ಶನಿವಾರ, ಮಾರ್ಚ್ 6, 2021
19 °C
ಕ್ಷೇತ್ರದಲ್ಲಿ ಮರು ಆಯ್ಕೆಯಾಗಿ ರಾಜಕೀಯ ಇತಿಹಾಸ; ಕೈಗೆ ಭದ್ರ ಕೋಟೆ

ದಾಖಲೆ ಬರೆದ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಖಲೆ ಬರೆದ ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದು ಶಾಸಕರಾದವರು ಮರು ಚುನಾವಣೆ ಯಲ್ಲಿ ಗೆದ್ದು ವಿಧಾನಸೌಧ ಪ್ರವೇಶಿಸಿಲ್ಲ ಎಂದು ಜನಜನಿತವಾಗಿದ್ದ ಮಾತನ್ನು ಪುನರಾಯ್ಕೆ ಆಗುವ ಮೂಲಕ ಶಾಸಕ ಡಾ.ಕೆ.ಸುಧಾಕರ್ ಅವರು ಅಳಿಸಿ, ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ದಾಖಲೆ ಬರೆದಿದ್ದಾರೆ.

ಮೊದಲಿನಿಂದಲೂ ಕಾಂಗ್ರೆಸ್‌ ಪಾಳೆಯದ ಭದ್ರಕೋಟೆಯಾಗಿ ರುವ ಈ ಕ್ಷೇತ್ರದಲ್ಲಿ ರಾಜಕೀಯ ವಾಗಿ ನಿರ್ಣಾಯಕರು ಎನ್ನಬಹುದಾದ ವರೆಲ್ಲರೂ ‘ಕೈ’ನ ಸಾಂಪ್ರದಾಯಿಕ ಮತಗಳಾಗುತ್ತ ಬಂದಿದ್ದಾರೆ. ಈ ನಿರ್ಣಾಯಕರು ಎನಿಸಿಕೊಂಡವರು ಪ್ರಸ್ತುತ ಚುನಾವಣೆಯಲ್ಲೂ ‘ಕೈ’ ಹಿಡಿದಿದ್ದಾರೆ ಎಂಬುದು ಫಲಿತಾಂಶದಲ್ಲಿ ಗೋಚರಿಸುತ್ತದೆ.

ಈ ಬಾರಿಯ ಸ್ಪರ್ಧಾ ಕಣದಲ್ಲಿ ಸುಧಾಕರ್ ಅವರೊಂದಿಗೆ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮತ್ತು ಬಂಡೆದ್ದು ಪಕ್ಷೇತರವಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್ ಕಿರಣ್ ಅವರ ನಡುವೆ ಪೈಪೋಟಿಯ ತ್ರಿಕೋನ ಸ್ಪರ್ಧೆ ನಡೆದಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿತ್ತು.

ಈ ಪೈಕಿ ಸುಧಾಕರ್, ಬಚ್ಚೇಗೌಡ ಒಂದೇ ಸಮುದಾಯದವರಾದ್ದರಿಂದ ಶಾಸಕರ ಪುನರಾಯ್ಕೆ ಕಷ್ಟ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಅವೀಗ ಸುಳ್ಳಾಗಿವೆ.

ಫಲಿತಾಂಶ ನೋಡಿದರೆ ಸುಧಾಕರ್ ಮತ್ತು ಬಚ್ಚೇಗೌಡರ ನಡುವೆ ತುರುಸಿನ ಸ್ಪರ್ಧೆ ನಡೆದಂತೆ ಗೋಚರಿಸುತ್ತದೆ. ಕಳೆದ ಚುನಾವಣೆಯಲ್ಲಿ ಸುಧಾಕರ್ ಅವರು ಮೊದಲ ಯತ್ನದಲ್ಲೇ ಬಚ್ಚೇಗೌಡರನ್ನು 15,048 ಮತಗಳಿಂದ ಅಂತರದಿಂದ ಪರಾಭವಗೊಳಿಸಿದ್ದರು. ಈ ಬಾರಿ ಅದರ ಪ್ರಮಾಣ 30,431ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂತರದ ಗೆಲುವು ಕೂಡ ಇದಾಗಿದೆ.

ಸುಧಾಕರ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಹಿಡಿತ ಸಾಧಿಸಿದ್ದು ಒಂದೆಡೆಯಾದರೆ, ರಾಜಕೀಯ ತಂತ್ರಗಾರಿಕೆಯಿಂದ ಅಹಿಂದ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ, ಜೆಡಿಎಸ್ ಪ್ರಸ್ತುತ ಕಾಲಮಾನದ ರಾಜಕೀಯ ತಂತ್ರಗಾರಿಕೆಯಲ್ಲಿ ಹಿಂದುಳಿಯಿತು. ನವೀನ್ ಕಿರಣ್ ಅವರು ಪಕ್ಷೇತರ ಅಭ್ಯರ್ಥಿಯಾದ ಕಾರಣಕ್ಕೆ ಅವರಿಗೆ ಬಲಿಜ ಸಮುದಾಯದ ಹೊರತು ಪಡಿಸಿದಂತೆ ಇತರ ಪಕ್ಷಗಳ ಮತ ಬ್ಯಾಂಕ್ ಕದಲಿಸಲು ಸಾಧ್ಯವಾಗಲಿಲ್ಲ. ಅವರ ಪ್ರಯತ್ನ ಪ್ರಾಮಾಣಿಕವಾಗಿ ಇದ್ದರು ಪಕ್ಷದ ಮೂಲಕ ಸ್ಪರ್ಧೆಗೆ ಇಳಿದಿದ್ದರೆ ಅನುಕೂಲ ಆಗುತ್ತಿತ್ತು. ಆದರೆ ಅವರ ಆಸೆಗೆ ಅವಕಾಶ ಸಿಗಲಿಲ್ಲ. ಸೇವೆಗೆ ಮನ್ನಣೆ ಸಿಗಲಿಲ್ಲ. ಇದು ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸದ್ಯ ಹರಿದಾಡುತ್ತಿವೆ.

ಕಾರ್ಯಕರ್ತರ ಸಂಭ್ರಮ

ಸುಧಾಕರ್ ಗೆಲುವಿನ ಸುದ್ದಿ ಕೇಳುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿತು. ಪಕ್ಷದ ಕಾರ್ಯಕರ್ತರು ನಗರದೆಲ್ಲೆಡೆ ಸಂಚರಿಸಿ ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಕೂಗುವ ಜತೆಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಶಾಸಕ ಸುಧಾಕರ್‌ ಅವರು ಗೆಲುವಿನ ಸುದ್ದಿ ತಿಳಿದುಕೊಂಡ ನಂತರ ತಮ್ಮ ಬೆಂಬಲಿಗರು, ಕಾರ್ಯಕರ್ತರೊಂದಿಗೆ ನಗರದ ಮೆಟ್ರಿಕ್‌ ನಂತರದ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣಕ್ಕೆ ತೆರಳಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

‘ವಿರೋಧ ಪಕ್ಷದವರು, ಕೆಲ ಪಟ್ಟಭದ್ರರು ಕಳೆದ ಮೂರ್ನಾಲ್ಕು ತಿಂಗಳಿನಿಂದ ನನ್ನ ತೆಜೋವಧೆ ಮಾಡಿದರು. ಅದಕ್ಕೆ ಉತ್ತರವಾಗಿ ಕ್ಷೇತ್ರದ ಮತದಾರರು ನನ್ನ ಅಭಿವೃದ್ಧಿ ಕಾರ್ಯ ಮೆಚ್ಚಿ ಜನತಾ ನ್ಯಾಯಾಲಯದಲ್ಲಿ ದೊಡ್ಡ ಗೆಲುವು ನೀಡಿದ್ದಾರೆ. ಇದು ತುಂಬಾ ಸಂತಸ ಉಂಟು ಮಾಡಿದೆ’ ಎಂದು ಹೇಳಿದರು.

‘ಮುಂದಿನ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರತಿ ಕೆರೆಗೆ ನೀರು ತುಂಬಿಸುವುದು, ಕೈಗಾರಿಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವುದು. ಚಿಕ್ಕಬಳ್ಳಾಪುರ ನಗರವನ್ನು ಉಪನಗರ ಮಾಡುವುದು ಮತ್ತುಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

**

ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು, ಮತ್ತೊಮ್ಮೆ ಗೆದ್ದಿಲ್ಲ ಎಂಬ ಮಾತಿಗೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ನನ್ನ ಕೋಟಿ ನಮನ

ಡಾ.ಕೆ. ಸುಧಾಕರ್‌, ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.