ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಿತ ಫಲಿತಾಂಶ ನೀಡಿದ ಪ್ರಜ್ಞಾವಂತ ಮತದಾರ

ಜಿಲ್ಲೆಯಲ್ಲಿ ಬಿಜೆಪಿ 3, ಕಾಂಗ್ರೆಸ್‌ಗೆ 2 ಸ್ಥಾನ, ಸೋಲು ಕಂಡ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ
Last Updated 16 ಮೇ 2018, 13:05 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಚುನಾವಣಾ ಪೂರ್ವದಲ್ಲಿ ನಿರೀಕ್ಷಿತ ಫಲಿತಾಂಶವೇ ದೊರೆತಿದೆ. ಎರಡೂ ಪಕ್ಷಗಳಿಗೂ 3;2ರ ಅಧಿಕಾರ ಹಂಚಿಕೆ ಮಾಡಿ ಮತದಾರ ತೀರ್ಪು ನೀಡಿದ್ದಾನೆ.

ಆಡಳಿತ ವಿರೋಧಿ ಅಲೆ ಜಿಲ್ಲೆಯಲ್ಲೂ ಇದೆ ಎನ್ನುವುದನ್ನೂ ಅಭ್ಯರ್ಥಿಗಳ ಮತ ಗಳಿಕೆಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಮುಖಂಡರೊಳಗಿನ ಮುಸುಕಿನ ಗುದ್ದಾಟ, ಅಧಿಕಾರ ಲಾಲಸೆ ಸಲ್ಲದು ಎಂಬ ಸಂದೇಶವನ್ನೂ ಮತದಾರ ನೀಡಿದ್ದಾನೆ. ಈ ಹಿಂದೆಯೇ ಊಹಿಸಿದಂತೆ ಮತವಿಭಜಕ ಶಕ್ತಿಯಾಗಿ ಜೆಡಿಎಸ್‌ ಗಂಗಾವತಿ ಮತ್ತು ಯಲಬುರ್ಗಾದಲ್ಲಿ ಕೆಲಸ ಮಾಡಿದೆ.

ಜನರ ಕೈಗೆ ಸಿಗದಿದ್ದರೆ ಜನರೂ ದೂರ ಇರುತ್ತಾರೆ. ಅಭಿವೃದ್ಧಿ ಎಂದರೆ ಬರೀ ಕಾಂಕ್ರಿಟ್‌ ಕಟ್ಟಡಗಳಲ್ಲ, ಹೈ-ಫೈ ಮಾತುಗಳಲ್ಲ ಎಂಬ ಸಂದೇಶವನ್ನೂ ಸಾರಿದ್ದಾರೆ. ಹನಿ ನೀರು ಹರಿಯದ ಭೂಮಿಯನ್ನು ತಂಪು ಮಾಡಿಸುವ ನಿರೀಕ್ಷೆ ಯಲಬುರ್ಗಾ ಮತ್ತು ಕುಷ್ಟಗಿ ಮತದಾರರಲ್ಲಿ ಇದೆ. ಗೆದ್ದ ಅಭ್ಯರ್ಥಿಗಳ ಮೇಲೆ ಈ ದೊಡ್ಡ ಜವಾಬ್ದಾರಿಯೂ ಇದೆ. ನೀರು ಹರಿಸುವುದೇ ಅಭ್ಯರ್ಥಿಗಳ ಚುನಾವಣಾ ಮಂತ್ರ ಆಗಿತ್ತು. ಆ ಮಂತ್ರ ಫಲಿಸಬೇಕಿದೆ. ಎಲ್ಲ ಗದ್ದಲಗಳ ಮಧ್ಯೆ ಜಿಲ್ಲೆಯಲ್ಲಿ ಒಂದು ಸ್ಥಾನದಲ್ಲಿದ್ದ ಬಿಜೆಪಿ ಮೂರು ಸ್ಥಾನಕ್ಕೇರಿದೆ.

ಚುನಾವಣೆ ಸಂದರ್ಭ ಮಾತ್ರ ಕಾಣಿಸುವ, ಮಧ್ಯರಾತ್ರಿ ಎಚ್ಚರವಿರುವ ಅಭ್ಯರ್ಥಿಯನ್ನು ಗಂಗಾವತಿಯ ಜನ ಬದಿಗೆ ಸರಿಸಿದ್ದಾರೆ. ಶಾಂತಿಮಂತ್ರವನ್ನೇ ಮುಂದಿಟ್ಟುಕೊಂಡು ಗೆದ್ದವರಿಗೆ ಎಲ್ಲರನ್ನೂ ವಿಶ್ವಾಸಪೂರ್ವಕವಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಗಂಗಾವತಿ ಭತ್ತದ ನಾಡಾಗಿಯೇ ಉಳಿಯಬೇಕು. ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಹೋಗಬೇಕು ಎಂಬ ನಿರೀಕ್ಷೆ ಮತದಾರನದ್ದು.

ಕೊಪ್ಪಳ ಕ್ಷೇತ್ರದ ಕೆ.ರಾಘವೇಂದ್ರ ಹಿಟ್ನಾಳ್‌ ಅವರಿಗೆ ಮತ್ತೊಂದು ಅವಕಾಶವನ್ನು ಮತದಾರ ನೀಡಿದ್ದಾನೆ. ಇಲ್ಲಿ ಬಿಜೆಪಿಯೊಳಗಿನ ಆಂತರಿಕ ಗೊಂದಲ, ಕೊನೇ ಕ್ಷಣದವರೆಗೂ ನಡೆದ ಸಂಘರ್ಷ ರಾಘವೇಂದ್ರ ಹಾದಿಯನ್ನು ಸುಗಮಗೊಳಿಸಿದವು. ವ್ಯವಸ್ಥಿತ ಸಿದ್ಧತೆ, ಪ್ರಚಾರ, ಮತದಾರರನ್ನು 'ಒಲಿಸುವ ತಂತ್ರ'ವೂ ಫಲಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮರು ಅವಕಾಶ ಪಡೆದ ಏಕೈಕ ಕ್ಷೇತ್ರವಿದು.

'ಚೊಚ್ಚಲ ಮಗನಿಗೆ ಬಿಡಲಿಲ್ಲ, ಸ್ವಂತ ಮಗನಿಗೆ ಆಗಲಿಲ್ಲ...'

ವಿಜಯೋತ್ಸವ ಸಂಭ್ರಮದ ನಡುವೆ ಬಿಜೆಪಿ ಮುಖಂಡರೊಬ್ಬರು ಕೊಪ್ಪಳದ ಚಿತ್ರವನ್ನೊಮ್ಮೆ ವಿಶ್ಲೇಷಿಸಿದರು. 'ಚೊಚ್ಚಲ ಮಗನಿಗೆ ಬಿಡಲಿಲ್ಲ, ಸ್ವಂತ ಮಗನಿಗೆ ಆಗಲಿಲ್ಲ...' ಕೊಪ್ಪಳ ಕ್ಷೇತ್ರದ ಟಿಕೆಟ್‌ನ್ನು ಕೊನೇ ಕ್ಷಣದಲ್ಲಿ ತಮ್ಮ ಪುತ್ರನಿಗಾಗಿ ಹೈಜಾಕ್‌ ಮಾಡಿದ ಸಂಸದ ಸಂಗಣ್ಣ ಕರಡಿ ಅವರ ನಡವಳಿಕೆಯ ಬಗ್ಗೆ ಮುಖಂಡರು ಬೇಸರ ವ್ಯಕ್ತಪಡಿಸಿದರು.

'ಜನ ನಮ್ಮ ವರ್ತನೆಯನ್ನು ನೋಡುತ್ತಿರುತ್ತಾರೆ ಎಂಬ ಎಚ್ಚರ ಇರಬೇಕು. ಕಾರ್ಯಕರ್ತರು ನೊಂದಿದ್ದಾರೆ. ಅವರ ತಟಸ್ಥ ನಿಲುವೇ ಇಂದಿನ ಫಲಿತಾಂಶ. ನಮಗೆ ಇದು ನಿರೀಕ್ಷಿತ' ಎಂದು ಅವರು ಅಸಹನೆ ತೋಡಿಕೊಂಡರು. 'ಗೆದ್ದೇ ಗೆಲ್ಲುತ್ತಿದ್ದೆವು ಎಂದು ಹೇಳಲಾರೆವು. ಒಂದು ಸ್ಪಷ್ಟತೆ ಇರುತ್ತಿದ್ದರೆ ಸಮರ್ಪಕವಾದ ಸ್ಪರ್ಧೆ ಒಡ್ಡಬಹುದಿತ್ತು' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅನುಕಂಪದ ಅಲೆ ಕನಕಗಿರಿಯಲ್ಲಿ ಕೆಲಸ ಮಾಡಿದೆ. ಈ ಹಿಂದಿನ ಸೋಲು, ಹೊಸ ಮುಖದ ನಿರೀಕ್ಷೆ ಬಸವರಾಜ ದಡೇಸೂಗೂರು ಅವರ ಪರ ನಿಂತಿದೆ. ಜನರೇ ಭತ್ತ, ದುಡ್ಡು ಕೊಟ್ಟು ಚುನಾವಣೆ ಮಾಡಿ ಗೆಲ್ಲಿಸಿದ ಅಪರೂಪದ ವಿದ್ಯಮಾನವಿದು. ಜನರ ನಿರೀಕ್ಷೆಯ ಭಾರ ಚುನಾವಣೆಗೆ ಕೊಟ್ಟ ಭತ್ತದ ಮೂಟೆಗಿಂತಲೂ ದೊಡ್ಡದಾಗಿದೆ.

ಹ್ಯಾಟ್ರಿಕ್‌ ಸಾಧನೆ ಆಸೆಯಲ್ಲಿದ್ದ 'ಕನಕಗಿರಿಯ ಕನಸುಗಾರ'ನಿಗೆ ಜನ ಕೊಂಚ ವಿಶ್ರಾಂತಿ ನೀಡಿದ್ದಾರೆ. ಒಂದಿಷ್ಟು ಕಾಣಿಸಬಹುದಾದ ಕೆಲಸಗಳು ಅವರ ಕಾಲದಲ್ಲಿ ಆಗಿವೆ. ಆದರೆ, ಅದೇ ವೇಳೆಯಲ್ಲಿ ಒಂದಿಲ್ಲೊಂದು ಗದ್ದಲ, ವಿವಾದಗಳಿಂದ, ಬೆಂಬಲಿಗರ ತಪ್ಪು ನಡವಳಿಕೆಯಿಂದ ಕನಕಗಿರಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಅದು ಮರುಕಳಿಸಬಾರದು ಎಂಬುದು ಮತದಾರನ ಆಸೆ.

ಜನ ಎಚ್ಚರಗೊಂಡಿದ್ದಾರೆ..

ಜಿಲ್ಲೆಯಲ್ಲಿ 8,122 'ನೋಟಾ' ಚಲಾವಣೆಗೊಂಡಿವೆ. ಇದರರ್ಥ ಅಷ್ಟು ಮತದಾರರು ಪ್ರಸ್ತುತ ಅಭ್ಯರ್ಥಿ ಅಥವಾ ವ್ಯವಸ್ಥೆಯ ಮೇಲೆ ಬೇಸರಗೊಂಡಿದ್ದಾರೆ. ಪ್ರಜ್ಞಾವಂತಿಕೆ ಹಾಗೂ ಪ್ರತಿಭಟನೆ ಈ ರೂಪದಲ್ಲಿ ವ್ಯಕ್ತವಾಗಿದೆ. ಈ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಲು ಹಾಲಿ ರಾಜಕಾರಣಿಗಳು ವಿಶ್ವಾಸಾರ್ಹತೆ ಕಾಯ್ದುಕೊಳ್ಳಬೇಕು ಎಂದು ಈ ವರ್ಗ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT