ಮುಗಿಲು ಮುಟ್ಟಿದ ಬೆಂಬಲಿಗರ ಸಂಭ್ರಮ

7
ಬಿರು ಬಿಸಿಲನ್ನೂ ಲೆಕ್ಕಿಸದೇ ನಡೆದ ವಿಜಯೋತ್ಸವ, ಎಲ್ಲೆಲ್ಲೂ ಹಾರಾಡಿದ ವಿವಿಧ ಪಕ್ಷಗಳ ಬಾವುಟ

ಮುಗಿಲು ಮುಟ್ಟಿದ ಬೆಂಬಲಿಗರ ಸಂಭ್ರಮ

Published:
Updated:

ಬಾಗಲಕೋಟೆ: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ್ದು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಇಲ್ಲಿನ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಮತ ಎಣಿಕೆ ಕಾರ್ಯದ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗುಲಾಲ್‌ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ವಿಜಯೋತ್ಸವ: ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಗೆಲುವಿನ ಘೋಷಣೆ ಹೊರಬೀಳುತ್ತಿದ್ದಂತೆ ಕಾರ್ಯಕರ್ತರು ಪರಸ್ಪರ ಗುಲಾಲ್ ಹಚ್ಚಿ ಸಂಭ್ರಮಿಸಿದರು. ನಗರದ ಬಸವೇಶ್ವರ ವೃತ್ತ, ನವನಗರದ ಎಲ್‌ಐಸಿ ಸರ್ಕಲ್, ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿದರು. ಪ್ರಮುಖ ರಸ್ತೆಗಳಲ್ಲಿ ಕೇಕೆ ಹಾಕುತ್ತಾ ಬೈಕ್ ರ್‍ಯಾಲಿ ನಡೆಸಿದರು.

ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಗೆಲುವಿನ ಘೋಷಣೆ ಹೊರಬೀಳುತ್ತಿದ್ದಂತೆ ಮತ ಎಣಿಕೆ ಕೇಂದ್ರದಲ್ಲಿಯೇ ಅವರ ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು.

ಮುಧೋಳ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಹಾಗೂ ಹುನಗುಂದ ಕ್ಷೇತ್ರದ ದೊಡ್ಡನಗೌಡ ಪಾಟೀಲ ಗೆಲುವು ಹೊರಬೀಳುತ್ತಿದ್ದಂತೆಯೇ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿಯೇ ಘೋಷಣೆ ಕೂಗಿದರು. ತೇರದಾಳದ ಕ್ಷೇತ್ರದ ಗೆಲುವು ಪಡೆದ ನಂತರ ಸಿದ್ದು ಸವದಿ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿರುವುದು ಕಂಡು ಬಂದಿತು.

ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಮಂಕಾದ ಕಾಂಗ್ರೆಸ್ ಪಾಳಯ..

ಮುಂಜಾನೆ ಉತ್ಸಾಹದಿಂದಲೇ ಮತ ಎಣಿಕೆ ಕೇಂದ್ರದ ಸುತ್ತಲೂ ನೆರೆದಿದ್ದ ಕಾಂಗ್ರೆಸ್ ಬೆಂಬಲಿಗರು, ಮಧ್ಯಾಹ್ನದ ಹೊತ್ತಿಗೆ ಮಂಕಾದರು. ಜಮಖಂಡಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾರಣ ಮತಗಟ್ಟೆಯಲ್ಲಿ ನೆರೆದಿದ್ದ ಏಜೆಂಟರು ಮಾತ್ರ ಜಯಘೋಷ ಮಾಡಿದರು. ಸೋಲು ಖಚಿತವಾಗುತ್ತಿದ್ದಂತೆಯೇ ಸಚಿವೆ ಉಮಾಶ್ರೀ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಬೇಸರದಿಂದ ಅಲ್ಲಿಂದ ತೆರಳಿದರು. ತೀವ್ರ ಪೈಪೋಟಿಯ ಕಾರಣ ಕೊನೆಯವರೆಗೂ ಎಣಿಕೆ ಕೇಂದ್ರದಲ್ಲಿಯೇ ಇದ್ದ ಜೆ.ಟಿ.ಪಾಟೀಲ ಫಲಿತಾಂಶ ಪ್ರಕಟಣೆ ನಂತರ ತೆರಳಿದರು. ಗೆಲ್ಲುವ ಉಮೇದಿಯಲ್ಲಿ ಸ್ಥಳಕ್ಕೆ ಬಂದಿದ್ದ ಶ್ರೀರಾಮುಲು ನಿರಾಸೆಯಿಂದ ಮರಳಿದರು. ಬಾದಾಮಿ ಜನರ ಪ್ರೀತಿಯನ್ನು ಮರೆಯುವುದಿಲ್ಲ. ಮತ್ತೆ ಮತ್ತೆ ಇಲ್ಲಿಗೆ ಬರುವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಗೆಲುವು ಸಾಧಿಸಿದರೂ ಪ್ರಮಾಣಪತ್ರ ಪಡೆಯಲು ಸಿ.ಎಂ ಸಿದ್ದರಾಮಯ್ಯ ಬರಲಿಲ್ಲ. ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಡಾ.ದೇವರಾಜ ಪಾಟೀಲ ಹಾಗೂ ಹೊಳೆಬಸು ಶೆಟ್ಟರ ಕೊನೆಯವರೆಗೂ ಎಣಿಕೆ ಕೇಂದ್ರದಲ್ಲಿ ಇದ್ದು, ಪ್ರತೀ ಹಂತದ ಫಲಿತಾಂಶವನ್ನು ವಿಶ್ಲೇಷಿಸಿದರು.

ಹಣದ ಆಮಿಷ ಆರೋಪ

ಬಾದಾಮಿ: ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದವರು ಮತದಾರರಿಗೆ ಹಣವನ್ನು ವಿತರಿಸಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಮತ್ತು ಹಣದ ಬಲದಿಂದ ಆಯ್ಕೆಯಾಗಿದ್ದಾರೆ. ಅವರ ಗೆಲುವು ಏನು ದೊಡ್ಡದಲ್ಲ. ಕ್ಷೇತ್ರದಲ್ಲಿ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ತಿಳಿಸಿದರು. ತಾಲ್ಲೂಕು ಘಟಕ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಪ್ರತಿಕ್ರಿಯಿಸಿ ಕಾಂಗ್ರೆಸ್‌ ಪಕ್ಷದವರು ಮತದಾರರಿಗೆ ಹಣದ ಆಮಿಷ ತೋರಿಸಿ ಗೆದ್ದಿದ್ದಾರೆ ಎಂದು ಹೇಳಿದರು.

ಗೋಕರ್ಣಕ್ಕೆ ತೆರಳಿದ್ದ ಚರಂತಿಮಠ..

ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮತ ಎಣಿಕೆ ಕೇಂದ್ರಕ್ಕೆ ಬಂದಿರಲಿಲ್ಲ. ಬದಲಿಗೆ ಅವರು ಗೋಕರ್ಣ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ ಸಂಜೆ ಮರಳಿದರು. ಹಾಗಾಗಿ ಇಲ್ಲಿ ಬೆಂಬಲಿಗರು ಹಾಗೂ ಅಭಿಮಾನಿಗಳು ಮಾತ್ರ ವಿಜಯೋತ್ಸವ ಆಚರಿಸಿದರು. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ನೇತೃತ್ವದಲ್ಲಿ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು. ಭಾರತ್ ಮಾತಾ ಕೀ ಜೈ ಘೋಷಣೆ ಮುಗಿಲು ಮುಟ್ಟಿತು. ಪರಸ್ಪರ ಗುಲಾಲ್ ಎರಚಿ, ಬಿಜೆಪಿ ಬಾವುಟ ಹಾರಿಸಿ ಸಂಭ್ರಮಿಸಿದರು. ಸಂಜೆ ಗೋಕರ್ಣದಿಂದ ಮರಳಿದ ವೀರಣ್ಣ ಚರಂತಿಮಠ ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಎಚ್.ಜಯಾ ಅವರಿಂದ ಪ್ರಮಾಣಪತ್ರ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry