ಶನಿವಾರ, ಫೆಬ್ರವರಿ 27, 2021
28 °C

ಕಲೆ, ತಂತ್ರಜ್ಞಾನ ಬೆರೆತ ಸ್ಮಾರ್ಟ್ ಸ್ಟೀಲ್ ಗಡಿಯಾರ

ರಾಧಿಕಾ ಎನ್.ಆರ್ Updated:

ಅಕ್ಷರ ಗಾತ್ರ : | |

ಕಲೆ, ತಂತ್ರಜ್ಞಾನ ಬೆರೆತ ಸ್ಮಾರ್ಟ್ ಸ್ಟೀಲ್ ಗಡಿಯಾರ

ಇ ದು ಸ್ಮಾರ್ಟ್ ಯುಗ. ಕೈಗಡಿಯಾರದಿಂದ ಆರಂಭಿಸಿ ಎಲ್ಲ ಆಧುನಿಕ ಸಾಧನಗಳು ಸ್ಮಾರ್ಟ್ ಆಗಿವೆ. ಹೇಳಿ ಕೇಳಿ ಸ್ಮಾರ್ಟ್ ಸಿಟಿಗಳು ರೂಪುಗೊಳ್ಳುತ್ತಿರುವ ಕಾಲ ಇದು. ಇನ್ನು ಸೃಜನಶೀಲ ಕಲೆಗೂ ತಂತ್ರಜ್ಞಾನದ ಸ್ಮಾರ್ಟ್ ಸ್ಪರ್ಶ ದೊರಕಿದರೆ ಕಲೆಯ ಆಯಾಮ ವಿಸ್ತಾರಗೊಳ್ಳುತ್ತದೆ. ಕಲಾವಿದ ಜ್ಞಾನೇಶ್ ಮಿಶ್ರಾ ಅವರು ತಂತ್ರಜ್ಞಾನ, ಕಲೆ ಬೆರೆತ ಸ್ಟೀಲ್ ಗಡಿಯಾರಗಳನ್ನು ವಿನ್ಯಾಸಗೊಳಿಸುವಲ್ಲಿ ನಿರತರಾಗಿದ್ದಾರೆ.

‘ಸ್ಮಾರ್ಟ್ ಸಿಟಿ ಎಂದರೆ ಸಂಪೂರ್ಣ ವ್ಯವಸ್ಥೆ ಸ್ಮಾರ್ಟ್ ಆಗಿರಬೇಕು. ನಗರದ ವಾಸ್ತುಶಿಲ್ಪ, ರಸ್ತೆಗಳು, ನೀರು ಸರಬರಾಜು ವ್ಯವಸ್ಥೆ, ಕಟ್ಟಡಗಳ ವಿನ್ಯಾಸ–ನಿರ್ಮಾಣ ಎಲ್ಲವೂ ಸ್ಮಾರ್ಟ್ ಇರಬೇಕು. ಕಲಾವಿದನಾಗಿ ನಾನು ಸಹ ಕೊಂಚ ಸ್ಮಾರ್ಟ್ ಆದ ಕಲಾಕೃತಿಗಳನ್ನು ರೂಪಿಸಬೇಕು ಎಂದುಕೊಂಡೆ. ಆ ನಿಟ್ಟಿನಲ್ಲಿ ಹೊಳೆದದ್ದೇ ಸ್ಮಾರ್ಟ್ ಕಲಾತ್ಮಕ ಸ್ಟೀಲ್ ಗಡಿಯಾರಗಳನ್ನು ತಯಾರಿಸುವ ಯೋಜನೆ’ ಎನ್ನುತ್ತಾರೆ ಜ್ಞಾನೇಶ್ ಮಿಶ್ರಾ.

‘ಹಿಂದಿನ ಕಾಲಘಟ್ಟಗಳಲ್ಲಿಯೂ ನಗರಗಳಲ್ಲಿ ಪ್ರತಿಮೆ, ಕಲಾಕೃತಿಗಳನ್ನು ಸ್ಥಾಪಿಸುವ ರೂಢಿ ಇತ್ತು. ಈಗಲೂ ಅದನ್ನು ಅನುಸರಿಸಲಾಗುತ್ತಿದೆ. ಆದರೆ ಭಿನ್ನವಾದ ಮತ್ತು ಸಾರ್ವಜನಿಕ ಸ್ನೇಹಿಯಾದ ಸುಂದರ ಕಲಾಕೃತಿಗಳನ್ನು ಸ್ಥಾಪಿಸಬೇಕು ಎನ್ನುವುದು ನನ್ನ ಉದ್ದೇಶ. ಈ ಸ್ಟೀಲ್ ಗಡಿಯಾರಗಳನ್ನು ಸಿದ್ಧಪಡಿಸುವಾಗ ಸ್ಥಳೀಯ ಕಲಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅಲ್ಲಿನ ಸಾಂಸ್ಕೃತಿಕ ಹಿನ್ನೆಲೆಯನ್ನೂ ಪರಿಗಣಿಸಲಾಗುತ್ತದೆ. ಆಯಾ ಭಾಷೆ ಮತ್ತು ಅದರದ್ದೇ ಅಂಕಿಗಳನ್ನು ಬಳಸಲಾಗುತ್ತದೆ. ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಸಮಯ ಹೇಳುತ್ತದೆ’ ಎನ್ನುತ್ತಾರೆ ಇವರು.

ಸಮಾಜಮುಖಿ ಹಂಬಲ: ಜ್ಞಾನೇಶ್ ಅವರು ಸದ್ಯ ಹೊಸದೊಂದು ಸ್ಮಾರ್ಟ್ ಕಲಾತ್ಮಕ ಗಡಿಯಾರ ಸಿದ್ಧಪಡಿಸುತ್ತಿದ್ದು, ಇದರ ವಿಶಿಷ್ಟತೆ ಎಂದರೆ ಸೆನ್ಸರ್, ಕ್ಯಾಮೆರಾ, ಲೋಹ ಪತ್ತೆ ಮಾಡುವ ತಂತ್ರಜ್ಞಾನ ಅಳವಡಿಸುತ್ತಿರುವುದು.

ಈ ಗಡಿಯಾರ ಇರುವ ಸ್ಥಳದಿಂದ, 50ರಿಂದ 100 ಮೀಟರ್ ವ್ಯಾಪ್ತಿಯಲ್ಲಿ ಅಪಘಾತವಾದರೆ ಅಲ್ಲಿನ ದೃಶ್ಯ ಸೆರೆಹಿಡಿದು ಪೊಲೀಸರು, ಆಂಬುಲೆನ್ಸ್‌ಗೆ ಮಾಹಿತಿ ನೀಡುವಂತೆ ಇದನ್ನು ತಯಾರಿಸಲಾಗುತ್ತಿದೆ. ಲೋಹಗಳ ಘರ್ಷಣೆಯಾದ ತಕ್ಷಣ ಅದರ ಸದ್ದಿನ ಆಧಾರದ ಮೇಲೆ ಕ್ಯಾಮೆರಾ ಚಾಲನೆಯಾಗುತ್ತದೆ. ಆಂಬುಲೆನ್ಸ್, ಪೊಲೀಸರ ದೂರವಾಣಿ ಸಂಖ್ಯೆಗಳನ್ನು ಗಡಿಯಾರದ ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗಿರುತ್ತದೆ.

‘ಕಣ್ಣಿಗೆ ಸುಂದರವಾಗಿ ಕಾಣುವುದಷ್ಟೆ ಅಲ್ಲ ಈ ರೀತಿಯ ಕಲಾಕೃತಿಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಸಮಾಜಸೇವೆಯನ್ನೂ ಮಾಡಬೇಕು ಎನ್ನುವುದು ನನ್ನ ಹಂಬಲ’ ಎನ್ನುತ್ತಾರೆ.

ಏನು ವಿಶೇಷ: ‘ಈ ಗಡಿಯಾರದಲ್ಲಿ ಕೆಲವು ಅಂಶಗಳನ್ನು ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ. ಇದರ ಅನುಸಾರ ಅದು ಸಂದರ್ಭಕ್ಕೆ ತಕ್ಕಂತೆ ಶುಭಾಶಯ ಕೋರುತ್ತದೆ.

ಡಿಸೆಂಬರ್ 31ರ ರಾತ್ರಿ ಈ ಗಡಿಯಾರ ಹ್ಯಾಪಿ ನ್ಯೂ ಇಯರ್ ಎಂದು ಶುಭಾಶಯ ಕೋರುತ್ತದೆ. ನಗರಕ್ಕೆ ಯಾರಾದರೂ ಗಣ್ಯರು ಆಗಮಿಸುತ್ತಿದ್ದರೆ, ಅವರ ಹೆಸರು, ವಿವರ ಇದರಲ್ಲಿ ಅಡಕ ಮಾಡಿಟ್ಟರೆ ಅವರಿಗೆ ಸ್ವಾಗತ ಕೋರುತ್ತದೆ. ಬ್ಯಾನರ್, ಫ್ಲೆಕ್ಸ್ ಹಾಕುವುದನ್ನು ಉಳಿಸಬಹುದು. ಪರಿಸರ ಮಾಲಿನ್ಯ ಕೊಂಚವಾದರೂ ಕಡಿಮೆ ಮಾಡಲು ಇದು ಸಹಕಾರಿ ಆಗುತ್ತದೆ’ ಎಂದು ತಮ್ಮ ಕಲ್ಪನೆಯ ಗಡಿಯಾರದ ಕುರಿತು ವಿವರ ಹಂಚಿಕೊಳ್ಳುತ್ತಾರೆ.

ಸಹಕಾರ ದೊರೆತಲ್ಲಿ ದೇಶದ ಎಲ್ಲ ಸ್ಮಾರ್ಟ್ ಸಿಟಿಗಳಲ್ಲಿಯೂ ಇಂತಹ ಗಡಿಯಾರ ಸ್ಥಾಪಿಸುವ ಯೋಜನೆ ಇದೆ ಇವರಿಗೆ. ಭೂ ವಿಜ್ಞಾನ, ರಸಾಯನವಿಜ್ಞಾನ, ಲೋಹವಿಜ್ಞಾನ, ವಾಸ್ತುಶಿಲ್ಪ ಹೀಗೆ ಎಲ್ಲ ವಿಷಯಗಳ ಕುರಿತೂ ಕಲಾವಿದನಿಗೆ ಪ್ರಾಥಮಿಕ ಅರಿವು ಇರಬೇಕಾಗುತ್ತದೆ. ಆಗ ಇಂತಹ ಕಲಾಕೃತಿಗಳು ಸಮಗ್ರವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಇವರ ನಿಲುವು.

ದಾವಣಗೆರೆಯಲ್ಲೂ ಸ್ಮಾರ್ಟ್ ಕಲಾತ್ಮಕ ಗಡಿಯಾರ

‘ಒಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಮೊದಲ ಸ್ಮಾರ್ಟ್ ಕಲಾತ್ಮಕ ಗಡಿಯಾರ ಸ್ಥಾಪನೆಯಾಗಿದೆ. ಎರಡನೆಯದು ದಾವಣಗೆರೆಯಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ. ದಾವಣಗೆರೆ ನಿರ್ಮಿತ ಕೇಂದ್ರ ಇದನ್ನು ಸಿದ್ಧಪಡಿಸಿಕೊಳ್ಳಲು ಕೇಳಿಕೊಂಡಿತ್ತು. ಸಮಕಾಲೀನ ಕಲೆಯ ಅಂಶಗಳನ್ನು ಇರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಐರೋಪ್ಯ ಶೈಲಿ ಬಳಸಿಲ್ಲ’ ಎಂದು ವಿವರಿಸುತ್ತಾರೆ ಜ್ಞಾನೇಶ್.ಒಡಿಶಾದಲ್ಲಿನ ಗಡಿಯಾರ ಸೌರಶಕ್ತಿ ಆಧರಿತವಾಗಿದೆ. ವಿನ್ಯಾಸದಿಂದ ನಿರ್ಮಾಣದವರೆಗೆ ಗಡಿಯಾರ ಸಿದ್ಧವಾಗಲು 7 ತಿಂಗಳು ಬೇಕಾಯಿತು. ದಾವಣಗೆರೆಯಲ್ಲಿ ಸ್ಥಾಪನೆಯಾಗಲಿರುವ ಗಡಿಯಾರದಲ್ಲಿ ಸೌರಶಕ್ತಿ, ವಿದ್ಯುಚ್ಛಕ್ತಿ ಎರಡೂ ಇದೆ. ಇದರಿಂದಾಗಿ ಗಡಿಯಾರ 24*7 ಕಾರ್ಯನಿರ್ವಹಿಸಲು ಸಾಧ್ಯ. ಇದರ ನಿರ್ಮಾಣಕ್ಕೆ ನಾಲ್ಕು ತಿಂಗಳು ಬೇಕಾಯಿತು. ಇದು ಸ್ಟೀಲ್ ಯುಗ. ಸಮಕಾಲೀನ ಕಲಾವಿದರಿಗೆ ಸ್ಟೀಲ್ ಉತ್ತಮ ಮಾಧ್ಯಮ. ಜತೆಗೆ ಅಗತ್ಯಕ್ಕೆ ತಕ್ಕಂತೆ ಗಾಜು, ಹಿತ್ತಾಳೆಯನ್ನೂ ಬಳಸಲಾಗಿದೆ. ಈ ಗಡಿಯಾರಗಳ ಬಾಳಿಕೆ ದೀರ್ಘಕಾಲೀನವಾಗಿರುತ್ತದೆ ಎನ್ನುತ್ತಾರೆ ಜ್ಞಾನೇಶ್.‘ಪತ್ನಿ ಉಷಾ ಮಿಶ್ರಾ ಹಾಗೂ ಇಬ್ಬರು ಮಕ್ಕಳು ಸಹ ಕಲಾವಿದರಾಗಿದ್ದು, ಈ ಗಡಿಯಾರಗಳ ಪ್ರಾಥಮಿಕ ವಿನ್ಯಾಸದಿಂದ ಆರಂಭಿಸಿ ನಿರ್ಮಾಣ ಹಂತದವರೆಗೂ ನಾವು ತಂಡವಾಗಿ ಕೆಲಸ ಮಾಡುತ್ತೇವೆ. ಗಡಿಯಾರಕ್ಕೆ ಅಗತ್ಯ ಇರುವ ಸಾಫ್ಟ್‌ವೇರ್‌ಗಳನ್ನು ಸಹ ನಾವೇ ಜೋಡಿಸಿಕೊಳ್ಳುತ್ತೇವೆ. ಈ ಯೋಜನೆ ಕೇವಲ ನನ್ನೊಬ್ಬನದಲ್ಲ’ ಎಂದು ಹೇಳಲು ಮರೆಯುವುದಿಲ್ಲ ಇವರು.

ಸ್ಮಾರ್ಟ್ ಕಲಾತ್ಮಕ ಗಡಿಯಾರ

‘ಕಲಾವಿದರಿಗೆ ತಂತ್ರಜ್ಞಾನ ಸಾಮರ್ಥ್ಯವೂ ಅವಶ್ಯ’

ಕಲಾವಿದರು ಕಾಲಕಾಲಕ್ಕೆ ತಮ್ಮ ಕೌಶಲ, ಸಾಮರ್ಥ್ಯ ನವೀಕರಿಸಿಕೊಳ್ಳುವುದು ಮುಖ್ಯ. ತಂತ್ರಜ್ಞಾನದ ಸಾಧ್ಯತೆಗಳನ್ನೂ ಅಳವಡಿಸಿಕೊಂಡು ಕಲಾಕೃತಿಗಳನ್ನು ನಿರ್ಮಿಸಬಹುದು. ಇದನ್ನು ವಾಸ್ತವದಲ್ಲಿ ತಿಳಿಸುವುದು ಸಹ ಸ್ಟೀಲ್ ಗಡಿಯಾರ ಯೋಜನೆಯ ಉದ್ದೇಶ ಎನ್ನುತ್ತಾರೆ ಜ್ಞಾನೇಶ್ ಮಿಶ್ರಾ.

ಕಲಾವಿದರು ಸೃಜನಶೀಲ ಸಾಮರ್ಥ್ಯದ ಜತೆಗೆ ತಂತ್ರಜ್ಞಾನದ ಸಾಮರ್ಥ್ಯವನ್ನೂ ರೂಢಿಸಿಕೊಳ್ಳಬೇಕು. ಅಧ್ಯಯನ ಮಾಡಬೇಕು. ಹಿಂದಿನ ಕಾಲದಿಂದಲೂ ತಂತ್ರಜ್ಞಾನ ಕಲೆ ಜತೆ ಜತೆಯಾಗಿಯೇ ಇತ್ತು. ಇರುತ್ತದೆ ಸಹ. ಮಧ್ಯದಲ್ಲಿ ಸ್ವಲ್ಪ ಸಮಯ ಇದರ ನಂಟು ತಪ್ಪಿಹೋಗಿತ್ತು. ಆದರೆ ಈಗ ಪುನಃ ಕಲೆ ತಂತ್ರಜ್ಞಾನ ಮೇಳೈಸುತ್ತಿದೆ. ಯುವಕಲಾವಿದರು ಇದನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ಇವರ ಆಶಯ ಹಾಗೂ ಸಲಹೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.