ಶನಿವಾರ, ಮೇ 15, 2021
25 °C

ಕಸಿ ಮಾವಿನ ಅಡುಗೆಗಳು

ಸರಸ್ವತಿ ಎಸ್.ಭಟ್ Updated:

ಅಕ್ಷರ ಗಾತ್ರ : | |

ಕಸಿ ಮಾವಿನ ಅಡುಗೆಗಳು

ಈಗ ಕಸಿ ಮಾವಿನ ಹಣ್ಣಿನ ಸಮಯ. ಮಾವಿನ ಹಣ್ಣಿನಿಂದ ವಿವಿಧ ರೀತಿಯ ಅಡುಗೆ ಮಾಡಿ ಸವಿಯಬಹುದು. ಕಸಿ ಮಾವಿನಿಂದ ತಯಾರಿಸಬಹುದಾದ ಕೆಲವು ರೆಸಿಪಿಗಳು ಇಂತಿವೆ. ಮಾಡಿ ಸವಿದು ನೋಡಿ.

ಕಸಿ ಮಾವಿನ ಹಣ್ಣಿನ ಫಿರ್ನಿಬೇಕಾಗುವ ವಸ್ತುಗಳು: ½ ಕಪ್ ಬೆಳ್ತಿಗೆ ಅಕ್ಕಿ, 2 ಮಾವಿನ ಹಣ್ಣು, 3 ಕಪ್ ಹಾಲು, ½ ಕಪ್ ಕಂಡೆನ್ಸ್ಡ್ ಹಾಲು, ಚಿಟಿಕೆ ಕೇಸರಿ, 7-8 ಗೋಡಂಬಿ, 5-6 ಒಣ ದ್ರಾಕ್ಷಿ, ¼ ಕಪ್ ಕೋವಾ, 1 ಕಪ್ ಸಕ್ಕರೆ, ¼ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 1-2 ಗಂಟೆ ನೆನೆಸಿ. ನಂತರ ಹಾಲು ಸೇರಿಸಿ ತೊಳೆದ ಅಕ್ಕಿಯನ್ನು ಕುಕ್ಕರ್‌ನಲ್ಲಿಟ್ಟು ಎರಡು ವಿಸಿಲ್ ಕೂಗಿಸಿ. ನಂತರ ಸಿಪ್ಪೆ ತೆಗೆದ ಮಾವಿನ ಹಣ್ಣು ತುಂಡು ಮಾಡಿ ರುಬ್ಬಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಕೋವಾ ಜತೆಗೆ ಹಾಕಿ ಹುರಿದಿಡಿ. ನಂತರ ಬೆಂದ ಅನ್ನಕ್ಕೆ ರುಬ್ಬಿದ ಮಾವಿನ ಹಣ್ಣಿನ ಮಿಶ್ರಣ ಹಾಕಿ. ಸಕ್ಕರೆ ಹಾಕಿ ಒಲೆಯ ಮೇಲಿಟ್ಟು ಸಕ್ಕರೆ ಕರಗುವವರೆಗೆ ತೊಳಸಿ. ಕಂಡೆನ್ಸ್ಡ್ ಹಾಲು, ಹುರಿದ ಗೋಡಂಬಿ, ಬಾದಾಮಿ, ಕೋವಾ, ಹಾಲಲ್ಲಿ ನೆನೆಸಿದ ಕೇಸರಿ, ಏಲಕ್ಕಿ ಪುಡಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಫಿರ್ನಿಯನ್ನು ಗ್ಲಾಸಿಗೆ ಹಾಕಿ ಕುಡಿಯಿರಿ.

ಕಸಿ ಮಾವಿನ ಹಣ್ಣಿನ ಅನ್ನ

ಬೇಕಾಗುವ ವಸ್ತುಗಳು: ½ ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ರುಬ್ಬಿದ ಮಾವಿನ ಹಣ್ಣಿನ ರಸ, ¼ ಹಾಲು, ¼ ಕಪ್ ನೀರು, ¾ ಕಪ್ ಬೆಲ್ಲ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಮಿಶ್ರಣ 1 ಚಮಚ, ¼ ಚಮಚ ಏಲಕ್ಕಿ ಪುಡಿ, 2 ಚಮಚ ತುಪ್ಪ.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ಒಂದು ಗಂಟೆ ನೆನೆಸಿ. ನಂತರ ರುಬ್ಬಿದ ಮಾವಿನ ಹಣ್ಣಿನ ರಸ, ಹಾಲು, ನೀರು ಸೇರಿಸಿ ಕುಕ್ಕರ್‌ನಲ್ಲಿಟ್ಟು ಎರಡು ವಿಸಿಲ್ ಕೂಗಿಸಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕರಗಿಸಿ ಸೋಸಿ ಇಡಿ. ಕರಗಿದ ಬೆಲ್ಲ ಕುದಿಸಿ ಉಂಡೆ ಪಾಕ ಮಾಡಿ. ನಂತರ ಬೆಂದ ಅನ್ನ, ತುಪ್ಪ ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬಿಸಿ ಮಾಡಿ ಮಿಶ್ರಣ ಎಲ್ಲಾ ಹೊಂದಿಕೊಂಡಾಗ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಮಾವಿನ ಹಣ್ಣಿನ ಅನ್ನ ಸವಿಯಲು ಸಿದ್ಧ.

ಮಾವಿನ ಹಣ್ಣಿನ ಸುಟ್ಟೇವು

ಬೇಕಾಗುವ ವಸ್ತುಗಳು: ½ ಕಪ್ ಸಣ್ಣ ರವೆ, ½ ಕಪ್ ಮಾವಿನ ಹಣ್ಣಿನ ರಸ, ¾ ಕಪ್ ಬೆಲ್ಲ, ¼ ಚಮಚ ಏಲಕ್ಕಿ ಪುಡಿ, ½ ಕಪ್ ತೆಂಗಿನ ತುರಿ, ½ ಕಪ್ ಗೋಧಿ ಹಿಟ್ಟು, ಕರಿಯಲು ಬೇಕಾದಷ್ಟು ಎಣ್ಣೆ, ಚಿಟಕಿ ಉಪ್ಪು.

ಮಾಡುವ ವಿಧಾನ: ಸಣ್ಣ ರವೆಯನ್ನು 10 ನಿಮಿಷ ನೀರಲ್ಲಿ ನೆನೆಸಿ ನಂತರ ಬಸಿದು ಇಡಿ. ½ ಕಪ್ ಮಾವಿನ ಹಣ್ಣಿನ ರಸಕ್ಕೆ ಬೆಲ್ಲ, ಏಲಕ್ಕಿ ಪುಡಿ, ಉಪ್ಪು, ತೆಂಗಿನ ತುರಿ ಹಾಕಿ ಸ್ವಲ್ಪ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಕಲಕಿ. ಸ್ವಲ್ಪ ತಣ್ಣಗೆ ಆದ ನಂತರ ಸಣ್ಣ ರವೆ ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸ್ವಲ್ಪ ಸ್ವಲ್ಪ ಹಿಟ್ಟನ್ನು ಕೈಯಿಂದ ತೆಗೆದು ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ ರುಚಿಯಾದ ಸುಟ್ಟೇವು ತಿನ್ನಲು ತಯಾರು.

ಮಾವಿನ ಹಣ್ಣಿನ ಪಾಯಸಬೇಕಾಗುವ ವಸ್ತುಗಳು: 2-3 ಮಾವಿನ ಹಣ್ಣು, 1 ಕಪ್ ಸಕ್ಕರೆ, 2 ಕಪ್ ತೆಂಗಿನ ಹಾಲು, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಮಿಶ್ರಣ ಸ್ವಲ್ಪ, ¼ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಮೇಲಿನ ಸಿಪ್ಪೆ ತೆಗೆದು, ಸಣ್ಣಗೆ ತುಂಡು ಮಾಡಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ನಂತರ ತೆಂಗಿನ ಹಾಲು ಒಲೆಯ ಮೇಲಿಟ್ಟು ಬಿಸಿ ಮಾಡಿ. ನಂತರ ರುಬ್ಬಿದ ಮಾವಿನ ಹಣ್ಣಿನ ಮಿಶ್ರಣ, ಸಕ್ಕರೆ ಹಾಕಿ ಚೆನ್ನಾಗಿ ತೊಳಸಿ. ಚೆನ್ನಾಗಿ ಕುದಿಸಿ. ನಂತರ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ. ನಂತರ ತಣಿದ ಮೇಲೆ ಸೇವಿಸಲು ಬಲು ರುಚಿ.

ಸರಸ್ವತಿ ಎಸ್.ಭಟ್

’ವಿಶ್ರಾಂತಿ’  ಬೊಳುವಾರು ಬೈಲ್

ಪುತ್ತೂರು – 574201(ದ.ಕ)

ಮೊಬೈಲ್ – 9481845400

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.