ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಗೂಳಿ ಸೋತು ಸತ್ತ ಅನ್ನಿಸಬ್ಯಾಡ್ರಪ್ಪೋ..!

ಏಳನೇ ಬಾರಿಗೆ ಸ್ಪರ್ಧಿಸಿದ್ದ ಎಂ.ಸಿ.ಮನಗೂಳಿ ಈ ಬಾರಿ ವಿಜಯದ ನಗೆ
Last Updated 16 ಮೇ 2018, 9:21 IST
ಅಕ್ಷರ ಗಾತ್ರ

ಸತತ ನಾಲ್ಕು ಬಾರಿ ಸೋತಿದ್ದರೂ, ಛಲದಂಕ ಮಲ್ಲನಂತೆ ಏಳನೇ ಬಾರಿಗೆ ಸ್ಪರ್ಧಿಸಿದ್ದ ಎಂ.ಸಿ.ಮನಗೂಳಿ ಈ ಬಾರಿ ವಿಜಯದ ನಗೆ ಬೀರಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರದ ಮತದಾರ ಅನುಕಂಪದಿಂದ ಮನಗೂಳಿಗೆ ಮತ ದಯ ಪಾಲಿಸಿದ್ದಾನೆ.

‘ಮನಗೂಳಿ ಸೋತು ಸತ್ತ ಅನ್ನಿಸಬ್ಯಾಡ್ರಪ್ಪೋ. ಗೆದ್ದು ಸತ್ತ ಅನ್ನಿಸಿ’ ಎಂದು ಚುನಾವಣಾ ಪ್ರಚಾರದಲ್ಲಿ ಹೇಳುತ್ತಿದ್ದ ಮಾತುಗಳು ಮತಗಳಾಗಿ ಪರಿವರ್ತನೆಯಾಗಿವೆ. ‘ಹಿಂದಿನ ಚುನಾವಣೆಯಲ್ಲಿ ನಾನು ಕ್ಷೇತ್ರದಲ್ಲಿ ಸೋತಿದ್ದರೂ; ಟೇಬಲ್‌ನಲ್ಲಿ ಸೋತಿದ್ದೆ. ಅದು ಪುನರಾವರ್ತನೆಯಾಗಬಾರದು’ ಎಂದು ಖುದ್ದು ಎಣಿಕೆ ಲೆಕ್ಕಾಚಾರದಲ್ಲಿ ಕುಳಿತಿದ್ದೆ ಎಂದು ಗೆಲುವಿನ ಬಳಿಕ ಮನಗೂಳಿ ತಮ್ಮ ಅನಿಸಿಕೆ ಹಂಚಿಕೊಂಡರು.

ಸತತ ಎರಡು ಬಾರಿ ಶಾಸಕರಾಗಿದ್ದ ರಮೇಶ ಭೂಸನೂರ ವಿರುದ್ಧ ಆಡಳಿತ ವಿರೋಧದ ಅಸಮಾಧಾನದ ಅಲೆ, ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ವಿವಾದ ಹಿಂದೂ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿತ್ತು. ಇದರ ಜತೆಗೆ ಒನ್‌ ಮ್ಯಾನ್‌ ಆರ್ಮಿ ಶಂಭು ಕಕ್ಕಳಮೇಲಿ ವಿರೋಧವೂ ಭೂಸನೂರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಭಿವೃದ್ಧಿಗೆ ಮನ್ನಣೆ: ಜಾತಿ ರಾಜಕಾ ರಣಕ್ಕೆ ಹೆಸರಾದ ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ. ಕಣದ ಲ್ಲಿದ್ದ ನಾಲ್ವರು ಪ್ರಮುಖ ಅಭ್ಯರ್ಥಿಗಳಲ್ಲಿ ಮೂವರು ಪ್ರಬಲ ಜಾತಿಗೆ ಸೇರಿದವರು.

ಒಂದೊಂದು ಜಾತಿ ಮತದಾ ರರು ತಮ್ಮ ಅಭ್ಯರ್ಥಿಯ ಬೆನ್ನು ಹತ್ತಿದರೆ, ಕಾಂಗ್ರೆಸ್‌ ಅಭ್ಯರ್ಥಿ ಯಶ ವಂತರಾಯಗೌಡ ಎಲ್ಲ ಜಾತಿಯವರನ್ನು ತಮ್ಮೊಟ್ಟಿಗೆ ಕರೆದೊಯ್ಯುವ ಯತ್ನ ನಡೆಸಿದರ ಫಲವಾಗಿ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಕಿತ್ತಾಟ ಮುಳುವಾಗಿದ್ದಂತೆ, ಈ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ರವಿಕಾಂತ ಪಾಟೀಲ ಕಮಲಕ್ಕೆ ಮಗ್ಗುಲ ಮುಳ್ಳಾಗಿ ಕಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲ ನಿರೀಕ್ಷೆಯಂತೆ ತೀವ್ರ ಪೈಪೋಟಿ ನೀಡಿದ್ದಾರೆ. ಜನರ ಅನುಕಂಪವನ್ನು ಮತಗಳನ್ನಾಗಿ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದ ಪರಿಣಾಮ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಶಿವಾನಂದ ‘ಕೈ’ ಹಿಡಿದ ಅಹಿಂದ: 1999ರಿಂದ ಈಚೆಗೆ ಸತತ ಎರಡು ಬಾರಿ ಶಾಸಕರಾಗುವ ಅವಕಾಶ ನೀಡದ ಬಸವನಬಾಗೇವಾಡಿ ಮತ ದಾರ ಬದಲಾದ ಕಾಲಘಟ್ಟದಲ್ಲಿ ಈ ಬಾರಿ ಪಾಟೀಲ ಅವರಿಗೆ ಮತ್ತೊಮ್ಮೆ ಸುವರ್ಣಾವಕಾಶ ಕಲ್ಪಿಸಿದ್ದಾರೆ.

ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ; ಬಲವರ್ಧನೆ ಗೊಂಡು ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಜಾತ್ಯತೀತ ಜನತಾದಳ ಕೊನೆ ಕ್ಷಣದವರೆಗೂ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿತು.

ಜನರ ಬಾಯಲ್ಲಿನ ಅನುಕಂಪ ಮತಗಳಾಗಿ ಪರಿವರ್ತನೆಯಾಗದಿ ರುವುದರಿಂದ ಸೋಮನಗೌಡ (ಅಪ್ಪುಗೌಡ) ಬಿ.ಪಾಟೀಲ ಮನಗೂಳಿ ಮತ್ತೊಮ್ಮೆ ಪರಾಭವಗೊಂಡರು. ಪಂಚಮಸಾಲಿ ಸಮಾಜ ಒಟ್ಟಾಗಿ ಬೆನ್ನಿಗೆ ನಿಂತರೂ ಪ್ರಯೋಜನಕಾರಿಯಾಗಿಲ್ಲ. ಅಹಿಂದ ಶಿವಾನಂದ ‘ಕೈ’ ಹಿಡಿದಿದೆ.

ಅನುಕಂಪದ ಅಲೆ ಸೋಮನಗೌಡಗೆ..!: ಸರಳ, ಸಜ್ಜನ ರಾಜಕಾರಣಿ ಎಂದೇ ಜಿಲ್ಲೆಯಲ್ಲಿ ಮನೆ ಮಾತಾಗಿದ್ದ ಮಾಜಿ ಸಚಿವ ಬಿ.ಎಸ್‌.ಪಾಟೀಲ ಸಾಸನೂರ ಪುತ್ರ ಸೋಮನಗೌಡ ಬಿ.ಪಾಟೀಲ ಸಾಸನೂರ ದೇವರಹಿಪ್ಪರಗಿಯಲ್ಲಿ ಅನು ಕಂಪದ ಅಲೆಯಲ್ಲಿ ವಿಜಯಿಯಾಗಿದ್ದಾರೆ.

ಪ್ರತಿಸ್ಪರ್ಧಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಸಹ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇಬ್ಬರ ಪರ ಅನುಕಂಪದ ಅಲೆ ಕ್ಷೇತ್ರದಲ್ಲಿ ಬಿರುಸಾಗಿತ್ತು. ರಡ್ಡಿ ಸಮುದಾಯದ ಮತದಾರರೇ ಹೆಚ್ಚಿದ್ದು, ರಾಜುಗೌಡ ಬೆನ್ನಿಗೆ ಪಂಚಮಸಾಲಿ ಸಮಾಜ ನಿಂತಿತ್ತು. ಮತದಾನ ದಿನದ ಮುನ್ನಾ ದಿನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಸ್‌.ಪಾಟೀಲ ಯಾಳಗಿ ಮಿಂಚಿನ ಸಂಚಲನ ಮೂಡಿಸಿ, ಅಹಿಂದ ವರ್ಗದ ಮತ ತಮ್ಮ ‘ಕೈ’ ವಶ ಪಡಿಸಿಕೊಂಡಿದ್ದರಿಂದ, ಸೋಮನಗೌಡ ಗೆಲುವಿನ ದಾರಿ ಸುಗಮವಾಯ್ತು. ಸೋಮನಗೌಡ ಪರ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ತಮ್ಮ ಸಮಾಜದ ಮತ ಸೆಳೆ ಯುವಲ್ಲಿ ಯಶಸ್ವಿಯಾಗಿದ್ದು, ಮೋದಿ ಮೋಡಿಯೂ ಮತತಂದುಕೊಟ್ಟಿದೆ.

ಕುಟುಂಬ ರಾಜಕಾರಣಕ್ಕೆ ಕೊಕ್ಕೆ..?

ಬಿಜೆಪಿ ದಲಿತ ಮುಖಂಡ ರಲ್ಲೊಬ್ಬರಾದ ಗೋವಿಂದ ಕಾರ ಜೋಳ ಪುತ್ರ ಡಾ.ಗೋಪಾಲ ಕಾರಜೋಳ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪ ಟ್ಟಿದ್ದ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಮತದಾ ರರು ಕುಟುಂಬ ರಾಜಕಾ ರಣದ ಕುಡಿಗೆ ಅವಕಾಶ ಕೊಟ್ಟಿಲ್ಲ.

ಕಾರಜೋಳ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಂತ್ರಗಾರಿಕೆ ಯಶಸ್ವಿಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹ ಮತ ಸೆಳೆಯುವಲ್ಲಿ ಯಶಸ್ವಿ ಯಾಗಿದ್ದರೂ; ಗೆಲುವಿನ ದಡ ಮುಟ್ಟುವಲ್ಲಿ ಡಾ.ಗೋಪಾಲ ವಿಫಲರಾಗಿದ್ದಾರೆ.

ನಾಮಪತ್ರ ಸಲ್ಲಿಕೆಯ ಅಂತಿಮ ದಿನದ ಮುನ್ನಾ ದಿನ ಟಿಕೆಟ್‌ ಕೈ ತಪ್ಪಿದ್ದರಿಂದ ಕಾಂಗ್ರೆಸ್‌ ಕೈ ಹಿಡಿದ ವಿಠ್ಠಲ ಕಟಕದೊಂಡ ಪರ ಕ್ಷೇತ್ರದಲ್ಲಿ ಅನುಕಂಪದ ಅಲೆ ವ್ಯಕ್ತವಾಗಿದೆ. ಮತಗಳಾಗಿಯೂ ಪರಿವರ್ತನೆಯಾಗಿವೆ. ಎಡಗೈ–ಬಲಗೈ ಒಟ್ಟಾಗುವ ಜತೆ, ಬಿಜೆಪಿ ಕೆಲ ಮುಖಂಡರು ರಹಸ್ಯವಾಗಿ ಚುನಾವಣೆ ನಡೆಸಿದರೂ ಗೆಲುವಿನ ದಡ ತಲುಪಲಾಗಿಲ್ಲ.

ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತ ಅಂತ ರದಿಂದ ಪರಾಭವ ಗೊಂಡಿದ್ದ ದೇವಾನಂದ ಚವ್ಹಾಣ ವಿಜಯದ ಮಾಲೆ ಧರಿಸಿದ್ದಾರೆ. ಸೋತರೂ ಕ್ಷೇತ್ರದಿಂದ ಪಲಾಯನಗೈಯದೆ ಎಲ್ಲರೊಟ್ಟಿಗೂ ಅತಿ ವಿನಯ ದಿಂದ ನಡೆದುಕೊಂಡಿದ್ದು, ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ವಿದ್ದರೂ; ತಿರಸ್ಕರಿಸಿದ್ದರು.

**
ತಾಯಂದಿರು–ಸಹೋದರಿಯರು, ಯುವ ಸಮೂಹ ಅಭಿವೃದ್ಧಿ ಕೆಲಸ ನೋಡಿ ನಮ್ಮ ಎಂ.ಬಿ.ಪಾಟೀಲ ಎಂಬ ಹೆಮ್ಮೆ ಮೆರೆದಿದ್ದಾರೆ. ಮೋದಿಯ ಮೋಡಿಯೂ ಇಲ್ಲಾ; ಸ್ವಾಮೀಜಿಗಳ ವಿರೋಧವನ್ನು ಲೆಕ್ಕಿಸಿಲ್ಲ
- ಎಂ.ಬಿ.ಪಾಟೀಲ, ಬಬಲೇಶ್ವರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT