7
ಬಂಡಾಯದ ಬಾವುಟ ಹಾರಿಸಿದವರಿಗೆ ಮುಖಭಂಗ, ನಾಮಬಲದ ಮುಂದೆ ಕೊಚ್ಚಿಹೋದ ಅನುಕಂಪ

‘ಕುಮಾರಸ್ವಾಮಿ ಮುಖ್ಯಮಂತ್ರಿ’ ವಿಷಯಕ್ಕೆ ಗೆಲುವು

Published:
Updated:
‘ಕುಮಾರಸ್ವಾಮಿ ಮುಖ್ಯಮಂತ್ರಿ’ ವಿಷಯಕ್ಕೆ ಗೆಲುವು

ಮಂಡ್ಯ: ಜಿಲ್ಲೆಯಾದ್ಯಂತ ಮೊಳಗುತ್ತಿದ್ದ ‘ಕುಮಾರಣ್ಣ ಮುಖ್ಯಮಂತ್ರಿಯಾಗಬೇಕು’  ಮಾತು ಗೆದ್ದಿದೆ. ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನಾಮಬಲ, ಜಾತಿಬಲ ಜೆಡಿಎಸ್‌ನ ಎಲ್ಲ ಅಭ್ಯರ್ಥಿಗಳಿಗೆ ವಿಜಯಮಾಲೆ ಹಾಕಿದೆ. ವರಿಷ್ಠರ ಕಣ್ಣೀರು ಅಲೆಯಂತೆ ಹರಿದು ಇಡೀ ಜಿಲ್ಲೆಯನ್ನು ಆವರಿಸಿಕೊಂಡಿದೆ.

ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್‌ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದೆ. ಈ ಫಲಿತಾಂಶ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹೆದ್ದೆಗೇರಲು ಕೊಟ್ಟಿರುವ ಕೊಡುಗೆ ಎಂದೇ ಬಣ್ಣಿಸಲಾಗುತ್ತಿದೆ. ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದೇ ಜಿಲ್ಲೆಯಾದ್ಯಂತ ಜೆಡಿಎಸ್‌ ಮುಖಂಡರು ಪ್ರಚಾರ ನಡೆಸಿದ್ದರು.

ಅವರು 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಕೊಡುಗೆಗಳನ್ನು ಶ್ರೀರಕ್ಷೆಯಾಗಿಟ್ಟು ಕೊಂಡು ಮತಯಾಚನೆ ಮಾಡಿದ್ದರು.  ಮುಖ್ಯಮಂತ್ರಿ ವಿಚಾರವೇ ಚುನಾವಣೆಯ ವಿಷಯವಾಗಿತ್ತು. ಇದಕ್ಕೆ ಸ್ಪಷ್ಟ ಪ್ರತಿಫಲ ದೊರೆತಿದ್ದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.

ಬಂಡಾಯಗಾರರಿಗೆ ಪಾಠ:  ಜೆಡಿಎಸ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್‌.ಡಿ.ದೇವೇಗೌಡ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಎನ್‌.ಚಲುವರಾಯಸ್ವಾಮಿ ಅವರನ್ನು ಸೋಲಿಸಲೇಬೇಕು ಎಂಬ ಸವಾಲು ಅವರ ಮೇಲಿತ್ತು.

ತಿಂಗಳಿಗೆ ಮೂರರಿಂದ ನಾಲ್ಕು ಬಾರಿ ನಾಗಮಂಗಲ ಕ್ಷೇತ್ರಕ್ಕೆ ಬರುತ್ತಿದ್ದ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರು. ಆದಿಚುಂಚನಗಿರಿ ಮಠದಲ್ಲಿ ಅಮಾವಾಸ್ಯೆ ಪೂಜೆ ನಡೆಸಿ ಗಮನ ಸೆಳೆದಿದ್ದರು. ಈಗ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಪ್ರತಿಷ್ಠೆ ಗೆಲುವು ಸಾಧಿಸಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಜೆಡಿಎಸ್‌ನ ಸುರೇಶ್‌ಗೌಡ ಗೆಲುವು ಸಾಧಿಸಿದ್ದಾರೆ.

ನಾಗಮಂಗಲದಲ್ಲಿ ಹಲವು ಬಾರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿತ್ತು. ಸುರೇಶ್‌ಗೌಡ ಜಯಗಳಿಸಿದ್ದರೂ ಇದು ದೇವೇಗೌಡ ಅವರ ಗೆಲುವು ಎಂದೇ ಬಿಂಬಿಸಲಾಗುತ್ತಿದೆ. ಚಲುವರಾಯಸ್ವಾಮಿ ಜೆಡಿಎಸ್‌ನಲ್ಲಿ ಜಿಲ್ಲೆಯ ನಾಯಕನಾಗಿ ಕುಮಾರಸ್ವಾಮಿ ಅವರ ಜೊತೆಗಿನ ಸ್ನೇಹ ‘ಸ್ವಾಮಿ ಸಹೋದರರು’ ಎಂದೇ ಪ್ರಸಿದ್ಧಿ ಪಡೆದಿತ್ತು.

ಅವರು ಪಕ್ಷ ತ್ಯಜಿಸಿದ ನಂತರ ಕುಮಾರಸ್ವಾಮಿ ಒಬ್ಬಂಟಿಯಾದರು ಎನ್ನಲಾಗುತ್ತಿತ್ತು. ಚುಲುವರಾಯಸ್ವಾಮಿ ಅಭಿವೃದ್ಧಿ ಕಾರ್ಯಗಳನ್ನು ಮುನ್ನೆಲೆಗೆ ತಂದು ಮತಯಾಚನೆ ಮಾಡಿದ್ದರು. ಆದರೆ ನಾಮಬಲದ ಮುಂದೆ ಅಭಿವೃದ್ಧಿಯ ಮಾತುಗಳು ಕೊಚ್ಚಿ ಹೋಗಿವೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ರಮೇಶ್‌ಬಾಬು ಬಂಡಿಸಿದ್ದೇಗೌಡರ ವಿರುದ್ಧ ಜೆಡಿಎಸ್‌ ವರಿಷ್ಠರು ಕಾಂಗ್ರೆಸ್‌ನಿಂದಲೇ ಅಭ್ಯರ್ಥಿಯನ್ನು ತಂದು ನಿಲ್ಲಿಸಿದ್ದರು.

ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ ತ್ಯಜಿಸಿದ ನಂತರ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ರವೀಂದ್ರ ಶ್ರೀರಂಠಯ್ಯ ಅವರಿಗೆ ಕುಮಾರಸ್ವಾಮಿ ಅವರೇ ಟಿಕೆಟ್‌ ಕೊಟ್ಟಿದ್ದರು. ಕಳೆದ ಚುನಾವಣೆಯಲ್ಲಿ ರವೀಂದ್ರ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿದ್ದರು. ಜೀವನವಿಡೀ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ ರಾಜಕೀಯ ಅಂತ್ಯ ಕಂಡ ಎ.ಸಿ.ಶ್ರೀಕಂಠಯ್ಯ ಪುತ್ರನಾಗಿರುವ ರವೀಂದ್ರ ಮೇಲೆ ಜನರಿಗೆ ಅನುಕಂಪ ಮೊದಲಿನಿಂದಲೂ ಇತ್ತು. ಎಲ್ಲವನ್ನು ಲೆಕ್ಕಾಚಾರ ಹಾಕಿ ಟಿಕೆಟ್‌ ನೀಡಿದ ಕುಮಾರಸ್ವಾಮಿ ರವೀಂದ್ರ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೀಗರಿಗೆ ಗೆಲುವು: ಮದ್ದೂರು ಕ್ಷೇತ್ರದಲ್ಲಿ ಎಚ್‌.ಡಿ.ದೇವೇಗೌಡರ ಬೀಗರೂ ಆಗಿರುವ ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಜಿಲ್ಲೆಯಲ್ಲೇ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬೀಗರನ್ನು ಗೆಲ್ಲಿಸಲು ದೇವೇಗೌಡರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ, ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದೇ ಹೇಳಲಾಗುತ್ತಿತ್ತು.

ಆದರೆ ಇಲ್ಲಿ ದೇವೇಗೌಡರ ಕುಟುಂಬ ಪ್ರೀತಿಗೆ ಜಯ ಸಿಕ್ಕಿದೆ. ದೇವೇಗೌಡರ ಮಗ, ಡಿ.ಸಿ.ತಮ್ಮಣ್ಣ ಅಳಿಯ ಡಾ.ರಮೇಶ್‌ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಗಮನ ಸೆಳೆದಿದ್ದರು. ಮಳವಳ್ಳಿ ಹಾಗೂ ಕೆ.ಆರ್‌.ಪೇಟೆ ಕ್ಷೇತ್ರದಲ್ಲೂ ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ನಾಮಬಲ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲುವಿನ ನಗೆ ಬೀರುವಂತೆ ಮಾಡಿದೆ.

ಅನುಕಂಪಕ್ಕೆ ಸೋಲು

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಣ್ಣೀರಿಗೆ ಗೆಲುವು ಸಿಕ್ಕಿದೆ. ಕುಮಾರಪರ್ವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಮಳೆಯ ನಡುವೆಯೇ ಮಾತನಾಡುತ್ತಾ ಕ್ಷೇತ್ರದ ಜನರ ಗಮನ ಸೆಳೆದಿದ್ದರು. ಅವರ ಕಣ್ಣೀರು ಕೆ.ಎಸ್‌.ಪುಟ್ಟಣ್ಣಯ್ಯ ಅವರ ಅನುಕಂಪದ ಅಲೆಯನ್ನೂ ಸೋಲಿಸಿದೆ. ದೇವೇಗೌಡರೂ ಹಲವು ಬಾರಿ ಕಣ್ಣೀರು ಹಾಕಿದ್ದರು. ಕಾಂಗ್ರೆಸ್‌  ಬೆಂಬಲದೊಂದಿಗೆ ಸ್ಪರ್ಧಿಸಿದ್ದ ದರ್ಶನ್‌ ಪುಟ್ಟಣ್ಣಯ್ಯ ಅವರ ಬೆನ್ನಿಗೆ ಇಡೀ ರೈತಸಂಘ ನಿಂತಿತ್ತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಘಟಾನುಘಟಿಗಳು ಪ್ರಚಾರ ನಡೆಸಿದ್ದರು. ಜೆಡಿಎಸ್‌ ಅಲೆಯ ನಡುವೆ ಅನುಕಂಪದ ಅಲೆ ಸೋಲೊಪ್ಪಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry