ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಪಾಠ ಕಲಿಸುವ ಕೆಫೆ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಭಿನ್ನ ಶೈಲಿಗಳ, ನಮನಮೂನೆಯ ಕೆಫೆ, ರೆಸ್ಟೊರೆಂಟ್‍ಗಳಿವೆ. ಗ್ರಾಹಕರನ್ನು ಸೆಳೆಯಲೆಂದೇ ವಿಭಿನ್ನವಾಗಿ ಆಲೋಚಿಸಿ ಹೊಸ ಹೊಸ ಪರಿಕಲ್ಪನೆಯ ಕಫೆಗಳನ್ನು ರೂಪಿಸಲಾಗುತ್ತದೆ. ಹಾಗೆಯೇ ಬ್ಯಾಂಕಾಕ್‍ನ ಈ ಕೆಫೆ ಕೂಡ ಹೊಸ ಪರಿಕಲ್ಪನೆಯೊಂದಿಗೆ ಪರಿಚಯಗೊಂಡಿದೆ.

ಕಿದ್ ಮಾಯ್ (ಹೊಸದಾಗಿ ಆಲೋಚಿಸು) ಎಂಬ ಹೆಸರಿನ ಈ ಕೆಫೆಯಲ್ಲಿ ಜೀವನದ ಬಗ್ಗೆ ಅಲ್ಲ, ಸಾವಿನ ಬಗೆಗಿನ ಅನುಭವವೊಂದನ್ನು ಕಟ್ಟಿಕೊಡುವುದು ವಿಶೇಷ.

‘ಸಾವಿನ ಬಗ್ಗೆ ಸದಾ ಜಾಗೃತವಾಗಿರುವುದು ನಮ್ಮೊಳಗಿನ ಆಸೆ ಆಮಿಷ, ಕೋಪವನ್ನು ಕರಗಿಸುತ್ತದೆ’ ಎಂಬ ಬುದ್ಧನ ವೇದಾಂತವೇ ಇದಕ್ಕೆ ಪ್ರೇರಣೆಯಂತೆ. ಈ ವೇದಾಂತವನ್ನು ಸಾರುವ ಉದ್ದೇಶದೊಂದಿಗೆ ಇದೇ ಜನವರಿಯಲ್ಲಿ ಕೆಫೆ ತೆರೆಯಲಾಗಿದೆ.

ಹಾಗಿದ್ದರೆ ಸಾವಿನ ಅನುಭವವನ್ನು ಇಲ್ಲಿ ಹೇಗೆ ನೀಡಲಾಗುತ್ತದೆ? ಅದಕ್ಕೆಂದೇ ಕೆಫೆಯೊಳಗೆ ಶವದ ಪೆಟ್ಟಿಗೆಯೊಂದನ್ನು ಇಡಲಾಗಿದೆ. ಅದೇ ಇಲ್ಲಿನ ಮುಖ್ಯ ಆಕರ್ಷಣೆ.

ಸಾವು ಎಂದಾಕ್ಷಣ ಭಯ ಪಡುವವರೇ ಹೆಚ್ಚು, ಆದರೆ ಅದರ ಬಗ್ಗೆ ಚಿಂತನೆಗೆ ತೊಡಗುವುದೂ ಮುಖ್ಯವೇ. ಸಾವು ಬುದ್ಧಿವಂತ ಸಮಾಲೋಚಕ. ಅದನ್ನು ಹತ್ತಿರದಿಂದ ಕಂಡರೆ, ಜೀವನವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಜೀವನ, ಸಾವಿನ ನಡುವಿನ ವ್ಯತ್ಯಾಸದ ಗೆರೆ ಬದುಕನ್ನು ಚಿಂತನೆಗೆ ಹಚ್ಚುತ್ತದೆ. ಆದ್ದರಿಂದ ಅಂಥ ಒಂದು ಸಣ್ಣ ಅನುಭವವನ್ನು ಶವದ ಪೆಟ್ಟಿಗೆಯಲ್ಲಿ ಮಲಗುವುದರ ಮೂಲಕ ಇಲ್ಲಿ ಪಡೆಯಲಾಗುತ್ತದೆ.

ಗ್ರಾಹಕ, ಶವದ ಪೆಟ್ಟಿಗೆಯಲ್ಲಿ ಮಲಗುತ್ತಿದ್ದಂತೆ, ಸಿಬ್ಬಂದಿ ಅದನ್ನು ಮುಚ್ಚುತ್ತಾರೆ. ಗಾಳಿಯಾಡಲು ಒಳಗೆ ಎರಡು ಪುಟ್ಟ ರಂಧ್ರಗಳಿವೆ. ಬೇಕೆಂದಷ್ಟು ಹೊತ್ತು ಒಳಗೆ ಇರಬಹುದು. ಯಾವುದೇ ಬೆಳಕು ನುಸುಳುವುದಿಲ್ಲ. ಆದರೆ ಹೊರಬರುವಾಗ ಹೃದಯ ಬೆಳಗುವುದು ಗ್ಯಾರಂಟಿಯಂತೆ.

ಇಂಥ ಅನುಭವಕ್ಕೆ ಜನರು ಹೆಚ್ಚು ತೆರೆದುಕೊಳ್ಳಬೇಕು ಎಂಬ ಕಾರಣಕ್ಕೆ ಶವದಪೆಟ್ಟಿಗೆಯೊಳಗೆ ಮಲಗುವವರಿಗೆ ಪಾನೀಯಗಳ ಮೇಲೆ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಇಲ್ಲಿ ಪಾನೀಯಗಳ ಹೆಸರೂ ಭಿನ್ನವೇ. ಬರ್ತ್. ಡೆತ್, ಓಲ್ಡ್ ಏಜ್, ಸಫರಿಂಗ್ ಹೀಗಿವೆ ಅವುಗಳ ಹೆಸರುಗಳು...

ಪ್ರವೇಶದ ಬಳಿ ಅಸ್ಥಿಪಂಜರವನ್ನು ಇಡಲಾಗಿದೆ. ಕೆಫೆಯ ಹೊರ ಗೋಡೆಗಳಿಗೂ ಸಾವಿನ ಗೂಡಾರ್ಥ ನೀಡುವ ಕಲಾಕೃತಿಗಳಿವೆ. ನೀವು ಮಾಡುತ್ತಿರುವ ಕೆಲಸದಲ್ಲಿ ಖುಷಿಯಾಗಿದ್ದೀರಾ?, ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವುದಾದರೆ, ಮುಂದಿನ ಗುರಿಯಾದರೂ ಏನು? ಹೀಗೆ ಮನಸ್ಸನ್ನು ಯೋಚನೆಗೆ ಎಡೆಮಾಡಿಕೊಡುವ ವಾಕ್ಯಗಳನ್ನೂ ನಮೂದಿಸಲಾಗಿದೆ.

‘ಇದೊಂದು ಹೊಸ ಅನುಭವ ಎಂದುಕೊಂಡು ಬರುವ ಗ್ರಾಹರಕರಿಗೆ ನಂತರ ಇದರ ಮಹತ್ವ ಗೊತ್ತಾಗಿದ್ದು, ಪೆಟ್ಟಿಗೆಯಿಂದ ಹೊರಬರುತ್ತಿದ್ದಂತೆ ಅವರ ಮುಖದಲ್ಲಿ ಕಾಣುವ ಮೌನವೇ ಉತ್ತರ ನೀಡುತ್ತದೆ’ ಎನ್ನುತ್ತಾರೆ ಕೆಫೆಯ ಮಾಲೀಕ. ಶವಪೆಟ್ಟಿಗೆ ಒಳಗಿನ ಅನುಭವಗಳನ್ನು ಬರೆಯಲೆಂದೇ ಗೋರಿಯಂಥ ಜಾಗದಲ್ಲಿ ಪುಸ್ತಕವೊಂದನ್ನು ಇಡಲಾಗಿದೆ.

ತಂತ್ರಜ್ಞಾನದಲ್ಲಿ ಮುಳುಗಿ ಹೋಗಿರುವ ಯುವಜನರನ್ನು ಜೀವನದ ಕಡೆಗೆ ಸೆಳೆಯುವ ಸಿದ್ಧಾಂತದ ಪ್ರಾಯೋಗಿಕ ರೀತಿಯೂ ಇದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT