7

ನೀಚರೂ ನಾವೇ, ಉತ್ತಮರೂ ನಾವೇ!

Published:
Updated:

ಜೀವನದಲ್ಲಿ ಏನೇನೋ ಮಾಡಬೇಕೆಂದುಕೊಳ್ಳುತ್ತಿರುತ್ತೇವೆ; ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ; ಕೆಲವೊಂದನ್ನು ಆರಂಭಿಸಿ ಸ್ವಲ್ಪ ಸಮಯ ಬಳಿಕ ಅದರಿಂದ ದೂರ ಸರಿಯುತ್ತೇವೆ; ಮತ್ತೆ ಕೆಲವನ್ನು ಅರ್ಧದ ವರೆಗೆ ತಂದು ಅನಂತರದಲ್ಲಿ ಕೈ ಬಿಡುತ್ತೇವೆ; ಇನ್ನು ಹಲವನ್ನು ಆರಂಭಿಸಿದೆಯೇ ಕೇವಲ ಮನಸ್ಸಿನಲ್ಲಿಯೇ ನಿಲ್ಲಿಸಿಬಿಡುತ್ತೇವೆ. ಭರ್ತೃಹರಿಯ ‘ನೀತಿಶತಕ’ದ ಪದ್ಯವೊಂದು ಈ ಮನೋಧರ್ಮವನ್ನು ಸೊಗಸಾಗಿ ವರ್ಣಿಸಿದೆ:

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ

ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾಃ |

ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ

ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ ||

ಇದರ ತಾತ್ಪರ್ಯ: ‘ಕೆಳಮಟ್ಟದವರು ವಿಘ್ನಗಳ ಹೆದರಿಕೆಯಿಂದ ಕೆಲಸವನ್ನೇ ಕೈಗೊಳ್ಳುವುದಿಲ್ಲ; ಮಧ್ಯವರ್ಗದವರು ಅಡ್ಡಿಗಳು ಬಂದಾಗ  ಹೆದರಿ ಕೈಗೊಂಡ ಕಾರ್ಯವನ್ನು ಅಲ್ಲಿಗೇ ಬಿಟ್ಟುಬಿಡುತ್ತಾರೆ. ಉತ್ತಮರು ಮತ್ತೆ ಮತ್ತೆ ಅಡ್ಡಿಗಳು ಒದಗಿದರೂ ಕೈಗೊಂಡ ಕಾರ್ಯವನ್ನು ಮುಗಿಸದೇ ಬಿಡುವುದಿಲ್ಲ.’

ನೀತಿಶತಕ ಮೂರು ರೀತಿಯ ಜನರನ್ನು ಗುರುತಿಸಿದೆ; ಮೊದಲನೆಯವರು – ನೀಚರು, ಎಂದರೆ ಕೆಳಮಟ್ಟದವರು; ಎರಡನೆಯವರು – ಮಧ್ಯಮರು; ಮೂರನೆಯವರು – ಉತ್ತಮರು.

ಯಾವುದೇ ಕೆಲಸವೂ ಸುಗಮವಾಗಿ ಸಾಗದು; ಏನೇನೋ ಅಡ್ಡಿ–ಆತಂಕಗಳು ಎದುರಾಗುತ್ತಲೇ ಇರುತ್ತವೆ. ಅಂಥವರು ಭಯದಿಂದ ಕೆಲಸವನ್ನು ಆರಂಭಿಸುವುದಕ್ಕೇ ಹೋಗುವುದಿಲ್ಲ. ಅಂಥವರನ್ನು ಅಧಮರು, ನೀಚರು ಎನ್ನುತ್ತಿದ್ದಾನೆ, ಭರ್ತೃಹರಿ. ಮತ್ತೆ ಕೆಲವರು ಕೆಲಸವನ್ನು ಉತ್ಸಾಹದಿಂದ ಆರಂಭಿಸುತ್ತಾರೆ; ಆದರೆ ಒಮ್ಮೆ ತೊಂದರೆಗಳು ಕಾಣಿಸಿಕೊಂಡ ಬಳಿಕ ಅಷ್ಟಕ್ಕೆ ನಿಲ್ಲಿಸಿ, ಸೋಲನ್ನು ಒಪ್ಪಿ, ಸುಮ್ಮನಾಗುತ್ತಾರೆ. ಇಂಥವರೇ ಮಧ್ಯಮರು. ಇನ್ನು ಕೆಲವರು ಹಿಡಿದ ಕೆಲಸವನ್ನು ಮುಗಿಸುವ ತನಕ ಬಿಡದೆ ಮಾಡುತ್ತಾರೆ; ಏನೇ ತೊಂದರೆಗಳು ಎದುರಾದರೂ ಸೋಲನ್ನು ಅವರು ಒಪ್ಪಿಕೊಳ್ಳುವುದಿಲ್ಲ; ಗುರಿಯನ್ನು ತಲುಪಿಯೇ ತಲುಪುತ್ತಾರೆ. ಅಂಥವರು ಉತ್ತಮರು ಎನಿಸಿಕೊಳ್ಳುತ್ತಾರೆ.

ಸಮಾಜದಲ್ಲಿ ಈ ಮೂರು ಸ್ತರದ ಜನರೂ ಇರುತ್ತಾರೆ. ಅವರ ಪ್ರಮಾಣ ಎಷ್ಟು ಎನ್ನುವುದರಿಂದ ಆ ಸಮಾಜದ ಗಟ್ಟಿತನ ನಿರ್ಧಾರವಾಗುತ್ತದೆ. ಆದರೆ ಉತ್ತಮರ ಸಂಖ್ಯೆ ಯಾವತ್ತೂ ಕೂಡ ಕಡಿಮೆಯೇ ಇರುತ್ತದೆ. ಹೀಗಾಗಿಯೇ ಸಾಧಕರ, ಮಹಾತ್ಮರ ಸಂಖ್ಯೆ ಯಾವಾಗಲೂ ಕಡಿಮೆಯೇ.

ಈ ಮೂರೂ ರೀತಿಯ ಜನರು ಕುಟುಂಬದಲ್ಲೂ ಇರುತ್ತಾರೆ. ಕೆಲವರು ಮನೆಯಲ್ಲಿ ಎದುರಾಗುವ ಕಷ್ಟಗಳಿಗೆ ಹೆದರಿ ಪಲಾಯನ ಮಾಡುತ್ತಾರೆ. ಕೆಲವರು ಮಾತ್ರವೇ ಸಂಸಾರದ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಿ ಅದನ್ನು ನಿಲ್ಲಿಸುತ್ತಾರೆ.

ಸಮಾಜ ಮತ್ತು ಕುಟುಂಬ ಮಾತ್ರವೇ ಅಲ್ಲ, ಎಲ್ಲರಲ್ಲಿಯೂ ಈ ಮೂರು ಸ್ತರದ ವ್ಯಕ್ತಿತ್ವಗಳು ಮನೆಮಾಡಿರುತ್ತವೆ. ಒಮ್ಮೊಮ್ಮೆ ನಮಗೆ ಉತ್ಸಾಹ ಹೆಚ್ಚಿರುತ್ತದೆ; ಒಮ್ಮೊಮ್ಮೆ ಕಡಿಮೆ ಆಗುತ್ತಿರುತ್ತದೆ. ಇದರ ಪರಿಣಾಮವನ್ನು ನಾವು ಹಿಡಿದಿರುವ ಕೆಲಸದಲ್ಲಿ ಪ್ರತಿಫಲನವಾಗುತ್ತಿರುತ್ತದೆ. ಯಾರೊಬ್ಬರೂ ಕೂಡ ಒಂದೇ ಮಟ್ಟದ ಉತ್ಸಾಹವನ್ನು ಕಾಪಾಡಿಕೊಳ್ಳಲು ಆಗದು; ಅದು ಪ್ರತಿದಿನದ ಎಷ್ಟೋ ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಮಾನಸಿಕಸ್ಥಿತಿ, ದೈಹಿಕ ಆರೋಗ್ಯ, ಮನೆಯ ವಾತಾವರಣ, ಕಚೇರಿಯ ವಾತಾವರಣ – ಹೀಗೆ ಎಲ್ಲವೂ ಕೂಡ ನಮ್ಮ ಕಾರ್ಯಕ್ಷಮತೆಯನ್ನು ಪ್ರಭಾವಿಸುತ್ತಿರುತ್ತವೆ. ಆದರೆ ನಮ್ಮ ಗುರಿಯ ಬಗ್ಗೆ ನಮಗೆ ಸ್ಪಷ್ಟತೆ ಇದ್ದರೆ ಆಗ ನಮಗೆ ಎದುರಾಗುವ ತೊಂದರೆಗಳೇ ಗುರುಗಳಾಗಿ ನಮಗೆ ದಾರಿದೀಪವಾಗುತ್ತವೆ; ಯಶಸ್ಸಿಗೆ ಕಾರಣವಾಗುತ್ತವೆ. ಹೀಗಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲೇ ನಾವು ಅದರ ಸಾಧಕ–ಬಾಧಕಗಳನ್ನು ಕುರಿತು ಚೆನ್ನಾಗಿ ವಿಶ್ಲೇಷಿಸಬೇಕು. ಈ ಕೆಲಸವನ್ನು ಕೈಗೊಳ್ಳಲು ಇರುವ ಕಾರಣಗಳೇನು ಎಂಬುದನ್ನೂ ಮೊದಲು ಯೋಚಿಸಬೇಕು. ಒಮ್ಮೆ ಕೆಲಸವನ್ನು ಆರಂಭಿಸಿದ ಮೇಲೆ ಏನೆಲ್ಲ ತೊಂದರೆಗಳು ಎದುರಾಗಬಹುದು ಎಂಬ ಮುಂದಾಲೋಚನೆಯನ್ನೂ ಮಾಡಬೇಕು. ಆಗ ನಾವು ಗುರಿಯನ್ನು ಮುಟ್ಟಲು ಕಷ್ಟವಾಗದು.

ನಾವು ನೀಚರೋ ಮಧ್ಯಮರೋ ಅಥವಾ ಉತ್ತಮರೋ – ಎಂಬುದನ್ನು ಯಾರೋ ಹೊರಗಿನರು ಕೊಡುವ ಪ್ರಮಾಣಪತ್ರಗಳಿಂದ ಸಿದ್ಧವಾಗುವುದು; ನಾವು ಕೈಹಿಡಿದಿರುವ ಕೆಲಸಗಳೇ ನಮ್ಮ ವ್ಯಕ್ತಿತ್ವದ ಕನ್ನಡಿಯೂ ಹೌದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry