ಜಿಲ್ಲೆಯಿಂದ ಸಚಿವರು ಯಾರು?

7

ಜಿಲ್ಲೆಯಿಂದ ಸಚಿವರು ಯಾರು?

Published:
Updated:

ಹಾವೇರಿ: ‘ಕೂಸು ಹುಟ್ಟುವ ಮೊದಲೇ ಕುಲಾವಿ’ ಎಂಬ ಗಾದೆ ಮಾತಿನಂತೆ, ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ನಡೆಯುತ್ತಿದ್ದರೆ, ಅತ್ತ ಬೆಂಬಲಿಗರ ನಡುವೆ ‘ಮುಂದಿನ ಸಚಿವರು ಯಾರು?’ ಎಂಬ ಚರ್ಚೆಯಲ್ಲಿ ನಿರತರಾಗಿದ್ದರು.

ಆರಂಭದಲ್ಲಿ ಬಿಜೆಪಿ ಮುನ್ನಡೆ ಪಡೆಯುತ್ತಿದ್ದಂತೆಯೇ ಹಾನಗಲ್ ಶಾಸಕ ಸಿ.ಎಂ. ಉದಾಸಿ, ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಚರ್ಚೆ ಬೆಂಬಲಿಗರ ನಡುವೆ ಜೋರಾಗಿತ್ತು. ಆದರೆ, ಬಿಜೆಪಿಯು ಅಧಿಕಾರಕ್ಕೆ ಬರುವ ಮ್ಯಾಜಿಕ್ ಸಂಖ್ಯೆ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ರಾಣೆಬೆನ್ನೂರಿನಿಂದ ಆಯ್ಕೆಯಾದ ಕೆಪಿಜೆಪಿ ಶಾಸಕ ಆರ್. ಶಂಕರ್ ಅವರು ಸಚಿವರಾಗಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು.

ಇವೆಲ್ಲದರ ನಡುವೆ ಬೆಂಗಳೂರಿನಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವ ಕಸರತ್ತು ಆರಂಭಿಸಿತು. ಆಗ, ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಹೆಸರು ಸಚಿವ ಸ್ಥಾನಕ್ಕೆ ಕೇಳಿಬಂದಿದೆ.

ಇನ್ನೊಂದೆಡೆ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ ಪರಿಶಿಷ್ಟ ಜಾತಿಯ ಕೋಟಾದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆಯೂ ನಡೆದಿತ್ತು. ಒಟ್ಟಾರೆ, ಅತ್ತ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಪಕ್ಷಗಳ ಮುಖಂಡರು ಸರ್ಕಾರ ರಚಿಸಲು ಕಸರತ್ತು ನಡೆಸಿದರೆ, ಇತ್ತ ಜಿಲ್ಲೆಯಿಂದ ಮುಂದಿನ ಸಚಿವರು ಯಾರು? ಎಂಬ ಚರ್ಚೆ ನಡೆದಿತ್ತು. ಆದರೆ, ಅಚ್ಚರಿ ಎಂಬಂತೆ ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಎಂ. ಉದಾಸಿ ಸೋಲು ಕಂಡಿದ್ದರೆ, ಈ ಬಾರಿ ರುದ್ರಪ್ಪ ಲಮಾಣಿ ಸೋತಿದ್ದಾರೆ.

ಈ ತೀರ್ಪು ನಿರೀಕ್ಷಿಸಿರಲಿಲ್ಲ: ಲಮಾಣಿ

ಹಾವೇರಿ: ಅತ್ತ ಹಾವೇರಿ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಇತ್ತ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಮನೆಯಲ್ಲಿ ಮೌನ ಆವರಿಸಿತು. ಗೆಲುವಿನ ನಿರೀಕ್ಷೆಯಲ್ಲಿದ್ದ ಅವರು ಸೋಲುಕಂಡಿದ್ದರು. ಪ್ರತಿನಿತ್ಯ ಬಡವರು, ಕ್ಷೇತ್ರದ ಜನತೆ, ಬೆಂಬಲಿಗರಿಂದ ತುಂಬಿ ತುಳುಕುತ್ತಿದ್ದ ಮನೆಯು ಮೌನಕ್ಕೆ ಜಾರಿತ್ತು. ರುದ್ರಪ್ಪ ಲಮಾಣಿ, ಎಂ.ಎಂ. ಹಿರೇಮಠ, ಪರಶುರಾಮ ಅಡಕಿ ಮತ್ತಿತರರು ಮಾತ್ರ ಕುಳಿತಿದ್ದರು. ಫಲಿತಾಂಶದ ವಿಶ್ಲೇಷಣೆ ನಡೆದಿತ್ತು.

ಈ ನಡುವೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಲಮಾಣಿ, ‘ಜನ ಏನು ತೀರ್ಪು ನೀಡುತ್ತಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕಳೆದ ಐದು ವರ್ಷ ಯಾವುದೇ ಗದ್ದಲ ನಡೆಯದಂತೆ ಕಾಯ್ದುಕೊಂಡು ಬಂದಿದ್ದೇನೆ. ಕನಿಷ್ಠ ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲದ ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಬಡಾವಣೆಗಳ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ.

ಹೆಗ್ಗೇರಿಗೆ ನೀರು, ಕೆರೆಗಳ ಅಭಿವೃದ್ದಿ, ಯುಟಿಪಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದೇನೆ. ಎಲ್ಲಿಯೂ ದಬ್ಬಾಳಿಕೆ ನಡೆಸಿಲ್ಲ. ದರ್ಪ ಮೆರೆದಿಲ್ಲ. ಸಾಕಷ್ಟು ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಸಹಾಯ ಕೊಡಿಸಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ ಬಳಿಕವೂ ಇಂತಹ ತೀರ್ಪು ನೀಡುತ್ತಾರೆ ಎಂದು ಕನಸಿನಲ್ಲೂ ಗ್ರಹಿಸಿರಲಿಲ್ಲ. ಯಾರದೋ ಕೆಲವರ ಅಪಪ್ರಚಾರ, ಪಿತೂರಿಗಳು ಇರಬಹುದು. ಹೀಗಾಗಿ ಜನರ ತಪ್ಪಲ್ಲ. ಹಾವೇರಿ ಕ್ಷೇತ್ರದ ಜನತೆ ತುಂಬಾ ಒಳ್ಳೆಯವರು’ ಎಂದು ಪ್ರತಿಕ್ರಿಯಿಸಿದರು. ಇತರರ ಮಾತುಗಳು ಮೌನವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry