3

ಸ್ಟಾರ್‌ ನಟರ ತರಬೇತುದಾರ ಶ್ರೀನಿವಾಸ

Published:
Updated:
ಸ್ಟಾರ್‌ ನಟರ ತರಬೇತುದಾರ ಶ್ರೀನಿವಾಸ

‘ಟಗರು’ ಸಿನಿಮಾದಲ್ಲಿ ಡಾಲಿ ಹಾಗೂ ಚಿಟ್ಟೆ ಎಂಬ ಖಳ ನಾಯಕ ಪಾತ್ರದಲ್ಲಿ ಮಿಂಚಿದ್ದ ಧನಂಜಯ್‌ ಹಾಗೂ ವಸಿಷ್ಠಸಿಂಹ ನಟನೆಯನ್ನು ಎಲ್ಲರೂ ಮೆಚ್ಚಿದ್ದರು. ಅವರ ಅಭಿನಯ ಚತುರತೆಯ ಜೊತೆಗೆ ಕಟ್ಟುಮಸ್ತಾದ ದೇಹವೂ ಅವರ ನಟನೆಯ ಖದರನ್ನು ಹೆಚ್ಚಿಸಿತ್ತು. ಇದರ ಹಿಂದೆ ಸೆಲೆಬ್ರಿಟಿ ಟ್ರೇನರ್‌ ಬಸವೇಶ್ವರನಗರದ ಶ್ರೀನಿವಾಸ್‌ ಗೌಡ ಅವರ ಶ್ರಮವಿದೆ.

ತೆರೆ ಮೇಲೆ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಬೇಕೆಂದು ಎಲ್ಲ ನಟ, ನಟಿಯರು ಬಯಸುತ್ತಾರೆ. ಇತ್ತೀಚೆಗೆ ಕನ್ನಡದಲ್ಲೂ ಚಿತ್ರದಿಂದ ಚಿತ್ರಕ್ಕೆ ತಮ್ಮ ಇಮೇಜ್‌ ಬದಲಾ ಯಿಸಿಕೊಳ್ಳಲು ಕಲಾವಿದರು ಬಯಸುತ್ತಾರೆ. ಸಮರ್ಥ ಟ್ರೇನರ್‌ ಬಳಿ ಫಿಟ್‌ನೆಸ್‌ ತರಬೇತಿ ಪಡೆಯುತ್ತಿದ್ದಾರೆ. ಬಸವೇಶ್ವರನಗರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಇರುವ ‘ಮಸಲ್‌ 360 ಡಿಗ್ರಿ ಜಿಮ್‌’ ಕೂಡ ಸೆಲೆಬ್ರಿಟಿಗಳ ಜಿಮ್‌ ಎಂದೇ ಪ್ರಸಿದ್ಧಿ ಪಡೆದಿದೆ. ಇದರ ಮಾಲೀಕ ಶ್ರೀನಿವಾಸ್ ಗೌಡ.

ರಕ್ಷಿತ್ ಶೆಟ್ಟಿ

ಶ್ರೀನಿವಾಸ ಅವರ ಬಳಿ ನಟರಾದ ಧನಂಜಯ್‌, ರಾಕೇಶ್‌ ಅಡಿಗ, ಅನೀಷ್‌, ನಿರ್ದೇಶಕ ಸೂರಿ, ವಿಕಾಸ್‌, ರಕ್ಷಿತ್ ಶೆಟ್ಟಿ, ರಚಿತಾ ರಾಮ್‌, ಸೋನು ಗೌಡ, ಮಾನ್ವಿತಾ, ಅನುಪಮಾ, ಚಂದನ್‌ ಶೆಟ್ಟಿ, ವಸಿಷ್ಠ ಸೇರಿದಂತೆ ಹಿರಿತೆರೆ ಮತ್ತು ಕಿರುತೆರೆಯ 40ಕ್ಕೂ ಹೆಚ್ಚು ಕಲಾವಿದರು ತರಬೇತಿ ಪಡೆಯುತ್ತಿದ್ದಾರೆ.

ಎಸ್‌.ಎಸ್‌.ಎಲ್‌.ಸಿ ಮುಗಿದ ಬಳಿಕ ಶ್ರೀನಿವಾಸ ಅವರು 1999ರಲ್ಲಿ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ರಾಯಲ್‌ ಜಿಮ್‌ಗೆ ಕೆಲಸಕ್ಕೆ ಸೇರಿಕೊಂಡರು. ‘2002ರಲ್ಲಿ ತರಬೇತುದಾರನಾಗಿ ಟ್ರೈನಿಂಗ್‌ ಮುಗಿಸಿದೆ. ಆಗ ನನ್ನ ಟ್ರೇನರ್‌ ಸೂರಿ. 2005ರಲ್ಲಿ ತಂದೆ ತೀರಿಕೊಂಡರು. ಆಗ ಇದೇ ಕೆಲಸದಲ್ಲಿ ಮುಂದುವರಿಯುವುದು ಕಷ್ಟವಾಯಿತು. ಹಾಗಾಗಿ ಬೇರೆ ಕಡೆಗಳಲ್ಲಿ ಕೆಲಸ ಮಾಡಿದೆ.  ಐದು ವರ್ಷ ಕಷ್ಟಪಟ್ಟು ಬೇರೆ ಕಡೆ ಕೆಲಸ ಮಾಡಿದೆ.  2009ಕ್ಕೆ ನಾನು ಅನಿಲ್‌ ಅವರ ಜಿಮ್‌ನಲ್ಲಿ ತರಬೇತುದಾರನಾಗಿ ಕೆಲಸಕ್ಕೆ ಸೇರಿದೆ. ಅದು ನನ್ನ ಜೀವನದ ಟರ್ನಿಂಗ್‌ ಪಾಯಿಂಟ್‌’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

'ಮಾಸ್ತಿಗುಡಿ' ಚಿತ್ರೀಕರಣದ ವೇಳೆ ದುರಂತ ಸಾವನ್ನಪ್ಪಿದ ಅನಿಲ್‌ ಅವರೇ ನನಗೆ ಗುರುಗಳು. ಅವರ ಪ್ರೋತ್ಸಾಹ, ಬೆಂಬಲವೇ ನಾನು ಈ ಮಟ್ಟಿಗೆ ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಭಾವುಕರಾಗುತ್ತಾರೆ ಶ್ರೀನಿವಾಸ್‌.

ಸಿನಿಮಾದಲ್ಲಿ ಫೈಟರ್‌ ಆಗಿ ಕೆಲಸ ಮಾಡುತ್ತಿದ್ದ ಚಂದ್ರು, ಶ್ರೀನಿವಾಸ್‌ ಅವರ ಮೊದಲ ಸೆಲೆಬ್ರಿಟಿ ವಿದ್ಯಾರ್ಥಿ. ಶ್ರೀನಿವಾಸ್ ಹಾಗೂ ಸಿನಿಮಾ ಕ್ಷೇತ್ರದ ನಂಟು ಅಲ್ಲಿಂದ ಆರಂಭವಾಯಿತು. ಈಗ ರಕ್ಷಿತ್‌ ಶೆಟ್ಟಿ ಸೇರಿ ಅನೇಕ ಸ್ಟಾರ್‌ ನಟರಿಗೇ ಇವರೇ ಟ್ರೇನರ್‌. ‘ನಟ, ನಟಿಯರಿಗೆ ಅವರ ವೃತ್ತಿಜೀವನದ ದೃಷ್ಟಿಯಿಂದ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಸಿನಿಮಾದಿಂದ ಸಿನಿಮಾಕ್ಕೆ ಅವರ ಪಾತ್ರಗಳು ಬದಲಾಗುತ್ತಿರುವುದರಿಂದ ಪಾತ್ರದ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಫಿಟ್‌ನೆಸ್‌ ಹಾಗೂ ಡಯೆಟ್‌ ಅನುಸರಿಸಬೇಕಾಗುತ್ತದೆ. ನಟರು ಒಂದು ಸಿನಿಮಾಕ್ಕೆ ಸಿಕ್ಸ್‌ಪ್ಯಾಕ್‌ ಮಾಡಿಕೊಂಡರೆ, ಮುಂದಿನ ಚಿತ್ರದಲ್ಲಿ ಅವರದು ಭಿನ್ನ ಪಾತ್ರ. ನಟಿಯರೂ ಅಷ್ಟೇ, ಕಾಲೇಜು ಯುವತಿ, ಗೃಹಿಣಿ ಹೀಗೆ ಭಿನ್ನ ಭಿನ್ನ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಆಗ ಅದಕ್ಕೆ ತಕ್ಕಂತೆಯೂ ಕೆಲವೊಂದು ಬದಲಾವಣೆಗಳನ್ನು ವ್ಯಾಯಾಮ, ಫಿಟ್‌ನೆಸ್‌, ಆಹಾರಕ್ರಮದಲ್ಲಿ ಮಾಡಬೇಕಾಗುತ್ತದೆ’ ಎಂದು ಸವಾಲುಗಳನ್ನು ಹಂಚಿ ಕೊಳ್ಳುತ್ತಾರೆ.

ಶ್ರೀನಿವಾಸ್ ಅವರಿಂದ ತರಬೇತಿ ಪಡೆದ ನಿರ್ದೇಶಕ ಸೂರಿ

ಶ್ರೀನಿವಾಸ ಅವರ ಜಿಮ್‌ನಲ್ಲಿ ಸ್ಟಾರ್‌ಗಳಂತೆಯೇ ಫಿಟ್‌ನೆಸ್‌ ಬಗ್ಗೆ ಕಾಳಜಿಯುಳ್ಳ ಎಲ್ಲಾ ಜನರಿಗೆ ಅವಕಾಶವಿದೆ. ಈ ಜಿಮ್‌ಗೆ ಬರುವ ಪ್ರತಿ ಗ್ರಾಹಕರಿಗೂ ರಕ್ತಪರೀಕ್ಷೆ ಮಾಡಿ, ದೇಹರಚನೆಗೆ ತಕ್ಕಂತೆ ಡಯೆಟ್‌ ಹಾಗೂ ವರ್ಕೌಟ್‌ ಮಾಡಿಸುವುದು ಅವರ ಶೈಲಿ. ‘ನಮ್ಮಲ್ಲಿ ಡಯೆಟ್‌ ಪಾಲನೆ ಕಡ್ಡಾಯ. ಇದು ಸೆಲೆಬ್ರಿಟಿ, ಸಾಮಾನ್ಯ ಜನರಿಗೆ ಒಂದೇ ರೀತಿಯಾಗಿರುತ್ತದೆ. ಅದರ ದೇಹದ ರಚನೆ ಹಾಗೂ ಯಾವುದಾದರೂ ಕಾಯಿಲೆಯಿಂದ ಬಳಲುತ್ತೀದ್ದರಾ ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇವೆ. ಯಾರೂ ಡಯೆಟ್‌ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೋ ಅವರು ವಾರದಲ್ಲಿ ಮೂರು ದಿನ ವರ್ಕೌಟ್‌ ಮಾಡಿದರೂ ಸಾಕು. ಪಿಸಿಒಡಿ, ಥೈರಾಯ್ಡ್‌, ಹಾರ್ಮೋನು ಬ್ಯಾಲೆನ್ಸ್‌, ಕೊಲೆಸ್ಟರಾಲ್‌ ಮಟ್ಟ ಎಲ್ಲವನ್ನೂ ಸೂಕ್ತ ವೈದ್ಯರ ಬಳಿ ಚೆಕ್‌ ಮಾಡಿ ವರದಿ ತರಿಸಿಕೊಳ್ಳುತ್ತೇವೆ. ಆ ಬಳಿಕವೇ ತರಬೇತಿ ಆರಂಭ’ ಎಂದು ಮಾಹಿತಿ ನೀಡುತ್ತಾರೆ.

‘ಒಬ್ಬ ತರಬೇತುದಾರನಾಗಿ ನಾನು ಪ್ರತಿಯೊಬ್ಬರ ಸಾಮರ್ಥ್ಯ ಮಟ್ಟವನ್ನು ಮೊದಲ ಎರಡು– ಮೂರು ದಿನಗಳಲ್ಲಿ  ಗಮನಿಸುತ್ತೇನೆ. ಅದಕ್ಕೆ ತಕ್ಕಂತೆ ಮುಂದೆ ವರ್ಕೌಟ್‌ ಬದಲಾವಣೆ ಮಾಡಿಕೊಳ್ಳುತ್ತೇನೆ. ನನ್ನ ಫೇವರಿಟ್‌ ವರ್ಕೌಟ್‌ ಸ್ಕ್ವೇಚ್‌. ಈ ವರ್ಕೌಟ್‌ನಿಂದ ಕೊಬ್ಬು ಬೇಗ ಕರಗುತ್ತೆ. ದೇಹದ ಎನರ್ಜಿ ಮಟ್ಟ ಜಾಸ್ತಿ ಆಗುತ್ತದೆ. ಎಲ್ಲರಿಗೂ ಈ ವರ್ಕೌಟ್‌ ಮಾಡಿಸುತ್ತೇನೆ. ಸೆಲೆಬ್ರಿಟಿಗಳಿಗೆ ಕಡಿಮೆ ಸಮಯ ಇರುತ್ತದೆ. ಅವರ ಅನುಕೂಲಕ್ಕೆ ತಕ್ಕ ಹಾಗೇ ವರ್ಕೌಟ್‌ ಹೇಳಿಕೊಡುತ್ತೇವೆ. ಡಯೆಟ್‌ನಲ್ಲಿದ್ದರೆ ಯಾವ ಸಮಯದಲ್ಲಾದರೂ ವರ್ಕೌಟ್‌ ಮಾಡಿದರೂ ದೇಹ ಬಗ್ಗುತ್ತದೆ. ಬೆಳಿಗ್ಗೆ, ಸಂಜೆ, ಮಧ್ಯಾಹ್ನ ಅಂತಾ ಚಿಂತೆ ಮಾಡಬೇಕಾಗಿಲ್ಲ’ ಎನ್ನುತ್ತಾರೆ. 

ಸಿಕ್ಸ್‌ಪ್ಯಾಕ್‌ಗಾಗಿ ರಕ್ಷಿತ್‌ಗೆ ತರಬೇತಿ

ತಮ್ಮ ಮುಂದಿನ ಚಿತ್ರ ‘ಶ್ರೀಮನ್ನಾರಾಯಣ’ ಚಿತ್ರದಲ್ಲಿ 6 ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ರಕ್ಷಿತ್‌ ಶೆಟ್ಟಿ. ಈ ಚಿತ್ರದಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೀನಿವಾಸ ಗೌಡ ಅವರೇ ರಕ್ಷಿತ್‌ ಅವರಿಗೆ ತರಬೇತಿ ನೀಡುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ ಅವರ ಸಿಕ್ಸ್‌ಪ್ಯಾಕ್‌ ತರಬೇತಿ ಮುಗಿದಿದೆ. ‘ಶ್ರೀಮನ್ನಾನಾರಾಯಣ’ ನೋಡಿದಾಗ ಉಳಿದವರು ಕಂಡಂತೆ ರಕ್ಷಿತ್‌ಗೂ, ಈಗಿನ ರಕ್ಷಿತ್‌ಗೂ ವ್ಯತ್ಯಾಸ ಗೊತ್ತಾಗಲಿದೆ ಎನ್ನುತ್ತಾರೆ ಶ್ರೀನಿವಾಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry