ಯಾವ ಪಕ್ಷದ ಹಿಡಿತಕ್ಕೂ ಸಿಲುಕದ ಜಿಲ್ಲೆ

7
ರಾಯಚೂರು: ಕಾಂಗ್ರೆಸ್‌ 3, ಜೆಡಿಎಸ್‌ 2, ಬಿಜೆಪಿ 2 ಸ್ಥಾನಗಳಲ್ಲಿ ಹಂಚಿಕೆಯಾದ ಗೆಲುವು

ಯಾವ ಪಕ್ಷದ ಹಿಡಿತಕ್ಕೂ ಸಿಲುಕದ ಜಿಲ್ಲೆ

Published:
Updated:

ರಾಯಚೂರು: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಈ ಹಿಂದೆ ಇದ್ದ ಪಕ್ಷಗಳ ಬಲಾಬಲವು ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಗಮನಾರ್ಹ.

ರಾಯಚೂರು ಗ್ರಾಮೀಣ, ಲಿಂಗಸುಗೂರು ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವು ಗೆಲುವು ಸಾಧಿಸಿದೆ. ರಾಯಚೂರು ನಗರ ಹಾಗೂ ದೇವದುರ್ಗ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ, ಜೆಡಿಎಸ್‌ ಅಭ್ಯರ್ಥಿಗಳು ಮಾನ್ವಿ ಹಾಗೂ ಸಿಂಧನೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

2013 ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿಲ್ಲ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್‌ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮಣೆ ಹಾಕಿದ್ದು, ಬಸನಗೌಡ ದದ್ದಲ ಅವರನ್ನು ಚುನಾಯಿಸಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ ಪಕ್ಷದ ಗೆಲುವು ಪುನರಾವರ್ತನೆಯಾಗಿಲ್ಲ; ಆದರೆ ಗೆದ್ದಿರುವ ಅಭ್ಯರ್ಥಿ ಮರು ಆಯ್ಕೆಯಾಗಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವ ನಿಲುವನ್ನು ನಗರ ಕ್ಷೇತ್ರದ ಜನರು ತೋರಿಸಿದಂತಿದೆ.

ಮಾನ್ವಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಹಂಪಯ್ಯ ನಾಯಕ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯತ್ತ ಒಲವು ತೋರದ ಮತದಾರರು ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರನ್ನು ಆಯ್ಕೆ ಮಾಡಿದ್ದಾರೆ.

ಸಿಂಧನೂರು ಕ್ಷೇತ್ರದಲ್ಲಿಯೂ ಕಳೆದ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಕಾಂಗ್ರೆಸ್‌ ಪಕ್ಷವನ್ನು ಜನರು ತೆಗೆದು ಹಾಕಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ವೆಂಕಟರಾವ್‌ ನಾಡಗೌಡ ಅವರನ್ನು ಬೆಂಬಲಿಸಿ ಗೆಲುವು ನೀಡಿದ್ದಾರೆ. ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಅವರನ್ನು ಜನರು ಆಯ್ಕೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್್ ಅಭ್ಯರ್ಥಿಗೆ ಗಲ್ಲಿಸಿದ್ದಾರೆ.

ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ ಅವರು ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ. ಮಸ್ಕಿ ಕ್ಷೇತ್ರ ರಚನೆಯದಾಗಿನಿಂದಲೂ ಹಿಡಿತ ಮುಂದುವರಿಸಿರುವುದು ವಿಶೇಷ. ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ತುರ್ವಿಹಾಳ ನಿರೀಕ್ಷೆಗೂ ಮೀರಿ ಪೈಪೋಟಿ ನಡೆಸಿರುವುದು, ಪ್ರತಿ ಸುತ್ತಿನ ಮತಗಳ ಎಣಿಕೆಯಲ್ಲಿ ಕಂಡು ಬಂತು. ಆದರೆ, ಕೊನೆಯ ಸುತ್ತಿನ ಮತ ಎಣಿಕೆಯು ಮುಗಿದಾಗ ಕೇವಲ 178 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದರು.

ಸಂಭ್ರಮ, ವಿಜಯೋತ್ಸವ: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆಯಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದ ಫಲಿತಾಂಶ ಮೊದಲಿಗೆ ಪ್ರಕಟವಾಯಿತು. ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಗೆಲುವು ಖಾತ್ರಿ ಪಡಿಸಿಕೊಂಡಿದ್ದರು.

ಮಾಹಿತಿ ಪಡೆದ ಜೆಡಿಎಸ್ ಕಾರ್ಯಕರ್ತರು ಹಸಿರು ಬಣ್ಣದ ಗುಲಾಲ್ ಎರಚಿ ಸಂಭ್ರಮಿಸಿದರು. ಅಭ್ಯರ್ಥಿ ಹಾಗೂ ಪಕ್ಷದ ಪರವಾಗಿ ಘೋಷಣೆ ಕೂಗಿದರು. ಅನಂತರ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಆರಂಭದಿಂದಲೂ ಒಮ್ಮೆ ಮುನ್ನಡೆ, ಇನ್ನೊಮ್ಮೆ ಹಿನ್ನೆಡೆ ಸಾಧಿಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ದದ್ದಲ ಬಸನಗೌಡ ಅವರು ಐದು ಸಾವಿರ ಮುನ್ನೆಡೆ ದಾಖಲಿಸುತ್ತಿದ್ದಂತೆ ಗೆಲುವು ಊಹಿಸಿಕೊಂಡು ವಿಜಯೋತ್ಸವ ಆಚರಿಸಿದರು. ಬೆಂಬಲಿಗರು ದದ್ದಲ ಬಸನಗೌಡರನ್ನು ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಲಿಂಗಸೂಗೂರು ಕ್ಷೇತ್ರದ ಫಲಿತಾಂಶ ಕೊನೆಯಲ್ಲಿ ಪ್ರಕಟವಾಯಿತು. ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆದು ಕೊನೆಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹುಲಗೇರಿ ಅವರು ಗೆಲುವಿನ ನಗೆ ಬೀರಿದರು.

ಏಳು ಕ್ಷೇತ್ರಗಳಲ್ಲಿ ಒಂದೊಂದು ವಿಧಾನಸಭೆ ಕ್ಷೇತ್ರದ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಆಯಾ ಪಕ್ಷದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಮೇಲಕ್ಕೆ ಎತ್ತಿ ವಿಜಯೋತ್ಸವ ಆಚರಿಸಿದರೆ. ಮತ ಎಣಿಕೆ ಕೇಂದ್ರದ ಹೊರಗಡೆ ಆಯಾ ಪಕ್ಷದ ಕಾರ್ಯಕರ್ತರು ಗುಲಾಲ್ ಎರಚಿಕೊಂಡು, ಕೇಕೆ ಹಾಕಿ ಸಂಭ್ರಮಿಸಿದರು. ಜೊತೆಗೆ ಪಕ್ಷದ ಧ್ವಜವನ್ನು ಹಿಡಿದುಕೊಂಡು ಪಕ್ಷದ ಪರವಾಗಿ ಘೋಷಣೆ ಹಾಕಿದರು. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದವರು ವಿಜಯೋತ್ಸವ ಮಾಡಿದ್ದು, ಗಮನ ಸೆಳೆಯಿತು.

ಕಾಂಗ್ರೆಸ್‌ ಅಭ್ಯರ್ಥಿ ಸೈಯದ್ ಯಾಸೀನ್ ಅವರ ವಿರುದ್ಧ ಎರಡನೇ ಬಾರಿ ಗೆಲುವು ಸಾಧಿಸಿದ್ದರಿಂದ ನಗರ

ದಲ್ಲಿ ಅದ್ಧೂರಿಯಾಗಿ ವಿಜಯೋತ್ಸವ ಮಾಡಲಾಯಿತು. ಮತ ಎಣಿಕೆ ಕೇಂದ್ರದ ಆವರಣದೊಳಗೆ ಬೆಂಬಲಿಗರು ಜಮಾಯಿಸಿ ಡಾ.ಶಿವರಾಜ ಪಾಟೀಲರನ್ನು ಮೇಲಕ್ಕೆ ಎತ್ತಿ ಸಂಭ್ರಮಿಸಿದರು.

ಮತ ಎಣಿಕೆ ಕೇಂದ್ರದ ಹೊರಗಡೆ ಬಂದ ಕೂಡಲೇ ಮತ್ತಷ್ಟು ಬೆಂಬಲಿಗರು ಹಾಗೂ ಕಾರ್ಯಕರ್ತರು ಜಮಾಯಿಸಿ ಹೂಮಾಲೆ ಹಾಕಿ, ಗುಲಾಲ್ ಎರಚಿ ವಿಜಯೋತ್ಸವ ಮಾಡಿದರು. ಅಲ್ಲಿಂದಲೇ ಡೊಳ್ಳುಗಳ ಮೂಲಕ ಮೆರವಣಿಗೆ ಆರಂಭಿಸಿ ಮುಂದೆ ಸಾಗಿದರು. ನಗರದ ವಿವಿಧ ವೃತ್ತಗಳಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಮಾಡಿದರು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಕಾರ್ಯಕರ್ತರ ಪರದಾಟ

ನಗರದ ಇನ್‌ಫೆಂಟ್‌ ಜೀಸಸ್ ಶಾಲೆಯಲ್ಲಿ ಮಂಗಳವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಾಹಿತಿ ಪಡೆಯಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ತೊಂದರೆ ಅನುಭವಿಸುವಂತಾಯಿತು.

ಮತ ಎಣಿಕೆ ಕೇಂದ್ರ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಹೋಗಲು ನಾಲ್ಕು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆ ಕೈಗೊಳ್ಳಲಾ

ಗಿತ್ತು. ಮತ ಎಣಿಕೆ ಕೇಂದ್ರದಿಂದ ಎರಡನೇ ಹಂತದ ಭದ್ರತೆಯ ನಂತರ ಜನರಿಗೆ ಜಮಾಯಿಸಲು ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳ ಭವಿಷ್ಯ ಏನಾಯಿತು ಎಂದು ತಿಳಿದುಕೊಳ್ಳಲು ಮೂರು ಪಕ್ಷಗಳ ಕಾರ್ಯಕರ್ತರು ಹರಸಾಹಸ ಪಟ್ಟರು.

ಫಲಿತಾಂಶ ಘೋಷಣೆ ಮಾಡುವ ವ್ಯವಸ್ಥೆ ಇರಲಿಲ್ಲ. ಮತ ಎಣಿಕೆ ಕೇಂದ್ರದಿಂದ ಯಾರೊಬ್ಬರೂ ಹೊರಗಡೆ ಬಂದರೂ ಏನಾಯಿತು? ಯಾರು ಮುನ್ನಡೆ ಗಳಿಸಿದರು? ಎಂದು ಕೇಳಿ ಮಾಹಿತಿ ಪಡೆದರು. ಕೆಲವರು ಮೊಬೈಲ್ ಫೋನ್‌ಗಳಲ್ಲಿ ಮಾಹಿತಿ ಪಡೆದುಕೊಂಡು ಕಾರ್ಯಕರ್ತರಿಗೆ ತಿಳಿಸುತ್ತಿದ್ದರು. ತಮ್ಮ ಅಭ್ಯರ್ಥಿಗೆ ಮುನ್ನಡೆ ದೊರೆತಿದೆ ಎಂಬ ಮಾಹಿತಿ ದೊರೆತ ಕೂಡಲೇ ಪಕ್ಷದ ಕಾರ್ಯಕರ್ತರು ಘೋಷಣೆ ಹಾಕಿ ಸಂತಸ ವ್ಯಕ್ತಪಡಿಸಿದರು.

**

ಜಿಲ್ಲೆಯ ನಾಯಕರು ಹೊಂದಾಣಿಕೆಯಿಂದ ಚುನಾವಣೆ ಎದುರಿಸಿದ್ದರೆ, ಐದು ಕ್ಷೇತ್ರಗಳಲ್ಲಿ ಖಂಡಿತ ಗೆಲುವು ಸಿಗುತ್ತಿತ್ತು

- ರಾಮಣ್ಣಾ ಇರಬಗೇರಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ 

**

ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎನ್ನುವ ನಿರೀಕ್ಷೆ ಇತ್ತು. ಕೊನೆ ಗಳಿಗೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಹಣಬಲಕ್ಕೆ ಮತದಾರರು ಬದಲಾಗಿರುವ ಸಾಧ್ಯತೆ ಇದೆ

- ಶರಣಪ್ಪಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry