7
ರಾಮನಗರದಲ್ಲಿ ಇಕ್ಬಾಲ್‌ ಹುಸೇನ್‌ಗೆ ನಿರಾಸೆ; ಚನ್ನಪಟ್ಟಣದಲ್ಲಿ ಫಲಿಸಿದ ಕಾಂಗ್ರೆಸ್–ಜೆಡಿಎಸ್ ತಂತ್ರಗಾರಿಕೆ

ಎರಡೂ ಕಡೆ ಗೆದ್ದು ಬೀಗಿದ ಎಚ್‌ಡಿಕೆ

Published:
Updated:
ಎರಡೂ ಕಡೆ ಗೆದ್ದು ಬೀಗಿದ ಎಚ್‌ಡಿಕೆ

ರಾಮನಗರ: ತಮಗೆ ರಾಜಕೀಯ ಮರುಜನ್ಮ ನೀಡಿದ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಎರಡರಲ್ಲೂ ಗೆದ್ದು ಬೀಗಿದ್ದಾರೆ.

ರಾಮನಗರ ಕ್ಷೇತ್ರದ ಜನತೆ ಎಂದಿನಂತೆ ಅವರಿಗೆ ಆಶೀರ್ವಾದ ಮಾಡಿದ್ದರೆ, ಚನ್ನಪಟ್ಟಣದ ಜನರೂ ವಿಜಯದ ಮಾಲೆ ಹಾಕಿ ಸ್ವಾಗತಿಸಿದ್ದಾರೆ. ಎರಡೂ ಕ್ಷೇತ್ರದಲ್ಲೂ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡು ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದ್ದರು. ಆ ಪ್ರಯತ್ನ ಫಲ ನೀಡಿದೆ.ಹೂವಿನ ಹಾಸಿಗೆ ಎಂದುಕೊಂಡ ರಾಮನಗರ ಕ್ಷೇತ್ರ ಅವರು ಅಂದುಕೊಂಡಷ್ಟು ಸುಲಭದ ಗೆಲುವಾಗಿಲ್ಲ. ಇಲ್ಲಿ ಗೆಲುವಿನ ಅಂತರ ಕುಸಿದಿದೆ. ಆದರೆ ಕಬ್ಬಿಣದ ಕಡಲೆ ಎಂದುಕೊಂಡಿದ್ದ ಚನ್ನಪಟ್ಟಣ ಕ್ಷೇತ್ರ ಅಷ್ಟೇ ಸುಲಭದ ತುತ್ತಾಗಿದೆ. ರಾಜಕೀಯ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡಿದೆ.

ಜೆಡಿಎಸ್‌ –ಕಾಂಗ್ರೆಸ್ ತಂತ್ರ: ಚನ್ನಪಟ್ಟಣ ಕ್ಷೇತ್ರದಿಂದ ಎಚ್‌ಡಿಕೆ ಕಣಕ್ಕೆ ಇಳಿದದ್ದು ಕಾರ್ಯಕರ್ತರ ಒತ್ತಡದಿಂದ. ಕಳೆದ ಚುನಾವಣೆಯಲ್ಲಿ ಇಲ್ಲಿ ಅವರ ಪತ್ನಿ ಅನಿತಾ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಿಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದಾಗಿ ಕುಮಾರಸ್ವಾಮಿಯೇ ಸ್ಪರ್ಧಿಸುವಂತೆ ಆಯಿತು. ಕಡೆಗೂ ಈ ನಿರ್ಧಾರ ಫಲ ನೀಡಿದೆ.

ಕ್ಷೇತ್ರದಲ್ಲಿ ನೀರಾವರಿ ಯೋಜನೆಯನ್ನೇ ನಂಬಿಕೊಂಡು ಪ್ರಚಾರ ನಡೆಸಿದ್ದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ರನ್ನು ಜನ ಬಹುವಾಗಿ ಮೆಚ್ಚಿಲ್ಲ. ಬದಲಾಗಿ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಅಲೆ ಕೆಲಸ ಮಾಡಿದೆ.

ಕುಮಾರಸ್ವಾಮಿ ಕಣಕ್ಕಿಳಿಯುವುದು ಖಾತ್ರಿಯಾದ ಬಳಿಕ ತಟಸ್ಥವಾಗಿದ್ದ ಕಾಂಗ್ರೆಸ್ ಕಡೆಯ ಹೊತ್ತಿನಲ್ಲಿ ಸಚಿವ ಎಚ್‌.ಎಂ. ರೇವಣ್ಣರನ್ನು ಸ್ಪರ್ಧೆಗೆ ಇಳಿಸಿತ್ತು. ಅವರು ಗೆಲ್ಲಲು ಆಗದಿದ್ದರೂ ಕಾಂಗ್ರೆಸ್ ತಂತ್ರ ಇಲ್ಲಿ ಕೆಲಸ ಮಾಡಿದೆ. ಅಹಿಂದ ಮತಗಳನ್ನು ಕಾಂಗ್ರೆಸ್ ಸೆಳೆಯುವ ಮೂಲಕ ಯೋಗೇಶ್ವರ್‌ಗೆ ಪೆಟ್ಟು ನೀಡಿದೆ. ಈ ಹಿಂದೆ ಐದು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆ ಬಯಸಿದ್ದ ಸಿಪಿವೈ ಕನಸು ನುಚ್ಚುನೂರಾಗಿದೆ.

ರಾಮನಗರದಲ್ಲಿ ಕುಸಿದ ಅಂತರ: ರಾಮನಗರದಲ್ಲಿ ಈ ಬಾರಿ ಕುಮಾರಸ್ವಾಮಿ ಭಾರಿ ಅಂತರದ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಗೆಲುವು ಕಂಡಿದ್ದರೂ ಫಲಿತಾಂಶ ಜೆಡಿಎಸ್ ಕಾರ್ಯಕರ್ತರು ನಿರೀಕ್ಷಿಸಿದಂತೆ ಆಗಿಲ್ಲ. ‘ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿಲ್ಲ’ ಎಂದು ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಮತದಾರರು ಮನ್ನಣೆ ಕೊಟ್ಟಿಲ್ಲ. ಆದರೆ, ಅವರು ಪಡೆದ ಮತಗಳ ಅಂತರ ಕಡಿಮೆ ಆಗಿದೆ. ಈ ಬಾರಿ ಎಚ್‌ಡಿಕೆ 22,636 ಅಂತರದಿಂದ ಇಲ್ಲಿ ಗೆದ್ದಿದ್ದಾರೆ.ಇಕ್ಬಾಲ್‌ ಹುಸೇನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಆಗುವುದಕ್ಕೂ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು.

ಹಳ್ಳಿ–ಹಳ್ಳಿ ಸುತ್ತಿ ಭರ್ಜರಿ ಪ್ರಚಾರ ನಡೆಸಿದ್ದರು. ಡಿ.ಕೆ. ಶಿವಕುಮಾರ್, ಸುರೇಶ್ ಆದಿಯಾಗಿ ಪಕ್ಷದ ನಾಯಕರು ಅವರ ಬೆನ್ನಿಗೆ ನಿಂತಿದ್ದರು. ಆದಾಗ್ಯೂ ಗೆಲುವಿಗೆ ಅದು ಸಾಕಾಗಿಲ್ಲ. ಪ್ರಚಾರವನ್ನೇ ಕೈಗೊಳ್ಳದ ಬಿಜೆಪಿ ಅಭ್ಯರ್ಥಿ ಎಚ್.ಲೀಲಾವತಿ 4871 ಮತ ಪಡೆದಿದ್ದಾರೆ.

ಗೆದ್ದು ಸೋತ ಇಕ್ಬಾಲ್‌

ರಾಮನಗರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್‌ ಒಂದು ಸುತ್ತಿನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹಿಂದಿಕ್ಕುವ ಮೂಲಕ ಅಚ್ಚರಿ ಮೂಡಿಸಿದರು. ಒಟ್ಟು 20 ಸುತ್ತುಗಳ ಮತ ಎಣಿಕೆಯಲ್ಲಿ ಎಚ್‌ಡಿಕೆ

ಆರನೇ ಸುತ್ತಿನ ಅಂತ್ಯಕ್ಕೆ 12,399 ಮತಗಳಿಂದ ಮುಂದಿದ್ದರು, ಏಳನೇ ಸುತ್ತಿಗೆ ಈ ಮುನ್ನಡೆ 7192ಕ್ಕೆ ಕುಸಿಯಿತು. ಎಂಟನೇ ಸುತ್ತಿನಲ್ಲಿ 1998 ಹಾಗೂ ಒಂಬತ್ತನೇ ಸುತ್ತಿನಲ್ಲಿ 832 ಅಲ್ಪ ಮತಗಳ ಅಂತರ

ಉಂಟಾಯಿತು.

ಹತ್ತನೇ ಸುತ್ತಿನಲ್ಲಿ ಇಕ್ಬಾಲ್‌ 180 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದಾಗ ಕ್ಷಣ ಕಾಲ ಕಾಂಗ್ರೆಸ್ ಕಾರ್ಯಕರ್ತರು ರೋಮಾಂಚನಗೊಂಡರು. ಆದರೆ ಮರು ಸುತ್ತಿನಲ್ಲಿಯೇ ಎಚ್‌ಡಿಕೆ 3005 ಮತಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry