ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯ ಕಸಿಯುವ ಅಧಿಕಾರ ಸಂಸತ್‌ಗೂ ಇಲ್ಲ’

ಎಸ್‌ಸಿ/ಎಸ್‌ಟಿ ಕಾಯ್ದೆ: ಮಧ್ಯಂತರ ಆದೇಶಕ್ಕೆ ‘ಸುಪ್ರೀಂ’ ನಕಾರ
Last Updated 16 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ನಾಗರಿಕರಿಗೆ ಸಂವಿಧಾನ ನೀಡಿದ ಸ್ವಾತಂತ್ರ್ಯದ ಹಕ್ಕನ್ನು ಕಸಿಯುವ ಅಧಿಕಾರ ಸಂಸತ್ತಿಗೂ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ/ಎಸ್‌ಟಿ ಕಾಯ್ದೆ) ತೀರ್ಪು ಮರುಪರಿಶೀಲನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಈ ಸಂಬಂಧ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.

‘ಒಂದು ಕಡೆಯ ದೂರನ್ನು ಪರಿಗಣಿಸಿ ಜನರನ್ನು ಜೈಲಿಗೆ ಅಟ್ಟುವುದು ಎಷ್ಟು ಸರಿ. ಇದು ನಾಗರಿಕ ಸಮಾಜದ ಲಕ್ಷಣವಲ್ಲ’ ಎಂದು ಕೋರ್ಟ್‌ ಹೇಳಿದೆ.

ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸಬಾರದು ಎಂದು ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಪರಿಶಿಷ್ಟರ ರಕ್ಷಣೆಗೆ ರೂಪಿಸಲಾದ ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಅರ್ಜಿ ಸಲ್ಲಿಸಿತ್ತು.

ಆದರೆ, ತಕ್ಷಣ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ನ್ಯಾಯಪೀಠ, ಬೇಸಿಗೆ ರಜೆ ಮುಗಿದ ಬಳಿಕ ಜುಲೈನಲ್ಲಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.
*
‘ಶಾಸನಗಳ ಮೇಲೆ ಸವಾರಿ ಬೇಡ’
‘ನ್ಯಾಯಾಲಯಗಳು ಶಾಸನಗಳ ಮೇಲೆ ಸವಾರಿ ಮಾಡಬಾರದು’ ಎಂದು ಸರ್ಕಾರದ ಪ್ರತಿನಿಧಿ ಆಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದ ಮಂಡಿಸಿದರು.

‘ನಾಗರಿಕ ಸಮಾಜದಲ್ಲಿ ಯಾರನ್ನೇ ಆಗಲಿ ಬಂಧಿಸಲು ಒಂದು ನ್ಯಾಯಯುತವಾದ ಮಾರ್ಗವನ್ನು ಅನುಸರಿಸಬೇಕಲ್ಲವೇ’ ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನೆ ಹಾಕಿದರು.

‘ಸಂವಿಧಾನದ 21ನೇ ಕಲಂ ಅಡಿ ಪ್ರತಿ ನಾಗರಿಕನಿಗೂ ನೀಡಲಾದ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕು ಎಲ್ಲ ಕಾನೂನು, ಕಾಯ್ದೆಗೂ ಅನ್ವಯವಾಗುತ್ತದೆ’ ಎಂದು ಗೋಯಲ್‌ ಮತ್ತು ಲಲಿತ್‌ ಸ್ಪಷ್ಟಪಡಿಸಿದರು.

‘ಬದುಕು ಮತ್ತು ಸ್ವಾತಂತ್ರ್ಯದ ಹಕ್ಕು ಮಾತ್ರವಲ್ಲ, ಆಹಾರ ಮತ್ತು ಉದ್ಯೋಗದ ಹಕ್ಕು ಕೂಡ ಎಲ್ಲರಿಗೂ ಸಮಾನವಾಗಿ ದೊರೆಯಬೇಕಲ್ಲವೇ? ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಇದು ಸಾಧ್ಯವಾಗಿಲ್ಲ.ಈ ದೇಶದಲ್ಲಿ ಜನರು ಇನ್ನೂ ಪಾದಚಾರಿ ರಸ್ತೆಗಳ ಮೇಲೆ ಬದುಕುತ್ತಿದ್ದಾರೆ’ ಎಂದು ವೇಣುಗೋಪಾಲ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT