ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮತ್ತೆ ಅರಳಿದ ಕಮಲ

ನಾಲ್ಕು ಕಡೆ ಕಮಲ ಅರಳಿಸಿದ ಮತದಾರ, ರಾಣೆಬೆನ್ನೂರಿನ ಆಟೊ, ಹಿರೇಕೆರೂರಿನಲ್ಲಿ ‘ಕೌರವ’
Last Updated 16 ಮೇ 2018, 12:20 IST
ಅಕ್ಷರ ಗಾತ್ರ

ಹಾವೇರಿ: ಕೆಜೆಪಿ 2013ಉದಯಿಸಿದ್ದ ಜಿಲ್ಲೆಯಲ್ಲಿ ಈ ಬಾರಿ (2018) ಕಮಲ ಅರಳಿದೆ. ಅಂದು ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಈ ಬಾರಿ ಬಿಜೆಪಿ –4, ಕಾಂಗ್ರೆಸ್ –1 ಮತ್ತು ಕೆಪಿಜೆಪಿ –1 ಸ್ಥಾನಗಳಲ್ಲಿ ಗೆದ್ದಿದೆ. ಆ ಮೂಲಕ ಕೈ ಹಿನ್ನಡೆ ಅನುಭವಿಸಿದೆ. ಈ ಬಾರಿ ಕೆಜೆಪಿ–ಬಿಜೆಪಿ ಒಂದಾಗಿದ್ದು, ಬಿ.ಎಸ್. ಯಡಿಯೂರಪ್ಪ ಅವರ ‘ಲಿಂಗಾಯತ’ ಬ್ರಾಂಡ್ ಪ್ರಭಾವ ಬೀರಿದೆ.

ಹಾವೇರಿ ಮೀಸಲು ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸೋಲು ಕಂಡಿದ್ದಾರೆ. ಮೇ 7ರಂದು ಕ್ಷೇತ್ರದಲ್ಲಿ ತಂಗಿದ್ದ ಬಿ.ಎಸ್.ಯಡಿಯೂರಪ್ಪ ‘ಲಿಂಗಾಯತ’ ಮತವನ್ನು ಬಿಜೆಪಿ ಅಭ್ಯರ್ಥಿ ಪರ ಕ್ರೋಡೀಕರಿಸುವಲ್ಲಿ ಯಶಸ್ವಿಯಾಗಿದ್ದರು. ಶಾಸಕ ಬಸವರಾಜ ಶಿವಣ್ಣನವರಿಗೆ ಟಿಕೆಟ್ ದೊರೆಯದಿರುವುದು ಅವರ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ಅದನ್ನು ಶಮನ ಮಾಡುವ ಪ್ರಯತ್ನವೂ ಪ್ರಭಾವಿಯಾಗಿ ನಡೆದಿರಲಿಲ್ಲ. ಅಲ್ಲದೇ, ಶಿವಣ್ಣನವರ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ನಡುವಿನ ಮುನಿಸಿಗೆ ಲಮಾಣಿ ಬಲಿಯಾಗಿದ್ದಾರೆ. ಇನ್ನೊಂದೆಡೆ, ಜಿಲ್ಲಾ ಪಂಚಾಯ್ತಿ ಹಾಗೂ ನಗರಸಭೆಯ ಕೆಲವು ಮುಖಂಡರು ಸಚಿವರ ಅಧಿಕಾರವನ್ನು ತಾವೇ ಚಲಾಯಿಸಿದ್ದು, ಮುಳುವಾಗಿದೆ. ಜೊತೆಗಿದ್ದವರ ಮೇಲಿನ ಸಿಟ್ಟನ್ನು ಜನತೆ ಸಜ್ಜನಿಕೆಯ ಲಮಾಣಿ ಮೇಲೆ ತೋರಿಸಿದ್ದಾರೆ ಎಂದು ಬೆಂಬಲಿಗರು ವಿಶ್ಲೇಷಿಸಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮರಳು ಮಾಫಿಯಾದ ಸಿಟ್ಟು ಕಟ್ಟೆಯೊಡೆದಿದೆ. ನದಿ ತೀರದ ರೈತರು ಪದೇ ಪದೇ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು. ಅಲ್ಲದೇ, ಹಳೇ ಶೈಲಿಯ ರಾಜಕೀಯದಿಂದ ಬೇಸತ್ತಿದ್ದ ಜನತೆ, ‘ಬೆಂಗಳೂರು’ ಮಾದರಿಗೆ ಮಣೆ ಹಾಕಿದ್ದಾರೆ. ‘ಆಟೊ’ ಶಂಕರ ಮುಗುಳ್ನಗೆ ಬೀರಿದ್ದಾರೆ. ಬಿಜೆಪಿಯು ಅಭ್ಯರ್ಥಿ ಆಯ್ಕೆಯಲ್ಲಿ ಯಶಸ್ಸು ಕಾಣಲಿಲ್ಲ ಎನ್ನಲಾಗಿದೆ.

ಹಾನಗಲ್ ಕ್ಷೇತ್ರದಲ್ಲಿ ಶಾಸಕ ಮನೋಹರ್ ತಹಸೀಲ್ದಾರ್‌ ವಿರುದ್ಧ ಸ್ವಪಕ್ಷೀಯರೇ ಬಂಡಾಯ ಸಾರಿದ್ದರು. ಈ ಬಂಡಾಯದ ಕಾರಣ ಟಿಕೆಟ್ ಗಿಟ್ಟಿಸಿಕೊಂಡ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಬಿಜೆಪಿಯ ಸಿ.ಎಂ. ಉದಾಸಿ ವಿರುದ್ಧ ಸೋಲುಂಡಿದ್ದಾರೆ. ಆದರೆ, ಹೊರಗಿನಿಂದ ಬಂದು ಹಾಲಿ ಶಾಸಕರು, ಬಂಡಾಯ ನಾಯಕರು ಹಾಗೂ ಕ್ಷೇತ್ರದ ಜನರ ಮನವೊಲಿಸಿದ ಮಾನೆ, ಹಿರಿಯ ರಾಜಕಾರಣಿ ಎದುರು ಪ್ರಬಲ ಪೈಪೋಟಿ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಾನೊಬ್ಬ ಚುನಾವಣಾ ಚಾಣಾಕ್ಷ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ.

ಕೊನೆ ಕ್ಷಣದ ತನಕ ಪೈಪೋಟಿ ನೀಡಿದ್ದ ಕ್ಷೇತ್ರ ಹಿರೇಕೆರೂರ. ಇಲ್ಲಿ ಬಿಜೆಪಿಯ ಶಾಸಕ ಯು.ಬಿ. ಬಣಕಾರ ಕೇವಲ 555 ಮತಗಳಿಂದ ಸೋಲುಕಂಡಿದ್ದಾರೆ. ಕಾಂಗ್ರೆಸ್‌ನ ಬಿ.ಸಿ. ಪಾಟೀಲ ಮತ್ತು ಬಣಕಾರ ಮಧ್ಯೆ ಪ್ರಬಲ ಪೈಪೋಟಿ ಇತ್ತು. ಪಕ್ಷ ಮತ್ತು ಹಿಂದುತ್ವಕ್ಕಿಂತ ಹೆಚ್ಚಾಗಿ ಯು.ಬಿ. ಬಣಕಾರ ವೈಯಕ್ತಿಕ ವರ್ಚಸ್ಸು ಹೊಂದಿದ್ದು, ಗೆಲುವು ನಿರೀಕ್ಷಿಸಿದ್ದರು. ಆದರೆ, ಇಲ್ಲಿ ನಡೆದ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಜಿಹಾದಿ’ ಎಂಬಿತ್ಯಾದಿ ಪದ ಬಳಕೆಗಳನ್ನು ಮಾಡಿದ್ದು, ಬಣಕಾರ ಪರ ಮೃದು ಧೋರಣೆ ಹೊಂದಿದ್ದ ಅಲ್ಪಸಂಖ್ಯಾತ, ಸಣ್ಣ ಸಮುದಾಯಗಳ ಮತಗಳು ದೂರ ಸರಿದಿವೆ ಎನ್ನಲಾಗಿದೆ. ಯೋಗಿ ಕಾರ್ಯಕ್ರಮವೇ ಬಣಕಾರರಿಗೆ ಮುಳುವಾಯಿತೇ? ಎಂಬ ಚರ್ಚೆಗಳು ಆರಂಭಗೊಂಡಿವೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಣಕಾರ ಅವರನ್ನು ಕೆಲವು ಅಲ್ಪಸಂಖ್ಯಾತರು ಬೆಂಬಲಿಸಿದ್ದರು ಎಂದು ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲರೇ ಹೇಳಿದ್ದರು.

ಬ್ಯಾಡಗಿಯಲ್ಲಿ ನಿರೀಕ್ಷೆಯಂತೆ ಮತಗಳು ಕ್ರೋಡೀಕರಣಗೊಂಡಿವೆ. ಶಾಸಕ ಬಸವರಾಜ ಶಿವಣ್ಣನವರಿಗೆ ಟಿಕೆಟ್ ನಿರಾಕರಿಸಿರುವುದು ಕಾಂಗ್ರೆಸ್‌ಗೆ ಮೊದಲ ಹಿನ್ನಡೆಯಾದರೆ, ಸುರೇಶ ಗೌಡ್ರ ಪಾಟೀಲ ಕಾಂಗ್ರೆಸ್ ಸೇರ್ಪಡೆಯು ‘ಲಿಂಗಾಯತ’ ಸಮುದಾಯದೊಳಗಿನ ಒಳಪಂಗಡಗಳ ‘ಬಿಗ್ ಫೈಟ್‌’ ಅನ್ನು ಬಹಿರಂಗಗೊಳಿಸಿತ್ತು. ಅಲ್ಲದೇ, ಶ್ರೀಮಂತಿಕೆಯ ನಡುವೆಯೂ ಸಾಮಾನ್ಯರೊಡನೆ ಸಾಮಾನ್ಯರಂತೆ ಬೆರೆಯುವ ವಿರೂಪಾಕ್ಷಪ್ಪ ಬಳ್ಳಾರಿ ವ್ಯಕ್ತಿತ್ವವು ಗ್ರಾಮೀಣ ಭಾಗದಲ್ಲಿ ಪ್ರಭಾವ ಬೀರಿತ್ತು. ಹಳೇ ಶೈಲಿ ರಾಜಕಾರಣವನ್ನು ಜಿಲ್ಲೆಯ ಜನತೆ ಮತ್ತೊಮ್ಮೆ ತಿರಸ್ಕರಿಸಿದ್ದಾರೆ.

ಮೊದಲ ಬಾರಿಸ್ಪರ್ಧೆ (2008) , ಬಿ.ಎಸ್.ಯಡಿಯೂರಪ್ಪ ಅವರ ವಿರೋಧ (2013) ಹಾಗೂ ಸ್ವಪಕ್ಷೀಯ ಸೋಮಣ್ಣ ಬೇವಿನಮರದ ಬಂಡಾಯದ (2018) ನಡುವೆಯೂ ಹ್ಯಾಟ್ರಿಕ್ ಗೆಲುವು ಸಾಧಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರಿಂದಲೇ, ‘ಚಾಣಾಕ್ಷ ರಾಜಕಾರಣಿ’ ಎನಿಸಿಕೊಂಡ ಬೊಮ್ಮಾಯಿ, ಗೆಲುವಿನ ಬಳಿಕ ತೋಳು ತಟ್ಟಿದರು. ಈ ಬಾರಿಯ ತೀವ್ರ ಸ್ಪರ್ಧೆಯಲ್ಲಿ ಗೆದ್ದು ಬಂದ ಹೋರಾಟದ ಕೆಚ್ಚನ್ನು ಬೆಂಬಲಿಗರ ಮುಂದೆ ತೋರಿಸಿದರು.

ಒಟ್ಟಾರೆ, ಜಿಲ್ಲೆಯ ಫಲಿತಾಂಶದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ‘ಲಿಂಗಾಯತ’ ಬ್ರಾಂಡ್ ಪ್ರಭಾವ ಬೀರಿರುವುದು ನಿಜ. ಈ ನಡುವೆಯೂ ರಾಣೆಬೆನ್ನೂರಿನಲ್ಲಿ ಆರ್. ಶಂಕರ್ ಮೋಡಿ ಹಾಗೂ ಬಿ.ಸಿ. ಪಾಟೀಲ್ ಖದರ್ ಗೆಲುವಿನ ದಡ ಸೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT