ಭಾನುವಾರ, ಮಾರ್ಚ್ 7, 2021
18 °C

ತುಂಗಾಮೂಲದ ಗುಂಗಿನಲ್ಲಿ…

ಪ್ರಸಾದ್ ಶೆಣೈ ಆರ್.ಕೆ Updated:

ಅಕ್ಷರ ಗಾತ್ರ : | |

ತುಂಗಾಮೂಲದ ಗುಂಗಿನಲ್ಲಿ…

ಬೆಳ್ಳಂಬೆಳಗ್ಗೆ ಪಶ್ಚಿಮಘಟ್ಟದಲ್ಲಿ

ನೀಲಿ ಮೋಡದ ತುಂಡುಗಳು ಆಕಾಶದಲೆಲ್ಲಾ ಹರಡಿ ಕುದುರೆಮುಖ ತಪ್ಪಲು ಎಂದಿಗಿಂತಲೂ ಮಾದಕವಾಗಿ ಕಾಣುತ್ತಿತ್ತು. ಕುಂಕುಮ ಬಣ್ಣದಂತಹ ಕೆಲವೊಂದು ಹಕ್ಕಿಗಳು ಆ ಬೆಳ್ಳಂಬೆಳಗ್ಗೆ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳ ಮೇಲೆ ಆರಾಮಾಗಿ ತೇಲುತ್ತಿದ್ದವು. ಜಿಗ್ಗೆಂದು ಬೇಸಿಗೆಯ ಬಿಸಿಲೇರುತ್ತಿದ್ದರೂ ಬಿಸಿಲಿಗೆ ಬಾಡದ ಜಲಧಾರೆಗಳ ಸದ್ದು ತಣ್ಣಗೆ ಕೇಳಿಸುತ್ತಿತ್ತು. ಮರದಲ್ಲೆಲ್ಲಾ ಕೆಂಪಗೆ ಹೊಳೆಯುವ ಗೇರುಹಣ್ಣೋ, ಕಾಡು ಸಂಪಿಗೆ ಹಣ್ಣೋ ಕಂಡು ಅದರ ಹಿನ್ನೆಲೆಯಲ್ಲಿ ಕುದುರೆಮುಖ ಪರ್ವತ ಶ್ರೇಣಿ ಇನ್ನಷ್ಟು ವಿಸ್ತಾರವಾಗಿ, ಬಿಸಿಲಿಗೆ ಹೊಳೆವ ಬೆಟ್ಟಗಳಿಗೆ ಹಚ್ಚೆ ಹಾಕಿದಂತಹ ಆ ತಿಳಿ ಹಸುರಿನತ್ತ ಒಮ್ಮೆ ಹೋಗಿಬಿಡಬೇಕು, ಬೇರೇನೂ ಬೇಡ ಅನ್ನಿಸುತ್ತಿತ್ತು.

ಶನಿವಾರದ ಆ ಬೆಳಗು ಯಾವಾಗ ಬರುತ್ತದೆಂದು ನಾವೆಲ್ಲ ಕಾತರದಿಂದ ಕಾಯುತ್ತಿದ್ದೆವು. ಕಾಡಿನ ಬಗ್ಗೆ ಪ್ರೀತಿ ಇರುವವರು ಮತ್ತು ಹಸಿರಿನಲ್ಲಿ ಇನ್ನಷ್ಟು ಧ್ಯಾನಸ್ಥರಾಗುವ ಆಸೆ ಇರುವವರಿಗೆ ಆ ದಿನ ಮಾತ್ರ ಗಂಗಾ ಮೂಲಕ್ಕೆ ಹೋಗುವ ಅವಕಾಶವಿದೆಯೆಂದೂ, ನಾಗತೀರ್ಥದ ಬಳಿ ನಾಗನಿಗೆ ಪೂಜೆ ಆ ದಿನ ಸರಳವಾಗಿ ನಡೆಯುವದೆಂದೂ, ಗಂಗಾಮೂಲದ ಆ ವಿಹಂಗಮ ತಾಣವನ್ನು ಆ ದಿನ ನೋಡುವುದೇ ದೊಡ್ಡ ಖುಷಿ ಎಂದೂ ಮಾಳದ ಶಿಕ್ಷಕರಾದ ರಾಧಾಕೃಷ್ಣ ಜೋಶಿಯವರು ಮೂರು ತಿಂಗಳ ಮೊದಲೇ ನಮ್ಮಲ್ಲಿ ಕುತೂಹಲ ಹುಟ್ಟಿಸಿದ್ದರು.

ಆ ದಿನ ಊರ ಹಿರಿಯರೆಲ್ಲ ನಾಗತೀರ್ಥ ಅನ್ನೋ ನಾಗನ ಸನ್ನಿಧಿಯಲ್ಲಿ ಸೇರುತ್ತಾರೆ, ಸಂಭ್ರಮದಿಂದ ಪೂಜೆ ಮಾಡುತ್ತಾರೆ. ಮಧ್ಯಾಹ್ನ ಒಳ್ಳೆಯ ಊಟವೂ ಇರುತ್ತದೆ. ನೀವು ಬರಲೇಬೇಕು ಎಂದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳುತ್ತ, ಯಾವ ಭಯಾನಕ ಮಳೆಯೇ ಬರಲಿ ನಾವು ಮಾತ್ರ ಹೋಗುವುದೇ ಎಂದು ಗಂಗಾಮೂಲ ನೋಡಲು ಕಾತರಿಸುತ್ತಲೇ ಬೈಕೇರಿ ಕಾರ್ಕಳ ತಾಲ್ಲೂಕಿನ ಪುಟ್ಟ ಗ್ರಾಮವಾದ ಮಾಳದ ಕಾಡ ದಾರಿ ಹಿಡಿದೆವು.

ಆಗತಾನೇ ಬೆಳಗು ಹರಿದು ಹಸುರೆಲ್ಲ ಮಿಂಚುತ್ತಿದ್ದ ಹೊತ್ತು, ಘಟ್ಟದತ್ತ ಹೋಗುವ ದಾರಿ ಸ್ತಬ್ಧವಾಗಿತ್ತು. ದಾರಿಯಲ್ಲಿ ಬಿಮ್ಮನೇ ನಿಂತಿದ್ದ ಕಾಡು ಸಂಪಿಗೆ ಹಣ್ಣಿನ ಮರಗಳಲ್ಲಿ ಸೂರಕ್ಕಿಗಳು ಕೂತು ಫಲಾಹಾರ ಮಾಡುತ್ತಿದ್ದವು. ರಸ್ತೆ ಪಕ್ಕ ಇರುವ ಕಾಡು ಮಾವಿನ ಮರದ ಕೆಂಬಣ್ಣದ ಮಾವು ದಾರಿಯಲ್ಲೆಲ್ಲಾ ಚೆಲ್ಲಿ ಅದರ ರಸದ ಪರಿಮಳ ಸೋಕಿ ಮೂಗು, ಬಾಯಿ ಆಹಾ ಎನ್ನುತ್ತಿತ್ತು. ಮಾಳದ ಚೆಕ್ ಪೋಸ್ಟ್‌ ಬಳಿ ಜೋಶಿಯವರು ಬೈಕ್‌ನಲ್ಲಿ ನಮಗಾಗಿ ಕಾಯುತ್ತಾ ನಿಂತಿದ್ದರು.

*ನೆರಳು-ಬಿಸಿಲ ಕಾಡು ದಾರಿಯಲಿ

ನಮ್ಮ ಹಿಂದೆಯೇ ಬನ್ನಿರೆಂದು ರಾಧಾಕೃಷ್ಣರು ತಮ್ಮ ಹಳೆ ಬೈಕೇರುತ್ತ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಮುಂದೆ ಸಾಗಿದರು. ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ! ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ ತೂಗಿ, ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ. ಕುದುರೆಮುಖದ ರಮಣೀಯ ಗಿರಿಶೃಂಗಗಳಿಗೆ ಬಿಸಿಲು ಬಿದ್ದು ಕಾಲೇಜು ಹುಡುಗಿಯೊಬ್ಬಳ ಹೊಚ್ಚ ಹೊಸ ಮೂಗುತಿ ಹೊಳೆದಂತೆ ಕಾಣುತ್ತದೆ. ಈ ಎಲ್ಲಾ ಸನ್ನಿವೇಶಗಳನ್ನು ಸುಖಿಸುತ್ತಾ, ನಮ್ಮ ದಾರಿ ಸಾಗುತ್ತಿತ್ತು.

ಅಲ್ಲಲ್ಲಿ ಆಗಾಗ ಬೈಕ್ ನಿಲ್ಲಿಸಿ, ಕುದುರೆಮುಖದ ಮೌನವನ್ನು, ಪರಿಮಳವನ್ನೂ ಆಸ್ವಾದಿಸುತ್ತಾ ನಿಂತೆವು. ಅಪಾರ ಕೆಂಚಳಿಲುಗಳ ತಾಣವಾದ ಈ ಪಶ್ಚಿಮಘಟ್ಟದ ಕಾಡು ಮರಗಳಿಂದ ಹೈಜಂಪ್ ಮಾಡುತ್ತಿರುವ ಕೆಂಚಳಿಲು ನಮ್ಮನ್ನೊಮ್ಮೆ ನೋಡುತ್ತಾ ನಾಚಿಕೊಂಡು ಕಾಡಿನ ಹಸಿರಿನಲ್ಲಿ ಲೀನವಾಯಿತು. ಮತ್ಯಾವುದೋ ಹಕ್ಕಿ ತನ್ನ ಅತ್ಯಪರೂಪದ ಮೈಬಣ್ಣವನ್ನು ತೋರಿಸುವ ಮೊದಲೇ ಅಲ್ಲಿಂದ ಪರಾರಿಯಾಯಿತು. ಒಮ್ಮೆ ಬೈಕ್ ನಿಲ್ಲಿಸಿದಾಗ ಯಾವ ಆಧುನಿಕ ಪ್ರಪಂಚದ ಹಂಗಿಲ್ಲದೇ ಹೊಚ್ಚ ಹೊಸತು ಮೌನವೇ ಮೈಯಲ್ಲೆಲ್ಲಾ ನೆರೆದು ಅಗಾಧ ಸಂಭ್ರಮವಾಗುತ್ತಿತ್ತು.

ಈ ಮೌನವೇ ನಮಗೆ ಎಲ್ಲೂ ಸಿಗದಿದ್ದ ರೋಮಾಂಚನವನ್ನು, ಸಾವಿರ ಶಬ್ದಗಳಲ್ಲೂ ಸಿಗಲಾರದ ಪುಲಕವನ್ನು ಕೊಡುತ್ತಿತ್ತು. ಎಷ್ಟೋ ದೂರ ಕಳೆದ ಮೇಲೆ ಮಂದವಾಗಿ ಸಾಗುತ್ತಿದ್ದ ಜೋಶಿಯವರ ಬೈಕಿನ ಸದ್ದು ಹಗುರನೇ ನಿಂತು, ಬೆಟ್ಟದ ಬುಡದ ಕೆಳಗಿದ್ದ ನಾಗತೀರ್ಥದ ಬಳಿ ತಲುಪಿದಾಗ ಎದೆಗೆ ಮತ್ತೊಂದಿಷ್ಟು ಮೌನ ಬಿದ್ದಿತ್ತು. ಅಲ್ಲಿ ದೇವರಿಗೆ ಕೈಮುಗಿದು ಮತ್ತೆ ಬೈಕೇರಿ ತಿರುವು ಮುರುವು ದಾರಿಯನ್ನು ಹಾಯುತ್ತ ಗಂಗಾಮೂಲಕ್ಕೆ ಸಾಗುವ ದಾರಿಯತ್ತ ಬೈಕ್ ನಿಲ್ಲಿಸಿ ಕಾಡಿನ ಸೆರಗನ್ನೇರಿದೆವು.

*ಗಂಗಾಮೂಲದತ್ತ

ಸುತ್ತಲೂ ಅರಣ್ಯದ ಗವ್ವೆನ್ನುವ ಮೌನ, ಆ ಮೌನದಲ್ಲಿ ಜಾರುತ್ತಿರುವ ನಮ್ಮ ಅಷ್ಟೂ ಕಾಲುಗಳ ತಣ್ಣಗಿನ ಸಪ್ಪಳ, ಬೀಸುಗಾಳಿಯಲ್ಲಿ ನುಣ್ಣಗೇ ಹರಿದಂತಿರುವ ಹುಲ್ಲುಹಾಸಿನ ದಾರಿಯಲ್ಲಿ ನಡೆಸುತ್ತ ಜೋಶಿಯವರು ‘ನೋಡಿ ಈ ದಾರಿಯಲ್ಲೆಲ್ಲಾ ಈ ಮಿನುಗುವ ಕಲ್ಲುಗಳು ಬಿದ್ದಿವೆ. ಇದು ಬರೀ ಕಲ್ಲಲ್ಲ, ಎಷ್ಟೋ ವರ್ಷಗಳ ಬಳಿಕ ಈ ಕಲ್ಲು ಚಿನ್ನವಾಗುತ್ತದಂತೆ’ ಎನ್ನುತ್ತಾ ಚಿನ್ನದ ಅಂಶವೇ ಇರುವ ಕಲ್ಲಿದು ಎಂದು ಕಲ್ಲೊಂದನ್ನು ಹಿಡಿದು ತೋರಿಸಿದರು. ಆ ಕಲ್ಲು ಚಿನ್ನದ ನುಣುಪು ಬಣ್ಣದಿಂದಲೇ ಹೊಳೆಯುತ್ತಿತ್ತು. ದೂರ ಬೆಟ್ಟದ ಮೇಲೆ ತೇಲುವ ಮೋಡಗಳ ಜೊತೆ ಗಾಳಿ ಯಾರೋ ಸುಂದರಿಯೊಬ್ಬಳು ವೀಣೆ ಮೀಟಿದಂತೆ ಹಾಡುತ್ತಿತ್ತು. ದಟ್ಟ ಹಸುರಾಗಿದ್ದ ಹುಲ್ಲೇ ತುಂಬಿದ್ದ ದಾರಿಯ ಬೆಟ್ಟವೇರುತ್ತ, ಏರಿದಷ್ಟೇ ಆಳ ಇಳಿಯುತ್ತ ಹೋದಾಗ ದೂರದಲ್ಲಿ ಕತ್ತಲನ್ನೇ ತಿನ್ನುತ್ತ ಕೂತ ಕಾಡಿನ ಜಾಡೊಂದು ಕಾಣಿಸಿತು. ಆ ಜಾಡಿನೊಳಗೆ ನುಸುಳಿದ್ದೇ, ಅಷ್ಟೊತ್ತು ಹೊಳೆಯುತ್ತಿದ್ದ ಬಿಸಿಲೆಲ್ಲಾ ಆವಿಯಾಗಿ ಘೋರ ಕತ್ತಲು ಕವಿದಿತ್ತು.

‘ಇಲ್ಲೇ ನೋಡಿ, ತುಂಗೆ-ಭದ್ರೆಯರು ಹುಟ್ಟೋದು, ಭದ್ರಾ ನದಿಯು ಹುಟ್ಟುವ ಸ್ಥಳಕ್ಕೆ ವರಾಹ ತೀರ್ಥವೆಂದೂ, ತುಂಗೆ ಹುಟ್ಟುವ ಸ್ಥಳಕ್ಕೆ ನಾಗತೀರ್ಥ ಎಂದೂ ಕರೆಯುತ್ತಾರೆ. ಈ ಗಂಗಾಮೂಲದಲ್ಲಿ ತೀರ್ಥವೊಂದು ತೊಟ್ಟಿಕ್ಕುತ್ತದೆ. ಅದು ಅತ್ಯಂತ ಪವಿತ್ರ. ಈ ಕಾಡಿನಲ್ಲೇ ಉಗಮಗೊಂಡ ತುಂಗೆಯು ಕಿರುಬೆಟ್ಟದ ಕಿಬ್ಬಿನಿಂದ ಸಹ್ಯಾದ್ರಿಯ ಊರಾದ ಶೃಂಗೇರಿಯತ್ತ ಸಾಗಿ ಸೀದಾ ಮಲೆನಾಡಿಗೆ ಹರಿಯುತ್ತಾಳೆ. ಭದ್ರೆ ಪೂರ್ವ ದಿಕ್ಕಿಗೆ ಹರಿದು ಹೊರನಾಡಿನತ್ತ ಸಾಗುತ್ತಾಳೆ. ಹೀಗೆ ಬೇರೇ ಬೇರೆ ದಿಕ್ಕಿನಲ್ಲಿ ಹರಿಯುವ ಈ ಅಕ್ಕ-ತಂಗಿಯರು ಜೀವನದಿಯಾಗಿ ಶಿವಮೊಗ್ಗದ ಕೂಡಲಿ ಎಂಬಲ್ಲಿ ತುಂಗಭದ್ರೆಯಾಗಿ ಸಂಗಮಿಸಿ, ಉತ್ತರ ಕರ್ನಾಟಕ ಸೇರುತ್ತಾರೆ. ಅಲ್ಲಿಂದ ಹಂಪಿ, ಮಂತ್ರಾಲಯ ದಾಟಿ ಕೃಷ್ಣನದಿಯನ್ನು ಕೂಡಿ, ಸೀದಾ ಬಂಗಾಳಕೊಲ್ಲಿಗೆ ಜಾರುತ್ತಾರೆ’ ಎಂದು ಜೋಶಿಯವರು ನದಿಯ ಕತೆ ಶುರುಮಾಡಿದಾಗ ತುಂಗ ಭದ್ರೆಯರ ಜುಲುಕಿನಲ್ಲಿ ಹಾಯಾಗಿ ತೇಲಿದಂತೆನ್ನಿಸಿತು. ನದಿಯು ಹುಟ್ಟುವ, ಬೆಳೆಯುವ, ಸಾಗುವ, ಸೇರುವ ಪಯಣ ನೆನೆದಾಗೆಲ್ಲ ಮೈ ಕಂಪಿಸಿತು, ರೋಮಾಂಚನವಾಯ್ತು.

ಅಲ್ಲೇ ದೈತ್ಯದೇಹದ ಭಾರೀ ಬಂಡೆಯೊಂದು ಬಿಮ್ಮಗೇ ನಿಂತಿತ್ತು. ಅದರ ಬುಡದಲ್ಲಿ ಕಗ್ಗತ್ತಲ ಗುಹೆ, ಸುತ್ತಲೂ ಪರ್ವತಾರಣ್ಯಗಳ ನಿಬಿಢ ಸದ್ದು, ಮೈಮೇಲೆ ಇನ್ನೇನು ಬಿತ್ತು. ಅಯ್ಯೋ ಬೀಳುತ್ತಿದೆ ಅಂತನ್ನಿಸುವ ದೊಡ್ಡ ಕೋಡುಗಲ್ಲೊಂದು ನಿಂತಿತ್ತು. ಗುಹೆಯ ಹತ್ತಿರತ್ತಿರ ಬಂದಾಗ ಗುಹೆಯೊಳಗಿದ್ದ ಬಾವಲಿಗಳೋ, ಜೀರುಂಡೆಗಳೋ ಏಕತಾಳದಲ್ಲಿ ಕೂಗಿ ಅಷ್ಟೇ ಹುಗುರನೇ ಮೌನವಾಗಿಬಿಟ್ಟವು.

‘ಇದೇ ನೋಡಿ, ಗಂಗಾಮೂಲ’ ಅಂತ ಒಮ್ಮೆಲೇ ಜೋಶಿಯವರು ಸಣ್ಣಗೇ ಹೇಳಿದ್ದು ಆ ಗಂಗಾಮೂಲದ ಕತ್ತಲ ಗುಹೆಯಲ್ಲಿ ಪ್ರತಿಧ್ವನಿಸಿ ಅನುರಣಿಸಿ ಕೊನೆಗೆ ಮೌನವಾಯಿತು.

‘ಇದು ಅತ್ಯಂತ ಪ್ರಾಚೀನ ಜಾಗ, ಎಳ್ಳ ಅಮವಾಸ್ಯೆಗೆ ಇಲ್ಲಿ ಯಾತ್ರಾರ್ಥಿಗಳು ಬರುತ್ತಾರೆ ಮೈಸೂರಿನ ಮಹಾರಾಜರು ಇಲ್ಲಿಗೆ ಬಂದು, ಇಲ್ಲಿನ ಪರಿಸರಕ್ಕೆ ಮಾರುಹೋಗಿದ್ದರಂತೆ’ ಎಂದರು ಜೋಶಿಯವರು. ಗಟ್ಟಿಯಾಗಿ ಮಾತಾಡಿದರೆ ಕಾಡಿನ ಮೌನ ಹಾಳಾಗುತ್ತದೆಂದು ಹಗುರನೇ ಮಾತು ಮುಂದುವರಿಸಿದರು.

ಎರಡು ಶತಮಾನಗಳ ಹಿಂದೆ ಸಂಸ್ಕೃತ ವೇದಶಾಸ್ತ್ರಗಳಲ್ಲಿ ಪಾರಂಗತನಾದ ಅನಂತಶಾಸ್ತ್ರಿ ಡೋಂಗ್ರೆ, ಇಲ್ಲೊಂದು ಗುರುಕುಲ ನಿರ್ಮಿಸಬೇಕೆಂದು ಕನಸು ಕಂಡಿದ್ದ. ಆ ಪಂಡಿತನ ಪುತ್ರಿಯೇ ಭಾರತದ ಪ್ರಖ್ಯಾತ ಮಹಿಳೆ ಪಂಡಿತಾ ರಮಾಬಾಯಿ. ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದವಳು ರಮಾಬಾಯಿ ಎಂಬ ಮಾಹಿತಿ ಸಿಕ್ಕಾಗ ನೋಡೇ ಇರದ ಆ ಮಹಾನುಭಾವರ ಚಿತ್ರವೊಂದು ಆ ಕಾಡಿನ ನಡುವೆಯೇ ಹ್ಯಾಗೋ ಬಂದಂತಾಗಿ ರೋಚಕವೆನ್ನಿಸಿತು.

ನಾನು ಇನ್ನೇನೋ ಕೇಳಬೇಕು ಎನ್ನುವಷ್ಟರಲ್ಲಿ ಜೋಶಿಯವರು, ‘ಶ್‌, ಮಾತಾಡಬೇಡಿ. ಗುಹೆಯ ಬಂಡೆಗೆ ಕಿವಿಕೊಡಿ. ಒಳಗೆ ತೀರ್ಥ ತೊಟ್ಟಿಕ್ಕುತ್ತಿರುವುದು. ತುಂಗೆ, ಭದ್ರೆಯರು ಪಿಸುಗುಡುವುದು ಕೇಳಿಸುತ್ತದೆ’ ಎಂದು ಬಂಡೆಗೆ ಕಿವಿಗೊಟ್ಟರು. ನಾವೂ ಬಂಡೆಗೆ ಕಿವಿಯಾನಿಸಿದೆವು. ಆ ದೈತ್ಯ ಬಂಡೆಗಳ ಸಂದಿನಿಂದ ತುಂಗೆ-ಭದ್ರೆ ತೊಟ್ಟಿಕ್ಕುತ್ತಿರುವ ಸದ್ದು ಸಣ್ಣಗೇ ಕೇಳತೊಡಗಿತು. ಆ ಹನಿಗಳು ಗುಟ್ಟುಗುಟ್ಟಾಗಿ ಮಾತಾಡುತ್ತಿರುವುದು ನಮಗಷ್ಟೇ ಕೇಳುತ್ತಿರುವಂತೆ ಅನ್ನಿಸಿ ಭಾವಪರವಶರಾಗಿ, ಐತಿಹಾಸಿಕವಾದ ಯಾವುದೋ ತಣ್ಣನೆಯ ಗಾಳಿಯೊಂದು ಸೋಕಿದಂತಾಯಿತು. ಅಲ್ಲೇ ಸ್ವಲ್ಪ ನಿಂತು ವಿಶ್ರಮಿಸಿ ಮತ್ತೆ ಕಾಡಲ್ಲಿ ಕರಗಿ ಹೋಗಲು ದಾರಿ ಸಾಗಿದೆವು. ಅಷ್ಟೊತ್ತಿಗೆ ಸೂರ್ಯ ಕುದುರೆಮುಖದ ನೆತ್ತಿಗೆ ಬಂದಿದ್ದ. ಹೊಟ್ಟೆ ಹಸಿದರೂ ಅಲ್ಲಿನ ತಣ್ಣಗಿನ ಹವೆ, ಹಸಿರ ಪರಿಮಳ ಎದೆಗೆ ತುಂಬಿದಂತಾಗಿ ಹಸಿವು ಮರೆತೇ ಹೋಯಿತು.

*ನೀಳವಾದ ಕಾಡಿನಲ್ಲಿ

‘ತುಂಗೆ ಮತ್ತು ಭದ್ರೆಯ ಬಳುಕು ಇನ್ನೂ ಚೆಂದವಾಗಿ ಕಾಣಬೇಕೆಂದರೆ ವರಾಹ ತೀರ್ಥ, ನಾಗತೀರ್ಥದತ್ತ ಹೋಗಬೇಕು’ ಎಂಬ ಮಾಹಿತಿ ಸಿಗುತ್ತಿದ್ದಂತೆ ಇನ್ನೂ ದಟ್ಟವಾಗಿ ಹಸಿರು ತುಂಬಿದ ವರಾಹ ತೀರ್ಥ, ನಾಗತೀರ್ಥದತ್ತ ನಡೆದೆವು. ಅದು ನೀಳವಾದ, ಆಳವಾದ ಕಾಡು, ಚಿಕ್ಕಂದಿನಲ್ಲಿ ಯಾವುದೋ ಕತೆಯಲ್ಲಿ ಕಂಡ ಕಾಡಂತಿತ್ತು. ಬಂಡೆಗಳ ನಡುವೆ, ಉದ್ದಕ್ಕೆ ಹರಿಯುತ್ತಿರುವ ಭದ್ರೆ, ಅಲ್ಲಿ ನಿಂತು ನೋಡಿದರೆ ಇಡೀ ಕುದುರೆಮುಖ ಗಿರಿತಪ್ಪಲು ಒಂದು ನಿಗೂಢ ಕನಸಿನಂತೆ ಕಾಣುತ್ತಿತ್ತು. ಆ ಕಾಡಲ್ಲಿ ಎಲ್ಲಿ ದಾರಿ ತಪ್ಪಿ ಹೋದರೂ ಭದ್ರೆ ನಮ್ಮ ಜೀವಕ್ಕೆ ಏನೂ ಆಗಲು ಬಿಡದೇ ಭದ್ರವಾಗಿ ನಮ್ಮನ್ನು ಕೈಹಿಡಿದು ದಾರಿ ತೋರಿಸುತ್ತಿದ್ದಳು.

‘ಭದ್ರೆಯಲ್ಲಿದ್ದ ವರಹಾ ಮೂರ್ತಿಯೊಂದನ್ನು ಕೆಲವು ವರ್ಷಗಳ ಹಿಂದೆ ಕಳ್ಳನ್ನೊಬ್ಬ ಗೋಣಿ ಚೀಲದಲ್ಲಿ ಯಾರಿಗೂ ಗೊತ್ತಾಗದಂತೆ ಸುತ್ತಿಕೊಂಡು ಕಾರ್ಕಳದ ಕಡೆಗೆ ಸಾಗುವ ಬಸ್ಸೊಂದರಲ್ಲಿ ಸಾಗಿಸುತ್ತಿದ್ದನಂತೆ. ಆ ವ್ಯಕ್ತಿಯ ಅನುಮಾನಾಸ್ಪದ ಚಹರೆ ನೋಡಿದ ಯಾರೋ ಊರವರು ಅವನನ್ನು ವಿಚಾರಿಸಿದಾಗ, ಅವನು ಐತಿಹಾಸಿಕ ವರಾಹ ಮೂರ್ತಿ ಕದ್ದಿದ್ದು ಬಯಲಾಯ್ತು. ಬಳಿಕ ಅದನ್ನು ಅಧಿಕಾರಿಗಳು ವಶಪಡಿಸಿಕೊಂಡು ಮೈಸೂರಿನಲ್ಲಿರಿಸಿದ್ದಾರೆ’ ಎಂದು ಜೋಶಿಯವರು ಭದ್ರೆಯ ನೀರನ್ನು ಕುಡಿಯುತ್ತ ಕತೆ ಹೇಳಿದರು.

ನಾವೂ ಹೊಟ್ಟೆ ತುಂಬಾ ನೀರು ಕುಡಿದೆವು. ಅವರು ಹೇಳಿದ ಕತೆಗಳು ಮನಸ್ಸಲ್ಲಿ ಅವುಗಳ ಪಾಡಿಗೆ ಅವು ಬೆಳೆಯುತ್ತಾ, ಹೊಳೆಯುತ್ತಾ ಸಾಗುತ್ತಿದ್ದವು ಅದೇ ಭದ್ರೆಯ ಹರಿವಿನಂತೆ. ಘೋರಾರಣ್ಯಗಳ ಮೌನದಲ್ಲಿ ಭದ್ರೆಯ ಮಡಿಲಲ್ಲಿದ್ದ ಮೀನುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮಾತಾಡುತ್ತಿರುವಂತೆ ಚಿಮ್ಮುತ್ತಿದ್ದವು. ಆ ಭದ್ರೆಯ ಬಳುಕು, ಮೀನುಗಳ ಜುಳುಕು, ನೋಡುತ್ತಾ ನೋಡುತ್ತಾ ಸುಮ್ಮನೇ ಮಾತಿಲ್ಲದೇ ಕೂರೋಣವೆನ್ನಿಸಿತು. ಕೊಂಚ ಕೂತು ಮತ್ತೆ ದಾರಿ ಸಾಗಿದ್ದು ನಾಗತೀರ್ಥದತ್ತ. ಅಲ್ಲಿಯೂ ಭದ್ರೆಯಂತೆಯೇ ಹರಿಯುತ್ತಿದ್ದ ಭದ್ರೆಯ ಅಕ್ಕ ತುಂಗೆಯನ್ನು ನೋಡಿದ್ದೇ ತಡ ಗೊತ್ತಾಗದೇ ಬಾಯಲ್ಲಿ ‘ತುಂಗೆಯ ತೆನೆ ಬಳಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ...ತಾಯೇ ನಿತ್ಯೋತ್ಸವ’ ಹಾಡು ಹರಿಯಿತು. ಆ ಹಾಡಿನ ಸಾಲಲ್ಲಿದ್ದ ಪ್ರತೀ ಒಂದು ಲೋಕವೂ ವಾಸ್ತವದಲ್ಲೇ ಸಿಕ್ಕಾಗ ಆ ಹಾಡು ಬರೀ ಹಾಡಾಗಿ ಇರುವುದಿಲ್ಲ ನಮ್ಮ ಮೈ ಮನಸ್ಸೇ ಆಗಿಬಿಡುತ್ತದೆ ಅಲ್ವಾ? ಹಾಗೇ ಆಯಿತು, ಈ ತುಂಗೆ ತನ್ನ ಬದುಕು ಶುರು ಮಾಡುತ್ತಿರುವ ಈ ಕಾಡನ್ನು ನೋಡುತ್ತಿರುವಾಗ.

ಅಷ್ಟೊತ್ತಿಗೆ ಮಧ್ಯಾಹ್ನವಾಗಿ ತುಂಗೆ ಬಿಸಿಲಿಗೆ ಹೊಳೆಯುತ್ತಿದ್ದಳು. ನಾಗನ ಕಟ್ಟೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಪೂಜೆಗೆ ಒಂದಿಷ್ಟು ಜನ ಸೇರಿದ್ದರು. ಪೂಜೆ ಆಯ್ತು, ದೇವರ ಬಳಿ ಬೇರೇನೂ ಕೇಳಬೇಕು ಅನ್ನಿಸಲಿಲ್ಲ. ಆದರೆ ‘ಈ ನಿಗೂಢ ಕಾಡು, ಇಲ್ಲಿನ ಹಸಿರು ಇನ್ನೂ ಜಾಸ್ತಿಯಾಗುವಂತೆ ಮಾಡು ಸಾಕು’ ಅಂತ ಒಳಗೊಳಗೇ ಬೇಡಿಕೊಂಡೆ. ಮಧ್ಯಾಹ್ನದ ಬಿಸಿಬಿಸಿ ಊಟ ಸಿದ್ಧವಾಗಿತ್ತು. ಅಡಿಕೆ ಹಾಳೆ ಮೇಲೆ ಮೊಸರನ್ನ, ಸಿಹಿ ಮಡ್ಡಿ, ಬಿಸಿಬಿಸಿ ಬಾತು, ಪಂಚಕಜ್ಜಾಯ ಕರೆಯುತ್ತಿತ್ತು. ತುಂಗೆಯ ಮಡಿಲಲ್ಲಿರುವ ಬಂಡೆಯೊಂದರ ಮೇಲೆ ಕೂತು ಅವನ್ನೆಲ್ಲಾ ಹೀರುತ್ತಿದ್ದಾಗ ಕಾಡು ಬೆಳಗ್ಗೇ ಹೊಳೆಯುತ್ತಿತ್ತು. ತುಂಗೆ ಸಹ್ಯಾದ್ರಿ ಪರ್ವತಗಳತ್ತ ಭಾರೀ ಬೀಸಿನಿಂದ ಹರಿಯುತ್ತಿದ್ದಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.