ಯಾರನ್ನು ಹೆದರಿಸುತ್ತಿದ್ದಾರೆ?

7

ಯಾರನ್ನು ಹೆದರಿಸುತ್ತಿದ್ದಾರೆ?

Published:
Updated:

‘ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚಿಸಲು ಅವಕಾಶ ಕೊಡಲ್ಲ’ ಎಂದು ಪ್ರಧಾನಿ ಆಡಿದರೆನ್ನಲಾದ ಮಾತು (ಪ್ರ.ವಾ., ಮೇ 16) ಪ್ರಜ್ಞಾವಂತ ಪ್ರಜೆಗಳನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ರಾಜ್ಯ ರಾಜಕೀಯವು ರಾಜ್ಯಪಾಲರ ಮುಂದಿರುವಾಗ ಪ್ರಧಾನಿ ಹೀಗೆ ಪರೋಕ್ಷವಾಗಿ ಯಾರನ್ನು ಹೆದರಿಸುತ್ತಿದ್ದಾರೆ ಅಥವಾ ನಿಯಂತ್ರಿಸುತ್ತಿದ್ದಾರೆ? ಇಂತಹ ಮಾತುಗಳನ್ನು ಅಮಿತ್ ಶಾ ಆಡಿದ್ದರೆ ಅದು ರಾಜಕಾರಣವೆಂದು ತಿಪ್ಪೆಗೆಸೆಯಬಹುದಿತ್ತು. ಆದರೆ ರಾಷ್ಟ್ರದ ಪ್ರಧಾನಿಯೊಬ್ಬರು ತನ್ನ ಸಾಂವಿಧಾನಿಕ ಹೊಣೆಯನ್ನು ಮತ್ತು ಘನತೆಯನ್ನು ಮರೆತು ಬೀದಿಬದಿಯ ರೌಡಿಗಳು ಆಡುವಂತಹ ಮಾತನಾಡಿದ್ದಾರೆ.

ಇದು ಪ್ರತಿಪಕ್ಷಗಳನ್ನು ಬೆದರಿಸುವ ಮಾತು. ಸರ್ವಾಧಿಕಾರಿ ಪ್ರವೃತ್ತಿಯ ಮಾತು. ಮೋದಿ ಅವರಿಗೆ ಇದು ಹೊಸದಲ್ಲ; ಈಚೆಗೆ ಅವರು ಚುನಾವಣಾ ಭಾಷಣದಲ್ಲಿ ‘ಕಾಂಗ್ರೆಸ್ ಕೆ ನೇತಾ ಕಾನ್ ಖೋಲ್ ಕೆ ಸುನ್ ಲೀಜಿಯೇ, ಅಗರ್ ಸಿಮಾಯೊ ಕೊ ಪಾರ್ ಕರೋಗಿ, ತೋ ಯೇ ಮೋದಿ ಹೈ, ಲೇನೆ ಕೆ ದೇನೆ ಪಡ ಜಾಯೆಂಗೇ’ (ಕಾಂಗ್ರೆಸ್ ನಾಯಕರು ಕಿವಿ ತೆರೆದು ನನ್ನ ಮಾತುಗಳನ್ನು ಕೇಳಬೇಕು, ನೀವು ಮಿತಿಮೀರಿದರೆ, ನೆನಪಿಡಿ, ಇಲ್ಲಿರುವುದು ಮೋದಿ, ನೀವು ಇದರ ಪರಿಣಾಮವನ್ನು ಎದುರಿಸಬೇಕಾದೀತು) ಎಂದು ಬೆದರಿಸಿದರು. ಹಿಂದಿ ಮಸಾಲೆ ಸಿನಿಮಾಗಳಲ್ಲಿ ಪಾತ್ರಗಳಾಡುವ ‘ಉಲ್ಲುಕೆ ಪಟ್ಟೆ’, ‘ಬದ್ಮಾಶ್’ ಮುಂತಾದ ಮುತ್ತುಗಳು ಯವಾಗ ಬಂದಾವೋ ಎಂದು ನಿರೀಕ್ಷಿಸುವ ಸ್ಥಿತಿ ಬಂದಿದೆ.

ತಾನು ದೇಶದ ಸೇವಕ, ಕಾವಲುಗಾರ ಎಂದೆಲ್ಲ ಸ್ವಯಂಘೋಷಿಸಿಕೊಳ್ಳುವ ಈ ನಾಯಕನಿಂದ ನಮ್ಮನ್ನು ಮತ್ತು ನಮ್ಮ ದೇಶವನ್ನು ರಕ್ಷಿಸಿಕೊಳ್ಳಬೇಕಿದೆ. ಅವರಾಡುವುದೇ ಭಾರತೀಯತೆ ಮತ್ತು ಹಿಂದುತ್ವ ಎಂದು ವಿದೇಶೀಯರಿಗೆ ಮತ್ತು ಈ ದೇಶದ ಪ್ರಜೆಗಳಿಗೆ ಅನ್ನಿಸಿದರೆ ಅದಕ್ಕಿಂತ ದೊಡ್ಡ ದುರಂತ ಬೇರಿರಲಾರದು. ಸದ್ಯಕ್ಕೆ ‘ರಾಮರಾಮಾ’ ಎನ್ನದೆ ವಿಧಿಯಿಲ್ಲ.

ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಡಿಕೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry