ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಶಂಕರರೆಡ್ಡಿ 5ನೇ ಬಾರಿ ಜಯದ ನಗೆ

Last Updated 16 ಮೇ 2018, 11:05 IST
ಅಕ್ಷರ ಗಾತ್ರ

ಗೌರಿಬಿದನೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಎಚ್‌. ಶಿವಶಂಕರರೆಡ್ಡಿ ಸತತ 5ನೇ ಬಾರಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ಅವರು, ‘ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿತ್ತಿರುವುದೇ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.

ಶಿವಶಂಕರರೆಡ್ಡಿ ಅವರ ಗೆಲುವಿನ ವಿಚಾರ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಕುಣಿದು ಸಂಭ್ರಮಿಸಿದರು. ಹರ್ಷೋದ್ಗಾರ ಮುಗಿಲು ಮುಟ್ಟುವಂತಿತ್ತು. ಶಿವಶಂಕರರೆಡ್ಡಿ ಅವರನ್ನು ಮೇಲೆತ್ತಿ ಜೈಕಾರ ಕೂಗುತ್ತಾ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಜನರಿಗೆ ಸಿಹಿ ಹಂಚಿದರು. ಕಾರ್ಯಕರ್ತರು ಬೈಕ್‌ಗಳಲ್ಲಿ ಬಾವುಟ ಹಿಡಿದು ರ‍್ಯಾಲಿ ನಡೆಸಿದರು.

ಗೆಲುವಿನ ನಂತರ ಶಿವಶಂಕರ ರೆಡ್ಡಿ ಅವರು ಮತ ಎಣಿಕೆ ಕೇಂದ್ರದಿಂದ ನೇರವಾಗಿ ಗುಡಿಬಂಡೆ ಮಾರ್ಗವಾಗಿ ವಾಟದಹೊಸಹಳ್ಳಿ, ಹುದುಗೂರು, ಕಲ್ಲೂಡಿ, ಗೌರಿಬಿದನೂರು ಪಟ್ಟಣ, ತೊಂಡೇಬಾವಿ, ಅಲೀಪುರ ಮತ್ತು ಹೊಸೂರು ಗ್ರಾಮಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಮೂರು ದಶಕಗಳ ರಾಜಕೀಯ ಅನುಭವ ಹೊಂದಿದ ಶಿವಶಂಕರ ರೆಡ್ಡಿ ಅವರನ್ನು ಈ ಬಾರಿ ಮಣಿಸಲು ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಭಾರಿ ಕಸರತ್ತು ನಡೆಸಿದ್ದರು. ಆದರೆ ಶಿವಶಂಕರ ರೆಡ್ಡಿ ಅವರ ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆ ಎದುರು ಅವರ ಪ್ರಯತ್ನ ಫಲಿಸಲಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಭದ್ರ ಕೋಟೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬುದು ಅವರ ಆಪ್ತರ ಅನಿಸಿಕೆ.

ಶಿವಶಂಕರರೆಡ್ಡಿ ಯವರ ರಾಜಕೀಯ ಸಾಧನೆ ;

ಇವರು ಸತತ 5 ನೇ ಬಾರಿ ಗೌರಿಬಿದನೂರು ತಾಲ್ಲೂಕಿನ ಚುಕ್ಕಾಣಿ ಹಿಡಿದಿರುವುದು ರಾಜಕೀಯ ಕ್ಷೇತ್ರದ ಸಾಧನೆಯಾಗಿದೆ.
1999 ರಲ್ಲಿ ಸ್ಪರ್ಧಿಸಿದ್ದ ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ (33679) ವಿರುದ್ದ 34541 ಮತಗಳನ್ನು ಪಡೆದು ಸುಮಾರು 862 ಮತಗಳ ಅಂತರದಲ್ಲಿ ಮೊದಲ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾಗಿದ್ದರು.

2004 ರಲ್ಲಿ ಎರಡನೇ ಬಾರಿ ಸ್ಪರ್ಧಿಸಿ ತಮ್ಮ ಎದುರಾಳಿ ಜೆಡಿಎಸ್ ಎನ್.ಜ್ಯೋತಿರೆಡ್ಡಿ (41611) ವಿರುದ್ದ 49636 ಮತಗಳನ್ನು ಪಡೆದು 8025 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

2008 ರಲ್ಲಿ ಮೂರನೇ ಬಾರಿ ಬಿಜೆಪಿ ಪಕ್ಷದ ಎನ್.ಎಂ‌.ರವಿನಾರಾಯಣರೆಡ್ಡಿ (27959) ವಿರುದ್ದ ಸ್ಪರ್ಧಿಸಿ 39137 ಮತಗಳನ್ನು ಪಡೆದು 11168 ಮತಗಳ ಅಂತರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

2013 ರಲ್ಲಿ ನಾಲ್ಕನೇ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೆ.ಜೈಪಾಲರೆಡ್ಡಿ (44056) ವಿರುದ್ದ ಕಣಕ್ಕಿಳಿದು 50131 ಮತಗಳನ್ನು ಪಡೆದು 6,075 ಮತಗಳ ಅಂತರದಲ್ಲಿ ಜಯಗಳಿಸಿದ್ದರು.

2018 ರ ವಿಧಾನಸಭಾ ಚುನಾವಣೆಯಲ್ಲಿ ಸತತ ಐದನೇ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ (59832) ವಿರುದ್ದ ಸ್ಪರ್ಧಿಸಿ 68608 ಮತಗಳನ್ನು ಪಡೆಯುವ ಮೂಲಕ ಸುಮಾರು 8776 ಮತಗಳ ಅಂತರದಲ್ಲಿ 5 ನೇ ಬಾರಿ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT