ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಚಡ್ಡಿ ಕದ್ದ ಪ್ರಸಂಗ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಹಳೆಯ ಕಾಲದ ಸರ್ಕಾರಿ ಅಧಿಕಾರಿಯಾಗಿದ್ದ ಅಪ್ಪ ಆಗ ಕೋಲಾರದಲ್ಲಿ ಕೆಲಸ ಮಾಡುತ್ತಿದ್ದರು. ಬಲು ಎತ್ತರದ ಆಳಾಗಿದ್ದ ನಮ್ಮಪ್ಪ ದಪ್ಪನಾದ ಗಿರಿಜಾ ಮೀಸೆ ಬಿಟ್ಟಿದ್ದರು. ಜೊತೆಗೆ ಮೀಸೆ ಗಾತ್ರದ ಸಿಟ್ಟೂ ಇತ್ತು. ಅವರ ಹಿರಿಯ ಅಧಿಕಾರಿಗಳೂ ಉಚಾಯಿಸಿ ಮಾತನಾಡುತ್ತಿರಲಿಲ್ಲವಂತೆ. ಒಮ್ಮೆ ಹಿರಿಯ ಅಧಿಕಾರಿಯೊಬ್ಬರು ಇವರನ್ನು ಏನೋ ಅಂದು ಆತನನ್ನು ಹೊಡೆಯಲು ರೂಲರ್ ತೆಗೆದುಕೊಂಡು ಅಟ್ಟಿಸಿಕೊಂಡು ಹೋಗಿದ್ದರಂತೆ. ತನ್ನ ಕೈಕೆಳಗಿನ ಸಿಬ್ಬಂದಿಯನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಅಪ್ಪ, ಸಿಟ್ಟು ಬಂದಾಗ ಅವರಿಗೂ ಚೆನ್ನಾಗಿ ಬಾರಿಸುತ್ತಿದ್ದರು. ಹೀಗೆ ವಾರಕ್ಕೆರಡು ಬಾರಿ ತಪ್ಪದೇ ಅಪ್ಪನಿಂದ ಏಟು ತಿನ್ನುತ್ತಿದ್ದವರೆಂದರೆ ಕ್ಲಾರ್ಕು ಮುಸ್ತಫಾ ಮತ್ತು ಪ್ಯೂನ್ ಚಿನ್ನಪ್ಪಯ್ಯ. ತಮಗೆ ಏಟು ಬೀಳುತ್ತಿದ್ದುದ್ದನ್ನು ಅವರೆಂದೂ ತಪ್ಪಾಗಿ ತೆಗೆದುಕೊಳ್ಳಲಿಲ್ಲ. ಬದಲಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ‘ಸಾಯಾಬ್ರು ಇವತ್ತು ನನಗೆ ಹೊಡೆದರು!’ ಅಂತ. ಆ ದಿನಗಳೂ ಹಾಗೇ ಇದ್ದುವು ಬಿಡಿ. ಇದಕ್ಕೆ ನಾನೇನು ಹೊರತಾಗಿರಲಿಲ್ಲ. ಹನ್ನೆರಡರ ವಯಸ್ಸಿನ ನನಗೂ ಆಗಾಗ ತಪ್ಪದೆ ಒದೆಗಳು ಬೀಳುತ್ತಿದ್ದವು.

ಇಂತಹ ಅಪ್ಪನಿಗೆ ಕೆಲವು ತಿಕ್ಕಲುಗಳೂ ಇದ್ದವು. ಆಗಾಗ ಚುಟ್ಟಾ ತಂದು ಸೇದುವುದು, ಸಿಗರೇಟಿಗೆ ಪೈಪ್ ಸೇರಿಸಿ ಸೇದುವುದು, ಪಂಚೆ ಉಟ್ಟು ಆಫೀಸಿಗೆ ಹೋಗುವುದು, ಸೂಟುಗಳನ್ನು ಹೊಲಿಸಿಕೊಳ್ಳುವುದು, ಶಿವನ ವೇಷ ಹಾಕಿಕೊಂಡು ಫೋಟೊ ತೆಗೆಸಿಕೊಳ್ಳುವುದು, ತನ್ನ ಸಾಹಸಗಳನ್ನು ಕಥೆಕಟ್ಟಿ ಹೇಳುವುದು... ಹೀಗೆ ನಾನಾ ಖಯಾಲಿಗಳು. ಅಪ್ಪನಿಗೆ ತೀರಾ ಇಷ್ಟವಾದ ವಸ್ತುವೊಂದು ಮನೆಯಲ್ಲಿತ್ತು. ಅದು ಅವರು ಕೆಲಸಕ್ಕೆ ಸೇರಿದಾಗ ಹೊಲಿಸಿಕೊಂಡಿದ್ದ ಖಾಕಿ ಚಡ್ಡಿ. ಅದಾಗಲೇ ಮೂವತ್ತು ವರ್ಷ ಕಳೆದಿದ್ದರೂ ಅದನ್ನು ಬಲು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ಖಾಕಿ ಚಡ್ಡಿ ಮತ್ತು ಬಾಂಡಲೆ ಆಕಾರದ ಹ್ಯಾಟು ಹಾಕಿಕೊಂಡು ಆಫೀಸಿಗೆ ಹೋಗುತ್ತಿದ್ದರಂತೆ. 1974ರ ಕಾಲಕ್ಕಾಗಲೇ ಅಧಿಕಾರಿಗಳು ಖಾಕಿ ಚಡ್ಡಿ ಹಾಕುವ ಅಭ್ಯಾಸ ಬಿಟ್ಟಿದ್ದರು. ಆದರೆ ನಮ್ಮಪ್ಪನ ತಲೆಯಲ್ಲಿ ಇನ್ನೂ ಚಡ್ಡಿ ವ್ಯಾಮೋಹ ಕರಗಿರಲಿಲ್ಲ. ಮಗನಾದ ನನಗಿಂತ ಆ ಚಡ್ಡಿಯ ಮೇಲೆ ಅಪ್ಪನಿಗೆ ಹೆಚ್ಚಿನ ಪ್ರೀತಿ ಇತ್ತು. ಅದೋ ಬಲು ದೊಗಲೆಯಾದ ಖಾಕಿ ಚಡ್ಡಿ. ಅದರ ಒಂದು ಕಾಲಿನೊಳಗೆ ನಾನು ತೂರಬಹುದಾದಷ್ಟು ದೊಡ್ಡದಾಗಿ ಅಕರಾಳ ವಿಕರಾಳವಾಗಿತ್ತು.

ಆ ಚಡ್ಡಿಯನ್ನು ಹಾಕಿಕೊಂಡು ಒಮ್ಮೆ ಆಫೀಸಿಗೆ ಹೋಗಬೇಕೆಂದು ಅಪ್ಪ ಬಲು ಇಷ್ಟ ಪಡುತ್ತಿದ್ದರೂ ಅಮ್ಮ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಒಮ್ಮೆ ಅಮ್ಮ ಮತ್ತು ನಾನು ಹೊರಗೆ ಹೋಗಿದ್ದು ಮನೆಗೆ ಬಂದಾಗ ಮುಸ್ತಫಾ ಓಡಿ ಬಂದು ಮುಸಿ-ಮುಸಿ ನಗುತ್ತಾ ಸುದ್ದಿ ಕೊಟ್ಟಿದ್ದ: ‘ಅಮ್ಮಾರೆ ಸಾಯಾಬ್ರು ಚಡ್ಡಿ ಹಾಕಿಕೊಂಡು ಆಫೀಸಿಗೆ ಬಂದು ಬುಟ್ಟವ್ರೆ' ಅಂತ. ಅಮ್ಮನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ಸಿಟ್ಟಿನಿಂದ ಉರಿಯುತ್ತಿದ್ದ ಅಮ್ಮ ‘ಹೋಗಿ ನೋಡಿ ಕಂಡು ಬರೋಗು’ ಅಂತ ನನ್ನನ್ನು ಆಫೀಸಿಗೆ ಕಳಿಸಿದಳು. ನಾನು ಆಫೀಸಿಗೆ ಬಂದು ಅಪ್ಪನ ಕೋಣೆಯೊಳಕ್ಕೆ ಹೋಗಿ ನೋಡಿದೆ. ತಲೆಯ ಮೇಲೆ ಬಾಂಡಲೆ ಹ್ಯಾಟು ಇತ್ತು. ಟೇಬಲ್ ಕೆಳಗೆ ಬಗ್ಗಿ ನೋಡಿದಾಗ ಖಾಕಿ ಚಡ್ಡಿ ಹಾಕಿದ್ದ ಅಪ್ಪನ ರೋಮಭರಿತ ಕಾಲುಗಳು ನನಗೆ ಭಯ ಹುಟ್ಟಿಸಿ ಒಂದೇ ಓಟಕ್ಕೆ ಓಡಿ ಬಂದು ಅಮ್ಮನಿಗೆ ಆಘಾತಕಾರಿ ಸುದ್ದಿ ಮುಟ್ಟಿಸಿದೆ. ಅವಳ ಕೋಪದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದ ಹಾಗಿತ್ತು. ಮಧ್ಯಾಹ್ನವಾಯಿತು. ಅಪ್ಪ ಊಟಕ್ಕೆ ಮನೆಗೆ ಬರುವ ಹೊತ್ತು. ಅಪ್ಪ ಮನೆಗೆ ಬಂದು ಊಟಕ್ಕೆ ಕೂರುವ ಮುನ್ನ ಚಡ್ಡಿ ಬಿಚ್ಚಿದಾಗ ಅದನ್ನು ಎತ್ತಿಕೊಂಡು ಓಡಿ ಹೋಗಿ ಬಿಡಬೇಕು ಅಂತ ನನಗೆ ಸೂಚನೆ ಕೊಟ್ಟಳು. ಮುಂದೆ ಇನ್ನೇನು ರಾಮಾಯಣವೋ ಅಂತ ನನಗೆ ಗಾಬರಿಯಾಗತೊಡಗಿತ್ತು.

ಅಪ್ಪನಿಗೆ ಅಮ್ಮನ ಕೋಪದ ಸುಳಿವು ಸಿಕ್ಕಿತ್ತೇನೋ ಮೆಲ್ಲನೆ ಬೆಕ್ಕಿನಂತೆ ಬಂದರು. ನಾನು ಪುಸ್ತಕ ಹಿಡಿದು ಅದರ ಮರೆಯಲ್ಲೇ ನೋಡುತ್ತಿದ್ದೆ ಚಡ್ಡಿ ಹಾರಿಸಲು. ಆದರೆ ಅಪ್ಪ ಚಡ್ಡಿ ಬಿಚ್ಚದೇ ಊಟಕ್ಕೆ ಕೂತು ಬಿಟ್ಟರು. ನಾನು ಚಡ್ಡಿ ಹಾರಿಸುವ ಅವಕಾಶ ತಪ್ಪಿದ್ದಕ್ಕಾಗಿ ಕೈ ಕೈ ಹಿಸುಕಿಕೊಂಡೆ. ಏನೂ ಮಾತಿಲ್ಲ, ಮೌನ ಬಹಳ ಕಠೋರವಾಗಿತ್ತು. ಅದ್ಯಾವಾಗ ಜ್ವಾಲಾಮುಖಿ ಸಿಡಿಯುತ್ತದೋ ಹೇಳಲಾಗದಂತಹ ಪರಿಸ್ಥಿತಿ. ಉಂಡ ಮೇಲೆ ಸ್ವಲ್ಪ ಹೊತ್ತು ಮಲಗುವ ಅಭ್ಯಾಸವಿತ್ತು ಅಪ್ಪನಿಗೆ. ನಾನು ನೋಡುತ್ತಲೇ ಇದ್ದೆ. ಮರೆತವರ ಹಾಗೆ ಅಪ್ಪ ಚಡ್ಡಿ ಕಳೆದು ಪಂಚೆ ಉಟ್ಟು ಹಾಸಿಗೆ ಮೇಲೆ ಕೂತ ತಕ್ಷಣ ನಾನು ಸರ್ರನೆ ಮೇಲೆದ್ದು ಸರಗಳ್ಳನ ಹಾಗೆ ಚಡ್ಡಿ ಎಳೆದುಕೊಂಡು ಓಟ ಕಿತ್ತೆ. ‘ಲೋ...’ ಎಂದು ಕೂಗುತ್ತಿದ್ದ ಅಪ್ಪನ ಧ್ವನಿ ಹಿಂದೆಯೇ ಬರುತ್ತಿತ್ತು.

ಅಪ್ಪ ಎಲ್ಲಿ ನನ್ನ ಬೆನ್ನಹಿಂದೆ ಬಿದ್ದಿದ್ದಾರೋ ಅನ್ನುವ ಭಯ ನನಗಿತ್ತು. ಸದ್ಯ ಅಪ್ಪ ಬರಲಿಲ್ಲ. ಇನ್ನು ಚಡ್ಡಿಯನ್ನೇನು ಮಾಡುವುದು ಗೊತ್ತಾಗಲಿಲ್ಲ. ಅದನ್ನು ಬಿಸಾಕಿದರೆ ಅಪ್ಪ ನನ್ನ ಚರ್ಮ ಸುಲಿಯುವುದು ಖಾತ್ರಿಯಾಗಿತ್ತು. ಒಂದೆರಡು ಗಂಟೆ ಊರ ಹೊರಗಿನ ಕೆರೆಯ ಬಳಿ ಕಳೆದು ಚಡ್ಡಿ ಹಿಡಿದು ಮನೆಗೆ ಬಂದು ಕಿಟಕಿಯಲ್ಲಿ ಇಣುಕಿ ನೋಡಿದೆ ಅಪ್ಪ ಇರಲಿಲ್ಲ. ಕಚೇರಿಗೆ ಹೋಗಿಯಾಗಿತ್ತು. ಚಡ್ಡಿ ಕದ್ದಿದ್ದ ನನ್ನನ್ನು ಕಂಡು ಅಮ್ಮ ಶಹಬಾಸ್‌ಗಿರಿ ಕೊಟ್ಟಳು.

ನಾನು ಒಳಗೆ ಬಂದಾಗ ‘ಕತ್ತರಿ ತಾ’ ಅಂದಳು ಅಮ್ಮ. ತಂದು ಕೊಟ್ಟೆ. ‘ಕತ್ತರಿಸು’ ಅಂದಳು ಅಮ್ಮ. ನನಗೆ ಗಾಬರಿಯಾಯಿತು. ಚಡ್ಡಿ ಕಳ್ಳನಾಗಿದ್ದ ನಾನು ಅದನ್ನು ಕತ್ತರಿಸಿದರೆ ಅಪ್ಪ ನನ್ನನ್ನು ಮಗನೆಂದೂ ಪರಿಗಣಿಸದೇ ಕೊಲೆ ಮಾಡುವ ಸಂಭವ ಇತ್ತು. ‘ಬ್ಯಾಡ ಕಣಮ್ಮ’ ಎಂದು ಗೋಗರೆದೆ. ಆಕೆ ಅದೇನು ದೃಢ ನಿರ್ಧಾರ ಮಾಡಿದ್ದಳೋ ಕಾಣೆ. ನನ್ನಿಂದ ಚಡ್ಡಿಯನ್ನು ನೂರಾರು ಚೂರುಗಳಾಗಿ ಕತ್ತರಿಸಿಸಿ ನೆಲ ಒರೆಸಿ ಸಿಟ್ಟು ತೀರಿಸಿಕೊಂಡುಬಿಟ್ಟಳು. ಸ್ವಲ್ಪ ಹೊತ್ತಾದ ಮೇಲೆ ಅಮ್ಮನ ಸಿಟ್ಟಿಳಿದು ಅವಳಿಗೂ ಚಿಂತೆ ಶುರುವಾಯಿತು, ಏನಾಗುತ್ತದೋ ಎಂದು. ಚಡ್ಡಿ ಕಳ್ಳನಾದ ನನ್ನ ಸ್ಥಿತಿ ದೇವರಿಗೇ ಪ್ರೀತಿ.

ಅಪ್ಪ ಉಪ ಕಚೇರಿಗಳಿಗೆ ಹೋಗಿ ಮನೆಗೆ ಬರುತ್ತಿದ್ದುದು ರಾತ್ರಿ ಎಂಟರ ನಂತರವೇ. ಅಮ್ಮ ಆವತ್ತು ನನಗೆ ಬೇಗ ಊಟ ಹಾಕಿ ಮಲಗಿಸಿಬಿಟ್ಟಳು. ಭಯದಲ್ಲಿ ನನಗೆ ನಿದ್ದೆ ಬರಲಿಲ್ಲ. ಅಪ್ಪ ಬಂದವರೆ ‘ಎಲ್ಲಿ ಅವನು?’ ಎಂದು ಗರ್ಜಿಸಿದರು. ಇನ್ನೂ ನಿದ್ದೆ ಬರದೆ ಹೊರಳಾಡುತ್ತಿದ್ದ ನನ್ನ ಎದೆ ಬಡಿತ ನಿಂತೆ ಹೋದಂತಾಯಿತು. ಬಂದು ಮಲಗಿದ್ದ ನನ್ನನ್ನು ನೋಡಿ ವದೆಯದಿದ್ದುದು ನನ್ನ ಪುಣ್ಯ. ಬೆಳಗ್ಗೆಯ ವೇಳೆಗೆ ಅಪ್ಪನ ಸಿಟ್ಟಿಳಿದಿತ್ತು. ನಾನು ಬೆಕ್ಕಿನ ಮರಿಯ ಹಾಗೆ ಸುಳಿದಾಡುತ್ತಿದ್ದೆ. ಚಡ್ಡಿ ಸುದ್ದಿಯನ್ನು ಅಪ್ಪ ಮತ್ತೆ ಎತ್ತಲೇ ಇಲ್ಲ. ಆಗಾಗ ತನ್ನ ಹರಿದ ಚಡ್ಡಿ ನೆನಸಿಕೊಂಡು ನಿಟ್ಟುಸಿರು ಬಿಡುತ್ತಿದ್ದರು. ಮುಂದೆ ಅಪ್ಪನ ಚಡ್ಡಿ ಹರಿದ ಕಥೆ ಎಲ್ಲರಿಗೂ ಗೊತ್ತಾಗಿ ಅಪ್ಪನ ಚಡ್ಡಿ ವ್ಯಾಮೋಹ ಬಿಟ್ಟು ಹೋಯ್ತು. ಅಮ್ಮನಿಗೆ ಅಪ್ಪನನ್ನು ಕಿಚಾಯಿಸಲು ಹೊಸ ಕಾರಣ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT