ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯಾಬಲದ ಆಟ: ತಜ್ಞರು ಹೇಳುವುದೇನು?

ಬಹುಮತಕ್ಕೆ ಬೇಕಿರುವುದು 111 ಶಾಸಕರ ಬೆಂಬಲ
Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಒಂದೆಡೆ ಬಿಜೆಪಿ ನಾಯಕರು, ಮತ್ತೊಂದೆಡೆ ಜೆಡಿಎಸ್–ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ‘ಸರ್ಕಸ್‌’ ಆರಂಭಿಸಿದ್ದಾರೆ.

ಸಂಖ್ಯಾಬಲಕ್ಕಾಗಿ ‘ಕುದುರೆ ವ್ಯಾಪಾರ’ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಜೆಡಿಎಸ್‌–ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ರಚಿಸಿದ್ದೇ ಆದರೆ, ಸದನದಲ್ಲಿ ಬಹುಮತ ಸಾಬೀತು ಪಡಿಸಲು ಹೇಗೆ ಸಾಧ್ಯ, ಎಷ್ಟು ಶಾಸಕರ ಬೆಂಬಲ ಬೇಕಾಗುತ್ತದೆ, ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ಕೊಡಬಹುದೇ, ಕೊಟ್ಟರೆ ಯಾರಿಗೆ ಕೊಡಬೇಕು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಗಹನವಾಗಿ ನಡೆದಿದೆ.

‘ರಾಜ್ಯ ವಿಧಾನಸಭೆಗೆ 222 ಸದಸ್ಯರು ಆಯ್ಕೆಯಾಗಿದ್ದರೂ, ಎರಡು ಕ್ಷೇತ್ರಗಳಲ್ಲಿ ಚುನಾಯಿತರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಒಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಆಗ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅಗತ್ಯವಾದ ಸಂಖ್ಯೆ 111 ಆಗುತ್ತದೆ’ ಎಂದು ಹಿರಿಯ ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ರಾಜ್ಯಪಾಲರು ಒಂದು ವೇಳೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಣಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರೂ, ಅಂತಿಮವಾಗಿ ರಾಜ್ಯಪಾಲರು ಈ ಬಣ ತನ್ನ ಸಂಖ್ಯಾಬಲವನ್ನು ಸದನದಲ್ಲಿ ದೃಢೀಕರಿಸಬಹುದೇ ಎಂಬುದನ್ನು ಮನಗಂಡೇ ಮುಂದಿನ ಹೆಜ್ಜೆ ಇರಿಸಬೇಕು’ ಎಂದು ಹೇಳಿದರು.

‘ಬಹುಮತ ಸಾಬೀತುಪಡಿಸಲು ಸಮರ್ಥ ಎಂಬ ಪಕ್ಷಕ್ಕೇ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ನೂತನ ಸದಸ್ಯರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವ ತನಕ ವಿಪ್‌ ಜಾರಿಗೊಳಿಸಲು ಸಾಧ್ಯವಿಲ್ಲ. ಆದರೆ, ಸದ್ಯದ ರಾಜಕೀಯ ಬೆಳವಣಿಗೆಗಳು ದುರದೃಷ್ಟಕರ’ ಎಂದರು.

‘ಈ ಕುರಿತಂತೆ ರಾಜ್ಯಪಾಲರು ಕಾನೂನು ತಜ್ಞರಿಂದ ಸಲಹೆ ಪಡೆದು ಮುಂದುವರಿಯುವುದೇ ಸೂಕ್ತ’ ಎಂದರು.

ಆಗಲೇ ರಾಜೀನಾಮೆ...!: ‘ನೂತನ ಮುಖ್ಯಮಂತ್ರಿ ಸದನದಲ್ಲಿ ಬಹುಮತ ಸಾಬೀತುಪಡಿಸುವಾಗ, ಸದನದಲ್ಲಿ ಹಾಜರಿರುವ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ಶಾಸಕರು ಅವರಿಗೆ ಬೆಂಬಲ ಸೂಚಿಸಬೇಕು. ಆದರೆ, ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ 14 ಶಾಸಕರು ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ನೀಡಿದರೆ, ಆಗ ಸದನದಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಬೇಕಾಗುವ ಸಂಖ್ಯೆ 104ಕ್ಕೆ ಅನುಗುಣವಾಗಿ ಇರುತ್ತದೆ’ ಎಂದು ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ವಕೀಲರು ವಿವರಿಸುತ್ತಾರೆ.

ತಜ್ಞರು ಪ್ರತಿಪಾದಿಸುವ ಎರಡು ಪ್ರಮುಖ ಅಂಶಗಳೆಂದರೆ; ‘ರಾಜ್ಯಪಾಲರು, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು. ಒಂದು ವೇಳೆ ಬಹುಮತ ಸಾಬೀತುಪಡಿಸುವಷ್ಟು ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷ ಇಲ್ಲದಿದ್ದರೆ, ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಸರ್ಕಾರ ರಚಿಸಲು ಮುಂದಾಗುವ ಬಣಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು’ ಎಂದು ವಿವರಿಸುತ್ತಾರೆ.

‘ಶಾಸಕರು ರಾಜೀನಾಮೆ ಕೊಡಬೇಕಾದಲ್ಲಿ ನೂತನವಾಗಿ ಆಯ್ಕೆಯಾದ ಸಭಾಧ್ಯಕ್ಷರಿಗೆ ಅದನ್ನು ಸಲ್ಲಿಸಬೇಕು. ಆಗ ಸಂಖ್ಯಾಬಲದಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಅರ್ಧಕ್ಕಿಂತ ಹೆಚ್ಚು ಇರುವಂತೆ ಸಾಬೀತುಪಡಿಸಬೇಕಾಗುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ವಕೀಲರೊಬ್ಬರು ಹೇಳಿದರು.

‘ವಿಪ್‌ ಜಾರಿಗೆ ಸಂಬಂಧಿಸಿದಂತೆ ಈಗಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಮೇಲೆಯೇ ಅದು ಅನ್ವಯ ಆಗುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ವಿವೇಕ್ ರೆಡ್ಡಿ.

ಅನುಸರಿಸಬೇಕಾದ ನಿಯಮ

‘ರಾಜ್ಯಪಾಲರು ಒಬ್ಬ ಪ್ರೊಟೆಮ್‌ (ತಾತ್ಕಾಲಿಕ) ಸಭಾಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ಹೆಚ್ಚು ಬಾರಿ ಆರಿಸಿ ಬಂದ ಇಬ್ಬರಲ್ಲಿ, ವಯಸ್ಸಿನಲ್ಲಿ ಹಿರಿಯರು ಎನಿಸಿದವರನ್ನು ಪ್ರೊಟೆಮ್‌ ಸಭಾಧ್ಯಕ್ಷರು ಎಂದು ಆಯ್ಕೆ ಮಾಡಲಾಗುತ್ತದೆ. ಇವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ಆ ಬಳಿಕ ನೂತನ ಸಭಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಅಲ್ಲಿಂದ ಮುಂದೆ ಸದನದ ಪ್ರಕ್ರಿಯೆಗಳು ಕಾನೂನು ಚೌಕಟ್ಟಿನಲ್ಲಿ ಮುಂದುವರಿಯುತ್ತವೆ’ ಎಂದು ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT