ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ ಸಲ್ಲದು

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಲಭ್ಯವಾಗಿಲ್ಲ. ಇದರಿಂದ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿವೆ. ಈ ಮೈತ್ರಿಕೂಟದಲ್ಲಿ 117 ಸದಸ್ಯರಿದ್ದಾರೆ. ಇನ್ನೊಬ್ಬ ಪಕ್ಷೇತರ ಶಾಸಕರೂ ಈ ಮೈತ್ರಿಕೂಟಕ್ಕೇ ಬೆಂಬಲ ಘೋಷಿಸಿದ್ದಾರೆ. 104 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಹ್ವಾನ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.

ಇತ್ತೀಚೆಗೆ ಗೋವಾ, ಮಣಿಪುರ ಮತ್ತು ಮೇಘಾಲಯದಲ್ಲಿ ಇಂತಹದೇ ರಾಜಕೀಯ ಪರಿಸ್ಥಿತಿ ನಿರ್ಮಾಣವಾದಾಗ ಅಲ್ಲಿನ ರಾಜ್ಯಪಾಲರು ಬಹುಮತ ಇರುವ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಗೋವಾದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿತ್ತು. ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿಯೂ ಈ ಸೂತ್ರವನ್ನು ಎತ್ತಿಹಿಡಿಯಲಾಗಿದೆ. ಯಾವುದೇ ಪಕ್ಷ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ಅಗತ್ಯ ಬಹುಮತ ಇಲ್ಲದಿದ್ದರೆ ಬಹುಮತ ಇರುವ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದಲ್ಲಿ ಈಗ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಸಾಂವಿಧಾನಿಕ ಕ್ರಮಗಳನ್ನು ಕೈಬಿಡುವುದು ಸರಿಯಲ್ಲ.  ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಆಧಾರದಲ್ಲಿಯೇ ನಿರ್ಧಾರ ಕೈಗೊಳ್ಳಬೇಕಾದುದು ಅಗತ್ಯ. ರಾಜಕೀಯ ತೀರ್ಮಾನ ಗಳನ್ನು ಕೈಗೊಳ್ಳುವುದು ರಾಜ್ಯಪಾಲರ ಸ್ಥಾನದ ಘನತೆಗೆ ಅವಮಾನ ಮಾಡಿದಂತೆ. ತಾವು ಈ ಹಿಂದೆ ಇದ್ದ ರಾಜಕೀಯ ಪಕ್ಷದ ಅಥವಾ ಸಂಘಟನೆಯ ಅಣತಿಯಂತೆ ನಡೆದುಕೊಂಡರೆ ಅದು ಅಕ್ಷಮ್ಯ.

ರಾಜ್ಯದಲ್ಲಿ ಈಗಾಗಲೇ ಶಾಸಕರ ಖರೀದಿ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಂತಹ ಆರೋಪ ಮಾಡಿದ್ದಾರೆ. ‘ಪಕ್ಷಾಂತರ ಮಾಡುವ ಶಾಸಕರಿಗೆ ₹ 100 ಕೋಟಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಲಾಗಿದೆ’ ಎಂದು ಹೇಳಿದ್ದಾರೆ. ‘ಬಿಜೆಪಿ ಇಂತಹ ಸಾಹಸಕ್ಕೆ ಕೈ ಹಾಕಿದರೆ ಆ ಪಕ್ಷದ ಶಾಸಕರನ್ನು ಖರೀದಿ ಮಾಡುವುದು ನಮಗೂ ಗೊತ್ತು’ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರು ಬೆಳಿಗ್ಗೆ ಬಿಜೆಪಿ ವಲಯದಲ್ಲಿ ಇದ್ದವರು ಸಂಜೆ ವೇಳೆಗೆ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ವಲಯ ಸೇರಿದ್ದಾರೆ. ಶಾಸಕರ ಖರೀದಿ ನಡೆಯಬಹುದು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಗಲಾಗಿದೆ. ಇವೆಲ್ಲವೂ ಅಸಹ್ಯ ಪ್ರದರ್ಶನವಾಗಿ ಕಾಣುತ್ತಿದೆ. ಇದು ಹೀಗೆಯೇ ಮುಂದುವರಿದರೆ ರಾಜಕೀಯ ವ್ಯವಸ್ಥೆಯ ಬಗ್ಗೆ ಜನರಿಗೆ ಇನ್ನಷ್ಟು ಭ್ರಮನಿರಸನವಾಗುತ್ತದೆ.

2008ರಿಂದ 2013ರವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಇಂತಹ ರೆಸಾರ್ಟ್ ರಾಜಕೀಯ ನಡೆದಿತ್ತು. ಈ ಹಿಂದೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿಯೂ ಭಿನ್ನಮತದ ರಾಜಕಾರಣ ಹೇಸಿಗೆ ಹುಟ್ಟಿಸಿತ್ತು. ಪ್ರಜಾಪ್ರಭುತ್ವಕ್ಕೆ ಮಾರಕವಾದ ಇಂತಹ ಘಟನೆಗಳನ್ನು ತಡೆಯುವುದು ರಾಜ್ಯಪಾಲರ ಕರ್ತವ್ಯ.  ರಾಜ್ಯಪಾಲರು ಕೈಗೊಳ್ಳುವ ನಿರ್ಣಯ ಸಂವಿಧಾನಬದ್ಧವೂ, ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿಯೂ ಇರಬೇಕು. ಇದರಿಂದ ಅವರು ರಾಜ್ಯದ ಜನರಿಗೆ ಗೌರವ ನೀಡಿದಂತೆಯೂ ಆಗುತ್ತದೆ. ರಾಜ್ಯಪಾಲರ ಸ್ಥಾನದ ಘನತೆ ಕುಗ್ಗುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT