ಶಿಥಿಲಗೊಂಡ ಕಾಂಗ್ರೆಸ್‌ ಭದ್ರಕೋಟೆ

7
ಎರಡು ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್; ಭಾರಿ ಜಯ ದಾಖಲಿಸಿದ ಬಿಎಸ್‌ಪಿ, ಬಿಜೆಪಿ

ಶಿಥಿಲಗೊಂಡ ಕಾಂಗ್ರೆಸ್‌ ಭದ್ರಕೋಟೆ

Published:
Updated:

ಚಾಮರಾಜನಗರ: ಜಿಲ್ಲೆಯ ಕಾಂಗ್ರೆಸ್‌ನ ಭದ್ರಕೋಟೆ ಶಿಥಿಲಗೊಂಡಿದೆ. ಎಲ್ಲ 4 ಕ್ಷೇತ್ರಗಳ ಪೈಕಿ ಚಾಮರಾಜನಗರ ಹಾಗೂ ಹನೂರು ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲು ಅದು ಸಫಲವಾಗಿದೆ. ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಕ್ರಮವಾಗಿ ಬಿಎಸ್‌ಪಿ ಹಾಗೂ ಬಿಜೆಪಿ ಭಾರಿ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ‍ಪರಾಭವಗೊಳಿಸಿವೆ.

ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಬಿಎಸ್‌ಪಿ ಖಾತೆ ತೆರೆದಿದೆ. ಎನ್.ಮಹೇಶ್ 19,454 ಮತಗಳ ಅಂತರದಿಂದ ಕಾಂಗ್ರೆಸ್‌ನ ಎ.ಆರ್.ಕೃಷ್ಣಮೂರ್ತಿ ಅವರನ್ನು ಮಣಿಸಿದ್ದಾರೆ. ಇಲ್ಲಿನ ಮತದಾರ ಹೊಸದೊಂದು ಪಕ್ಷಕ್ಕೆ ಅವಕಾಶ ನೀಡಿದ್ದು, ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಆರಂಭದಿಂದ ಕೊನೆಯವರೆಗೂ ಎಲ್ಲಾ ಸುತ್ತುಗಳಲ್ಲೂ ಅಂತರ ಕಾಯ್ದು ಕೊಂಡೇ ಬಂದ ಮಹೇಶ್, ಅಂತಿಮವಾಗಿ ಜಿಲ್ಲೆಯಲ್ಲೇ ಅಧಿಕ ಮತಗಳ ಅಂತರದಿಂದ ಗೆಲುವನ್ನು ಒಲಿಸಿಕೊಂಡಿದ್ದಾರೆ.

ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದು ಪ್ರಚಾರ ಅಭಿಯಾನ ಆರಂಭಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಭೇಟಿಗಳು ನಿರೀಕ್ಷಿತ ಫಲ ನೀಡಿಲ್ಲ.

ಹೇಗಾದರೂ ಮಾಡಿ ಎಲ್ಲ ನಾಲ್ಕು ಕ್ಷೇತ್ರಗಳಲ್ಲೂ ಕಮಲ ಅರಳಿಸಲು ಪಕ್ಷ ಕಳೆದೊಂದು ವರ್ಷದಿಂದ ಗಂಭೀರವಾದ ಪ್ರಯತ್ನಗಳನ್ನು ಮಾಡಿತ್ತು. ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಾಯಕ ಜನಾಂಗದ ಆರ್.ರಾಮಚಂದ್ರ ಅವರನ್ನು ತನ್ನತ್ತ ಸೆಳೆದುಕೊಂಡಿತ್ತು. ಮಾತ್ರವಲ್ಲ, ನಾಯಕ ಜನಾಂಗದ ಸಮಾವೇಶವನ್ನೂ ನಡೆಸಿತ್ತು. ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಚುನಾವಣೆಯ ಸಮೀಪದಲ್ಲೇ ಸೇರಿಸುವ ಮೂಲಕ ನಾಯಕ ಸಮುದಾಯದ ವಿಶ್ವಾಸ ಗಳಿಸಲು ಕಾರ್ಯತಂತ್ರ ರೂಪಿಸಿತ್ತು.

ಅಳೆದು ತೂಗಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ನಂಜುಂಡಸ್ವಾಮಿ, ನಿರಂಜನಕುಮಾರ್ ಹಾಗೂ ಡಾ.ಪ್ರೀತನ್ ನಾಗಪ್ಪ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಉಂಟಾದ ಬಂಡಾಯವನ್ನೂ ಬಹು ಬೇಗ ಶಮನಗೊಳಿಸಿ ಎಲ್ಲರೂ ಒಟ್ಟಾಗಿ ಪ್ರಚಾರ ನಡೆಸುವಂತೆ ನೋಡಿ ಕೊಂಡಿತ್ತು. ಆದರೆ, ಬಿಜೆಪಿಯ ಈ ಎಲ್ಲವೂ ಸಂಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ.‌

ಚಾಮರಾಜನಗರ ಹಾಗೂ ಹನೂರಿನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, ಕೊಳ್ಳೇಗಾಲದಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಗುಂಡ್ಲುಪೇಟೆಯಲ್ಲಿ ಮಾತ್ರ ಜಯ ಸಾಧಿಸಲು ಶಕ್ತವಾಗಿದೆ. ವಿಚಿತ್ರ ಎಂದರೆ, ಗುಂಡ್ಲುಪೇಟೆ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಯಾವುದೇ ಪ್ರಚಾರ ನಡೆಸಿರಲಿಲ್ಲ. ಆದರೂ, ಅಲ್ಲಿ ಭಾರಿ ಗೆಲುವನ್ನು ಪಕ್ಷ ಪಡೆದಿದೆ. ಈ ಇಬ್ಬರೂ ಉನ್ನತ ನಾಯಕರು ಪ್ರಚಾರ ನಡೆಸಿದ ಕಡೆಯಲ್ಲೆಲ್ಲಾ ಬಿಜೆಪಿ ನಿರಾಸೆ ಅನುಭವಿಸಿದೆ.

ಕಾಂಗ್ರೆಸ್‌ ಸಹ ವಿಫಲ:

ಎಲ್ಲ 4 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕನಿಷ್ಠ ಮೂರನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇಲ್ಲಿಗೆ ಕರೆತಂದು ಸಮಾವೇಶ ನಡೆಸಿತ್ತು. ಕಡೆ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿಂಚಿನ ಸಂಚಾರ ಮಾಡಿದ್ದರು. ಆದರೆ, ಇವು ಯಾವುವೂ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ಸೋತಿವೆ.

ಇದಕ್ಕೆ 2 ಕ್ಷೇತ್ರ ಕೈ ತಪ್ಪಿರುವುದು ಹಾಗೂ ಸದ್ಯ ಗೆದ್ದಿರುವ ಇಬ್ಬರು ಅಭ್ಯರ್ಥಿಗಳ ಗೆಲುವಿನ ಅಂತರ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿರುವುದೇ ಸಾಕ್ಷಿ. ಚಾಮರಾಜನಗರದ ಸಿ.ಪುಟ್ಟರಂಗಶೆಟ್ಟಿ ಕಳೆದ ಬಾರಿ 11,196 ಮತಗಳ ಅಂತರದಿಂದ ಜಯ ಸಾಧಿಸಿದ್ದರೆ, ಹನೂರಿನ ನರೇಂದ್ರ 11,549 ಅಂತರದಿಂದ ಗೆಲುವು ಪಡೆದಿದ್ದರು. ಆದರೆ, ಪುಟ್ಟರಂಗಶೆಟ್ಟಿ ಈ ಬಾರಿ 4,913 ಮತಗಳ ಅಂತರದಿಂದ ಮಾತ್ರ ಗೆಲುವು ಪಡೆದಿದ್ದಾರೆ. ಅದರಲ್ಲೂ ಹನೂರಿನ ನರೇಂದ್ರ 3,513 ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದಾರೆ.

ಸತತ ಸೋಲಿನಿಂದ ಗೆಲುವು ಕಂಡವರು!

ಈ ಬಾರಿ ಗೆದ್ದಿರುವ ಹೊಸಬರಿಗೆ ಸತತ ಸೋಲಿನಿಂದ ಉಂಟಾದ ಅನುಕಂಪದ ಅಲೆಯೂ ಒಂದು ಪ್ರಮುಖ ಕಾರಣ ಎನಿಸಿದೆ. ಕೊಳ್ಳೇಗಾಲದ ಬಿಎಸ್‌ಪಿಯ ಎನ್.ಮಹೇಶ್‌ ಹಾಗೂ ಗುಂಡ್ಲುಪೇಟೆಯ ಸಿ.ಎಸ್.ನಿರಂಜನಕುಮಾರ್ ಹ್ಯಾಟ್ರಿಕ್ ಸೋಲು ಕಂಡವರು. ಸತತ ಸೋಲಿನಿಂದ ಕಂಗೆಟ್ಟಿದ್ದ ಇವರು ಈ ಬಾರಿ ಚುನಾವಣೆಯ ಪ್ರಧಾನ ವಿಷಯವನ್ನಾಗಿ ಈ ಸೋಲನ್ನೇ ಆಯ್ಕೆ ಮಾಡಿಕೊಂಡರು. ಇನ್ನೆಷ್ಟು ಬಾರಿ ಸೋಲಿಸುತ್ತೀರಿ ಎಂದು ಪದೇ ಪದೇ ಹೇಳುವ ಮೂಲಕ ಮತದಾರರಲ್ಲಿ ಒಂದು ಬಗೆಯ ಅಲೆಯನ್ನೇ ಸೃಷ್ಟಿಸಿದರು. ಸೋಲನ್ನೇ ಬಂಡವಾಳ ಮಾಡಿಕೊಂಡ ಇವರಿಗೆ ಮತದಾರರು ಭಾರಿ ಅಂತರದ ಗೆಲುವನ್ನು ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry