ಪೊಲೀಸ್ ಅಧಿಕಾರಿಗಳ ವಿರುದ್ಧ ಥಳಿತದ ಆರೋಪ

7
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟು ಮಾಡಿದ ವಿಜಯೋತ್ಸವದ ವೇಳೆ ಸಿಡಿಸಿದ ಪಟಾಕಿ

ಪೊಲೀಸ್ ಅಧಿಕಾರಿಗಳ ವಿರುದ್ಧ ಥಳಿತದ ಆರೋಪ

Published:
Updated:

ಚಿಕ್ಕಬಳ್ಳಾಪುರ: ‘ತಾಲ್ಲೂಕಿನ ಮಾರ್ಗಾನಹಳ್ಳಿ ಮತ್ತು ದೊಡ್ಡಪೈಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಇನಮಿಂಚೇನಹಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವದ ನೆವದಲ್ಲಿ ಉದ್ದೇಶಪೂರ್ವಕವಾಗಿ ಜೆಡಿಎಸ್ ಮುಖಂಡರ ಮನೆ ಎದುರು ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌ ಅಧಿಕಾರಿಗಳು ತಮ್ಮ ಬಟ್ಟೆ ಹರಿದು ಥಳಿಸಿದ್ದಾರೆ’ ಎಂದು ಜೆಡಿಎಸ್ ಮುಖಂಡ, ಹಿರಿಯ ವಕೀಲ ನಾರಾಯಣಸ್ವಾಮಿ ಆರೋಪಿಸಿದರು.

‘ಮಂಗಳವಾರ ಮಧ್ಯಾಹ್ನ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮಾರ್ಗಾನಹಳ್ಳಿ ಗೇಟ್‌ ಬಳಿ ಇರುವ ನನ್ನ ಮನೆ ಮತ್ತು ಮಾರ್ಗಾನಹಳ್ಳಿಯಲ್ಲಿರುವ ಜೆಡಿಎಸ್ ಮುಖಂಡ ಸುಬ್ರಮಣಿ ಅವರ ಮನೆ ಎದುರು ರಾಜಕೀಯ ವೈಷಮ್ಯದಿಂದ ಪಟಾಕಿ ಸಿಡಿಸಿದರು. ಅದನ್ನು ಸಹಿಸಿಕೊಂಡಿದ್ದೆ. ಆದರೆ ಇದೇ ರೀತಿ ಇನಮಿಂಚೇನಹಳ್ಳಿಯಲ್ಲಿ ಕೆಲ ಕಾರ್ಯಕರ್ತರಿಗೆ ತೊಂದರೆ ಉಂಟು ಮಾಡಿದ್ದರು’ ಎಂದು ನಾರಾಯಣಸ್ವಾಮಿ ತಿಳಿಸಿದರು.

‘ಇನಮಿಂಚೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿದ ಇಬ್ಬರನ್ನು ಗ್ರಾಮಾಂತರ ಠಾಣೆ ಎಸ್‌ಐ ವೆಂಕಟೇಶ್ ಅವರು ಠಾಣೆಗೆ ಎಳೆ ತಂದು ಥಳಿಸಿದ್ದಾರೆ. ಈ ವಿಷಯ ತಿಳಿದು ಠಾಣೆಗೆ ವಿಚಾರಿಸಲು ಬಂದರೆ ವೃತ್ತ ನಿರೀಕ್ಷಕ ಶಿವಕುಮಾರ್ ಮತ್ತು ವೆಂಕಟೇಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಾಡಿದರು. ಈ ವೇಳೆ ಇನಮಿಂಚೇನಹಳ್ಳಿಯ ಶಾಂತಮೂರ್ತಿ ಎಂಬುವರು ಮತ್ತು ನಾನು ಕೆಳಗೆ ಬಿದ್ದೆವು’ ಎಂದು ಹೇಳಿದರು.

‘ವೆಂಕಟೇಶ್ ನನ್ನ ಮೊಬೈಲ್ ಕಸಿದುಕೊಂಡು, ಬಟ್ಟೆ ಬಿಚ್ಚಿಸಿ ಲಾಕಪ್‌ಗೆ ಹಾಕಿದರು. 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಇರುವಾಗ ಪಟಾಕಿ ಸಿಡಿದವರನ್ನು ಪ್ರಶ್ನಿಸುವುದು ಬಿಟ್ಟು ಪ್ರಶ್ನಿಸಿದವರ ವಿರುದ್ಧ ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ’ ಎಂದು ಆರೋಪಿಸಿದರು.

‘ಈ ಬಗ್ಗೆ ದೂರು ನೀಡಲು ಎಸ್‌ಪಿ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ವಾಟ್ಸಪ್‌ ಮೂಲಕ ದೂರು ಕೊಟ್ಟಿರುವೆ. ನಾಳೆ ಲಿಖಿತ ದೂರು ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ. ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ನಡೆಸುವೆ’ ಎಂದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಎಸ್‌ಪಿ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ. ಎಸ್‌ಐ ವೆಂಕಟೇಶ್ ಅವರು ಕರೆ ಕಡಿತಗೊಳಿಸಿದರು. ವೃತ್ತ ನಿರೀಕ್ಷಕ ಶಿವಕುಮಾರ್ ಅವರು, ‘ನಾರಾಯಣಸ್ವಾಮಿ ಅವರೇ ಜೋರಾಗಿ ಕೂಗಾಡಿ ಗಲಾಟೆ ಮಾಡಿಕೊಂಡು ಬಟ್ಟೆ ಹರಿದುಕೊಂಡಿದ್ದಾರೆ. ಬಳಿಕ ಕೆಲ ವಕೀಲರು ಬಂದು ಅವರನ್ನು ಸಮಾಧಾನಪಡಿಸಿ ಕರೆದುಕೊಂಡು ಹೋದರು’ ಎಂದು ತಿಳಿಸಿದರು.

ಸದ್ಯ ನಾರಾಯಣಸ್ವಾಮಿ ಅವರು ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಲಾಕಪ್‌ನಲ್ಲಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry