ಪ್ರತಿಸುತ್ತಿಗೂ ಬದಲಾಗುತ್ತಿದ್ದ ಮುಖಭಾವ!

7
ರಾಜಕೀಯವಾಗಿ ಕೇಂದ್ರಬಿಂದುವಾದ ಕುಮಟಾದ ಬಾಳಿಗಾ ಕಾಲೇಜು ಆವರಣ

ಪ್ರತಿಸುತ್ತಿಗೂ ಬದಲಾಗುತ್ತಿದ್ದ ಮುಖಭಾವ!

Published:
Updated:

ಕುಮಟಾ: ಜಿಲ್ಲೆಯ ದೃಷ್ಟಿ ಮಂಗಳವಾರ ಕುಮಟಾದ ಎ.ವಿ.ಬಾಳಿಗಾ ಕಾಲೇಜಿನತ್ತ ನೆಟ್ಟಿತ್ತು. ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಭಾರಿ ಭದ್ರತೆಯ ನಡುವೆ ಮಾಡಲಾಯಿತು. ಕಾಲೇಜಿನ ಆವರಣ ಬೆಳಿಗ್ಗೆ 6ರಿಂದಲೇ ವಿವಿಧ ಗಣ್ಯರ, ಅಧಿಕಾರಿಗಳ, ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ತುಂಬಿತ್ತು.

ಬೆಳಿಗ್ಗೆ 8ಕ್ಕೆ ಸ್ಟ್ರಾಂಗ್ ರೂಂ ಬಾಗಿಲು ತೆರೆದು ಒಂದೊಂದೇ ಮತಯಂತ್ರಗಳನ್ನು 14 ಮೇಜುಗಳ ಮೇಲೆ ಜೋಡಿಸಲಾಯಿತು.  ಪ್ರತಿ ಕ್ಷೇತ್ರದಲ್ಲಿದ್ದ ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳನ್ನು ನಿಗದಿ ಮಾಡಲಾಗಿತ್ತು. ಅಂಚೆ ಮತ ಎಣಿಕೆಯ ಬಳಿಕ, ಪ್ರತಿ ಕ್ಷೇತ್ರದ ಒಂದೊಂದೇ ಸುತ್ತಿನ ಮತ ಎಣಿಕೆ ಆರಂಭಿಸಲಾಯಿತು.

ಬದಲಾಗುತ್ತಿದ್ದ ಮುಖಭಾವ: ಪ್ರತಿ ಸುತ್ತು ಎಣಿಕೆ ಮುಕ್ತಾಯವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಏಜೆಂಟರ ಮುಖಭಾವ ಬದಲಾಗುತ್ತಿದ್ದುದು ಗೋಚರಿಸುತ್ತಿತ್ತು. ಅಭ್ಯರ್ಥಿಗಳೂ ತಮ್ಮ ಕ್ಷೇತ್ರಗಳ ಮತ ಎಣಿಕೆ ಕೊಠಡಿಗಳತ್ತ ಹೆಜ್ಜೆ ಹಾಕಿ ಎಷ್ಟು ಮತ ಬಂತು ಎಂದು ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಯಾರು ಏನು ಮಾಡಿದರು?: ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಸಚಿವ ಆರ್.ವಿ.ದೇಶಪಾಂಡೆ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಿದರು. ಏಳನೇ ಸುತ್ತಿನ ಮತ ಎಣಿಕೆಯ ಬಳಿಕ ಸಮೀಪದ ಸ್ಪರ್ಧಿ ಸುನೀಲ ಹೆಗಡೆ ವಿರುದ್ಧ ತಮಗೆ ಕೇವಲ 124 ಮತಗಳ ಮುನ್ನಡೆಯಿದೆ ಎಂದು ತಿಳಿದಾಗ ಸ್ವಲ್ಪ ಚಿಂತಿತರಾದಂತೆ ಕಂಡುಬಂದರು. ಆದರೆ, ನಂತರ ಜಯಸಾಧಿಸಿ ನಿರಾಳರಾದರು. ಇಂಥದ್ದೇ ಸನ್ನಿವೇಶವನ್ನು ಕಾರವಾರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕೂಡ ಎದುರಿಸಿದರು.

ಶಿರಸಿಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಎಣಿಕೆಯ ಆರಂಭದಿಂದಲೂ ನಿರಾತಂಕವಾಗಿದ್ದರು. ಒಂದೆರಡು ಬಾರಿ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ ಪತ್ರಕರ್ತರ ಜತೆಗೆ ನಗುನಗುತ್ತಾ ಮಾತನಾಡಿದರು. ದಿನಕರ ಶೆಟ್ಟಿ ಅವರು ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ ವಿರುದ್ಧ ಗೆಲುವು ತಮ್ಮದೇ ಎಂದು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ನೀಡಿದ ಸಿಹಿ ಸೇವಿಸಿದರು. ಈ ನಡುವೆ, ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಬೇಸರದಿಂದಲೇ ಹೊರಟುಹೋದರು.

ಯಲ್ಲಾ‍ಪುರ– ಮುಂಡಗೋಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರು ಎಲ್ಲರಿಗಿಂತ ಮೊದಲು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದರು. ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ ಅವರ ವಿರುದ್ಧ ಆರಂಭದಲ್ಲಿ ಹಿನ್ನಡೆ ಕಂಡರೂ ನಂತರ ಮುನ್ನಡೆ ಪಡೆದುಕೊಂಡು ಮುಗುಳ್ನಕ್ಕರು. ಆದರೆ, ಫಲಿತಾಂಶ ತಮ್ಮ ವಿರುದ್ಧ ಬರುತ್ತಿದೆ ಎಂದು ತಿಳಿಯುತ್ತಿದ್ದಂತೆ ಹೊರನಡೆದರು.

ಸಂಚಾರ ನಿರ್ಬಂಧ: ರಾಷ್ಟ್ರೀಯ ಹೆದ್ದಾರಿ 66ರಿಂದ ಮತ ಎಣಿಕೆ ಕೇಂದ್ರದವರೆಗೆ ಸುಮಾರು 500 ಮೀ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ ವಿಜೇತರ ಬೆಂಬಲಿಗರು ಹೆದ್ದಾರಿಯ ಬದಿಯಲ್ಲೇ ಸಂಭ್ರಮಾಚರಣೆ ಮಾಡುತ್ತಿದ್ದುದು ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry