ಬಾದಾಮಿ ಕ್ಷೇತ್ರದತ್ತಲೇ ನೆಟ್ಟಿದ್ದ ಚಿತ್ತ!

7
ಎಣಿಕೆ ಕೇಂದ್ರದಲ್ಲಿ ಬೇರೆ ಕ್ಷೇತ್ರಗಳ ಫಲಿತಾಂಶದ ಬಗ್ಗೆ ನಿರಾಸಕ್ತಿ, ಕ್ಷಣ ಕ್ಷಣಕ್ಕೂ ಹೆಚ್ಚಿದ್ದ ಕಾತರ

ಬಾದಾಮಿ ಕ್ಷೇತ್ರದತ್ತಲೇ ನೆಟ್ಟಿದ್ದ ಚಿತ್ತ!

Published:
Updated:

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಜಿಲ್ಲೆಯ ಏಳು ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದರೂ ಎಲ್ಲರ ಕಣ್ಣು ಬಾದಾಮಿ ಫಲಿತಾಂಶದತ್ತಲೇ ಇತ್ತು.

ಉಳಿದ ಕ್ಷೇತ್ರಗಳಿಗಿಂತ ಕೊಂಚ ತಡವಾಗಿ ಇಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತು. ಬೇರೆ ಕ್ಷೇತ್ರಗಳ ಅಂಚೆ ಮತಗಳನ್ನು ಆರಂಭದಲ್ಲಿಯೇ ಎಣಿಸಿದರೆ ಬಾದಾಮಿ ಕ್ಷೇತ್ರದ್ದು ಮಾತ್ರ ಕೊನೆಯಲ್ಲಿ ಎಣಿಕೆಗೆ ಪರಿಗಣಿಸಲಾಯಿತು.

ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳು ಬಾದಾಮಿ ಮತ ಎಣಿಕೆ ಕೇಂದ್ರದತ್ತಲೇ ಮುಖ ಮಾಡಿದ್ದವು. ಮಾಧ್ಯಮ ಕೇಂದ್ರಗಳವರು, ಹೊರಗಿನ ಜನತೆ, ಸಿದ್ದರಾಮಯ್ಯ ಬೆಂಬಲಿಗರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಮಾಧ್ಯಮ ಮಿತ್ರರು, ರಾಜಕೀಯ ಪಂಡಿತರು ಕರೆ ಮಾಡಿ ಕ್ಷಣ ಕ್ಷಣದ ಅಪ್‌ಡೇಟ್‌ ಪಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಾಗಾಗಿ ಬಾದಾಮಿ ಎಣಿಕೆ ಕೇಂದ್ರದ ಕೊಠಡಿಯ ಎದುರು ಆಗಾಗ ಕುತೂಹಲಿಗರು ನೆರೆದು ಫಲಿತಾಂಶದತ್ತ ವಾರೆನೋಟ ಬೀರುತ್ತಿದ್ದರು. ಎಣಿಕೆ ಕೇಂದ್ರದ ಏಜೆಂಟ್‌ಗಳು ಹೊರಗೆ ಬರುತ್ತಿದ್ದಂತೆಯೇ ಅವರ ಬೆನ್ನುಬಿದ್ದು ಕುತೂಹಲ ತಣಿಸಿಕೊಳ್ಳುತ್ತಿದ್ದರು.

ಮತ ಎಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಪೊಲೀಸರಿಗೆ ರಾಜ್ಯದ ಇತರೆ ಭಾಗಗಳ ಫಲಿತಾಂಶ ತಿಳಿಯುವ ಕುತೂಹಲ ಹಾಗಾಗಿ ಮಾಧ್ಯಮ ಕೇಂದ್ರಕ್ಕೂ ಆಗಾಗ ಇಣುಕು ಹಾಕುತ್ತಿದ್ದರು.

ಮುಧೋಳ ಕ್ಷೇತ್ರದ ಫಲಿತಾಂಶ ಮೊದಲು ಪ್ರಕಟಗೊಂಡಿತು. ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಪಕ್ಷಕ್ಕೆ ಮೊದಲಿಗರಾಗಿ ಖಾತೆ ತೆರೆದರು.

ಕೊನೆಯ ಸುತ್ತಿನಲ್ಲಿ ಸಿ.ಎಂ ಸಿದ್ದರಾಮಯ್ಯ 2480 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿ.ಶ್ರೀರಾಮುಲುಗಿಂತ ಮುನ್ನಡೆ ಸಾಧಿಸಿದ್ದರು. ಆಗ ಅಂಚೆ ಮತ ಎಣಿಕೆ ಮಾತ್ರ ಬಾಕಿ ಇತ್ತು. ಒಟ್ಟು 1800 ಅಂಚೆ ಮತಗಳು ಬಂದಿದ್ದು, ಅಷ್ಟೂ ಶ್ರೀರಾಮುಲುಗೆ ಬಿದ್ದರೂ ಸಿದ್ದರಾಮಯ್ಯ ಗೆಲುವು ಸಾಧಿಸಲಿದ್ದಾರೆ ಎಂದು ಅರಿತ ಎಣಿಕೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷದ ಏಜೆಂಟರು ಹಾಗೂ ಮುಖಂಡರು, ಸಿ.ಎಂ ಪರ ಜಯಘೋಷ ಮಾಡುತ್ತಾ ಹೊರ ನಡೆದರು. ಈ ವೇಳೆ ಕೆಲ ಕಾಲ ಗದ್ದಲ ಉಂಟಾಯಿತು. ನಂತರ ಅಧಿಕಾರಿಗಳು ಅಂಚೆ ಮತ ಎಣಿಕೆ ಆರಂಭಿಸಿದರು. ಆಗ ಸಿ.ಎಂ ಗೆಲುವಿನ ಅಂತರ ಕೊಂಚ ತಗ್ಗಿತು. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರಂಭದಿಂದಲೂ ಹಿನ್ನಡೆ ಅನುಭವಿಸಿ ಕೊನೆಗೆ ಭಾರೀ ಅಂತರದಲ್ಲಿ ಸೋತಾಗ ಇಲ್ಲಿನ ಬೆಂಬಲಿಗರಲ್ಲೂ ಆತಂಕ ಮನೆ ಮಾಡಿತ್ತು. ಫಲಿತಾಂಶ ಪ್ರಕಟಗೊಂಡ ನಂತರ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಕೊನೆಯ ಸುತ್ತಿನ ಮತ ಎಣಿಕೆವರೆಗೂ ಒಮ್ಮೆ ಮಾತ್ರ 300ಕ್ಕೂ ಹೆಚ್ಚು ಮತಗಳ ಅಂತರದಿಂದ ಸಿ.ಎಂ ವಿರುದ್ಧ ಶ್ರೀರಾಮುಲು ಮುನ್ನಡೆ ಸಾಧಿಸಿದ್ದರು. ಆದರೆ ಉಳಿದ ಸುತ್ತಿನಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಜೆಡಿಎಸ್‌ನ ಹನುಮಂತ ಮಾವಿನಮರದ ಅವರಿಗೆ ಗುಳೇದಗುಡ್ಡ ಭಾಗದ ಮತದಾರರಿಂದ ಉತ್ತಮ ಸ್ಪಂದನೆ ದೊರೆಯಿತು.

ಬಾಗಲಕೋಟೆ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಗೆ ಗ್ರಾಮೀಣ ಭಾಗದಲ್ಲಿ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ನಗರ ಹಾಗೂ ಗ್ರಾಮೀಣ ಭಾಗ ಎರಡೂ ಕಡೆ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆತಿರುವುದು ಎಣಿಕೆ ವೇಳೆ ಗೊತ್ತಾಯಿತು. ಈ ಬಾರಿ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿತ್ತು. ಇದು ಕಾಂಗ್ರೆಸ್‌ನ ಉತ್ಸಾಹ ಕೂಡ ಹೆಚ್ಚಿಸಿತ್ತು. ಆದರೆ ಫಲಿತಾಂಶ ನಿರಾಸೆಗೆ ಕಾರಣವಾಯಿತು.

**

ಈ ಬಾರಿ ಗೆಲುವು ಸಾಧಿಸಿದ್ದರೆ ಕುಮಾರಣ್ಣನ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತಿತ್ತು. ಅದೃಷ್ಟವಿಲ್ಲ. ಜನರ ತೀರ್ಪನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವೆ. ಅಷ್ಟೊಂದು ಮತ ಪಡೆದಿರುವುದು ಹೆಮ್ಮೆ ತಂದಿದೆ – ಹನುಮಂತ ಮಾವಿನಮರದ, ಬಾದಾಮಿ ಜೆಡಿಎಸ್ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry