ ರಾಜಕೀಯ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು. ಕಾರ್ಯಕರ್ತರ ವಿಶ್ವಾಸವನ್ನು ಇದು ಹೆಚ್ಚಿಸಿತ್ತು.
ಒಟ್ಟಾರೆ ದೊಡ್ಡ ನಾಯಕನಾಗಿ ಬೆಳೆಯುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಪ್ರಮೋದ್ ಅವರು ಅರ್ಧದಾರಿಯಲ್ಲಿಯೇ ಹಿಂದಿರುಗುವಂತಾಗಿದೆ.

ಕಾರ್ಕಳದಲ್ಲಿ ಮತ್ತೆ ಅರಳಿದ ಕಮಲ:

2013ರ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದರೂ ಆ ನಂತರ ಪಕ್ಷವನ್ನು ಪ್ರಬಲವಾಗಿ ಕಟ್ಟಿದ ಬಿಜೆಪಿ ವಿ.ಸುನೀಲ್ ಕುಮಾರ್ ಈ ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ನಡೆದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಅಕ್ಷರಶಃ ಮಣ್ಣು ಮುಕ್ಕಿಸಿ ಅವರು ಗೆಲುವಿನ ಕೇಕೆ ಹಾಕಿದ್ದಾರೆ. ಎದುರಾಳಿ ಪ್ರಬಲವಾಗಿರುವ ಸಂದರ್ಭದಲ್ಲಿ ಸಂಘಟನೆಗೆ ಒತ್ತು ನೀಡಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ತಂತ್ರ ಹೆಣೆಯದ ಕಾಂಗ್ರೆಸ್ ಹಾಗೂ ವೀರಪ್ಪ ಮೊಯಿಲಿ ಅವರ ಸ್ವಾರ್ಥದ ರಾಜಕೀಯದ ಪರಿಣಾಮ ಇಲ್ಲಿ ಪಕ್ಷ ಮಕಾಡೆ ಮಲಗಿದೆ.

ಎರಡು ಬಾರಿ ಶಾಸಕರಾಗಿದ್ದ ಎಚ್‌.ಗೋಪಾಲ ಭಂಡಾರಿ ಅವರು ಮೊಯಿಲಿ ಪುತ್ರ ಹರ್ಷ ಮೊಯಿಲಿ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದರು. ಆದರೆ, ಕಾರ್ಕಳ ರಾಜಕೀಯದಲ್ಲಿ ದಿಢೀರ್ ಎಂದು ಉದಯಿಸಿದ ಉದಯ ಶೆಟ್ಟಿ ಮುನಿಯಾಲು ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಪಕ್ಷವನ್ನು ಸಂಘಟಿಸುವ ಕೆಲಸವನ್ನೂ ಮಾಡಿದ್ದರು. ಅವರ ಒಂದೊಂದು ಕಾರ್ಯಕ್ರಮಕ್ಕೂ ಕನಿಷ್ಠ ಹತ್ತು ಸಾವಿರ ಜನರು ಸೇರುತ್ತಿದ್ದರು.

ಟಿಕೆಟ್ ಕಿತ್ತಾಟ ತಾರಕ್ಕೇರಿದಾಗ ಹರ್ಷ ಮೊಯಿಲಿ ಸೋಲು ಒಪ್ಪಿಕೊಳ್ಳಬೇಕಾಯಿತು. ಇದರಿಂದ ಕುಪಿತರಾದ ವೀರಪ್ಪ ಮೊಯಿಲಿ ಅವರು ಉದಯ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದರು. ಎದುರಾಳಿಯ ಎದುರು ಪೇಲವವಾಗಿದ್ದ ಕಾರ್ಕಳ ಕಾಂಗ್ರೆಸ್ ಆಗ ಇನ್ನಷ್ಟು ಕುಸಿಯಿತು. ಭಿನ್ನಮತಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದರೂ ಅದು ಗೆಲುವಿನ ದಡ ಮುಟ್ಟಿಸುವುದಿರಲಿ, ಗೌರವಯುತ ಸೋಲನ್ನೂ ನೀಡಲಿಲ್ಲ.

ಸುನೀಲ್ ಕುಮಾರ್ ಅವರು ಮಾಡಿದ ಅಭಿವೃದ್ಧಿ ಕೆಲಸ ಹಾಗೂ ಅದಕ್ಕೆ ಪಡೆದ ಪ್ರಚಾರ ಸಹ ಅವರ ಜನಪ್ರಿಯತೆಗೆ ಕಾರಣವಾಗಿತ್ತು. ಅವರು ಉತ್ತಮ ಕೆಲಸ ಮಾಡಿರುವುದನ್ನು ಕ್ಷೇತ್ರದ ಎಲ್ಲ ಜನರು ಒಪ್ಪಿಕೊಳ್ಳುತ್ತಿದ್ದರು. ಪಕ್ಷದ ಸಂಘಟನೆಯನ್ನು ಸಹ ಅವರು ಬಲಪಡಿಸಿದ ಕಾರಣ ಬಲ ಹೆಚ್ಚಾಗಿತ್ತು. ಅಭಿವೃದ್ಧಿಗಾಗಿ ಇನ್ನೊಮ್ಮೆ ಅವಕಾಶ ನೀಡಿ ಎಂದು ಅವರು ಮಾಡಿದ ಮನವಿಗೆ ಕ್ಷೇತ್ರದ ಜನರು ಸ್ಪಂದಿಸಿದ್ದಾರೆ.

ವರ್ಚಸ್ಸಿನ ಹಳಿಯ ಮೇಲೆ ಹಾಲಾಡಿ ಗೆಲುವಿನ ಬಂಡಿ: ಮೊದಲ ಚುನಾವಣೆಯ ನಂತರ ವರ್ಚಸ್ಸಿನ ಮೇಲೆಯೇ ಸತತವಾಗಿ ಜಯ ಸಾಧಿಸುತ್ತಾ ಬಂದಿರುವ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯೂ ಗೆಲುವಿನ ಓಟ ಮುಂದುವರೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎದುರು ಭರ್ಜರಿ ಜಯ ಸಾಧಿಸಿದ್ದಾರೆ. ಐದು ಬಾರಿ ಗೆಲುವು ಸಾಧಿಸಿರುವ ಅವರು ಪ್ರತಿ ಚುನಾವಣೆಯಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿರುವುದನ್ನು ನೋಡಬಹುದು. ವೈಯಕ್ತಿಕ ಮತ ಹಾಗೂ ಬಿಜೆಪಿಯ ಮತಗಳು ಅವರಿಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದೆ.

ಈ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಕಾಂಗ್ರೆಸ್ ಗೆಲುವಿಗಾಗಿ ಒಳ್ಳೆಯ ಪ್ರಯತ್ನ ಮಾಡಿದೆ ಎನ್ನಬಹುದು. ಮನೆ ಮಾತಾಗಿರುವ ಅಭ್ಯರ್ಥಿ ಎದುರು ಹೊಸ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಲು ಪ್ರಯತ್ನಿಸಿದೆ. ಬಂಟ್ವಾಳ ತಾಲ್ಲೂಕಿನವರಾದ ರಾಕೇಶ್ ಮಲ್ಲಿ ಅವರು ಕಾಂಗ್ರೆಸ್ ಕಾರ್ಮಿಕ ಸಂಘಟನೆ ಇಂಟಕ್‌ನ ಅಧ್ಯಕ್ಷ. ಸುಮಾರು ಎಂಟು ತಿಂಗಳ ಹಿಂದೆ ಕ್ಷೇತ್ರಕ್ಕೆ ಬಂದ ಅವರು ಪ್ರತಿ ಗ್ರಾಮವನ್ನು ಸುತ್ತಿ ನಿಷ್ಕ್ರಿಯವಾಗಿದ್ದ ಕಾಂಗ್ರೆಸ್ ಸಂಘಟನೆಗೆ ಬಲ ತುಂಬುವ ಕೆಲಸ ಮಾಡಿದ್ದರು. ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಯುವ ಸಮುದಾಯವನ್ನು ಸೆಳೆಯಲು ಪ್ರಯತ್ನಿಸಿದ್ದರು.

ಇದಕ್ಕೆ ಪೂರಕವಾಗಿ ಕ್ಷೇತ್ರದ ಎಲ್ಲ ಕಾಂಗ್ರೆಸ್ ಮುಖಂಡರು ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ಮುಂತಾದವರು ಅವರ ಗೆಲುವಿಗಾಗಿ ಶ್ರಮಿಸಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ‘ದೈತ್ಯ ಸಂಹಾರ’ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಕುಂದಾಪುರದಲ್ಲಿ ಹಾಲಾಡಿ ಅವರ ವಿರುದ್ಧ ಒಂದು ಬಣ ಬಂಡಾಯ ಎದ್ದಿತ್ತು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಹಾಲಾಡಿ ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡಿದರು. ಮಿಕ್ಕ ಕಾರ್ಯಕರ್ತರು ಹಾಗೂ ಮುಖಂಡರು ಅವರಿಗೆ ಸಾಥ್ ನೀಡಿದ ಕಾರಣ ಗೆಲುವು ಸುಲಭವಾಯಿತು.

ತಂತ್ರ ಎಣೆಯುವಲ್ಲಿ ಕಾಂಗ್ರೆಸ್‌ ವಿಫಲ; ಬೈಂದೂರು ‘ಕಮಲ’ದ ಪಾಲು

ರಾಜಕೀಯ ತಂತ್ರಗಾರಿಕೆಯ ವೈಫಲ್ಯ ಬೈಂದೂರು ಕ್ಷೇತ್ರವನ್ನು ಕಾಂಗ್ರೆಸ್‌ ಕಳೆದುಕೊಳ್ಳುವಂತೆ ಮಾಡಿದೆ. ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದ ಗೋಪಾಲ ಪೂಜಾರಿ ಅವರು ಅನಿರೀಕ್ಷಿತ ಸೋಲನ್ನು ಸಹಿಸಿಕೊಳ್ಳಬೇಕಾಗಿದೆ. ಇಲ್ಲಿಯೂ ಬಿಜೆಪಿಯ ಸಂಘಟನೆ ಹಾಗೂ ತಂತ್ರಗಾರಿಕೆ ಪ್ರಬಲವಾಗಿ ಕೆಲಸ ಮಾಡಿದೆ. ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಮನೆಗೆ ಹೋಗಿ ಕೂರದ ಸುಕುಮಾರ ಶೆಟ್ಟಿ ಅವರು ಮೊದಲ ದಿನದಿಂದಲೇ ಮತ್ತೆ ಪಕ್ಷ ಕಟ್ಟಲು ಮುಂದಾಗಿದ್ದು ಅವರಿಗೆ ಫಲ ನೀಡಿದೆ.

ಸುಮಾರು ₹2 ಸಾವಿರ ಕೋಟಿ ಮೊತ್ತದ ಅಭಿವೃದ್ಧಿಯ ಕೆಲಸಗಳಾಗಿವೆ ಎಂದು ಗೋಪಾಲ ಪೂಜರಿ ಹೇಳುತ್ತಿದ್ದರು. ಆದರೆ ಕೇಂದ್ರದ ಅನುದಾನದಿಂದ ಆದ ಕೆಲಸಗಳ ಪಟ್ಟಿಯನ್ನೇ ಶೆಟ್ಟರು ಜನರ ಮುಂದಿಟ್ಟರು. ಆ ಮೂಲಕ ಬಿಜೆಪಿಯ ಕೊಡುಗೆ ಏನು ಎಂಬುದನ್ನು ಜನರಿಗೆ ಮನದಟ್ಟು ಮಾಡಿದರು. ಅಧಿಕಾರ ಇಲ್ಲದಿದ್ದರೂ ಜಾಣತನದಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂಬ ಭಾವನೆ ಜನರಲ್ಲಿ ಸಾಮಾನ್ಯವಾಗಿತ್ತು. ಈ ಅಂಶ ಬಿಜೆಪಿಗೆ ಭಾರಿ ಮತಗಳನ್ನೇ ತಂದುಕೊಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ. ಮೀನುಗಾರರ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವಲ್ಲಿ ಶಾಸಕರ ವಿಫಲರಾಗಿದ್ದು ಸಹ ಸೋಲಿಗೆ ಇನ್ನೊಂದು ಪ್ರಮುಖ ಕಾರಣ ಇರಬಹುದು. ಏಕೆಂದರೆ ಈ ಕ್ಷೇತ್ರದಲ್ಲಿ ನಾಡದೋಣಿ ಮೀನುಗಾರರ ಸಂಖ್ಯೆ ಹೆಚ್ಚಾಗಿದೆ. ಅವರು ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.

ಕಾಂಗ್ರೆಸ್‌ಗೆ ಶಾಕ್‌ ನೀಡಿದ ಕಾಪು

ಕಾಂಗ್ರೆಸ್‌ಗೆ ಶಾಕ್ ನೀಡಿರುವ ಪ್ರಮುಖ ಕ್ಷೇತ್ರ ಕಾಪು. ಸಚಿವರಾಗಿಯೂ ಕೆಲಸ ಮಾಡಿದ್ದ ವಿನಯ ಕುಮಾರ್‌ ಸೊರಕೆ ಅವರು ಬಿಜೆಪಿಯ ಲಾಲಾಜಿ ಮೆಂಡನ್ ಅವರ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ. ಈ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಲೋಪ ಕಾಣಸಿಗುವುದಿಲ್ಲ. ಈ ಕ್ಷೇತ್ರದಿಂದ ಇನ್ನೊಬ್ಬ ಆಕಾಂಕ್ಷಿಯೂ ಇರಲಿಲ್ಲ. ಸಂಘಟನೆಯಲ್ಲಿ ಕಾಂಗ್ರೆಸ್‌ಗಿಂತಲೂ ಮುಂದಕ್ಕೆ ಹೋಗಿದ್ದ ಬಿಜೆಪಿ ಒಗ್ಗಟ್ಟಿನ ಹೋರಾಟದಿಂದಾಗಿ ಗೆಲುವಿನ ನಗೆ ಬೀರಿದೆ. ‘ಒಳ್ಳೆಯ ವ್ಯಕ್ತಿ’ ಎಂಬ ಹಣೆಪಟ್ಟಿ ಲಾಲಾಜಿ ಅವರ ಕೈಹಿಡಿದಿದೆ. ಇದನ್ನು ಹೊರತುಪಡಿಸಿ ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕುವುದು ಸವಾಲಿನ ಕೆಲಸವೇ ಸರಿ.

ಮೂರು ವರ್ಷ ಎರಡು ತಿಂಗಳು ಸಚಿವರಾಗಿದ್ದ ಸೊರಕೆ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಹೋದ ನಂತರವಂತೂ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿ ಪ್ರಗತಿಗಾಗಿ ದುಡಿದರು. ಯಾವುದೇ ಸಮಿತಿಯ ಶಿಫಾರಸು ಇಲ್ಲದಿದ್ದರೂ ಕಾಪುವನ್ನು ತಾಲ್ಲೂಕು ಮಾಡಿದದರು. ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರು. ರಸ್ತೆ, ಸೇತುವೆ ನಿರ್ಮಾಣದಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದರು. ಹಾಗೆಂದ ಮಾತ್ರಕ್ಕೆ ಕ್ಷೇತ್ರದಲ್ಲಿ ಸಮಸ್ಯೆಗಳೇ ಇರಲಿಲ್ಲ ಎಂದು ಅರ್ಥವಲ್ಲ. ಕಸ ವಿಲೇವಾರಿ, ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಇದೆ ಎಂದು ಕೆಲವು ಭಾಗದ ಜನರು ದೂರುತ್ತಾರೆ.

ಅಭಿವೃದ್ಧಿಯಲ್ಲಿ ಪಾಸಾದರೂ ಗೆಲುವು ಸಾಧಿಸಲು ಬೇಕಾಗಿದ್ದ ರಾಜಕೀಯ ತಂತ್ರಗಾರಿಕೆ ಮಾಡುವಲ್ಲಿ ಅವರು ಸೋತಿರಬಹುದು ಅನಿಸದಿರದು. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಯಶ್‌ಪಾಲ್ ಸುವರ್ಣ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರು. ಟಿಕೆಟ್ ಕೈತಪ್ಪಿದ ನಂತರ ಪಕ್ಷ ಅವರ ಮನವೊಲಿಸಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದರಿಂದ ಸುಲಭವಾಗಿ ಜಯ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT